ದೇಶದಲ್ಲಿ ಈಗಾಗಲೇ ಪ್ರವಾಹದಿಂದಾಗಿ ಜನ ತತ್ತರಿಸುವಂತಾಗಿದೆ. ಈಗಿರುವ ಕೊರೊನಾ ಸಾಂಕ್ರಾಮಿಕದ ನಡುವೆ ಪ್ರವಾಹದ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನಡುವೆ ನೆರೆ ಪರಿಹಾರಕ್ಕಾಗಿ ಪ್ರವಾಹಕ್ಕೆ ತುತ್ತಾದ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಇದುವರೆಗೂ ಕೇಂದ್ರ ಸೂಕ್ತ ಪರಿಹಾರ ನೀಡಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯ ಸಚಿವರ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ನ್ಯಾಯಯುತ ಪರಿಹಾರಕ್ಕಾಗಿ ಸಮರ್ಥವಾಗಿ ದನಿಯೆತ್ತಬೇಕೆಂದು ರಾಜ್ಯದ ವಿರೋಧ ಪಕ್ಷಗಳು ಆಗ್ರಹಿಸಿವೆ.
2019ರ ಆಗಸ್ಟ್‌ನಲ್ಲಿ ಅಪ್ಪಳಿಸಿದ ನೆರೆಯಿಂದಾಗಿ ರಾಜ್ಯದ ನೂರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನ ವಸತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿ ರೈತರು ಬೀದಿಗೆ ಬಿದ್ದರು. ಅದರಲ್ಲಿ ಬಹಳಷ್ಟು ಜನರಿಗೆ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಕಳೆದ ವರ್ಷ ತುಮಕೂರಿಗೆ ಪ್ರಧಾನಿ ಆಗಮಿಸಿದ್ದಾಗ, ಯಡಿಯೂರಪ್ಪನವರು ವೇದಿಕೆಯ ಮೇಲೆಯೇ ಬೇಡಿಕೊಂಡರೂ ಮೋದಿಯವರು ನೆರೆಯ ಕುರಿತು ಮಾತನಾಡಿರಲಿಲ್ಲ ಮತ್ತು ಪರಿಹಾರ ಬಿಡುಗಡೆ ಮಾಡಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಜಿಎಸ್‌ಟಿಯಿಂದ ರಾಜ್ಯಕ್ಕೆ ಬರಬೇಕಾಗಿದ್ದ ಪಾಲು ಬಂದಿಲ್ಲದ್ದರಿಂದ, ಪ್ರವಾಹದೊಟ್ಟಿಗೆ ರಾಜ್ಯದ ಹಲವು ಕಡೆ ಬರವೂ ಆವರಿಸಿದ್ದರಿಂದ ರಾಜ್ಯ ಸಂಕಷ್ಟದಲ್ಲಿ ನರಳಬೇಕಾಯಿತು. ಕಳೆದ 3 ವರ್ಷಗಳಿಂದ ರಾಜ್ಯವು ಬರ-ಪ್ರವಾಹಗಳಿಂದ ನಲುಗುತ್ತಿದೆ.
ಕರ್ನಾಟಕ್ಕೆ ಬಂದ ನೆರೆ ಪರಿಹಾರವೆಷ್ಟು?
ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೇಂದ್ರವು ತಾತ್ಕಾಲಿಕವಾಗಿ 1200 ಕೋಟಿ ನೆರೆ ಪರಿಹಾರ ಧನ ರಾಜ್ಯಕ್ಕೆ ಬಿಡುಗಡೆ ಮಾಡಿತ್ತು. 2ನೇ ಕಂತಿನಲ್ಲಿ 1869 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ವಾಸ್ತವಾಗಿ ಜನವರಿಯಲ್ಲಿ 669 ಕೋಟಿ ರೂ ಮಾತ್ರ ಬಿಡುಗಡೆ ಮಾಡಿದೆ, ಇನ್ನು 1200 ಕೋಟಿ ರಾಜ್ಯಕ್ಕೆ ಬಂದಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಇದರ ಕುರಿತು ವಿರೋಧ ಪಕ್ಷಗಳು ಆಕ್ಷೇಪ ಎತ್ತಿವೆ.
“ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ ರೂ.1,00,000 ಕೋಟಿ. ರಾಜ್ಯಸರ್ಕಾರದ ವರದಿ ಪ್ರಕಾರ ನಷ್ಟ- ರೂ 50,000 ಕೋಟಿ. ಪರಿಹಾರ ಕೇಳಿದ್ದು
ರೂ.35,000 ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ರೂ.1860 ಕೋಟಿ ಮಾತ್ರ. ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ” ಎಂದು ಸಿದ್ದರಾಮಯ್ಯನವರು ಒತ್ತಾಯಿಸಿದ್ದಾರೆ.
ಜುಲೈ ತಿಂಗಳಿನಲ್ಲಿಯೇ ರಾಜ್ಯದ ನಾಲ್ಕು ಸಚಿವರಿಗೆ ಪತ್ರಬರೆದು, ಕಳೆದ ವರ್ಷ ಬಿಡುಗಡೆಯಾದ ಪರಿಹಾರ ಹಣದ ಮೊತ್ತ, ಖರ್ಚು ಮಾಡಿದ ಲೆಕ್ಕ, ನಷ್ಟದ ಲೆಕ್ಕ, ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಕಟ್ಟಡ, ಸೇತುವೆಗಳೆಷ್ಟು, ಅವುಗಳಲ್ಲಿ ಎಷ್ಟು ದುರಸ್ತಿಗೊಂಡಿವೆ ಎಂಬ ವಿವರವನ್ನು ಕೇಳಿ ವಿರೋಧ ಪಕ್ಷದ ಮುಖಂಡರಾದ ಸಿದ್ದರಾಮಯ್ಯನವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, “ಈ ಬಾರಿಯಾದರೂ ರಾಜ್ಯದಿಂದ ಸಶಕ್ತ ತಂಡವೊಂದನ್ನು ನಿಯೊಗ ಕರೆದುಕೊಂಡು ಹೋಗಬೇಕು. ಪ್ರಧಾನ ಮಂತ್ರಿಯವರ ಮುಂದೆ ವ್ಯರ್ಥ ಕಸರತ್ತು ಆಗಬಾರದು. ತಕ್ಷಣ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ಕೊಟ್ಟ ವರದಿಯನ್ನು ಪ್ರಧಾನಮಂತ್ರಿಯವರಿಗೆ ಕಳುಹಿಸಿಕೊಡಬೇಕು. ಹಾಗೆಯೇ, ಪ್ರಧಾನಮಂತ್ರಿಯವರು ಈ ಬಾರಿಯಾದರೂ ರಾಜ್ಯಕ್ಕೆ ಭೆಟಿ ಕೊಟ್ಟು ನೆರೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು ಹಾಗೂ ರಾಜ್ಯದ ಸಚಿವರು ಈ ಕುರಿತು ಇಂದಿನ ಸಭೆಯಲ್ಲಿ ಪ್ರಧಾನ ಮಂತ್ರಿಯವರಲ್ಲಿ ಮನವಿ ಮಾಡಬೇಕು” ಎಂದು ಹೇಳಿದ್ದಾರೆ.
ರಾಜ್ಯದ ಅತಿವೃಷ್ಟಿ ಪರಿಸ್ಥಿತಿಯ ಸಮೀಕ್ಷೆಗೆ ಈ ಬಾರಿಯಾದರೂ @PMOIndia ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳಿಸಬೇಕು.
ಇಂದಿನ ಸಭೆಯಲ್ಲಿ ರಾಜ್ಯದ ಸಚಿವರು ಪ್ರಧಾನಿಯವರಲ್ಲಿ ಈ ಒತ್ತಾಯ ಮಾಡಬೇಕು.
8/10#FailedFloodMGmt— Siddaramaiah (@siddaramaiah) August 10, 2020
.@PMOIndia ಅವರ ಜೊತೆಗಿನ ರಾಜ್ಯದ ಸಚಿವರವ ಸಭೆ ಕಾಟಾಚಾರದ ಕಸರತ್ತು ಆಗಬಾರದು.
@CMofKarnataka ತಕ್ಷಣ ಅಧಿಕಾರಿಗಳ ತಂಡವನ್ನು ಅತಿವೃಷ್ಟಿ ಪೀಡಿತ ಪ್ರದೇಶಕ್ಕೆ ಕಳಿಸಿ ನಷ್ಟದ ಅಧ್ಯಯನ ಮಾಡಿಸಿ @PMOIndia ಅವರಿಗೆ ಕಳಿಸಿಕೊಟ್ಟು ನ್ಯಾಯಯುತ ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು.
9/10#FailedFloodMGmt— Siddaramaiah (@siddaramaiah) August 10, 2020
ಯಡಿಯೂರಪ್ಪನವರು ಕಳೆದ ವರ್ಷದ ಆಗಸ್ಟ್ ನಲ್ಲಿನ ನೆರೆಯ ಕುರಿತು ಮಾತ್ರ ವರದಿ ಸಲ್ಲಿಸಿದ್ದಾರೆ. ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ಆದ ನಷ್ಟದ ಬಗ್ಗೆಯೂ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿರುವ ಸಿದ್ದರಾಮಯ್ಯನವರು, ಈ ವರೆಗಿನ ಅನುಭವದ ಪ್ರಕಾರ ರಾಜ್ಯದ ಹಿತಾಸಕ್ತಿ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ಪ್ರಧಾನಿ ಅವರ ಜೊತೆ ಮಾತನಾಡಿ ಹೆಚ್ಚು ಪರಿಹಾರ ಪಡೆಯುವ ಶಕ್ತಿ ಮುಖ್ಯಮಂತ್ರಿಗಳು ಇಲ್ಲವೇ ಸಚಿವರಿಗಿಲ್ಲ. ಇದಕ್ಕಾಗಿ, ಹೆಚ್ಚಿನ ಪರಿಹಾರ ಕೋರಲು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆಹಾವಳಿಯಿಂದ ಕಳೆದ ವರ್ಷ ನಿರ್ವಸತಿಕರಾದವರಿಗೆ 5,00,000 ರೂಪಾಯಿ ಪರಿಹಾರ ಒದಗಿಸುವ ಹಾಗೂ ಮನೆ ಕಟ್ಟಿಸಿಕೊಡುವ ಸರ್ಕಾರದ ಭರವಸೆ ಬಹುಸಂಖ್ಯಾತರಿಗೆ ಅನುಕೂಲವಾಗಲಿಲ್ಲ. ಈ ವರ್ಷವೂ ಮಳೆಯಿಂದ ನಿರಾಶ್ರಿತರಾದವರಿಗೆ ತಕ್ಷಣವೇ ಸೂರು ಒದಗಿಸುವ (ಕಳೆದ ಬಾರಿಯ ನಿರಾಶ್ರಿತರು ಸೇರಿದಂತೆ) ಶಾಶ್ವತ ಯೋಜನೆಯನ್ನು ಸರ್ಕಾರ ಆದ್ಯತೆಯ ಮೇಲೆ ಅನುಷ್ಠಾನ ಮಾಡಬೇಕು. ಸತ್ಯವನ್ನು ಬಹಳ ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಮುಂಗಾರು ಮಳೆಯಿಂದ ತತ್ತರಿಸಿರುವ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವಾಗ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ನಿಧಿಯ ಮಾರ್ಗಸೂಚಿಗಳಿಗೆ ಜೋತುಬೀಳದೆ ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ತಕ್ಷಣವೇ ನೀಡಬೇಕು. ಸತತ ಮೂರನೇ ವರ್ಷ ಅತಿವೃಷ್ಟಿಗೆ ಸಿಲುಕಿರುವ ರಾಜ್ಯದ ರೈತರು ಈ ಬಾರಿಯೂ ಮಳೆಯ ಅನಾಹುತ ತಡೆದುಕೊಳ್ಳುವ ಶಕ್ತಿ ಇಲ್ಲದೆ ಬಸವಳಿದಿದ್ದಾರೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಹಾಗೂ ಮೂಲಭೂತ ಸೌಕರ್ಯಗಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಇದನ್ನು ಸರಿಪಡಿಸಲು ತುರ್ತು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪನವರಿಗೆ ಮೋದಿ ಕಂಡ್ರೆ ಭಯ. ಹಾಗಾಗಿ ಪ್ರವಾಹ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ? : ಸಿದ್ದು


