Homeಮುಖಪುಟಮಣ್ಣಿನ ಗೌರಿಯಾದರೂ ಸರಿ,  ಮೌನಗೌರಿಯಾದರೂ ಸರಿ, ಆದರೆ ಮಾತನಾಡುವ ಗೌರಿಯಾದಿರೋ ಗುಂಡಿಟ್ಟು ಕೊಲ್ಲಲಾಗುತ್ತದೆ! - ಡಾ.ಕಾವ್ಯಶ್ರೀ...

ಮಣ್ಣಿನ ಗೌರಿಯಾದರೂ ಸರಿ,  ಮೌನಗೌರಿಯಾದರೂ ಸರಿ, ಆದರೆ ಮಾತನಾಡುವ ಗೌರಿಯಾದಿರೋ ಗುಂಡಿಟ್ಟು ಕೊಲ್ಲಲಾಗುತ್ತದೆ! – ಡಾ.ಕಾವ್ಯಶ್ರೀ ಎಚ್.

ಇಂದ್ರಾ ನೂಯಿ ಅವರಿಗೆ ಪೆಪ್ಸಿಕೋ ಕಂಪೆನಿಯ ಸಿ.ಇ.ಓ. ಹುದ್ದೆ ಲಭಿಸಿದ ಸಂದರ್ಭದಲ್ಲಿ ಇಡೀ ದೇಶವೇ ಅವರನ್ನು ಅಭಿನಂದಿಸುತ್ತಿರುವಾಗ ಆ ಸಂಭ್ರಮವನ್ನು ಆಚರಿಸಲು ಮನೆಗೆ ತೆರಳಿದಾಗ ಅವರ ಪತಿ ವಿಶ್ರಾಂತಿ ಪಡೆಯಲೆಂದು ಕೋಣೆಯಲ್ಲಿ ಮಲಗಿದ್ದರಂತೆ!

- Advertisement -
- Advertisement -

ಈ ಹಬ್ಬದ ಸಡಗರದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಮಾತೊಂದು  ನೆನಪಾಯಿತು “ದೇಶದ ಹೆಣ್ಣು ಮಕ್ಕಳು ಗುಡಿ ಗುಂಡಾರಗಳಲ್ಲಿ ಕೈ ಮುಗಿದು ಸಾಲು ನಿಲ್ಲುವ ಬದಲು ಎಂದು ಗ್ರಂಥಾಲಯಗಳಲ್ಲಿ ಸಾಲು ನಿಲ್ಲುವರೋ ಅಂದು ಈ ದೇಶ ಉದ್ಧಾರವಾಗುತ್ತದೆ.”  ಹೆಣ್ಣನ್ನು ನಾಲ್ಕು ಗೋಡೆಗಳೊಳಗೆ ಕಟ್ಟಿಹಾಕುವಲ್ಲಿ ಮನುವಾದ ಯಶಸ್ವಿಯಾದ ಹಾಗೆಯೇ, ಅಕ್ಕ ಹೇಳುವ ಮುತ್ತಿನ ಬಲೆಯಾದಡೆ ಬಂಧನವಲ್ಲವೆ ಎನ್ನುವ ಮಾತಿನಂತೆ ಅದೃಶ್ಯ ಸಂಕೋಲೆಗಳಲ್ಲಿ ಬಂಧಿಸುವಲ್ಲಿ ಮತ್ತು ಹೆಣ್ಣು ತನಗೆ ತಾನೇ ಕೈಕೋಳ ತೊಟ್ಟುಕೊಳ್ಳುವಂತೆ ಮಾಡುವಲ್ಲಿ ನವಮನುವಾದ ಯಶಸ್ವಿಯಾಗಿದೆ.

ಗೌರಿಯ ಮೂರ್ತಿಯನ್ನು ಎತ್ತರದಲ್ಲಿ ಕೂರಿಸಿ ಪೂಜಿಸಿ ಆರಾಧಿಸುವ ನಾವು, ಅದೇ ಒಬ್ಬ ಜೀವಂತ ಮಹಿಳೆ ಎತ್ತರದ ಸ್ಥಾನಕ್ಕೇರಿದಾಗ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಸಮಾಜದ ವ್ಯಂಗ್ಯ. ಹಾಗೆ ಅವಳನ್ನು ಎತ್ತರದ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲೂ ತಯಾರಿಲ್ಲದ ಪುರುಷವರ್ಗ ಅದನ್ನು ತಪ್ಪಿಸಲು ಯಾವ ಮಟ್ಟದ ಪ್ರಯತ್ನವನ್ನಾದರೂ ಮಾಡಲು ಸಿದ್ಧವಿರುತ್ತದೆ.

ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಗುಂಜನ್ ಸಕ್ಸೇನಾ ಸೇನೆಯಲ್ಲಿದ್ದ ಲಿಂಗತಾರತಮ್ಯವನ್ನು ತೆರೆದಿಡುವುದರೊಂದಿಗೆ ಆ ಪುರುಷ ಅಧಿಕಾರಿಗಳ ಮನೋಧರ್ಮವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. ಮಹಿಳೆಯೊಬ್ಬಳಿಗೆ ಸೆಲ್ಯೂಟ್‌ ಹೊಡೆಯುವುದಕ್ಕೆ ಶತಾಯಗತಾಯ ಸಿದ್ಧವಿಲ್ಲದ ಅಧಿಕಾರಿಗಳ ತಂತ್ರಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗಿ ಕಂಡರೂ, ಮಹಿಳೆಯರ ಪ್ರವೇಶವನ್ನು ಎಷ್ಟು ವ್ಯವಸ್ಥಿತವಾಗಿ ಎಲ್ಲರೂ ತಲೆದೂಗುವಂತೆ ನಿರಾಕರಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ ‘ಕಮಾಂಡರ್ ಹುದ್ದೆಗಳಿಗೆ ಮಹಿಳೆಯರು ಸೂಕ್ತರಲ್ಲ. ಏಕೆಂದರೆ, ಸೇನೆಯ ಪ್ರಮುಖ ಹುದ್ದೆಗಳಲ್ಲಿ ಪುರುಷರೇ ಇರುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಹಿನ್ನೆಲೆಯಲ್ಲಿಟ್ಟು ನೋಡಿದರೆ ಮಹಿಳಾ ಅಧಿಕಾರಿಯ ಆದೇಶವನ್ನು ಪಾಲಿಸುವ ರೀತಿಯಲ್ಲಿ ಸೇನಾ ಪಡೆಗಳು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ … ’, ಎಂದು ನಮ್ಮ ಘನ ಕೇಂದ್ರ ಸರ್ಕಾರವೇ ಇಷ್ಟು ವರ್ಷಗಳ ಕಾಲ ಮಹಿಳೆಯರಿಗೆ ಸ್ಥಾನವನ್ನು ನಿರಾಕರಿಸಿತ್ತು.

ಯಶಸ್ವಿ ಉದ್ಯಮಿ ಕಿರಣ್ ಮಜುಂದಾರ್‌ ಶಾ ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಪುರುಷಪ್ರಧಾನವಾಗಿದ್ದ ಉದ್ಯಮ ಕ್ಷೇತ್ರದಲ್ಲಿ ಕಾಲಿಟ್ಟಿದ್ದರಿಂದ ತಾನು ಮಹಿಳೆ ಎಂಬ ಒಂದೇ ಕಾರಣಕ್ಕೇ ತಾರತಮ್ಯವನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ ಹೆಣ್ಣನ್ನು  ಯಜಮಾನಿಯನ್ನಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕಾರಣ ಇವರು ಸ್ವಂತ ಉದ್ಯಮವನ್ನು ಆರಂಭಿಸಿದಾಗ ಇವರಿಗೆ ಕೆಲಸಗಾರರೇ ಸಿಗಲಿಲ್ಲ.

ಸ್ವಂತ ಅಭಿಪ್ರಾಯ ಹೊಂದಿರುವ, ನಿಷ್ಠುರ ವ್ಯಕ್ತಿತ್ವವಿರುವ, ತನ್ನ ನಡೆಯನ್ನು ಸಮರ್ಥಿಸಿಕೊಳ್ಳುವ, ಅಥವಾ ವಾದಕ್ಕೆ ತನ್ನ ಪ್ರತಿವಾದವನ್ನು ಮಂಡಿಸುವ  ಮಹಿಳೆಯರು ಬಜಾರಿ, ಗಂಡುಬೀರಿ, ದುರಹಂಕಾರಿ ಎನಿಸಿ ಪುರುಷರಿಗೆ ಅವರ ಬಗ್ಗೆ ಅಸಹನೆ ಉಕ್ಕಿಬರುತ್ತದೆ. ಯಾವುದಕ್ಕೂ ಮರುಮಾತನ್ನಾಡದ, ಎದುರುತ್ತರ ನೀಡದ ಹೆಣ್ಣನ್ನು ಪುರುಷಲೋಕ ಇಷ್ಟಪಡುತ್ತದೆ. ಹೀಗಾಗಿ ಮಣ್ಣಿನ ಗೌರಿಯಾಗಿದ್ದರೆ ಅಡ್ಡಿಯಿಲ್ಲ, ಮೌನಗೌರಿ ಆಗಿದ್ದರೂ ತೊಂದರೆಯಿಲ್ಲ, ಆದರೆ ಮಾತನಾಡುವ, ತನಗೆ ಅನ್ನಿಸಿದ್ದನ್ನು ಹೇಳುವ ಗೌರಿಯಾಗಿದ್ದರೆ, ತನಗೆ ಸರಿ ಕಂಡದನ್ನು ಮಾಡುವ ಗೌರಿಯೇನಾದರೂ ಆಗಿದ್ದರೆ, ಅಂತಹ ಹೆಣ್ಣನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ ಜೋಕೆ!

ದೇವಾಲಯದ ಗರ್ಭಗುಡಿಯಲ್ಲಿ ಸಣ್ಣ ವಯಸ್ಸಿನ ಹುಡುಗಿಯನ್ನು ದಿನಗಟ್ಟಲೆ ಅತ್ಯಾಚಾರ ಮಾಡಿದವರೂ ಕೂಡ ದೇವಿಯ ಮೂರ್ತಿಗೆ ಕೈಮುಗಿಯುತ್ತಲೇ ಬೆಳೆದವರಲ್ಲವೇ?

ಇಂತಹ ಘಟನೆಗಳು ಕೇವಲ `ಒಂದೆರಡಲ್ಲ’, ಅಥವಾ ಯಾವುದೋ ಒಂದು ವರ್ಗದ, ಜಾತಿಯ ಮಹಿಳೆಯರಿಗೆ ಸೀಮಿತವಾದುದೂ ಅಲ್ಲ. ಇದು ಪದೇ ಪದೇ ಎದುರಾಗುತ್ತಲೇ ಬಂದಿರುವ ಸನ್ನಿವೇಶ. ಹೆಣ್ಣಾಗಿರುವ ಕಾರಣದಿಂದಲೇ ಖುಷಿ, ಹೆಮ್ಮೆ ಪಡಬೇಕಾದ ಸಂದರ್ಭಗಳಲ್ಲೂ ಹೀಗಳಿಕೆಯನ್ನು, ಅರಿವಿಲ್ಲದೇ ತಪ್ಪಿತಸ್ಥ ಭಾವನೆಯನ್ನೂ ಕೂಡ ಹೆಣ್ಣು ಅನುಭವಿಸಬೇಕಾಗುತ್ತದೆ, ಹಾಗೆಂದು ಆ ಸನ್ನಿವೇಶದಲ್ಲಿ ಅವಳು ಮಾಡಿದ ಕೆಲಸಗಳಾವುವು ಅಪಮಾನಕರವೋ ತಲೆತಗ್ಗಿಸುವಂತಾದ್ದೋ ಆಗಿರುವುದಿಲ್ಲ; ಬದಲಾಗಿ ಅದು  “ಕಡುಪಾತಕಂಗೈದು ಪೆಣ್ಣಾಗಿ ಜನಿಸಿ ತನ್ನೊಡಲ ಪೊರೆವುದು ಎನ್ನೊಳು ಅಪರಾಧಮುಂಟು” ಎಂಬಂತಹುದೇ ಆಗಿರುತ್ತದೆ.

ಇದನ್ನೂ ಓದಿ: ಸ್ತ್ರೀಮತಿ- 2: ಲಾಕ್ – ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

ಇವುಗಳನ್ನೆಲ್ಲಾ ಮೀರಬೇಕು, ಕೊಡವಿಕೊಂಡು ಮೇಲೇಳಬೇಕು, ಹಾಗೆ ಎದ್ದು ಹೊರಡುವುದಾದರೂ ಎಲ್ಲಿಗೆ? ಹೆಣ್ಣು ಕನಸು ಕಾಣಬಹುದು, ಸಾಧನೆ ಮಾಡಬಹುದು, ಸಂಭ್ರಮವನ್ನು ಆಚರಿಸಬಹುದು ಆದರೆ ಇವುಗಳೆಲ್ಲವೂ ಪುರುಷರ ಕನಸು, ಸಾಧನೆ, ಸಂಭ್ರಮಗಳಿಗಿಂತ ಚಿಕ್ಕದೂ, ಸಣ್ಣದೂ, ಅಲ್ಪಮಟ್ಟದ್ದೂ ಆಗಿರಬೇಕು, ಆಗ ಮಾತ್ರ ಇವುಗಳೆಲ್ಲಕ್ಕೂ ಒಂದು ಸ್ಥಾನ ಮತ್ತು ಅರ್ಥ ಸಿಗುತ್ತದೆ.

ಇಂದ್ರಾ ನೂಯಿ ಅವರಿಗೆ ಪೆಪ್ಸಿಕೋ ಕಂಪೆನಿಯ ಸಿ.ಇ.ಓ. ಹುದ್ದೆ ಲಭಿಸಿದ ಸಂದರ್ಭದಲ್ಲಿ ಇಡೀ ದೇಶವೇ ಅವರನ್ನು ಅಭಿನಂದಿಸುತ್ತಿರುವಾಗ ಆ ಸಂಭ್ರಮವನ್ನು ಆಚರಿಸಲು ಮನೆಗೆ ತೆರಳಿದಾಗ ಅವರ ಪತಿ ವಿಶ್ರಾಂತಿ ಪಡೆಯಲೆಂದು ಕೋಣೆಯಲ್ಲಿ ಮಲಗಿದ್ದರಂತೆ!

ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜಿನ ಅಟೆಂಡರ್ ಗೌರಮ್ಮ ಅತ್ಯಂತ ಚುರುಕಾದ ಹೆಣ್ಣುಮಗಳು. ಅವರ ಮಗ ಕೂಡ ನಮ್ಮ ಕಾಲೇಜಿನಲ್ಲಿಯೇ ತನ್ನ ಶಿಕ್ಷಣವನ್ನು ಪೂರೈಸಿದ್ದ. ಕಾಲೇಜಿನ ಪುರುಷ ಸಹಾಯಕರು ಕಸಗುಡಿಸದೆ ಕೇವಲ ಆಫೀಸ್ ಕೆಲಸ ಮಾಡುವುದು, ಇನ್ನುಳಿದಂತೆ ಕುಳಿತು ಹರಟೆಹೊಡೆಯುತ್ತಾ ಕಾಲಹರಣ ಮಾಡುವುದು, ಮಹಿಳಾ ಸಹಾಯಕರು ಮಾತ್ರ ಎಲ್ಲಾ ಕೋಣೆಗಳ ಕಸಗುಡಿಸಬೇಕಾಗಿದೆ ಎಂಬ ಅಂಶ ಗೌರಮ್ಮನ ಮೂಲಕ ನಮ್ಮ ಗಮನಕ್ಕೆ ಬಂತು. ಅವರೆಲ್ಲರೂ ಒಂದೇ ವರ್ಗದ ಹುದ್ದೆಗೆ ನೇಮಕಗೊಂಡಿದ್ದರೂ ಕಾಲಾನುಕ್ರಮದಲ್ಲಿ ಅವರಾಗಿಯೇ ಜಾರಿಗೆ ತಂದುಕೊಂಡಿದ್ದ ಈ ಕ್ರಮದ ಬಗ್ಗೆಯೂ ಮಾಹಿತಿ ಸಿಕ್ಕಿತು.

ಪ್ರತಿ ಸಹಾಯಕರುಗಳಿಗೂ ಎಲ್ಲಾ ಕೆಲಸವನ್ನು ಸಮಾನವಾಗಿ ಹಂಚಬೇಕೆಂದು ಪ್ರಾಂಶುಪಾಲರೊಂದಿಗೆ ನಾವೊಂದಿಷ್ಟು ಮಹಿಳಾ ಉಪನ್ಯಾಸಕರು ಮಾತನಾಡಿದೆವು. ಅಂದಿನಿಂದ ಆ ಪುರುಷ ಸಹಾಯಕರ ಗುಂಪಿಗೆ ಗೌರಮ್ಮನ ಮೇಲೆ ಕಣ್ಣು. ಅವರ ಹಿಂದೆಮುಂದೆ ತಿರುಗಾಡುವಾಗಲೆಲ್ಲಾ ಆಡಿಕೊಳ್ಳುವುದು, ರೇಗಿಸುವುದು, ನಾವು ಗೌರಮ್ಮನನ್ನು ಸಮಾಧಾನಪಡಿಸುವುದು ನಡೆದೇ ಇತ್ತು. ಮುಂದೊಂದು ದಿನ ಕ್ರೀಡಾ ದಿನಾಚರಣೆಯಂದು ವಿದ್ಯಾರ್ಥಿಗಳೊಂದಿಗೆ ಬೋಧಕ ಮತ್ತು ಬೋಧಕೇತರ ವರ್ಗಕ್ಕೂ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಂದಿನ ಓಟದ ಸ್ಪರ್ಧೆಯಲ್ಲಿ ಗೌರಮ್ಮ ಮೊದಲ ಬಹುಮಾನ ಪಡೆದಿದ್ದರು. ಅದೇನೂ ಹೊಸತಲ್ಲ, ಪ್ರತಿವರ್ಷ ಮೊದಲ ಬಹುಮಾನ ಅವರದೇ. ನಾನಿಲ್ಲಿ ಮುಖ್ಯವಾಗಿ ಪ್ರಸ್ತಾಪಿಸ ಬಯಸುತ್ತಿರುವುದು ಮುಂದೆ ನಡೆದ ಘಟನೆಯನ್ನು.

ಇದನ್ನೂ ಓದಿ: ಸ್ತ್ರೀಮತಿ- 3: `ಮಾತನಾಡಲು ಸ್ವಾತಂತ್ರ್ಯ ಇರಬೇಕು, ಮಾತು ಕೇಳಿಸುವಂತಾಗಲು ಅಧಿಕಾರವಿರಬೇಕು’

ಕಾಲೇಜಿನ ವಾರ್ಷಿಕೋತ್ಸವದಂದು ಬಹುಮಾನ ವಿತರಣಾ ಕಾರ್ಯಕ್ರಮವೂ ಇತ್ತು, ವಿದ್ಯಾರ್ಥಿಗಳು, ಬೋಧಕರ ಸರದಿ ಮುಗಿದು ಬೋಧಕೇತರ ವರ್ಗದ ಸರದಿ ಬಂತು. ಓಟದ ಸ್ಪರ್ಧೆಯಲ್ಲಿ ಫ್ರಥಮ ಸ್ಥಾನ ಪಡೆದವರ ಹೆಸರು ಕೂಗಿದಾಗ ಗೌರಮ್ಮ ಮಾತ್ರ ಬರಲೇ ಇಲ್ಲ, ಅಲ್ಲೆಲ್ಲೂ ಆ ಕ್ಷಣಕ್ಕೆ ಕಾಣಿಸಲೂ ಇಲ್ಲ. ಸಮಾರಂಭವೆಲ್ಲ ಮುಗಿದ ನಂತರ ಕಂಡಾಗ ಕರೆದು ಕೇಳಿದೆ, ಅವರು ಕೊಟ್ಟ ಉತ್ತರ ನನ್ನ ಮನಸ್ಸನ್ನು ಬಹಳ ಘಾಸಿಗೊಳಿಸಿತು! ಅವರು ಉದ್ದೇಶಪೂರ್ವಕವಾಗಿಯೇ ಬಹುಮಾನ ಸ್ವೀಕರಿಸಲು ವೇದಿಕೆ ಏರಲಿಲ್ಲ… ಗೌರಮ್ಮ ವೇದಿಕೆ ಏರುವುದು, ಮುಖ್ಯ ಅತಿಥಿಗಳಿಂದ ಬಹುಮಾನ ಪಡೆಯುವುದು, ಸಂಸ್ಥೆಯ ಅಧ್ಯಕ್ಷರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಆಕೆಗೆ ಸಂಭ್ರಮ ಸಡಗರದ ವಿಚಾರವಾಗಿರಲಿಲ್ಲ, ಬದಲಿಗೆ ತನ್ನ ಪುರುಷ ಸಹೋದ್ಯೋಗಿಗಳ ಹೀಗಳಿಕೆಗೆ, ಕುಹಕಗಳಿಗೆ ಅವಕಾಶ ದೊರಕಿಸಿಕೊಡುವ ಮತ್ತೊಂದು ಕಾರಣವಾಗಿ ಕಂಡಿತಷ್ಟೇ!

ಇಂತಹ ಎಷ್ಟು ಸಾಧನೆಯ ಕತೆಗಳು, ಪ್ರತಿಭೆಗಳು ಹಿಸ್‌ ಸ್ಟೋರಿʼಯಲ್ಲಿ ಸ್ಥಾನ ಪಡೆಯದೇ ಹೋಗಿರಬಹುದು!?

ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನನ್ನು
ನಿನ್ನ ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ;
ಮಣ್ಣಂತೆ ಹೊಸಕಿ ತುಳಿಯಬಹುದು ನೀನು
ಆದರೂ ಧೂಳ ಕಣವಾಗಿಯಾದರೂ
ಮೇಲೇಳುತ್ತೇನೆ ನಾನು – ಮಾಯಾ ಏಂಜೆಲೋಳಂತಹ ಕವಿಗಳು ಹೆಣ್ಣಿನ ಅಸ್ಮಿತೆಯನ್ನು ದಾಖಲಿಸುವಲ್ಲಿ ಸೋಲಲಿಲ್ಲ.

ಕನ್ನಡ ಮಹಿಳಾ ಸಾಹಿತ್ಯದಲ್ಲಿ ಪ್ರತಿಭೆಗೆ ಸಂಬಂಧಿಸಿದಂತೆ ಎರಡು ಬಗೆಯ ಮಾದರಿಗಳನ್ನು ನಾವು ಕಾಣಬಹುದು ಎಂದು ಡಿ.ಆರ್. ನಾಗರಾಜ್ ಅವರು ಹೇಳುತ್ತಾರೆ. ಒಂದು ಗಾರ್ಗಿಯ ಮಾದರಿ, ಇನ್ನೊಂದು ಕಾತ್ಯಾಯಿನಿಯ ಮಾದರಿ, ಇವೆರಡೂ ಉಪನಿಷತ್ ಸಾಹಿತ್ಯದಲ್ಲಿ ಬರುವ ಎರಡು ವಿಭಿನ್ನ ಸ್ತ್ರೀ ಪಾತ್ರಗಳ ಆಧಾರದ ಮೇಲೆ ಕಟ್ಟಿದ ತಾತ್ವಿಕ ಆಕೃತಿಗಳು. ಕಾತ್ಯಾಯಿನಿಯ ಮಾದರಿಯ ಸ್ತ್ರೀ ತಾಯಿಯಾಗಿ, ಹೆಂಡತಿಯಾಗಿ, ಅಕ್ಕ-ತಂಗಿಯಾಗಿ, ಗೆಳತಿಯಾಗಿ, ಗೃಹದೇವತೆಯಾಗಿ ತನ್ನ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುತ್ತಾಳೆ. ಆದರೆ ಈಕೆಯನ್ನು ಕೇವಲ ಗೃಹಿಣಿ ಎಂದು ಅಸಡ್ಡೆ ಮಾಡಲಾಗದು. ಏಕೆಂದರೆ ತನ್ನ ತ್ಯಾಗ-ಬಲಿದಾನ ಇತ್ಯಾದಿಗಳಿಗೆ ಏನೂ ಬೆಲೆಯಿಲ್ಲ ಎಂಬ ಆತ್ಮಪ್ರಜ್ಞೆ ಇವಳಿಗೆ ಬಂದರೆ, ಎಲ್ಲವನ್ನೂ ಧಿಕ್ಕರಿಸಿ ನಡೆಯಬಲ್ಲ ಶಕ್ತಿಯೂ ಇವಳಿಗಿದೆ. ಇನ್ನೊಂದು ಮಾದರಿ, ಗಾರ್ಗಿಯ ಮಾದರಿ, ಶೋಷಣೆಯ ವಿರುದ್ದ ಉಗ್ರವಾಗಿ ಬಂಡಾಯ ಹೂಡುವ, ಅನ್ಯಾಯ ಅತ್ಯಾಚಾರಗಳನ್ನು ತೀವ್ರವಾಗಿ ಪ್ರತಿಭಟಿಸುವ ಮಾದರಿ. ಆದರೆ ಮಹಿಳೆಯನ್ನು ದೈವತ್ವಕ್ಕೇರಿಸುವ  ವೈಭವೀಕರಣದ ಅಪಾಯಗಳನ್ನು ಎಲ್ಲ ಮಹಿಳೆಯರೂ ಅರಿಯಬೇಕು.

ಸಾಕ್ರೆಟೀಸ್ ಹೇಳುವಂತೆ – “The secret of change is to focus all of your energy, not on fighting the old, but on building new.”

ಲಕ್ಷಾಂತರ ಜನರು ಒಟ್ಟಾಗಿ ಹೆಣ್ಣು ಗಂಡೆಂಬ ಭೇದವಿಲ್ಲದೇ ನಾನು ಗೌರಿ, ನಾವೂ ಗೌರಿ ಎಂದದ್ದು ಇಂತಹ ಹೊಸದಾರಿಯಲ್ಲಿ ಮುನ್ನಡೆಯುವ ಸಲುವಾಗಿಯೇ, ತಮ್ಮ ತಮ್ಮ ದನಿಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ತೋರುವ ಸಲುವಾಗಿಯೇ. ಹೌದು ನಾನು ಗೌರಿ, ಮಣ್ಣಿನ ಗೌರಿ ಅಲ್ಲ, ಬೆಳ್ಳಿಯ ಗೌರಿಯೂ ಅಲ್ಲ, ಮೌನಗೌರಿಯಂತೂ ಅಲ್ಲವೇ ಅಲ್ಲ!

– ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)


ಇದನ್ನೂ ಓದಿ: ಸ್ತ್ರೀಮತಿ-1: ನನ್ನನ್ನೀಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ! -ಡಾ. ಕಾವ್ಯಶ್ರೀ ಎಚ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...