ಬೆಂಗಳೂರಿನ ಕುನಾಲ್ ಗಾರ್ನಾ ಎಂಬ 21 ವರ್ಷದ ಉದ್ಯಮಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಿ ನಾಲ್ಕು ಜೀವಗಳು ಉಳಿಯಲು ಕಾರಣವಾಗಿದ್ದು, ಅವರಿಗೆ ಜನರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ಮಾರ್ಚ್‌ನಲ್ಲಿ ಕುನಾಲ್ ತನ್ನ ಅಧ್ಯಯನ ಮುಗಿಸಿದ ನಂತರ ಯುಕೆಯಿಂದ ಹಿಂದಿರುಗಿದಾಗ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಆದರೆ ಸಾಂಕ್ರಾಮಿಕ ರೋಗ ಹರಡುತ್ತಿದ್ದ ಮೊದಲ ಕೆಲವು ತಿಂಗಳುಗಳಲ್ಲಿ, ಪ್ಲಾಸ್ಮಾ ದಾನ ಪ್ರಕ್ರಿಯೆಯು ಪ್ರಾರಂಭವಾಗಲಿಲ್ಲ. ಅದೂ ಅಲ್ಲದೆ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೂ ಕಡಿಮೆಯಿತ್ತು. ಪ್ರಕರಣಗಳು ಹೆಚ್ಚಿದಂತೆ ಜೂನ್‌ನಲ್ಲಿ, ಎಚ್‌ಸಿಜಿ ಆಸ್ಪತ್ರೆಯಿಂದ, ಪ್ಲಾಸ್ಮಾ ದಾನ ಮಾಡಲು ಅವರ ಒಪ್ಪಿಗೆಯನ್ನು ಕೇಳಲಾಗಿತ್ತು. ಅವರು ತಕ್ಷಣ ಒಪ್ಪಿದ್ದರು.
ಜೂನ್ 15 ರಂದು ಮೊದಲ ಬಾರಿಗೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದ್ದರು. ನಂತರ ಆಸ್ಪತ್ರೆಯ ಅಧಿಕಾರಿಗಳಿಗೆ ತಮ್ಮ ಪ್ಲಾಸ್ಮಾವನ್ನು ಹೆಚ್ಚು ಬಾರಿ ದಾನ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು.
“ಕೆಲವು ವರ್ಷಗಳ ಹಿಂದೆ ನಾನು ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಿದ್ದೇನೆ. ನಾನು ಸಾಮಾನ್ಯವಾಗಿ ರಕ್ತದಾನ ಮಾಡುತ್ತಿದ್ದೆ. ಆದ್ದರಿಂದ, ನಾನು ಪ್ಲಾಸ್ಮಾ ದಾನಕ್ಕೂ ಒಪ್ಪಿದ್ದೆ. ಆರಂಭದಲ್ಲಿ, ನನ್ನ ಪೋಷಕರು ಸ್ವಲ್ಪ ಭಯಭೀತರಾಗಿದ್ದರು. ಆದರೆ ಇದು ರೋಗಿಗಳ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಅವರಿಗೆ ಹೇಳಿದ ನಂತರ ಒಪ್ಪಿದರು. ನನ್ನ ಬಳಿ ಬಿ-ಪಾಸಿಟಿವ್ ಪ್ಲಾಸ್ಮಾ ಇದೆ. ನಾನು ಅದನ್ನು ಮೊದಲ ಬಾರಿಗೆ ದಾನ ಮಾಡಿದಾಗ ನನಗೆ ಏನೂ ತೊಂದರೆಯಾಗಲಿಲ್ಲ. ಇದು ನೋವುರಹಿತವಾಗಿರುತ್ತದೆ, ಜೊತೆಗೆ ಕೇವಲ ಒಂದು ಗಂಟೆ ಸಮಯವನಷ್ಟೇ ತೆಗೆದುಕೊಳ್ಳುತ್ತದೆ” ಎಂದು ಕುನಾಲ್ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
ನಾನು ಹೆಚ್ಚು ಪ್ಲಾಸ್ಮಾ ದಾನಕ್ಕೆ ಸಿದ್ಧನಾಗಿದ್ದೇನೆ ಎಂದು ಎಚ್‌ಸಿಜಿ ವೈದ್ಯರಿಗೆ ಹೇಳಿದೆ. ಎರಡು ಪ್ಲಾಸ್ಮಾ ದಾನಗಳ ನಡುವಿನ ಅಂತರವು ಕನಿಷ್ಠ 15 ದಿನಗಳಿರಬೇಕು ಎಂದು ಅವರು ತಿಳಿಸಿದ್ದಾರೆ.
ಜುಲೈನಲ್ಲಿ, ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್‌ನ ಹಿರಿಯ ಹೃದ್ರೋಗ ತಜ್ಞ ಡಾ.ನಟೇಶ್ ಬಿ ಎಚ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತು. ಆದರೆ ವೇಗವಾಗಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಹಾಗಾಗಿ ಅವರನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಯಿತು. ಅವರಿಗೆ ವೆಂಟಿಲೇಟರ್ ಮತ್ತು ರೆಮ್ಡೆಸಿವಿರ್ ಔಷಧಿಯನ್ನು ನೀಡಲಾಗಿದ್ದರೂ, ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ನಂತರ ಪ್ಲಾಸ್ಮಾ ಚಿಕಿತ್ಸೆಯನ್ನು ಪರಿಗಣಿಸಲಾಯಿತು. ಜುಲೈ ಅಂತ್ಯದಲ್ಲಿ, ಕುನಾಲ್ ಮತ್ತೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದರು. ಅದನ್ನು ಡಾ.ನಾಟೇಶ್ ಅವರಿಗೆ ನೀಡಲಾಯಿತು.
ಅವರು ಮೂರು ದಿನಗಳಲ್ಲಿ ಚೇತರಿಸಿಕೊಂಡರು. ಐಸಿಯುನಲ್ಲಿ ಐದು ದಿನಗಳನ್ನು ಕಳೆದ ನಂತರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು.
‘ನನ್ನ ಪ್ಲಾಸ್ಮಾವನ್ನು ಯಾರಿಗೆ ನೀಡಲಾಗಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ವೈದ್ಯರು ನನ್ನೊಂದಿಗೆ ವೀಡಿಯೊ-ಕಾನ್ಫರೆನ್ಸ್ ಮೂಲಕ ಸಂಪರ್ಕ ಮಾಡಿ ನನಗೆ ಧನ್ಯವಾದಗಳನ್ನು ತಿಳಿಸಿದರು. ನನ್ನ ಪ್ಲಾಸ್ಮಾ ನಾಲ್ಕುಕ್ಕೂ ಹೆಚ್ಚು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ತಿಳಿಸಲಾಯಿತು’ ಎಂದು ಅವರು ಹೇಳಿದರು.
“ನಿರ್ಣಾಯಕ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯು ಮುಖ್ಯವಾಗಿದೆ. ರೋಗ ನಿಯಂತ್ರಿಸಲು ನಮಗೆ ಹೆಚ್ಚಿನ ದಾನಿಗಳು ಬೇಕು” ಡಾ. ನಟೇಶ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು
ರಾಜ್ಯದಲ್ಲಿ ಕೊರೊನಾ ವಿರುದ್ದ ಪ್ಲಾಸ್ಮಾ ಥೆರಪಿ ಮುಂದುವರೆಸಲಾಗುವುದು: ಆರೋಗ್ಯ ಸಚಿವ ಶ್ರೀರಾಮುಲು


