ಆಗಸ್ಟ್ 11 ರಂದು ನಡೆದ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಯಲ್ಲಿ ಭಾಗಿಯಾಗದ ಹಲವರು ಅಮಾಯಕರನ್ನು ಸಹ ಬಂಧಿಸಲಾಗಿದೆ. ಗಲಭೆಯಲ್ಲಿ ಭಾಗವಹಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿಲ್ಲದ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇಂದು ಗಲಭೆಪೀಡಿತ ಡಿ.ಜೆ ಹಳ್ಳಿಗೆ ಭೇಟಿ ನೀಡಿ ಮಾತನಾಡಿದ ಅವರು, “ಗಲಭೆ ನಡೆದ ಸಂದರ್ಭದಲ್ಲಿ ನಾನು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ, ಸೋಂಕಿನಿಂದ ಗುಣಮುಖನಾದ ನಂತರ ಕೆಲವು ದಿನಗಳ ಕಾಲ ಹೋಂ ಕ್ವಾರೆಂಟೈನ್‌ಗೂ ಒಳಗಾಗಿದ್ದೆ. ಈ ಎಲ್ಲಾ ಕಾರಣಗಳಿಂದಾಗಿ ಘಟನೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ” ಎಂದಿದ್ದಾರೆ.
ಗಲಭೆಯ ದಿನ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್‌ನನ್ನು ಪೊಲೀಸರು ಶೀಘ್ರವೇ ಬಂಧಿಸಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ ಎಂದು ಅಭಿಪ್ರಾಯಪಟ್ಟ ಅವರು, ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗದ ಹಲವರು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಯಾರ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ, ಯಾರು ನಿರಪರಾಧಿಗಳಿದ್ದಾರೆ ಅಂಥವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ನೈಜ ಅಪರಾಧಿಗಳು ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಹಾಗೂ ಪೊಲೀಸ್ ಠಾಣೆಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಹರ್ಷದ್, ನಸೀರ್ ಅಹ್ಮದ್, ವೆಂಕಟರಮಣಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?


