ಭಾರತದಾದ್ಯಂತ ಇರುವ ಕೇಂದ್ರೀಯ ವಿವಿಗಳಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಾತಿನಿಧ್ಯ ತೀರಾ ಕಡಿಮೆಯಿದೆ. ಅವರಿಗಾಗಿಯೇ ಮೀಸಲಾದ ಪ್ರಾತಿನಿಧ್ಯದಲ್ಲಿ ಅಲ್ಪ ಪ್ರಮಾಣ ಮಾತ್ರ ತುಂಬಿದ್ದು ಉಳಿದಿದ್ದು ಖಾಲಿ ಬಿದ್ದಿದೆ.
ಪ್ರಾಧ್ಯಾಪಕ ಹುದ್ದೆಗಳಲ್ಲಿ ಓಬಿಸಿ ಕೋಟಾದಡಿ ಒಟ್ಟು ಮಂಜೂರಾದ 313 ಹುದ್ದೆಗಳಲ್ಲಿ ಕೇವಲ 09 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇನ್ನೂ 304 ಹುದ್ದೆಗಳು ಖಾಲಿ ಬಿದ್ದಿವೆ. ಅಂದರೆ ಕೇವಲ ಶೇ. 2.8 ಮಾತ್ರ ತುಂಬಿದೆ ಎಂದು ಯುಜಿಸಿ ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳಿವೆ.
ಜನವರಿ 1, 2020 ರಿಂದ ಜವಾಹರಲಾಲ್ ವಿಶ್ವವಿದ್ಯಾಲಯ (ಜೆಎನ್‌ಯು), ದೆಹಲಿ ವಿವಿ, ಬನಾರಸ್ ಹಿಂದೂ ವಿವಿ, ಅಲಹಾಬಾದ್ ವಿವಿ ಸೇರಿದಂತೆ ಹಲವು ವಿವಿಗಳಲ್ಲಿ ಒಬ್ಬರೇ ಒಬ್ಬರು ಒಬಿಸಿ ಪ್ರಾಧ್ಯಾಪಕರನ್ನು ನೇಮಿಸಿಕೊಂಡಿಲ್ಲ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಸಹ ಪ್ರಾಧ್ಯಾಪಕರ ಹುದ್ದೆಗಳ ವಿಷಯಕ್ಕೆ ಬಂದರೆ ಒಬಿಸಿ ಕೋಟಾದಡಿ ಮಂಜೂರಾದ ಹುದ್ದೆಗಳಲ್ಲಿ ಕೇವಲ ಶೇ. 5.17 ರಷ್ಟನ್ನು ಮಾತ್ರ ತುಂಬಲಾಗಿದೆ. 735 ಹುದ್ದೆಗಳಲ್ಲಿ 38 ಹುದ್ದೆಗಳು ಭರ್ತಿಯಾಗಿವೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ ಮಾತ್ರ ಸಮಾಧಾನಕರ ಅಂಶ ಎದ್ದುಕಾಣುತ್ತಿದೆ. ಈ ವಿಭಾಗದಲ್ಲಿ ಸುಮಾರು 60% ಒಬಿಸಿ ಹುದ್ದೆಗಳು ಭರ್ತಿಯಾಗಿವೆ. ಒಟ್ಟು ಮಂಜೂರಾದ 2232 ಹುದ್ದೆಗಳಲ್ಲಿ 1327 ಹುದ್ದೆಗಳು ಭರ್ತಿಯಾಗಿವೆ.
ಇದನ್ನೂ ಓದಿ: ಒಬಿಸಿ ಅಭ್ಯರ್ಥಿಗಳಿಗೆ ನೀಟ್ ಮೀಸಲಾತಿಯಲ್ಲಿ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಆದಾಯದ ಮಿತಿಯನ್ನು ನಿರ್ಧರಿಸಲು ಸಂಬಳವನ್ನು ಒಂದು ಅಂಶವಾಗಿ ಸೇರಿಸುವ ಮೂಲಕ ಒಬಿಸಿ ಮೀಸಲಾತಿಯಲ್ಲಿನ “ಕೆನೆ ಪದರ” ದ ವ್ಯಾಖ್ಯಾನವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿರ್ಧಾರಕ್ಕೆ ಬಿಜೆಪಿಯಲ್ಲಿನ ಕೆಲವ ಒಬಿಸಿ ಸಂಸದರು ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಅಪಸ್ವರ ಎತ್ತಿವೆ. ಈಗಾಗಲೇ ಒಬಿಸಿ ಸಮುದಾಯದ ಕಡಿಮೆ ಪ್ರಾತಿನಿಧ್ಯವಿದ್ದು, ಕೇಂದ್ರದ ಈ ನಡೆ ಅದನ್ನು ಮತ್ತಷ್ಟು ಕಡಿಮೆಗೊಳಿಸುತ್ತದೆ ಎಂದು ಆರೋಪಿಸಿವೆ.
ಕಳೆದ ತಿಂಗಳ ಸಭೆಯೊಂದರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಒಬಿಸಿ ಪ್ರಾತಿನಿಧ್ಯದ ಕುರಿತು ಮಾಹಿತಿ ಒದಗಿಸುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದರು. ತದನಂತರದ ಪರಿಶೀಲನೆಯಲ್ಲಿ ಈ ಮೇಲಿನ ಅಂಶಗಳು ಬೆಳಕಿಗೆ ಬಂದಿವೆ.
ಕಾರಣವೇನು?
2016 ಸುಪ್ರೀಂ ಕೋರ್ಟ್‌ನ ಆದೇಶದಂತೆ ಯುಜಿಸಿಯು ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಲ್ಲಿ ಒಬಿಸಿ ಸಮುದಾಯಕ್ಕಿದ್ದ 27% ಮೀಸಲಾತಿಯನ್ನು ರದ್ದುಗೊಳಿಸಿತ್ತು. 27% ಮೀಸಲಾತಿಯನ್ನು ಕೇವಲ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಿತ್ತು.
ನಂತರ 2019 ರಲ್ಲಿ ಸರ್ಕಾರವು ಕೇಂದ್ರ ಶಿಕ್ಷಣ ಸಂಸ್ಥೆಗಳು (ಶಿಕ್ಷಕರ ಹುದ್ದೆಗಳಲ್ಲಿ ಮೀಸಲಾತಿ) ಸುಗ್ರೀವಾಜ್ಞೆಯನ್ನು ತಂದಿತು. ಆದ್ದರಿಂದ ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಕೇಂದ್ರ ಸರ್ಕಾರದಿಂದ ತೆರೆಯಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಮೀಸಲಾತಿಯನ್ನು ಮತ್ತೆ ಒದಗಿಸಿತು.
ಆದರೂ ಸಾಕಷ್ಟು ಪ್ರಚಾರದ ಕೊರತೆಯಿಂದಾಗಿ ಉನ್ನತ ಭೋದನಾ ಹುದ್ದೆಗಳಲ್ಲಿ ಒಬಿಸಿಗಳ ಸಮುದಾಯದ ಪ್ರಾತಿನಿಧ್ಯತೆ ಹೆಚ್ಚಾಗಿಲ್ಲ. ಸರ್ಕಾರವು ಸಮರ್ಥ ಪರಿಣಿತರು ಸಿಗುತ್ತಿಲ್ಲ ಎಂದು ವಾದಿಸುತ್ತಿದೆ. ಇಷ್ಟು ದೊಡ್ಡ ದೇಶದಲ್ಲಿ ಒಬಿಸಿ ಸಮುದಾಯದ ಪ್ರಾಧ್ಯಾಪಕರಿಲ್ಲವೇ ಎಂಬ ಪ್ರಶ್ನೆಯನ್ನು ಇದು ಮುನ್ನೆಲೆಗೆ ತಂದಿದೆ.
ವಿವಿಗಳಲ್ಲಿ ಮೀಸಲಾತಿ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲ
ಒಬಿಸಿಗಳ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಿಸಿಕೊಳ್ಳಲು ಯಾವುದೇ ಜಾಹೀರಾತು ನೀಡುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ನೇಮಕ ಮಾಡಿಕೊಳ್ಳುವ ಮನಸ್ಸಿಲ್ಲ ಎಂದು ನೇಮಕಾತಿ ಸಮಿತಿಯ ಭಾಗವಾಗಿರುವ ದೆಹಲಿ ವಿವಿಯ ಮಹಾರಾಜ ಆಗ್ರಾಸೆನ್ ಕಾಲೇಜಿನ ಭೋದಿಸುವ ಸುಬೋಧ್ ಕುಮಾರ್ ಹೇಳುತ್ತಾರೆ.
ಯಾವುದೇ ವಿವಿಯ ಉಪಕುಲಪತಿಗಳ ಹುದ್ದೆಯಲ್ಲಿ ಮೇಲ್ಜಾತಿಯವರಿರುತ್ತಾರೆ. ಅವರು ಮೇಲ್ಜಾತಿಯವರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಮೇಲ್ಜಾತಿ ಸಂಸ್ಕೃತಿಯೇ ಬೇರೂರಿದೆ ಎಂದು ಅವರು ಆರೋಪಿಸಿದ್ದಾರೆ.
ನೇಮಕಾತಿ ವಿಧಾನವೂ ತೀರಾ ನಿಧಾನವಾಗಿದೆ. ಅಲ್ಲದೇ ಸರ್ಕಾರಿ ಸಂಸ್ಥೆಗಳಲ್ಲಿ ಒಬಿಸಿಗಳ ಮೀಸಲಾತಿ ಜಾರಿಯೂ ಸಹ ವಿಳಂಬವಾಗುತ್ತದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿರ್ದಿಷ್ಠ ಸಿದ್ದಾಂತಕ್ಕೆ ಬದ್ಧರಾಗಿಲ್ಲದಿದ್ದರೆ ನಿಮ್ಮ ನೇಮಕಾತಿ ತೀರಾ ಕಷ್ಟವಾಗುತ್ತದೆ. ಈ ಮೂರು ಕಾರಣಗಳು ಒಬಿಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಉನ್ನತ ಭೋದನಾ ಹುದ್ದೆಗಳಲ್ಲಿ ಇಲ್ಲದಿರುವುದಕ್ಕೆ ಕಾರಣ ಎಂದು ಜೆಎನ್‌ಯುವಿನ ಪ್ರೊ.ನರೇಂದ್ರ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: NEET ಪರೀಕ್ಷೆಯಲ್ಲಿ OBC ಮೀಸಲಾತಿ ನೀಡಿ, ಸಾಮಾಜಿಕ ನ್ಯಾಯ ಪಾಲಿಸಿ: ಪ್ರಿಯಾಂಕಾ ಗಾಂಧಿ


