ಕಳೆದೊಂದು ತಿಂಗಳಿನಿಂದ ರಾಜಕೀಯ ಅಸ್ಥಿರತೆ ಉಂಟಾಗಿದ್ದ ರಾಜಸ್ಥಾನದಲ್ಲಿ ವಿಧಾನಸಭೆ ಅಧಿವೇಶನಕ್ಕೆ ಕೇವಲ 4 ದಿನಗಳು ಬಾಕಿ ಉಳಿದಿರುವಂತೆ ಮತ್ತು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್‌ನಿಂದ ಬಂಡಾಯವೆದ್ದು ಸರ್ಕಾರವನ್ನು ಪತನದ ಅಂಚಿಗೆ ತಳ್ಳಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಸಂಚಲನ ಮೂಡಿಸಿದೆ.
ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂದು ಆಗ್ರಹಿಸಿದ್ದ ಸಚಿನ್ ಪೈಲಟ್ ಇಬ್ಬರು ಹಿರಿಯ ಕಾಂಗ್ರೆಸ್ ಮುಖಂಡರ ಬಳಿ ಬೇಡಿಕೆಯಿಟ್ಟಿದ್ದರು. ಇಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಗ ಗಾಂಧಿ ಸಚಿನ್ ಪೈಲಟ್‌ರನ್ನು ಭೇಟಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ ವೇಣುಗೋಪಾಲ್ ಖಚಿತಪಡಿಸಿದ್ದಾರೆ.
ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ, ಆದರೆ ಕಾಂಗ್ರೆಸ್ ಪಾಲಿಗೆ ಸಕರಾತ್ಮಕ ಅಂಶಗಳು ಹೊರಬೀಳಲಿವೆ ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ.
ಇದೇ 14 ರಿಂದ ರಾಜಸ್ಥಾನ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ತಾನು ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಇನ್ನು ಬಿಜೆಪಿ ತನ್ನ ಶಾಸಕರನ್ನು ಗುಜರಾತ್‌ನ ರೆಸಾರ್ಟ್‌ಗೆ ಕಳಿಸಿದೆ. ಒಟ್ಟಾರೆಯಾಗಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆ ಮಾತನಾಡಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಸಮಾಧಾನ ತಂದಿದೆ ಎಂದು ಹೇಳಲಾಗುತ್ತಿದೆ.
ಆದರೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಲವು ಶಾಸಕರು ಪಕ್ಷಕ್ಕೆ ದ್ರೋಹವೆಸಗಿದ ಬಂಡಾಯವೆದ್ದವರನ್ನು ಮರಳಿ ಪಕ್ಷಕ್ಕೆ ಕರೆತರಬಾರದು ಎಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ಗೆಹ್ಲೋಟ್ ಮೇಲೆ ಕ್ರಮ ಆಗದ ಹೊರತು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಪೈಲಟ್ ಬಣ ಹೇಳಿಕೊಂಡಿದೆ.
ಇದನ್ನೂ ಓದಿ:


