Homeಕರ್ನಾಟಕಯಡಿಯೂರಪ್ಪನವರಿಗೆ ಮೋದಿ ಕಂಡ್ರೆ ಭಯ. ಹಾಗಾಗಿ ಪ್ರವಾಹ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ? :...

ಯಡಿಯೂರಪ್ಪನವರಿಗೆ ಮೋದಿ ಕಂಡ್ರೆ ಭಯ. ಹಾಗಾಗಿ ಪ್ರವಾಹ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ? : ಸಿದ್ದು

ಯಡಿಯೂರಪ್ಪನವರು ಪ್ರಧಾನ ಮಂತ್ರಿಗಳಿಗೆ ತುಂಬಾ ಹೆದರುತ್ತಾರೆ ಎನಿಸುತ್ತಿದೆ. ಅವರಿಗೆ ಭಯವಿದ್ದರೆ ಸರ್ವ ಪಕ್ಷ ನಿಯೋಗವನ್ನಾದರೂ ಕರೆದುಕೊಂಡು ಹೋಗಲಿ, ಪ್ರಧಾನಿಯವರ ಬಳಿ ನಾವೇ ಮಾತಾಡುತ್ತೇವೆ.

- Advertisement -
- Advertisement -

ನಮ್ಮ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡುದಾರ 4 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೊಳಿಸಿತ್ತು. ರಾಜ್ಯ ಬಿಜೆಪಿ ಸರ್ಕಾರ ಈ ಅಕ್ಕಿಯನ್ನು ಕಡಿಮೆ ಮಾಡಲು ಚರ್ಚೆ ನಡೆಸಿದೆ ಎಂಬ ಮಾಹಿತಿ ಬಂದಿದೆ. ಈ ರೀತಿಯೇನಾದರೂ ಮಾಡಿದರೆ ನಾನು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಕಾವೇರಿನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅನ್ನಭಾಗ್ಯ ಯೋಜನೆಯ ಕಡಿತ ಮಾಡಿದ ಅಕ್ಕಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ರೈತರಿಗೆ 4 ಸಾವಿರ ಕೊಡಲು ನಮ್ಮದೇನು ಅಡ್ಡಿ ಇಲ್ಲ, ಆದರೆ, ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡುತ್ತೇವೆ ಎನ್ನುವುದು ಬಡವರ ವಿರೋಧಿ ಧೋರಣೆಯಾಗುತ್ತದೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ಗುಳೆ ಪದ್ಧತಿ ಕಡಿಮೆ ಆಗಿದೆ. ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇದು‌ ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ. ಹಾಗಾಗಿ ಅಕ್ಕಿ ಕಡಿತಗೊಳಿಸುವ ಆಲೋಚನೆಯೇನಾದರೂ ಯಡಿಯೂರಪ್ಪನವರಿಗೆ ಇದ್ದಲ್ಲಿ ತಕ್ಷಣವೇ ಅದನ್ನು ಕೈಬಿಡಲಿ ಎಂದರು.

ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಹಣ ನೀಡುತ್ತಿಲ್ಲ. ಬಿಬಿಎಂಪಿಯವರೇ ನಿರ್ವಹಿಸಬೇಕು ಎಂದು ಸರ್ಕಾರ ಹೇಳುತ್ತಿದೆ. ಕ್ಯಾಂಟೀನ್ ನಿರಂತರವಾಗಿ ನಡೆಯಬೇಕಾದರೆ, ಅಲ್ಲಿ ಗುಣಮಟ್ಟದ‌ ಆಹಾರ ಸಿಗಬೇಕಾದರೆ ಇಂದಿರಾ ಕ್ಯಾಂಟೀನ್ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಬೇಕು ಎಂದು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿ ಮಾಡಲಾಗಿದೆ. ಇದು ನಮ್ಮ ಸರ್ಕಾರದ ಆದ್ಯತೆಯ ಕಾರ್ಯಕ್ರಮ. ಬಡಜನರ ಹಸಿವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ವರ್ಷಕ್ಕೆ ರೂ.2,000 ಕೋಟಿ ಹಣ ದೊಡ್ಡ ಹೊರೆಯಾಗಲಾರದು. ಈ ಕೂಡಲೇ ಬಿಬಿಎಂಪಿಗೆ ಅನುದಾನ ಬಿಡುಗಡೆ ಮಾಡಲಿ ಎಂದು ತಿಳಿಸಿದರು.

ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ ಎರಡೂ ಇದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ.20 ಕಡಿಮೆ ಆಗಿದೆ. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿ 22 ದಿನ ಕಳೆದವು ಆದರೆ, ಇನ್ನೂ ರಾಜ್ಯದಲ್ಲಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಇಲ್ಲ. ಇವತ್ತಿನವರೆಗೆ ಬರ ಪೀಡಿತ ಪ್ರದೇಶಗಳ ಘೋಷಣೆ ಆಗಿಲ್ಲ. ಬರ ಪೀಡಿತ ಅಂತ ಘೋಷಣೆ ಮಾಡದೆ ಇದ್ದರೆ ಪರಿಹಾರ ಪಡೆಯಲು ಆಗುವುದಿಲ್ಲ. ಮಳೆಯಾಗದೆ ಬಿತ್ತನೆ ಮಾಡಿರುವ ಬೆಳೆ ಹಾಳಾಗಿದೆ.‌ ಕೆಲವೆಡೆ ಬಿತ್ತನೆ ಸಹ ಆಗ್ತಿಲ್ಲ. ಮಳೆ ಇಲ್ಲದೆ ಜಾನುವಾರುಗಳುಗೆ ಮೇವಿಲ್ಲದಂತಾಗಿದೆ. ಸರ್ಕಾರ‌ ಕೂಡಲೇ ಬರ ಪ್ರದೇಶಗಳನ್ನ ಘೋಷಿಸಿ, ಅಗತ್ಯ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು. ದನಕರುಗಳಿಗೆ ಮೇವು ಕೊಡುತ್ತಿಲ್ಲ, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ.‌ ರೈತರಿಗೆ, ಬಡವರಿಗೆ ಸಹಾಯ ಮಾಡುತ್ತಿಲ್ಲ.‌ ಹಾಗಿದ್ದಲ್ಲಿ ಈ ಸರ್ಕಾರ ಯಾಕೆ ಇರಬೇಕು? ಎಂದು ಪ್ರಶ್ನಿಸಿದರು.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ, ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇನ್ನೂ ಇದೆಯೇ? ಯಡಿಯೂರಪ್ಪನವರ ಏಕಚಕ್ರಾಧಿಪತ್ಯದಲ್ಲಿ ಸಂವಿಧಾನ, ಕಾನೂನು ಇವುಗಳಿಗೆ ಬೆಲೆ ಇಲ್ಲದಂತಾಗಿ, ರಾಜ್ಯದ ಜನರ ಕಷ್ಟ ಕೇಳುವವರಿಲ್ಲ. ಇಂಥ ನಿರ್ಲಜ್ಜ ಸರ್ಕಾರವನ್ನೇ ನಾನು ಎಂದೂ ನೋಡಿಲ್ಲ. ಯಡಿಯೂರಪ್ಪನವರದು ಮಾತು ಮಾತ್ರ ಜಾಸ್ತಿ. ಅವರು ಕೇಂದ್ರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಇವತ್ತಿನವರೆಗೂ ಒಂದು ರೂಪಾಯಿ ನೀಡಿಲ್ಲ. ಪ್ರಧಾನಿಗಳೇ ಸ್ವತಃ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಇಬ್ಬರು ಸಚಿವರನ್ನ ಕಳುಹಿಸಿದ್ದೇವೆ ಅಂತಾರೆ. ಅವರೇನಾದ್ರೂ ಪರಿಹಾರ ಘೋಷಿಸಿದ್ದಾರಾ? ಎಂದರು.

ಯಡಿಯೂರಪ್ಪನವರು ಪ್ರಧಾನ ಮಂತ್ರಿಗಳಿಗೆ ತುಂಬಾ ಹೆದರುತ್ತಾರೆ ಎನಿಸುತ್ತಿದೆ. ಅವರಿಗೆ ಭಯವಿದ್ದರೆ ಸರ್ವ ಪಕ್ಷ ನಿಯೋಗವನ್ನಾದರೂ ಕರೆದುಕೊಂಡು ಹೋಗಲಿ, ಪ್ರಧಾನಿಯವರ ಬಳಿ ನಾವೇ ಮಾತಾಡುತ್ತೇವೆ. ಇಷ್ಟೆಲ್ಲಾ ಆಗಿದೆ ಇದರ ಬಗ್ಗೆ ಚರ್ಚೆಗೆ ವಿಧಾನ ಮಂಡಲ ಅಧಿವೇಶನವನ್ನು ಕರೆಯಬೇಕಿತ್ತು, ಅದನ್ನೂ ಮುಖ್ಯಮಂತ್ರಿಗಳು ಮಾಡಿಲ್ಲ. ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ಕಾರ ರಚನೆ ಆಗಿದೆ. ಸರ್ಕಾರಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಕಣ್ಣು, ಕಿವಿ ಇಲ್ಲದ ಇಂತಹ ಸರ್ಕಾರವನ್ನ ನಾನು ಎಂದಿಗೂ ನೋಡಿಲ್ಲ.
ಪ್ರಧಾನಮಂತ್ರಿಗಳು ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ, ರಾಜ್ಯದ ಬಗ್ಗೆ ಏಕಿಷ್ಟು ತಾತ್ಸಾರ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಕೂಡಲೇ ರೂ.5 ಸಾವಿರ ಕೋಟಿ ನೆರವು ಘೋಷಿಸಲಿ ಎಂದು ಆಗ್ರಹಿಸಿದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...