ಕೋವಿಡ್ ಸನ್ನಿವೇಶವನ್ನು ಬಳಸಿಕೊಂಡು ಕಾರ್ಮಿಕ ಕಾನೂನು ಬದಲಾವಣೆ, ಎಪಿಎಂಸಿ ಕಾಯ್ದೆ, ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆ, ಭೂಕಂದಾಯ ಕಾಯ್ದೆಗಳ ತಿದ್ದುಪಡಿಗೊಳಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮವನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಎಐಕೆಎಸ್‍ಸಿಸಿ, ದಲಿತ ಸಂಘಟನೆಗಳ ಒಕ್ಕೂಟ, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ನಾವು ಭಾರತೀಯರು ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ ಪ್ರಭುತ್ವಗಳು ಕೊರೊನ ಸೋಂಕು ಭೀತಿ ಹುಟ್ಟಿಸಿ ದಮನಕಾರಿ ಕಾನೂನುಗಳ ಜಾರಿಗೆ ತರುತ್ತಿವೆ. ಇದು ರೈತ, ಕಾರ್ಮಿಕ ಮತ್ತು ಜನ ವಿರೋಧಿಯಾಗಿದ್ದು ಜನತೆಗೆ ದ್ರೋಹ ಬಗೆಯುತ್ತಿವೆ ಎಂದು ಆರೋಪಿಸಿದರು.

ಕೊರೊನಾ ಕಾಯಿಲೆಯನ್ನು ಭಯೋತ್ಪಾದನೆ ಎಂಬಂತೆ ಬಿಂಬಿಸಲಾಗುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಬಂಡವಾಳಶಾಹಿ, ಶ್ರೀಮಂತರೊಂದಿಗೆ ಸೇರಿಕೋಂಡು ಕೋಮುವಾದಿ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಐಕ್ಯಹೋರಾಟಗಳು ಅಗತ್ಯ ಎಂದು ಪ್ರತಿಪಾದಿಸಿದರು.

ಎಐಕೆಎಸ್‍ಸಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು, ನೂತನ ಶಿಕ್ಷಣ ನೀತಿ ಜಾರಿಯನ್ನು ಕೈಬಿಟ್ಟು, ಆನ್ ಲೈನ್ ಶಿಕ್ಷಣ ಮತ್ತು ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಿಷೇಧಿಸಬೇಕು, ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಮತ್ತು ಹೊಸದಾಗಿ ಸಾಲ ನೀಡಬೇಕೆಂದು ಒತ್ತಾಯಿಸಿದರು.

ಆದಾಯ ತೆರಿಗೆ ಮಿತಿಯ ಹೊರಗಿರುವ ಎಲ್ಲಾ ಕುಟುಂಬಳಿಗೆ ಮುಂದಿನ ಆರು ತಿಂಗಳು ಮಾಸಿಕ 7,500 ಹಾಗೂ ಉಚಿತ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ನಗರ ಪ್ರದೇಶಗಳಿಗೆ ಯೋಜನೆ ವಿಸ್ತರಿಸಬೇಕು ಎಂದರು

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸದೆ ಜನತೆಯ ಆಸ್ತಿಯಾದ ರೈಲ್ವೆ, ರಕ್ಷಣಾ ವಲಯದ ಕಾರ್ಖಾನೆಗಳು, ಜೀವ ವಿಮಾ ನಿಗಮ, ಬ್ಯಾಂಕ್‍ಗಳು, ಬಂದರು, ವಿಮಾನ ನಿಲ್ದಾಣಗಳು ಮತ್ತು ಮತ್ತಿತರ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದನ್ನು ಈ ಕೂಡಲೇ ತಡೆಯಬೇಕು ಹಾಗೂ ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರಿಗೆ ಸಹಾಯಹಸ್ತ ನೀಡಬೇಕು. ವಿಪರೀತ ಹೆಚ್ಚಿರುವ ನಿರುದ್ಯೋಗಕ್ಕೆ ಪರಿಹಾರ ಕಾಣಲು ಉದ್ಯೋಗ ಸೃಷ್ಟಿಯ ದಿನಗಳನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಮಾಲಿಕರ ವಿರುದ್ಧ ಕೈಗಾರಿಕಾ ವಿವಾದಗಳನ್ನು,ದೂರುಗಳನ್ನು ಅಂಗೀಕರಿಸುವಲ್ಲಿ ವಿಳಂಬ, ಸರಿಯಾದ ತನಿಖೆಯಿಲ್ಲದೆ ಕಾರ್ಮಿಕರ ಸಮಸ್ಯೆಗಳನ್ನು ಆಲಿಸದೆ, ಲೇ-ಆಫ್, ರಿಟ್ರೆಂಚ್ಮೆಂಟ್, ಮುಚ್ಚುವಿಕೆಗಳಿಗೆ ಶೀಘ್ರ ಅನುಮತಿ ಇತ್ಯಾದಿಗಳ ಮೂಲಕ ಕಾರ್ಮಿಕ ಇಲಾಖೆ ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಸರಿಯಲ್ಲ ಎಂದರು.

ಎಐಟಿಯುಟಿಯುಸಿ ಸಂಚಾಲಕಿ ಮಂಜುಳ ಮಾತನಾಡಿ, ಕೋವಿಡ್ ಅವಧಿಯಲ್ಲಿ ಹೆಚ್ಚಿರುವ ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಕೋವಿಡ್ ನಿಯಂತ್ರಣ ಮಾಡಬೇಕಾದ ಸರ್ಕಾರಗಳು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸತ್ತುಹೋಗಿದೆ. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಮಾಜ ಸೇವಕ ತಾಜುದ್ದೀನ್ ಷರೀಫ್ ಮಾತನಾಡಿ ದೇಶದಲ್ಲಿ ಪ್ರತಿಪರ  ಚಿಂತಕರನ್ನು ಬಂಧಿಸುವ, ಅವರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ಜೈಲಿಗೆ ಕಳೆಸುವ ಸೇಡಿನ ಕ್ರಮವನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ಸಿ.ಅಜ್ಜಪ್ಪ,  ಪ್ರಾಂತ ರೈತ ಸಂಘದ ಬಿ.ಉಮೇಶ್, ಸಿಐಟಿಯು ತಾಲೂಕು ಕಾರ್ಯದರ್ಶಿ ರಂಗಧಾಮಯ್ಯ, ಎಐಟಿಯುಸಿ ಮುಖಂಡ ಕಂಬೇಗೌಡ, ಪದ್ಮನಾಭ್, ನಾಗಣ್ಣ ಅಂಗನವಾಡಿ ನೌಕರರ ಸಂಘದ ಗೌರಮ್ಮ, ಜಬೀನ, ಗಂಗಾ ಮೊದಲಾದವರು ಉಪಸ್ಥಿತರಿದ್ದರು.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts