Homeಮುಖಪುಟಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?

ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?

ಮುಸ್ಲಿಮರು ಅಧಿಕವಾಗಿರುವ ಪಾದರಾಯನಪುರ, ಡಿಜೆಹಳ್ಳಿಯಂತಹ ಪ್ರದೇಶದಲ್ಲಿ ಬಡತನ, ಅನಕ್ಷರತೆ ಹೆಚ್ಚಾಗಿದ್ದು, ಬೇಗನೇ ಗುಂಪು ಸೇರುವುದು, ಮಿತಿಮೀರಿದ ಆಕ್ರೋಶಕ್ಕೊಳಗಾಗುವುದು ನಡೆಯುತ್ತಿದೆ. ಈ ಸಮಸ್ಯೆಗಳ ಜವಾಬ್ದಾರಿಯನ್ನೂ ಸಮುದಾಯದ ಮುಖಂಡರು ಹೊರಬೇಕಲ್ಲವೇ?

- Advertisement -
- Advertisement -

ನಿನ್ನೆ ರಾತ್ರಿ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆಜಿಹಳ್ಳಿ ಹೊತ್ತಿ ಉರಿದಿವೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಕೆ.ಜಿ ಹಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆದಿದೆ. ಪೊಲೀಸ್‌ ಫೈರಿಂಗ್‌ನಲ್ಲಿ ಮೂವರು ಮೃತರಾಗಿದ್ದಾರೆ. ಹಲವು ಪೊಲೀಸರಿಗೆ ಗಾಯಗಳಾಗಿವೆ. ಅವಹೇಳನಕಾರಿ ಪೋಸ್ಟ್ ಮಾಡಿದ ನವೀನ್ ಸೇರಿದಂತೆ 148ಕ್ಕೂ ಹೆಚ್ಚು ಮಂದಿಯ ಬಂಧನವಾಗಿದೆ. ಇಷ್ಟೆಲ್ಲಾ ನಡೆಯುತ್ತಿರುವಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜವಾಗಿ ಮೂಡಿಬಂದಿದೆ. ಅವರೇನು ಮಾಡುತ್ತಿದ್ದರು.. ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ನಾನುಗೌರಿ.ಕಾಂ ಅದನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ.

ಪ್ರವಾದಿ ನಿಂದನೆ ಮಾಡಿದ ಒಂದು ಪೋಸ್ಟ್‌ನಿಂದ ಇಷ್ಟೆಲ್ಲಾ ಗಲಭೆ ನಡೆಯಲು ಸಾಧ್ಯವೇ? ಇದರ ಹಿಂದೆ ಯಾರಿದ್ದಾರೆ? ಯಾವ ಮುಸ್ಲಿಂ ಸಂಘಟನೆಯ ಕೈವಾಡವಿದು? ಇತ್ಯಾದಿ ಪ್ರಶ್ನೆಗಳು ಎದ್ದಿವೆ.

ಅಯೋಧ್ಯೆಯ ತೀರ್ಪು ಬಂದಾಗಲೂ ಯಾವುದೇ ಮುಸ್ಲಿಮರು ಬೀದಿಗಿಳಿದು ಹೋರಾಡಲಿಲ್ಲ, ಕೊರೊನಾ ವೈರಸ್‌ ಅನ್ನು ಇಡೀ ಸಮುದಾಯಕ್ಕೆ ಆರೋಪಿಸಿದಾಗಲೂ ತಾಳ್ಮೆಗೆಟ್ಟಿರಲಿಲ್ಲ. ಮೊನ್ನೆ ರಾಮಮಂದಿರ ಅಡಿಪಾಯ ಕಾರ್ಯಕ್ರಮ ನಡೆದಾಗಲೂ ಅವರು ಶಾಂತಿಯುತವಾಗಿಯೇ ಇದ್ದರು. ಇಡೀ ದೇಶಕ್ಕೆ ದೇಶದ ಮುಸ್ಲಿಮರೇ ಬೀದಿಗಿಳಿದ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟದಲ್ಲೂ ಶಾಂತಿಯುತವಾಗಿ ಹೋರಾಟ ನಡೆಸಿದರು. ಅಂತಹದೊಂದು ಹೋರಾಟದ ಭಾಗವಾಗಿ ದೆಹಲಿಯಲ್ಲಿ ಮೆರವಣಿಗೆ ನಡೆದಾಗ, ಆ ಮೆರವಣಿಗೆಯತ್ತಲೇ ಬಿಜೆಪಿ ಸಿದ್ಧಾಂತದ ಬೆಂಬಲಿಗ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ನಡೆಯಿತು. ಆಗಲೂ ಯಾರೂ ಹಿಂಸೆಗಿಳಿದಿರಲಿಲ್ಲ. ಆದರೆ, ಡಿ.ಜೆ.ಹಳ್ಳಿಯಲ್ಲಿ ಹೀಗೇಕಾಯಿತು ಮತ್ತು ಆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರ ವರ್ತನೆ ಹೇಗಿತ್ತು ಎಂಬುದನ್ನು ರಾತ್ರಿ 10ರಿಂದ ಮಧ್ಯರಾತ್ರಿ ಕಳೆದು 2 ಗಂಟೆಯಾಗುವವರೆಗೂ ಸ್ಥಳದಲ್ಲಿದ್ದವರನ್ನು ಮಾತಾಡಿಸಿದೆವು.

ಡಿ.ಜೆ. ಹಳ್ಳಿ ಗಲಭೆ: ಹಿಂಸೆಗಿಳಿದವರು ಕೂಡಾ ಮಾಡಿದ್ದು ಪ್ರವಾದಿ ನಿಂದನೆಯೇ ಎಂದ ಮುಸ್ಲಿಂ ಸಂಘಟನೆಗಳು

ಅವರ ಪ್ರಕಾರ ಪ್ರವಾದಿಯವರ ಕುರಿತಾಗಿ ಏನಾದರೂ ನಡೆದರೆ, ಮುಸ್ಲಿಂ ಸಮುದಾಯವು ಅತ್ಯಂತ ಭಾವನಾತ್ಮಕವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಹಾಗಾಗಿಯೇ ಯಾವಾಗ ಪ್ರವಾದಿಯನ್ನು ಅತಿ ಕೆಟ್ಟದಾಗಿ ನಿಂದಿಸಲಾಯಿತೋ ಅವರ ತಾಳ್ಮೆಯ ಕಟ್ಟೆಯೊಡೆದಿದೆ. ದೂರು ನೀಡುವ ಸಮಯದಲ್ಲಿ ಪೊಲೀಸರು ಕೂಡಲೇ ಬಂಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಡಿ.ಜೆ.ಹಳ್ಳಿ ಎಂದರೆ ಉಳಿದ ಪ್ರದೇಶಗಳ ಮುಸ್ಲಿಮರಂತೆಯೂ ಅಲ್ಲ. ಪಂಚರ್‌ ಸೊಲ್ಯೂಷನ್‌ ಮೂಸುವ, ಕುಡಿತ ಇತ್ಯಾದಿ ಚಟಗಳಿರುವ ಹಲವರು ಅಲ್ಲಿದ್ದಾರೆ. ಅಂಥವರು ಮತ್ತು ವಿಪರೀತ ಆಕ್ರೋಶಗೊಂಡಿದ್ದ ಮತಿಗೇಡಿಗಳು ಕಲ್ಲು ತೂರಾಟ ನಡೆಸಿ ಗಲಭೆಗೆ ಮುನ್ನುಡಿ ಬರೆದಿದ್ದಾರೆ. ಗಲಭೆಯ ಬೆಂಕಿ ಹೊತ್ತುಕೊಂಡಿದೆ, ಪೊಲೀಸ್ ಠಾಣೆಯಷ್ಟೇ ಅಲ್ಲದೇ, ಆರೋಪಿಯ ಸಂಬಂಧಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೂ ಕಲ್ಲು ತೂರಿದ್ದಾರೆ.


ಇದನ್ನೂ ಓದಿ: ಕೇವಲ ವಾಸ್ತವಾಂಶಗಳನ್ನು ಮಾತ್ರ ವರದಿ ಮಾಡಿ: ಮಾಧ್ಯಮಗಳಿಗೆ ‘ನಾವು ಭಾರತೀಯರು’ ಮನವಿ 


ಮುಸ್ಲಿಮರನ್ನೆ ನಿಂದಿಸಿದರೂ, ಮುಸ್ಲಿಂ ಸಂಘಟನೆಗಳನ್ನು ಹೀಯಾಳಿಸಿದರೂ, ಕೊನೆಗೆ ಅಲ್ಲಾನನ್ನು ಬಯ್ದರೂ ಮುಸ್ಲಿಮರು ಸಹಿಸಿಕೊಳ್ಳುತ್ತಾರೆ. ಆದರೆ ಪ್ರವಾದಿಯನ್ನು ಕೆಟ್ಟದಾಗಿ ಅವಹೇಳನ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಹಲವು ಮುಸ್ಲಿಮರು ಹೇಳುತ್ತಾರೆ.

ಸಂಜೆ 5.30ರ ಹೊತ್ತಿಗೆ ನವೀನ್‌ನ ಫೇಸ್‌ಬುಕ್‌ ಅಕೌಂಟಿನಿಂದ ಪ್ರವಾದಿ ಮಹಮ್ಮದರ ಕುರಿತ ಅವಹೇಳನಕಾರಿ ಪೋಸ್ಟ್‌ ಬಂದಿದೆ. ಆಗಿನಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಹಲವರು ತಮಗೆ ಪರಿಚಯವಿದ್ದ ಸಂಘಟನೆಗಳನ್ನು ಮತ್ತು ಮುಸ್ಲಿಂ ಸಮುದಾಯದ ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕ ಮಾಡಿದ್ದಾರೆ (ನಿರ್ದಿಷ್ಟವಾಗಿ ಯಾರಿಗೆ ಯಾರು ಫೋನ್‌ ಮಾಡಿದರು ಎಂಬ ಮಾಹಿತಿಗಳು ನಮ್ಮಲ್ಲಿ ಲಭ್ಯವಿದೆ). ಅವರುಗಳು ವಕೀಲರ ಫೋನ್‌ ನಂಬರ್‌ಗಳನ್ನು ಕೊಟ್ಟು ಠಾಣೆಯಲ್ಲಿ ದೂರು ದಾಖಲಿಸಿ, ಆದರೆ ಆ ನಿರ್ದಿಷ್ಟ ಪೋಸ್ಟ್‌ಅನ್ನು ಯಾರೂ ಷೇರ್‌ ಮಾಡಬೇಡಿ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಎಸ್‌ಡಿಪಿಐನ ಮುಜಮ್ಮಿಲ್‌ ಪಾಶಾ ಸೇರಿದಂತೆ ಕೆಲವರು ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಹೋಗುವ ಮುಂಚೆ ಒಂದಷ್ಟು ಜನ ಯುವಕರನ್ನು ಉದ್ದೇಶಿಸಿ ಭಾಷಣ ಮಾಡಿ ಹೋಗಿದ್ದಾರೆ ಎಂದು ಕೆಲವರು ಹೇಳಿದರು. ಅದನ್ನು ಎಸ್‌ಡಿಪಿಐ ನಿರಾಕರಿಸಿದೆ.

ರಾತ್ರಿ 7.30 ರಿಂದ 8 ಗಂಟೆ:

ದೂರು ಪಡೆದುಕೊಂಡ ಪೊಲೀಸರು ಎಫ್‌ಐಆರ್‌ ದಾಖಲಿಸಲು ಮುಂದಾಗಿದ್ದಾರೆ. ಆದರೆ ಹೊರಗೆ ಸೇರಿದ್ದ ಗುಂಪು ಈಗಲೇ ಆರೋಪಿಯನ್ನು ಬಂಧಿಸಬೇಕೆಂದು ಹಠ ಹಿಡಿದಿದೆ. ಇನ್ಸ್‌ಪೆಕ್ಟರ್‌ ಕೇಶವಮೂರ್ತಿ ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇದೇ ಸಮಯಕ್ಕೆ ಪೊಲೀಸ್ ಠಾಣೆಯ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಲಾರಂಭಿಸಿದ್ದಾರೆ. ಎಲ್ಲರೂ ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ತಮ್ಮಿಂದ ಸಾಧ್ಯವಿಲ್ಲ ಎಂದ ಅರಿತ ಪೊಲೀಸರು ಮುಸ್ಲಿಂ ಧರ್ಮಗುರುಗಳು, ರಾಜಕೀಯ ಮುಖಂಡರುಗಳಿಗೆ ಸ್ಥಳಕ್ಕೆ ಬರಲು ಮನವಿ ಮಾಡಿದ್ದಾರೆ.

ರಾತ್ರಿ 8:15

ಧರ್ಮಗುರುಗಳಾದ ಮೌಲಾನಾ ಪಿ.ಎಂ.ಮುಜಾಮಿಲ್‌ ಅವರೂ ಸ್ಥಳಕ್ಕೆ ಬಂದು, ಎಫ್‌ಐಆರ್‌ ಪ್ರತಿಯನ್ನೂ ತೋರಿಸಿ ʼದೂರು ದಾಖಲಾಗಿದೆ. ಕಾನೂನಿನ ಪ್ರಕಾರ ಕ್ರಮವಾಗುತ್ತದೆ. ಶಾಂತಿ ಕಾಪಾಡಿʼ ಎಂದು ಮನವಿ ಮಾಡಿದ್ದಾರೆ. ಮುಜಮ್ಮಿಲ್‌ ಪಾಶಾ ಅವರೂ ಮೈಕಿನಲ್ಲಿ ಮಾತಾಡಿ, ʼ ನಡೆದಿರುವ ಘಟನೆ ನೋಡಿದಾಗ ನಮ್ಮ ಪ್ರಾಣ ಹೋದರೂ ಸರಿ ಹೋರಾಡಬೇಕೆಂದು ನಮಗೆಲ್ಲರಿಗೂ ಅನಿಸುತ್ತದೆ. ಆದರೆ ಯಾವ ನೆಲದಲ್ಲಿ ನಾವೆಲ್ಲರೂ ಬದುಕಿದ್ದೇವೋ, ಆ ನೆಲದ ಕಾನೂನನ್ನು ಪಾಲಿಸುವುದು ನಮ್ಮ ಕರ್ತವ್ಯವೆಂದು ಪ್ರವಾದಿಯವರೂ ಹೇಳಿದ್ದಾರೆ. ಎಲ್ಲರೂ ಕಾನೂನು ಪಾಲಿಸಬೇಕುʼ ಎಂದು ನೆರೆದವರಿಗೆ ಹೇಳುತ್ತಾರೆ. 2 ಗಂಟೆ ಸಮಯ ಕೊಡಿ, ಬಂಧಿಸುತ್ತೇವೆಂದು ಪೊಲೀಸರು ಹೇಳಿದ್ದಾರೆಂದು ಮುಖಂಡರು ಹೇಳುತ್ತಾರೆ.

Moulana P.M MUZAMMIL AUR SDPI TEAM (Bangalore district Secretary MUZAMMIL PASHA, MAQSOOD, AYAZ aur volunteers ki team D.J HALLI me KASHEEDGI ke baad halaat ko control karte huwe. NABI KI SHAAN ME SOCIAL MEDIA PAR AIK SHAKS NE GUSTAQI KI THI…. #DJ

Moulana P.M MUZAMMIL AUR SDPI TEAM (Bangalore district Secretary MUZAMMIL PASHA, MAQSOOD, AYAZ aur volunteers ki team D.J HALLI me KASHEEDGI ke baad halaat ko control karte huwe.NABI KI SHAAN ME SOCIAL MEDIA PAR AIK SHAKS NE GUSTAQI KI THI….#DJHalli #KGHalli #Bengaluru

Posted by SDPI Karnataka on Tuesday, August 11, 2020

ಆದರೆ ಅಷ್ಟರಲ್ಲಿ ಹಿಂಸಾಚಾರ ಹೆಚ್ಚಾಗುತ್ತಾ ಹೋಗಿದೆ. ಪೊಲೀಸ್ ಠಾಣೆಗೆ ಕಲ್ಲು ತೂರಲಾಗಿದೆ. ಹೊರಗಿನ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳಕ್ಕೆ ಬಂದ ಪೊಲೀಸ್‌ ಮೀಸಲು ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. ಒಂದು ತಂಡ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಕಡೆ ಧಾವಿಸಿ ಕಲ್ಲು ತೂರಾಟ ನಡೆಸಿದೆ. ಎರಡು ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಲಾಗಿದೆ.

ರಾತ್ರಿ 10:20

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಜಿಯಾ ನೊಮಾನಿ ಮತ್ತು ಕಲೀಂ ಉಲ್ಲಾ ಸ್ಥಳಕ್ಕೆ ತೆರಳಿದ್ದಾರೆ. ದಾರಿಯಲ್ಲಿ ಹೋಗುವಾಗಲೇ ಅವರು ಪ್ರಯತ್ನಿಸಿ ಪೊಲೀಸ್ ಕಮಿಷನರ್‌ಗೆ ಫೋನ್ ಮಾಡಿದ್ದಾರೆ. ಕಮಿಷನರ್ ನಾವು ಆರೋಪಿ ನವೀನ್‌ನನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಬಂಧನದ ವಿಷಯವನ್ನು ಪೊಲೀಸರು ವಿಡಿಯೋ ಮಾಡಿ ಬಿಡುಗಡೆ ಮಾಡಿದರೆ ಗಲಭೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಜಿಯಾ ನೊಮಾನಿ ಮನವಿ ಮಾಡಿದ್ದಾರೆ.

ರಾತ್ರಿ: 11

ರಾತ್ರಿ 11ರ ಸುಮಾರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ರಿಜ್ವಾನ್ ಅರ್ಷದ್ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸ್ ಜೀಪಿನ ಮೈಕ್ ಬಳಸಿ ದಯವಿಟ್ಟು ಗಲಭೆ ನಿಲ್ಲಿಸಿ, ಪೊಲೀಸ್ ಠಾಣೆಯ ಮೇಲಿನ ದಾಳಿ ನಿಲ್ಲಿಸಿ. ಈಗಾಗಲೇ ನವೀನ್ ಬಂಧನವಾಗಿದೆ. ಪೊಲೀಸರಿರುವುದು ನಮಗಾಗಿ ಅವರ ಮೇಲೆ ಹಲ್ಲೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅಖಂಡ ಶ್ರೀನಿವಾಸ ಮೂರ್ತಿಯವರ ಅಳಿಯ ಮಾಡಿರುವುದು ಖಂಡನೀಯ. ಅವನ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಖುದ್ದಾಗಿ ಆತನ ಬಂಧನವಾಗುವಂತೆ ಮಾಡುತ್ತೇನೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸೋಣ, ದಯವಿಟ್ಟು ಹಿಂಸೆಗಿಳಿಯಬೇಡಿ, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಬೇಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನಾವು ಮುಸ್ಲಿಮರು ಹಿಂದಿನಿಂದಲೂ ಕಾಂಗ್ರೆಸ್‌ಗೆ ಮತ ಹಾಕುತ್ತಾ ಬಂದಿದ್ದೇವೆ. ಈಗ ಕಾಂಗ್ರೆಸ್ ಪಕ್ಷ ಕೂಡ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಜನರು ತಿರುಗಿಬಿದ್ದಿದ್ದಾರೆ.

ನಂತರ ಅವರು, ಕಾವಲಭೈರಸಂದ್ರದಲ್ಲಿ‌ ನಡೆಯುತ್ತಿರುವ ಘಟನೆ ದುರದೃಷ್ಟಕರ. ತಪ್ಪಿತಸ್ಥರ ವಿರುದ್ಧ ಪೊಲೀಸರು ಖಂಡಿತ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ಸಂದರ್ಭದಲ್ಲಿ ಜನ ಆವೇಶಕ್ಕೆ ಒಳಗಾಗದೆ ಸಂಯಮದಿಂದ ಶಾಂತಿ‌ ಕಾಪಾಡಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ಮುಖಂಡ, ಶಾಸಕ ರಿಜ್ವಾನ್ ಅರ್ಷದ್ ಸ್ಥಳಕ್ಕೆ ಬಂದು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಯಾವ ಕಾರಣಕ್ಕೂ ಹಿಂಸೆಗಿಳಿಯಬೇಡಿ, ಇದರಿಂದ ನಮಗೇ ಹೆಚ್ಚು ನಷ್ಟ ಎಂದು ಪದೇ ಪದೇ ಮನವಿ ಮಾಡಿದ್ದಾರೆ.  ಜಿಯಾ ನೊಮಾನಿ ಸಹಾ ಪೊಲೀಸ್‌ ಮೈಕ್‌ ಬಳಸಿ ಮಾತನಾಡಿದ್ದಾರೆ.

ಸ್ಥಳದಲ್ಲಿದ್ದವರ ಪ್ರಕಾರ ಇಷ್ಟಾದ ನಂತರ ಗಲಭೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಇಲ್ಲವಾದಲ್ಲಿ ಇನ್ನೂ ಹೆಚ್ಚಿನ ಮಟ್ಟದ ಗಲಭೆಯಾಗಿ ದೊಡ್ಡ ಹಾನಿಯುಂಟಾಗುತ್ತಿತ್ತು. ಏಕೆಂದರೆ ಗುಂಪಿನ ಉದ್ರಿಕ್ತತೆ ಎಷ್ಟಿತ್ತೆಂದರೆ, ಅವರು ಪೊಲೀಸ್‌ ಠಾಣೆಯನ್ನೇ ಸುಟ್ಟು ಬಿಡುವಂತೆ  ಕಾಣುತ್ತಿತ್ತು. ಅಲ್ಲಿಯವರೆಗೆ ಪೊಲೀಸರು ಆತಂಕದಲ್ಲೂ ಇದ್ದರು, ತಾಳ್ಮೆಯನ್ನೂ ತೋರಿದರು.

ಆ ನಂತರ ಗುಂಪು ಒಂದಷ್ಟು ಕರಗಿತಾದರೂ, ಇನ್ನೊಂದಷ್ಟು ಜನರು ಕದಲಲು ಒಪ್ಪಲಿಲ್ಲ. ಎಲ್ಲರ ಕೈ ಮೀರಿದ ಪರಿಸ್ಥಿತಿ ಉಂಟಾಯಿತು ಮತ್ತು ಪೊಲೀಸರು ಗುಂಡು ಹಾರಿಸಿದರು. ಸ್ಥಳದಲ್ಲಿದ್ದವರಲ್ಲಿ ಎರಡು ಅಭಿಪ್ರಾಯಗಳಿವೆ. ಒಂದು, ಆ ಸಂದರ್ಭದಲ್ಲಿ ಗುಂಡು ಹಾರಿಸದೇ ಬೇರೆ ದಾರಿಯಿರಲಿಲ್ಲ, ಆದರೆ ಜೀವಹಾನಿಯಾಗಿದ್ದು ಬಹಳ ನೋವುಂಟು ಮಾಡುತ್ತಿದೆ. ಎರಡು, ನಮ್ಮ ದೇಶದಲ್ಲಿ ಅಶ್ರುವಾಯು, ರಬ್ಬರ್‌ ಬುಲೆಟ್‌, ಪೆಪ್ಪರ್‌ ಗ್ಯಾಸ್‌ ಇತ್ಯಾದಿ ಕಾನ್ಸೆಪ್ಟೇ ಕಡಿಮೆಯಾಗಿ, ನೇರವಾಗಿ ಗುಂಡು ಹಾರಿಸುವ ಪರಿಪಾಠ ಇರುವುದೇ ಖಂಡನೀಯ. ಜನರ ಜೀವದ ಕುರಿತು ಇನ್ನೂ ಹೆಚ್ಚಿನ ಕಾಳಜಿಯಿಂದ ಯೋಚಿಸುವ ಅಗತ್ಯವಿದೆ.

ಘಟನೆಯ ಕುರಿತು ತೀವ್ರ ಕಾಳಜಿ ವ್ಯಕ್ತಪಡಿಸಿರುವ ಜಮಾತೆ ಇಸ್ಲಾಮೀ ಹಿಂದ್‌, ಎಸ್‌ಎಸ್‌ಎಫ್, ಜಮಾತಿ ಇಸ್ಲಾಂ ಹಿಂದ್, ಕರ್ನಾಟಕ ಮುಸ್ಲಿಂ ಮುತ್ತಹಿದಾ ಮಹಾಜ್‌, ಕರ್ನಾಟಕ ಮುಸ್ಲಿಂ ಜಮಾತ್‌,  ಪಿಎಫ್‌ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಇಂದು ಪತ್ರಿಕಾ ಹೇಳಿಕೆ ನೀಡಿ ಗಲಭೆಯನ್ನು ಖಂಡಿಸಿವೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಪ್ರಚೋದನೆ ನೀಡಿದವರ ಮೇಲೂ ಕ್ರಮ ತೆಗೆದುಕೊಳ್ಳಬೇಕೆಂದೂ ಎಲ್ಲರೂ ಹೇಳಿದ್ದಾರೆ.

ಇಂದು ಬೆಳಿಗ್ಗೆಯಿಂದಲೂ ರಾಜ್ಯದ ಹಲವು ಮುಸ್ಲಿಂ ಸಂಘಟನೆಗಳು ರಾಜ್ಯದ ಇತರ ಜಿಲ್ಲೆಗಳಿಗೂ ಫೋನ್ ಮಾಡಿ ಶಾಂತಿ ಕಾಪಾಡಲು ಮನವಿ ಮಾಡುತ್ತಿದ್ದಾರೆ. ಏಕೆಂದರೆ ಪ್ರವಾದಿ ಮಹಮ್ಮದರ ಕುರಿತಂತೆ ಆಗುವ ಅವಹೇಳನಕ್ಕೆ ಮುಸ್ಲಿಂ ಸಮುದಾಯವೂ ಹೆಚ್ಚು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಅವರುಗಳ ಆತಂಕ. ಅದೇ ಸಂದರ್ಭದಲ್ಲಿ ಪ್ರವಾದಿಯವರಾಗಲೀ, ಮುಸ್ಲಿಂ ಧರ್ಮವಾಗಲೀ ಕಾನೂನನ್ನು ಗೌರವಿಸದೇ ಗಲಭೆ ಮಾಡಿ ಎಂದು ಹೇಳುವುದಿಲ್ಲ ಎಂಬುದನ್ನೂ ಸದರಿ ಮುಖಂಡರು ಪ್ರತಿಪಾದಿಸುತ್ತಾರೆ.

ಇಷ್ಟೆಲ್ಲಾ ಆದ ನಂತರ ಒಂದು ಪ್ರಶ್ನೆಯಂತೂ ಉಳಿಯುತ್ತದೆ. ಮುಸ್ಲಿಮರು ಅಧಿಕವಾಗಿರುವ ಪಾದರಾಯನಪುರ, ಡಿಜೆಹಳ್ಳಿಯಂತಹ ಪ್ರದೇಶದಲ್ಲಿ ಬಡತನ, ಅನಕ್ಷರತೆ ಹೆಚ್ಚಾಗಿದ್ದು, ಬೇಗನೇ ಗುಂಪು ಸೇರುವುದು, ಮಿತಿಮೀರಿದ ಆಕ್ರೋಶಕ್ಕೊಳಗಾಗುವುದು ನಡೆಯುತ್ತಿದೆ. ಈ ಸಮಸ್ಯೆಗಳ ಜವಾಬ್ದಾರಿಯನ್ನೂ ಸಮುದಾಯದ ಮುಖಂಡರು ಹೊರಬೇಕಲ್ಲವೇ? ನಿರ್ದಿಷ್ಟ ಸಂದರ್ಭದಲ್ಲಿ ಗಲಭೆಯನ್ನು ನಿಯಂತ್ರಿಸಲು ಪ್ರಯತ್ನಿಸುವುದಷ್ಟೇ ಅಲ್ಲದೇ ಸಮುದಾಯದ ಸಮಗ್ರ ಒಳಿತಿಗೆ ಮುಖಂಡರ ಬಳಿ ಕಾರ್ಯಯೋಜನೆ ಏಕಿಲ್ಲ ಎಂಬುದಕ್ಕೆ ಉತ್ತರಿಸಬೇಕಲ್ಲವೇ?

ಮುಸ್ಲಿಂ ಮುಖಂಡರು ಸ್ಥಳದಲ್ಲಂತೂ ಶಾಂತಿ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಎಂಬುದು 6 ಪ್ರತ್ಯಕ್ಷದರ್ಶಿಗಳನ್ನು ನಾನುಗೌರಿ.ಕಾಂ ಮಾತಾಡಿಸಿದಾಗ ತಿಳಿದು ಬಂದ ಮಾಹಿತಿ. ಡಿಜೆ ಹಳ್ಳಿ ಪಿಎಸ್‌ಐ ಕೇಶವಮೂರ್ತಿಯವರನ್ನು ಮಾತಾಡಿಸಲು ನಾಲ್ಕು ಬಾರಿ ಫೋನ್‌ ಮಾಡಿದರೂ ಸಿಕ್ಕಿಲ್ಲ. ಅವರಿಂದ ಮಾಹಿತಿ ಬಂದ ನಂತರ ಅದನ್ನು ಅಪ್‌ಡೇಟ್‌ ಮಾಡಲಾಗುತ್ತದೆ.


ಇದನ್ನೂ ಓದಿ: ಹಸಿದ ಮಾಧ್ಯಮಗಳಿಗೆ ತಿಳಿಗೇಡಿಗಳು ಕೊಟ್ಟ ಅಸ್ತ್ರ: ಡಿ.ಜೆ ಹಳ್ಳಿ ಪ್ರಕರಣ ಎತ್ತುತ್ತಿರುವ ಪ್ರಶ್ನೆಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...