ವಾಲ್ ಸ್ಟ್ರೀಟ್ ಜರ್ನಲ್ ವರದಿ ಉಲ್ಲೇಖಿಸಿದ ಪತ್ರಕರ್ತನ ಮೇಲಿನ ಕ್ರಿಮಿನಲ್ ದೂರನ್ನು ಹಿಂಡೆಯುವಂತೆ ಫೇಸ್‌ಬುಕ್‌ನ ಪ್ರಾದೇಶಿಕ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ ರನ್ನು ಪತ್ರಕರ್ತರ ಹಿತರಕ್ಷಣಾ ಸಮಿತಿಯು ಒತ್ತಾಯಿಸಿದೆ.
ಆಗಸ್ಟ್ 16 ರಂದು ಅಂಖಿ ದಾಸ್, ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಆನ್‌ಲೈನ್ ನಲ್ಲಿ ಕೆಲವು ವ್ಯಕ್ತಿಗಳು ನನ್ನನ್ನು ಉದ್ದೇಶಪೂರ್ವಕವಾಗಿ ನಿಂದಿಸಿದ್ದಾರೆ ಎಂದು ಹೇಳಿದ್ದಾರೆ.

“ನನಗೆ ನೀಡಿದ ಕಿರುಕುಳದಿಂದ ನಾನು ತುಂಬಾ ತೊಂದರೆಗೀಡಾಗಿದ್ದೇನೆ” ಎಂದು ದಾಸ್ ತನ್ನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ನ್ಯೂಸ್‌ಲಾಂಡ್ರಿ ವರದಿಯ ಪ್ರಕಾರ ಅಂಕಿ ದಾಸ್ ಅವರು, ಹಿಮಾಂಶು ದೇಶಮುಖ್, ಅವೇಶ್ ತಿವಾರಿ, ಅನಾಮಿಕಾ ಸಿಂಗ್, ಟ್ರಾವಿಸ್ ಬಿಕಲ್, ಮತ್ತು ಟ್ವಿಟರ್ ಬಳಕೆದಾರ ಜಸ್ಟಾನಲಿಸಿಸ್ ಅನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.
ಅವರಲ್ಲಿ ಅವೇಶ್ ತಿವಾರಿ ಒಬ್ಬರು ಮಾತ್ರ ಪತ್ರಕರ್ತರು. ತಿವಾರಿ ಚತ್ತೀಸ್‌ಘಡದ ಚಾನೆಲ್ ಸ್ವರಾಜ್ಯ ಎಕ್ಸ್‌ಪ್ರೆಸ್‌ನ ಮುಖ್ಯಸ್ಥರಾಗಿದ್ದಾರೆ. ತಿವಾರಿ ಅವರ ಪೋಸ್ಟ್‌ಗೆ ಫೇಸ್‌ಬುಕ್ ಬಳಕೆದಾರರೊಬ್ಬರು ನೀಡಿದ ಪ್ರತಿಕ್ರಿಯೆಯನ್ನು ದಾಸ್ ಉಲ್ಲೇಖಿಸಿದ್ದಾರೆ. ಇದು ಡಬ್ಲ್ಯುಎಸ್‌ಜೆ ಲೇಖನಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ತಿವಾರಿ ಹೇಳಿದ್ದಾರೆ.
“ಲೈಂಗಿಕ ಕಿರುಕುಳ, ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ”ಗಾಗಿ ತಿವಾರಿ ವಿರುದ್ಧ ತನಿಖೆ ನಡೆಸುವಂತೆ ಅಂಖಿ ದಾಸ್ ಮನವಿ ಮಾಡಿದ್ದಾರೆ. ಇದರ ನಡುವೆಯೇ ತಿವಾರಿಗೆ ಅಪರಿಚಿತ ಫೋನ್ ಸಂಖ್ಯೆಗಳಿಂದ 11 ಕರೆಗಳು ಬಂದಿದ್ದು, ಜೈಲು ಶಿಕ್ಷೆ, ಮೊಕದ್ದಮೆ ಮತ್ತು ದೈಹಿಕ ತೊಂದರೆಯ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ತಿವಾರಿಯವರು ಅಂಖಿ ದಾಸ್ ವಿರುದ್ಧ ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿ ರಾಯಪುರ ಪೊಲೀಸರಿಗೆ ಕೌಂಟರ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಇಂಡಿಯಾ ಸಿಇಓ ಅಂಖಿ ದಾಸ್ ವಿರುದ್ದ ಸಿಡಿದೆದ್ದ ಸಹೋದ್ಯೋಗಿಗಳು!


