ಕಳೆದ ವರ್ಷ ಲೋಕಸಭಾ ಚುನಾವಣೆಗೆ ಎರಡು ತಿಂಗಳ ಮೊದಲು ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರು ನಡೆಸುತ್ತಿರುವ 44 ಫೇಸ್‌ಬುಕ್ ಪೇಜ್‌ಗಳನ್ನು ಕಿತ್ತು ಹಾಕುವಂತೆ ಫೇಸ್‌ಬುಕ್‌ಗೆ ಹೇಳಿತ್ತು ಎನ್ನಲಾಗಿದೆ.
’ಭೀಮ್ ಆರ್ಮಿ’ಯ ಅಧಿಕೃತ ಪೇಜ್, ’ವಿ ಹೇಟ್ ಬಿಜೆಪಿ’, ಆಲ್ಟ್ ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹಾ ನಿರ್ವಹಿಸುತ್ತಿದ್ದ ’ದ ಟ್ರುತ್ ಆಫ್ ಗುಜರಾತ್’ ಮುಂತಾದ ಪ್ರಸಿದ್ದ ಪೇಜ್‌ಗಳು ಬಿಜೆಪಿ ನೀಡಿದ್ದ ಪಟ್ಟಿಯಲ್ಲಿದ್ದವು ಎನ್ನಲಾಗಿದೆ.
2014ರ ಲೋಕಸಭಾ ಚುನಾವಣೆ ಗೆಲ್ಲಲು ಫೇಸ್‌ಬುಕ್ ಬಿಜೆಪಿ ಪರವಾಗಿ ಕೆಲಸ ಮಾಡಿತ್ತು ಮತ್ತು ಬಿಜೆಪಿಯ ದ್ವೇಷ ಭಾಷಣಗಳನ್ನು ತೆಗೆದುಹಾಕದಂತೆ ಸೂಚಿಸಲಾಗಿತ್ತು ಎಂದು ಅಮೆರಿಕಾ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದ ಬೆನ್ನಲ್ಲೇ ಈ ಆರೋಪಗಳು ಕೇಳಿಬಂದಿವೆ.
ಅಷ್ಟೇ ಅಲ್ಲದೆ, ನವೆಂಬರ್ 2019 ರಲ್ಲಿ ಬಿಜೆಪಿ ಬೆಂಬಲಿತ ‘ಒಪಿಇಂಡಿಯಾ’ ಹಾಗೂ `ಚೌಪಾಲ್’ ಪೇಜನ್ನು ಮಾನಿಟೈಸ್ ಮಾಡಲು (ಅದಕ್ಕೆ ಜಾಹೀರಾತು ಹಣ ಬರುವಂತೆ) ಬಿಜೆಪಿಯು ಫೇಸ್‌ಬುಕ್ ಅನ್ನು ಕೇಳಿಕೊಂಡಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ತಮಿಳುನಾಡಿನ ಕುಖ್ಯಾತ ರೌಡಿಶೀಟರ್ ಬಿಜೆಪಿಗೆ ಸೇರ್ಪಡೆ: ಪೋಲಿಸರನ್ನು ಕಂಡು ಪರಾರಿ!
ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥರಾದ ಅಮಿತ್ ಮಾಳವಿಯ ಮತ್ತು ಫೇಸ್‌ಬುಕ್ ಇಂಡಿಯಾದ ಸಾರ್ವಜನಿಕ ನೀತಿ ಕಾರ್ಯನಿರ್ವಾಹಕರಾದ ಅಂಖಿ ದಾಸ್ ಮತ್ತು ಶಿವನಾಥ್ ತುಕ್ರಾಲ್ ನಡುವಿನ ಇಮೇಲ್‌ಗಳನ್ನು ಆಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಈ ವರದಿ ಮಾಡಿದೆ.
ಬಿಜೆಪಿ ಬ್ಲಾಕ್ ಮಾಡಲು ಹೇಳಿರುವ 44 ಪೇಜ್‌ಗಳಲ್ಲಿ 14 ಪೇಜ್‌ಗಳನ್ನು ಫೇಸ್‌ಬುಕ್ ಕಿತ್ತು ಹಾಕಿದೆ. ಅಲ್ಲದೇ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ಕಿತ್ತು ಹಾಕಿದ್ದ 17 ಬಿಜೆಪಿ ಪೇಜ್‌ಗಳನ್ನು, ಬಿಜೆಪಿಯ ಒತ್ತಾಯದ ನಂತರ ಮರುಸ್ಥಾಪಿಸಲಾಗಿತ್ತು ಎಂದು ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿಯ ಕೋರಿಕೆಯ ಮೇರೆಗೆ ಮರುಸ್ಥಾಪಿಸಿದ ಎಲ್ಲಾ 17 ಪುಟಗಳು ಸುಳ್ಳು ಸುದ್ದಿಗಳನ್ನು ಹರಡುವ ಕನ್ನಡದ ಪೋಸ್ಟ್‌ಕಾರ್ಡ್ ನ್ಯೂಸ್‌ನಿಂದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದವು ಎನ್ನಲಾಗಿದೆ. ಆದರೆ ಈ ಯಾವುದೇ ಪೇಜ್‌ಗಳು ರಾಜಕೀಯ ಪಕ್ಷದೊಂದಿಗೆ ನೇರವಾಗಿ ಸಂಪರ್ಕದಲ್ಲಿದೆ ಎಂದು ಹೇಳಿಕೊಂಡಿಲ್ಲ ಎಂದು ವರದಿ ಹೇಳಿದೆ.
ಅಷ್ಟೇ ಅಲ್ಲದೆ, ಮಾರ್ಚ್ ಮತ್ತು ಜೂನ್ 2019 ರ ನಡುವೆ ರಾಜಕೀಯ ಜಾಹೀರಾತುಗಳಿಗಾಗಿ ಒಪಿ ಇಂಡಿಯಾದ ಫೇಸ್‌ಬುಕ್ ಪೇಜ್ ಸುಮಾರು 90,000 ರೂಗಳನ್ನು ಖರ್ಚು ಮಾಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ
ಬಿಜೆಪಿ ಪರವಾದ ಪೇಜ್‌ಗಳನ್ನು “ರಕ್ಷಿಸಲು” ವಿನಂತಿಗಳನ್ನು ಮಾಡಲಾಗಿದೆ, ಯಾಕೆಂದರೆ ಫೇಸ್‌ಬುಕ್ ನಿರ್ವಾಹಕರು ಅವುಗಳನ್ನು “ತಪ್ಪಾಗಿ ಗುರಿಯಾಗಿಸಿಕೊಂಡಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.
“ಐ ಸಪೋರ್ಟ್ ನರೇಂದ್ರ ಮೋದಿ ಅಂತಹ ಹಲವು ನೈಜ ಕಾರ್ಯಕರ್ತರಿಂದ ನಡೆಸುವ ಹಲವು ಪೇಜ್‌ಗಳನ್ನು ತೆಗೆದು ಹಾಕಬಹುದೆಂಬ ಭಯವಿತ್ತು. ನಾವು ಈ ಹಿಂದೆಯೂ ಫೇಸ್‌ಬುಕ್ ಜತೆ ಸಂಪರ್ಕಿಸಿ ಸರಿಯಾದ ಕ್ರಮ ಕೈಗೊಳ್ಳುವಂತೆ ಹೇಳಿದ್ದೆವು. ನಾವು ಹೆಚ್ಚು ಪಾರದರ್ಶಕ ಮತ್ತು ನ್ಯಾಯಪರ ವ್ಯವಸ್ಥೆಗೆ ಮನವಿ ಮಾಡಿದ್ದೆವು. ಆದರೆ ಅವರು ಮಾತ್ರ ಬೇರೆಯೇ ಅಂದುಕೊಂಡಿದ್ದರು” ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ಪ್ರತಿಕ್ರಿಯಿಸಿದ ಫೇಸ್‌ಬುಕ್ ವಕ್ತಾರರು, “ಇಲ್ಲಿ ರಕ್ಷಣೆ ಎಂಬ ವಿಷಯ ಇಲ್ಲ, ನಾವು ಕ್ರಾಸ್-ಚೆಕ್ ಎಂಬ ಪ್ರಕ್ರಿಯೆಯನ್ನು ಹೊಂದಿದ್ದೇವೆ. ಕೆಲವು ಪುಟಗಳು ಮತ್ತು ಪ್ರೊಫೈಲ್‌ಗಳಿಗೆ ನಾವು ನಮ್ಮ ನೀತಿಗಳನ್ನು ಸರಿಯಾಗಿ ಅನ್ವಯಿಸಿದ್ದೇವೆಯೆ ಎಂದು ಖಚಿತಪಡಿಸಿಕೊಳ್ಳಲು ಎರಡನೇ ಹಂತದ ವಿಮರ್ಶೆಯನ್ನು ನೀಡಲಾಗುತ್ತದೆ. ನಮ್ಮ ಸಮುದಾಯ ಮಾನದಂಡಗಳ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP ಗೆಲುವಿಗೆ ಫೇಸ್‌ಬುಕ್ ಕೆಲಸ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ


