ಹಿರಿಯ ಸಾಹಿತಿ ದೇವನೂರು ಮಹಾದೇವರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಕುಸುಮಬಾಲೆ’ ರಂಗಕೃತಿಯ ವಾಚಿಕಾಭಿನಯವು ಇಂದು ಸಂಜೆ 6.30ರಿಂದ ರಂಗಾಯಣದ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಇಂದು ಮಧ್ಯಾಹ್ನ ಮೈಸೂರಿನ ರಂಗಾಯಣ ಆವರಣದಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ರಂಗಾಯಣದ ವಿನ್ಯಾಸ ಕಲಾವಿದರಾದ ಎಚ್.ಕೆ.ದ್ವಾರಕಾನಾಥ್, ಕುಸುಮಬಾಲೆ ಕುರಿತಂತೆ ರಚಿಸಿದ್ದ ಚಿತ್ರಕಲೆಯನ್ನು ರಂಗಕರ್ಮಿಗಳಾದ ಬಿ.ವಿ.ರಾಜಾರಾಮ್ ಬಿಡುಗಡೆ ಮಾಡಿದರು.

‘ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಯಾವುದೇ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಹಿಂದೆಯೇ ರಂಗಾಯಣದ ಕಲಾವಿದರು ಅಭಿಯಿಸಿದ್ದ, ಕನ್ನಡದ ಪ್ರಖ್ಯಾತ ಕಾದಂಬರಿಗಳಲ್ಲಿ ಒಂದಾದ ಕುಸುಮಬಾಲೆಯ ವಾಚಿಕಾಭಿನಯವನ್ನು ಪ್ರಸಾರ ಮಾಡಲು ಮುಂದಾಗಿದ್ದೇವೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಾನುಗೌರಿ.ಕಾಂಗೆ ತಿಳಿಸಿದರು.
‘ಕನ್ನಡದ ಶ್ರೇಷ್ಟ ಕಾದಂಬರಿಗಳಲ್ಲಿ ಒಂದಾದ ‘ಕುಸುಮಬಾಲೆ’ ತನ್ನ ಭಾಷಾ ವೈಶಿಷ್ಟ್ಯತೆಯಿಂದಲೇ ಹೆಸರುವಾಸಿಯಾಗಿದೆ. “ಸಂಬಂಜ ಅನ್ನೋದು ದೊಡ್ಡದು ಕಣ” ಎಂದು ಹೇಳುವ ಕೃತಿ ಮಾನವ ಸಂಬಂಧಗಳನ್ನು, ಅದರ ಮೌಲ್ಯವನ್ನು ಅಷ್ಟೇ ಸೊಗಸಾಗಿ ಬಿಚ್ಚಿಡುತ್ತದೆ. ಹಾಗಾಗಿ ಈ ಕೃತಿಯು ವಿಮರ್ಶಾತೀತವಾದುದಾಗಿದ್ದು, ಇದರಲ್ಲಿ ಬಳಸಿರುವ ಕ್ಲಿಷ್ಟ ಭಾಷೆಯ ಕಾರಣ ಇದನ್ನು ಅಭಿನಯಿಸುವುದಕ್ಕೋ ಅಥವಾ ವಾಚಿಸುವ ಸಾಹಸಕ್ಕೋ ಯಾರೂ ಕೈ ಹಾಕಿಲ್ಲ. ಆದರೆ ನಾವು ಈ ಕಷ್ಟದ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಿರೇಹಾಳು ಇಬ್ರಾಹಿಂ ಸಾಬರ ತೋಟದಲ್ಲಿ ಅರಳಿದ ರಂಗಭೂಮಿಯ ಹೂ ಪಿಂಜಾರ ಅಬ್ದುಲ್
ಕುಸುಮಬಾಲೆ-ರಂಗಕೃತಿಯ ವಾಚಿಕಾಭಿನಯ 9 ಎಪಿಸೋಡ್ ಗಳಲ್ಲಿ ಪ್ರತಿದಿನ ಪ್ರಸಾರವಾಗಲಿದ್ದು, ಇದು ರಂಗಾಯಣವು, ಕಲಾಸಕ್ತ ಜನರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದಕ್ಕೆ ಮಾಡಿರುವ ಮೊದಲ ಪ್ರಯತ್ನವಾಗಿದೆ. ಇದರ ನಂತರ ಕುವೆಂಪು ಅವರ ‘ಕಿಂದರಿಜೋಗಿ’, ಬಿ.ವಿ.ಕಾರಂತರ ರಂಗಗೀತೆಗಳ ಪ್ರಸ್ತುತಿಯಂತಹ ಹಲವು ಕಾರ್ಯಕ್ರಮಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ರಂಗಾಯಣ ನಿರ್ದೇಶಕರು ಹೇಳಿದರು.
1992 ರಲ್ಲಿ ಬಸವಲಿಂಗಯ್ಯನವರು ನಿರ್ದೇಶಿಸಿ, ಕಾರಂತರು ಸಂಗೀತ ಸಂಯೋಜಿಸಿದ್ದ ಈ ನಾಟಕವು ನಾವು ಅಭಿನಯಿಸಿದ ಶ್ರೇಷ್ಟ ನಾಟಕಗಳಲ್ಲಿ ಒಂದು ಎಂದು ಹಿರಿಯ ಕಲಾವಿದರಾದ ಗೀತಾ ಮೊಂಟಡ್ಕ ಹೇಳಿದರು.
ಈ ವಾಚಿಕಾಭಿನಯದಲ್ಲಿ ಹಳೆಯದನ್ನು ನೆನೆಪಿಸಿಕೊಂಡು ಮತ್ತೆ ಈಗ ಪ್ರಸ್ತುತಪಡಿಸುತ್ತಿದ್ದೇವೆ. ನಾಟಕದಲ್ಲಿ ಅಭಿನಯಿಸಿದ್ದ ಕಲಾವಿದರೇ ಬಹುತೇಕ ಇದರಲ್ಲೂ ಇದ್ದೇವೆ. ಸಂಗೀತದಲ್ಲಿ ಬಿ.ವಿ.ಕಾರಂತರ ಶಿಷ್ಯರಾದ ಶ್ರೀನಿವಾಸ ಭಟ್ (ಚೀನಿ) ಇರಲಿದ್ದಾರೆ. ನಾವೇ ಹಾಡುತ್ತಾ ವಾಚಿಕಾಭಿನಯ ಮಾಡಲಿದ್ದೇವೆ ಎಂದು ಗೀತಾ ಮೊಂಟಡ್ಕ ಹೇಳಿದರು.
ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್


