ವೃದ್ಧರಿಗೆ ಸಮಯಕ್ಕೆ ಸರಿಯಾಗಿ ಪಿಂಚಣಿ ಹಾಗೂ ವೃದ್ಧಾಶ್ರಮದಲ್ಲಿರುವವರಿಗೆ ಮಾಸ್ಕ್ ಮತ್ತು ಪಿಪಿಇ ವಿತರಿಸಿ: ಸುಪ್ರೀಂ ಕೋರ್ಟ್
ಫೋಟೋ ಕೃಪೆ: ದಿ ಸೈಂಟಿಸ್ಟ್ ಮ್ಯಾಗಝಿನ್

ಕೊರೊನಾ ಸಮಯದಲ್ಲಿ ವಯಸ್ಸಾದವರಿಗೆ ಸಮಯಕ್ಕೆ ಸರಿಯಾಗಿ ಪಿಂಚಣಿ ವಿತರಿಸಬೇಕು, ದೇಶಾದ್ಯಂತ ವೃದ್ಧಾಶ್ರಮಗಳಲ್ಲಿ ವಾಸಿಸುವವರಿಗೆ ನಿರಂತರವಾಗಿ ರಕ್ಷಣಾತ್ಮಕ ಉಪಕರಣಗಳು (ಪಿಪಿಇ), ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್‌ಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವೃದ್ದರು ಬಳಲುತ್ತಿದ್ದರೆ, ಅಥವಾ ಅವರಿಂದ ಮನವಿ ಬಂದಾಕ್ಷಣ ಬೇಗನೇ ಸ್ಪಂದಿಸಿ ಅವರ ಚಿಕಿತ್ಸೆಗೆ ಮುಂದಾಗಬೇಕು ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.

ಅಧಿಕಾರಿಗಳು ಅವರಿಗೆ ಪಿಂಚಣಿ ಸಕಾಲಿಕವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಪಿಪಿಇ ಕಿಟ್‌ಗಳನ್ನು ನೀಡಬೇಕು ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.

ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ವಕೀಲ ಅಶ್ವನಿ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಸಾಂಕ್ರಾಮಿಕ ಸಮಯದಲ್ಲಿ, ವಯಸ್ಸಾದವರಿಗೆ ಪಿಂಚಣಿ ಸಮಯಕ್ಕೆ ತಲುಪುವುದು ಅವಶ್ಯಕ ಎಂದು ಸೂಚಿಸಿದೆ.

ಕೋಟ್ಯಂತರ ವೃದ್ಧರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಈಗಾಗಲೇ ಗುರುತಿಸಲ್ಪಟ್ಟ ಮತ್ತು ಅದಕ್ಕೆ ಅರ್ಹರಾಗಿರುವವರಿಗೆ ಪಿಂಚಣಿ ತಲುಪುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಶ್ವನಿ ಕುಮಾರ್ ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯಗಳು ಈಗಾಗಲೇ ಪ್ರಯತ್ನಗಳನ್ನು ಮಾಡುತ್ತಿವೆ ಮತ್ತು ಇದು ವಿರೋಧಿಸುವ ವಿಷಯವಲ್ಲ ಎಂದು ಕೇಂದ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ವಿ. ಮೋಹನಾ ನ್ಯಾಯಪೀಠಕ್ಕೆ ತಿಳಿಸಿದರು.

ಮನವಿಗೆ ಉತ್ತರ ಸಲ್ಲಿಸಲು ವಿ. ಮೋಹನಾ ಒಂದು ವಾರ ಕೋರಿದಾಗ, ಅಶ್ವನಿ ಕುಮಾರ್ ಇದನ್ನು ವಿರೋಧಿಸಿ ಈ ವಿಷಯದಲ್ಲಿ ತುರ್ತು ಕ್ರಮಗಳ ಅಗತ್ಯವಿದೆ ಎಂದು ಹೇಳಿದರು.

ಮಾರಕ ವೈರಸ್‌ನಿಂದ ರಕ್ಷಿಸಲು ಹಿರಿಯರಿಗೆ ಫೇಸ್‌ಮಾಸ್ಕ್, ಸ್ಯಾನಿಟೈಸರ್ ಮತ್ತು ಪಿಪಿಇ ಒದಗಿಸುವ ಅಗತ್ಯತೆಯ ಬಗ್ಗೆ ಅರ್ಜಿದಾರರು ಎತ್ತಿದರು.

ಯಾವುದೇ ತಾರತಮ್ಯವಿಲ್ಲದೆ ಕೊರೊನಾ ವೈರಸ್‌ ತಗುಲಿದ ವೃದ್ಧರ ಚಿಕಿತ್ಸೆಗೆ ನಿರ್ದೇಶನ ಕೋರಿರುವ ಮತ್ತೊಂದು ಅರ್ಜಿಯನ್ನೂ ನ್ಯಾಯಪೀಠವು ಪರಿಗಣಿಸಿದೆ.

ಮನವಿಯಲ್ಲಿ ರಾಜ್ಯಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಳಿದ ನ್ಯಾಯಪೀಠ, ದೇಶದಲ್ಲಿ ಚಾಲ್ತಿಯಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದಲ್ಲಿ 2018 ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ನಿರ್ದೇಶನಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಅರ್ಜಿಗಳ ಪ್ರತಿಗಳನ್ನು ರಾಜ್ಯಗಳಿಗೆ ಪೂರೈಸಬೇಕು ಎಂದು ಅದು ಹೇಳಿದೆ.

ಭಾರತದಲ್ಲಿ 10 ಕೋಟಿಗೂ ಹೆಚ್ಚು ವೃದ್ಧರ ಶಾಸನಬದ್ಧ ಹಕ್ಕುಗಳನ್ನು ಗುರುತಿಸಿ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಡಿಸೆಂಬರ್ 2018 ರ ತೀರ್ಪಿನಲ್ಲಿ ತಿಳಿಸಿತ್ತು.

ಪ್ರತಿ ಜಿಲ್ಲೆಯ ವೃದ್ಧಾಶ್ರಮಗಳ ಸಂಖ್ಯೆಯ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾಹಿತಿ ಪಡೆಯುವಂತೆ ಅದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು ಮತ್ತು ವೃದ್ಧರಿಗೆ ಪಿಂಚಣಿಯನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆಯೇ ಎಂದು ನೋಡುವಂತೆ ಸೂಚಿಸಿದೆ.

ಸಾಮಾಜಿಕ ನ್ಯಾಯದ ಅಂಶಕ್ಕೆ ಒತ್ತು ನೀಡಿದ ಸುಪ್ರೀಂ ಕೋರ್ಟ್, ವೃದ್ಧರು ಸೇರಿದಂತೆ ನಾಗರಿಕರ ಘನತೆ, ಆಶ್ರಯ ಮತ್ತು ಆರೋಗ್ಯದೊಂದಿಗೆ ಬದುಕುವ ಹಕ್ಕನ್ನು ರಕ್ಷಿಸಲು ಮಾತ್ರವಲ್ಲದೆ ಜಾರಿಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದೆ.

ಪ್ರತಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಮತ್ತು ಜೆರಿಯಾಟ್ರಿಕ್ ಆರೈಕೆಯ ಬಗ್ಗೆ ಎಲ್ಲಾ ರಾಜ್ಯಗಳಿಂದ ಮಾಹಿತಿ ಪಡೆಯುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ಕೇಂದ್ರವು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ವೃದ್ಧರಿಗೆ ಅವರ ಸಾಂವಿಧಾನಿಕ ಮತ್ತು ಶಾಸನಬದ್ಧ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪೋಷಕರ ನಿರ್ವಹಣೆ ಮತ್ತು ಕಲ್ಯಾಣ ಮತ್ತು ಹಿರಿಯ ನಾಗರಿಕರ ಕಾಯ್ದೆ 2007 ರ ನಿಬಂಧನೆಗಳಿಗೆ ಪ್ರಚಾರ ನೀಡಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅದು ಹೇಳಿದೆ.


ಓದಿ: Fact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ


ವಿಡಿಯೋ ನೋಡಿ: 

ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ 1 – ಚಿಲ್ ಮಾಡಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts