ಕಳೆದೊಂದು ವಾರದಿಂದ ರಾಜ್ಯದಲ್ಲಿ ಈಗ ಕೊರೊನಾಗಿಂತ ಮಾದಕ ದ್ರವ್ಯದ ವಿಚಾರವೇ ಹೆಚ್ಚು ಚರ್ಚೆಗೊಳಪಡುತ್ತಿದೆ. ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎನ್ನುವ ವಿಚಾರ ರಾಜ್ಯದ ಜನರನ್ನು ಬೆಚ್ಚಿಬೀಳಿಸುತ್ತಿದೆ. ಇದರಲ್ಲಿ ಹಿರಿತೆರೆ ಜೊತೆಗೆ ಕಿರುತೆರೆಯ ಹೆಸರು ಕೂಡ ತಳುಕು ಹಾಕಿಕೊಂಡಿದೆ.
ಈ ಕುರಿತು ಇಂದು ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರು ಸಭೆ ನಡೆಸಿದ್ದಾರೆ. ನಂತರ “ರಾಜ್ಯ ಸರ್ಕಾರ ಕೂಡ ಡ್ರಗ್ಸ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಜೊತೆಗೆ ಕಾರ್ಯ ನಿರ್ವಹಿಸುತ್ತಿದೆ” ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡ್ರಗ್ಸ್ ದಂಧೆ ನಿಯಂತ್ರಣ ಮತ್ತು ಡ್ರಗ್ಸ್ ಹಾವಳಿ ಕುರಿತು ಚರ್ಚೆ ನಡೆಸಲಾಗಿದೆ. ಈಗಾಗಲೇ 1438 ಡ್ರಗ್ಸ್ ಕೇಸ್‌ಗಳು ದಾಖಲಾಗಿ ಈ ಸಂಬಂಧ 1792 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕಾಗಿ ಇಂದು ಬೆಂಗಳೂರಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ಕುರಿತು ಗಂಭೀರವಾಗಿ ಚರ್ಚಿಸಲಾಯಿತು. ಈಗಾಗಲೇ 1438 ಡ್ರಗ್ಸ್ ಕೇಸ್ ಗಳು ದಾಖಲಾಗಿ 1792 ಜನರನ್ನು ಬಂಧಿಸಲಾಗಿದೆ. pic.twitter.com/IQvNW2vyju
— Basavaraj S Bommai (@BSBommai) August 31, 2020
ಕೇಂದ್ರ ವಲಯದ ಐ ಜಿ ಇವರ ನೇತೃತ್ವದಲ್ಲಿ ಜಂಟಿ ತಂಡ ರಚನೆ. ವಿಸಾ ಅವಧಿ ಮುಗಿದ ಮೇಲು ಭಾರತದ ಉಳಿದ ವಿದೇಶಿಗರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವುದು, ಕಾಲೇಜ್ ಗಳು ಪ್ರಾರಂಭವಾದ ತಕ್ಷಣ ಪ್ರಮುಖ ಸಂಘಟನೆಯೊಂದಿಗೆ ಜೊತೆಗೆ ಸೇರಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಮೊನ್ನೆಯಷ್ಟೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ಡ್ರಗ್ಸ್ ದಂಧೆಯಲ್ಲಿ ಡಿ ಅನಿಕಾ, ಅನೂಪ್ ಮೊಹಮದ್ ಮತ್ತು ರಾಜೇಶ್ ರವೀಂದ್ರನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಒಟ್ಟಾರೆ, ಬಾಲಿವುಡ್‌ಗೆ ಮಾತ್ರ ಸೀಮಿತವಾಗಿದ್ದ ಡ್ರಗ್ಸ್ ದಂಧೆ ಕನ್ನಡ ಚಿತ್ರರಂಗ, ಕಿರುತೆರೆಗೂ ಕಾಲಿಟ್ಟಿದ್ದು, ಸೂಕ್ತ ಹಾಗೂ ಪ್ರಾಮಾಣಿಕ ತನಿಖೆಯಿಂದಷ್ಟೇ ಮತ್ತಷ್ಟು ವಿಚಾರಗಳು ಬಯಲಿಗೆ ಬರಲು ಸಾಧ್ಯ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ; ನಟಿಯರಿಂಲೇ ಹೆಚ್ಚು ಬೇಡಿಕೆ: ತನಿಖೆಯಿಂದ ಬಹಿರಂಗ