ಕೇಂದ್ರ ಲೋಕ ಸೇವಾ ಆಯೋಗ (UPSC) ಮಂಗಳವಾರ 2019 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಅದರಲ್ಲಿ ಪ್ರದೀಪ್ ಸಿಂಗ್ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರದೀಪ್ ಸಿಂಗ್ ಮೂಲತಹ ಹರಿಯಾಣದವರಾಗಿದ್ದು, ಸಾಮಾನ್ಯ ರೈತ ಕುಟುಂಬದಿಂದ ಬಂದವರಾಗಿದ್ದಾರೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ಮೂಲಕ ಐ ಆರ್ ಎಸ್ ಹುದ್ದೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ನಾಲ್ಕನೇ ಬಾರಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದ್ದಾರೆ.
ಇದರಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗೆ ಒಟ್ಟು 829 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ ಎಂದು ಅದು ತಿಳಿಸಿದೆ.
ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ (ಉತ್ತರಪ್ರದೇಶ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ ಎಂದು ಆಯೋಗ ಹೇಳಿದೆ.
ದೇಶದ ಪ್ರಮುಖ ನಾಗರಿಕ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವೆಗಳ ಪರೀಕ್ಷೆಯನ್ನು ವಾರ್ಷಿಕವಾಗಿ ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ ಎಂದು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.
ಒಟ್ಟು ಅರ್ಹ ಅಭ್ಯರ್ಥಿಗಳಲ್ಲಿ 304 ಮಂದಿ ಸಾಮಾನ್ಯ ವರ್ಗದವರು, 78 ಮಂದಿ ಆರ್ಥಿಕ ದುರ್ಬಲ ವರ್ಗದಿಂದ (ಇಡಬ್ಲ್ಯೂಎಸ್), ಇತರ ಹಿಂದುಳಿದ ವರ್ಗಗಳಿಂದ (ಒಬಿಸಿ) 251, ಪರಿಶಿಷ್ಟ ಜಾತಿ (ಎಸ್‌ಸಿ) ಯಿಂದ 129 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ದಿಂದ 67 ಮಂದಿ ಸೇರಿದ್ದಾರೆ.
ಒಟ್ಟು 182 ಅಭ್ಯರ್ಥಿಗಳನ್ನು ಮೀಸಲು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅದು ಹೇಳಿದೆ. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಯುಪಿಎಸ್ಸಿ ಹೇಳಿದೆ.
ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು / ನೇಮಕಾತಿಗಳ ಬಗ್ಗೆ ಯಾವುದೇ ಮಾಹಿತಿ / ಸ್ಪಷ್ಟೀಕರಣವನ್ನು ಕಛೇರಿಯ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯ ನಡುವೆ ವೈಯಕ್ತಿಕವಾಗಿ ಅಥವಾ ದೂರವಾಣಿಯ ಮೂಲಕ ಪಡೆಯಬಹುದು ಎಂದು ಎಂದು ಆಯೋಗ ತಿಳಿಸಿದೆ. ದೂ.ಸಂ-011- 23385271/23381125/23098543
ಫಲಿತಾಂಶಗಳು ಯುಪಿಎಸ್ಸಿಯ ವೆಬ್‌ಸೈಟ್‌ನಲ್ಲಿ ಸಹ ಲಭ್ಯವಿರುತ್ತವೆ. http//www.upsc.gov.in.
ಫಲಿತಾಂಶ ಘೋಷಣೆಯ ದಿನಾಂಕದಿಂದ 15 ದಿನಗಳವರೆಗೆ ಅಂಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಅಯೋಧ್ಯೆ ಶಂಕುಸ್ಥಾಪನೆ ಸಮಾರಂಭದಲ್ಲಿ ದಲಿತರ ಕಡೆಗಣನೆ: ಅಪ್ನಾ ದಳದ ಶಾಸಕ ಆರೋಪ


