‘ನಾನು ಮಾಡಿದ ಟ್ವೀಟ್‌ಗಳು ನಾಗರಿಕನ ಕರ್ತವ್ಯದ ಭಾಗವಾಗಿತ್ತು, ಆದರೆ ಸುಪ್ರೀಂಕೋರ್ಟು ದುರ್ಬಲವಾಗಬಾರದು ಎಂಬ ಕಾರಣಕ್ಕೆ ಅದನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ’ ಎಂದು ಘೋಷಿಸಿದ ಸುಪ್ರೀಂಕೋರ್ಟಿನ ನ್ಯಾಯವಾದಿ ಪ್ರಶಾಂತ್ ಭೂಷಣ್‌ರ ನಂತರ ಮಾತನಾಡಿದ ಅವರ ಸಹಯೋಗಿಗಳು ಪ್ರತಿ ನಾಗರಿಕ 1 ರೂ (Rupee one – everyone) ಎಂಬ ಹೊಸ ಆಂದೋಲನವನ್ನು ಘೋಷಿಸಿದ್ದಾರೆ.
ಸುಪ್ರೀಂಕೋರ್ಟು ಇಂದು ಬೆಳಿಗ್ಗೆ ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳ ವಿಚಾರದಿಂದ ನ್ಯಾಯಾಂಗ ನಿಂದನೆಯ ತೀರ್ಪಿನ ಭಾಗವಾಗಿ 1 ರೂ ದಂಡ ವಿಧಿಸಿತ್ತು.
ಆ ನಂತರ ಸಂಜೆ 4ಕ್ಕೆ ದೆಹಲಿಯ ಪ್ರೆಸ್‌ಕ್ಲಬ್‌ನ ಹೊರ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಶಾಂತ್ ಭೂಷಣ್ ಅವರು 1 ರೂ ದಂಡ ಕಟ್ಟುವುದಾಗಿ ಹೇಳಿದ್ದರು.
ಅವರ ಘೋಷಣೆಯ ನಂತರ ಸ್ವರಾಜ್ ಅಭಿಯಾನದ ಭಾಗವಾಗಿ ಯೋಗೇಂದ್ರ ಯಾದವ್ ಮತ್ತು ‘ನ್ಯಾಯಾಂಗದ ಉತ್ತರದಾಯಿತ್ವ ಮತ್ತು ಸುಧಾರಣೆಗಾಗಿನ ಸಮಿತಿ’ಯ ಭಾಗವಾಗಿ ಅಂಜಲಿ ಭಾರದ್ವಾಜ್ ಮಾತನಾಡಿದರು. ಪ್ರಶಾಂತ್ ಭೂಷಣ್ ಇವೆರಡರಲ್ಲೂ ಮುಖ್ಯಪಾತ್ರ ವಹಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಯೋಗೇಂದ್ರ ಯಾದವ್ ಅವರು ಈ ಸಂದರ್ಭದಲ್ಲಿ ದೇಶದ ಮುಂದೆ ಎರಡು ಮನವಿಗಳನ್ನು ಮುಂದಿಟ್ಟರು. ಒಂದು, ದೇಶದ ಪ್ರತಿಯೊಬ್ಬ ನಾಗರಿಕಳೂ/ನೂ ಒಂದೊಂದು ರೂಪಾಯಿ ನೀಡುವುದರ ಮೂಲಕ ಇಂತಹ ಹೋರಾಟಗಳನ್ನು ಮುಂದುವರೆಸುವುದಕ್ಕಾಗಿ ಒಂದು ನಿಧಿಯನ್ನು ಸ್ಥಾಪಿಸಬೇಕು. ಏಕೆಂದರೆ ಇದು ಪ್ರಶಾಂತ್ ಭೂಷಣ್ ಒಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಲ್ಲ. ದೇಶದಲ್ಲಿ ಜನಸಾಮಾನ್ಯರಿಂದ ಹಿಡಿದು ಚಿಂತಕರವರೆಗೆ ಹಲವರ ಪರಿಸ್ಥಿತಿ ಇದೇ ಆಗಿದೆ.
ಎರಡು, ಸೆಪ್ಟೆಂಬರ್ 2ರಿಂದ ಆರಂಭಿಸಿ ಅಕ್ಟೋಬರ್ 2ರವರೆಗೆ ದೇಶದಲ್ಲಿ ‘ಆತ್ಮಸಾಕ್ಷಿಯ ಸ್ವಾತಂತ್ರ್ಯದ’ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಒಂದು ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂಬ ಮನವಿಯನ್ನು ಅವರು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಅವರು. ತಾನು ಮೇಲ್ಮನವಿ ಅಥವಾ ತೀರ್ಪಿನ ಮರುಪರಿಶೀಲನೆಗಾಗಿನ ನನ್ನ ಹಕ್ಕನ್ನು ಕಾದಿರಿಸಿಕೊಂಡೇ ಪ್ರತಿಭಟನೆಯಾಗಿ 1 ರೂ ದಂಡ ಕಟ್ಟುತ್ತಿದ್ದೇನೆ ಎಂದು ಹೇಳಿದರು. ನೀವು 3 ತಿಂಗಳ ಜೈಲು ಅಥವಾ ಕೋರ್ಟ್’ನಿಂದ ಹೊರಹಾಕಿಸಿಕೊಳ್ಳುವುದರ ಬದಲಿಗೆ 1 ರೂ ಕಟ್ಟುವುದನ್ನೇಕೆ ಆಯ್ದುಕೊಂಡಿದ್ದೀರಿ ಎಂಬ ಇನ್ನೊಂದು ಪ್ರಶ್ನೆಗೂ ಅವರು ಉತ್ತರಿಸಿದರು. ಜೈಲಿಗೆ ಹೋಗಬೇಕೆಂಬ ತೀರ್ಪೇ ಬಂದರೆ, ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದ್ದೆ, ಅದರ ಅರ್ಥ ಜೈಲಿಗೆ ಹೋಗಲು ಬಯಸುತ್ತೇನೆ ಎಂದಲ್ಲ. ಸುಪ್ರೀಂಕೋರ್ಟು ಉಳಿದರೆ ಮಾತ್ರ ಗಣರಾಜ್ಯ ಉಳಿದೀತು ಎಂದು ಅವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಆಂದೋಲನದ ರೂಪುರೇಷೆಗಳ ಕುರಿತು ಯೋಗೇಂದ್ರ ಯಾದವ್ ಅವರು ವಿವರಗಳನ್ನು ನೀಡಿಲ್ಲ. ಆ ಕುರಿತು ನಾನುಗೌರಿ.ಕಾಂ ಅವರನ್ನು ಮಾತನಾಡಿಸಿ ಓದುಗರಿಗೆ ತಿಳಿಸಲಿದೆ.
ಇದನ್ನೂ ಓದಿ: ನಾನು ಟ್ವೀಟ್ ಮಾಡಿದ್ದು, ನಾಗರಿಕನ ಕರ್ತವ್ಯವಾಗಿತ್ತು. ಆದರೆ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್


