ಡಿ.ಜೆ.ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಪೊಲೀಸ್ ಸ್ಟೇಷನ್, ಶಾಸಕರ ಮನೆ ಮೇಲೆ ಕಲ್ಲು ತೂರಿದವರು, ವಾಹನಗಳಿಗೆ ಬೆಂಕಿ ಹಚ್ಚಿದವರು ಮತ್ತು ಬೀದಿಯಲ್ಲಿ ದಾಂಧಲೆ ನಡೆಸಿದವರ (ಅವರ ಆಕ್ರೋಶಕ್ಕೆ ಕಾರಣವೇನೇ ಇದ್ದರೂ) ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಖಂಡನಾ ವಾಕ್ಯಕ್ಕೆ ಹಿಂದೆ ಅಥವಾ ಮುಂದೆ ಫೇಸ್‌ಬುಕ್ ಪೋಸ್ಟ್ ಬರೆದ ವ್ಯಕ್ತಿಯನ್ನು ಇನ್ನೂ ಹೆಚ್ಚು ಖಂಡಿಸಿರಬಹುದು. ಜೊತೆಗೆ ಪೊಲೀಸರು ದೂರು ಸ್ವೀಕರಿಸಿದಾಗ 2 ಗಂಟೆ ಬಿಟ್ಟು ಬನ್ನಿ ಎಂದಿದ್ದೇಕೆ, ಗಲಭೆ ಶುರುವಾದ 3 ಗಂಟೆಗಳ ಕಾಲ ಪರಿಣಾಮಕಾರಿ ಕ್ರಮಕ್ಕೇಕೆ ಮುಂದಾಗಲಿಲ್ಲ ಇತ್ಯಾದಿ ಮಾತುಗಳನ್ನೂ ಹೇಳಿರಬಹುದು. ಆದರೆ, ಗಲಭೆಕೋರರ ಕೃತ್ಯವನ್ನು ಯಾವುದೇ ಸಂಘಟನೆ/ಪಕ್ಷ/ಪ್ರಜ್ಞಾವಂತರಾದವರು ಸಮರ್ಥಿಸಲಿಲ್ಲ.

ಇನ್ನು ಮುಸ್ಲಿಂ ಸಮುದಾಯದ ವಿವೇಕಯುತ ದನಿಗಳ ವಿಚಾರಕ್ಕೆ ಬರುವುದಾದರೆ, ಪ್ರವಾದಿಯವರನ್ನೇ ಉಲ್ಲೇಖಿಸಿ ಇದು ಅಧರ್ಮದ ಕೃತ್ಯ ಎಂದು ಹಲವಾರು ಜನರು ಹೇಳಿದ್ದಾರೆ. ಮಂಗಳೂರಿನ ಸನ್ಮಾರ್ಗ ಪತ್ರಿಕೆಯ ಕುಕ್ಕಿಲ ಅವರಿಂದ ಹಿಡಿದು ಇತಿಹಾಸಕಾರ ಇರ್ಫಾನ್ ಹಬೀಬ್‌ರವರೆಗೆ ನೂರಾರು ಹೇಳಿಕೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಲಭೆಗಳು ಅಧಾರ್ಮಿಕವೆಂದೂ, ಇದು ಕೋಮುವಾದಿಗಳಿಗೆ ಮಾತ್ರ ಅನುಕೂಲಕರವೆಂದೂ ಹೇಳಿದ್ದಾರೆ. ಇನ್ನೂ ಕೆಲವು ಮುಸ್ಲಿಮರು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ.


ಇದನ್ನೂ ಓದಿ: ಡಿ.ಜೆ. ಹಳ್ಳಿ ಗಲಭೆ: ಹಿಂಸೆಗಿಳಿದವರು ಮಾಡಿದ್ದು ಕೂಡಾ ಪ್ರವಾದಿ ನಿಂದನೆಯೇ ಎಂದ ಮುಸ್ಲಿಂ ಧಾರ್ಮಿಕ ಮುಖಂಡರು.


ಅಂದರೆ ವಿಚಾರ ಸ್ಪಷ್ಟವಿದೆ. ಗಲಭೆ ನಡೆಸಿದವರನ್ನು ಸಮರ್ಥಿಸಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ್ಯಾರೂ ಮಾತಾಡಿಲ್ಲ. ಪ್ರಚೋದನೆ ಉಂಟು ಮಾಡಿದ ಫೇಸ್‌ಬುಕ್ ಪೋಸ್ಟ್ಅನ್ನು ಹೆಚ್ಚಾಗಿ ಖಂಡಿಸಿದ್ದಾರೆ ಎಂಬುದು ನಿಜ. ಆ ಪ್ರದೇಶದಲ್ಲಿದ್ದ ಒಂದು ದೇವಸ್ಥಾನದ ಸುತ್ತ ಮಾನವಸರಪಳಿ ನಿರ್ಮಿಸಿದ ಮುಸ್ಲಿಂ ಯುವಕರು, ಅಲ್ಲಿ ಯಾರೂ ಗಲಭೆ ಮಾಡದಂತೆ ನೋಡಿಕೊಂಡಿದ್ದಾರೆ. ಅಂದರೆ ಇದೊಂದು ಕೋಮುಗಲಭೆಯಲ್ಲ. ಗಲಭೆಕೋರರು ಹಿಂದೂ ಜನರನ್ನು ಹುಡುಕಿಕೊಂಡು ಹೊಡೆದಿಲ್ಲ. ಅವರ ಟಾರ್ಗೆಟ್ ಪೊಲೀಸ್ ಠಾಣೆ ಮತ್ತು ಶಾಸಕರ ಮನೆಯಾಗಿದೆ. ಅದಲ್ಲದೇ ಬೀದಿಯಲ್ಲಿ ಬೆಂಕಿ ಹಚ್ಚಿದ್ದಾರೆ. ಅವರು ಬೆಂಕಿ ಹಚ್ಚಿದ ಬೈಕ್‌ಗಳನ್ನು ಇನ್ನೊಂದು ಕೋಮಿನವರದ್ದಾ, ಮುಸ್ಲಿಮರದ್ದಾ ಎಂದು ನೋಡಿಲ್ಲ. ಇವೆಲ್ಲವೂ ಅವರ ಆಕ್ರೋಶವನ್ನು ಅತ್ಯಂತ ತಪ್ಪಾದ, ಕಾನೂನು ವಿರೋಧಿಯಾದ ಮಾರ್ಗದಲ್ಲಿ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕಾಗಿ ಅವರು ಈ ನೆಲದ ಕಾನೂನಿನ ಪ್ರಕಾರ ವಿಚಾರಣೆಗೆ ಮತ್ತು ಶಿಕ್ಷೆಗೆ ಒಳಪಡಿಸಬೇಕು. ಆದರೆ, ಅದು ಹಿಂದೂ-ಮುಸ್ಲಿಂ ಗಲಭೆಯಲ್ಲ ಎಂಬುದು ಎದ್ದು ಕಾಣುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರುಗಳು, ಧಾರ್ಮಿಕ ಮುಖಂಡರು ಗಲಭೆಯನ್ನು ಹೆಚ್ಚು ಮಾಡಲು ಹೋಗಿಲ್ಲ.

ಇದೇ ಸಂದರ್ಭದಲ್ಲಿ ಕನ್ನಡದ ಟಿವಿ ಚಾನೆಲ್‌ಗಳೇನು ಮಾಡಿದರು ಎಂಬುದನ್ನು ನೋಡಬೇಕು. ಈ ಲೇಖನ ಬರೆಯುವ ಹೊತ್ತಿಗೆ ‘ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು’ ಎಂದು ಮುಸ್ಲಿಂ ಮುಖಂಡರು ಟಿವಿಯಲ್ಲಿ ಹೇಳಿದರೆ, ‘ನೀವು ತಪ್ಪು ಮಾಡಿದವರನ್ನು ಸಮರ್ಥಿಸುತ್ತಿದ್ದೀರಿ’ ಎಂದು ಆಂಕರ್ ಕೂಗಾಡುತ್ತಿದ್ದರು. ಅದೇ ಆಂಕರ್ ಈಗಿನ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟಿನಲ್ಲಿರುವ ಸಂಗತಿಯನ್ನೇ ಹಿಂದೊಮ್ಮೆ ಹೇಳಿದ್ದರು. ಜೊತೆಗೆ ತನ್ನ ಟಿವಿಯ ಚರ್ಚೆಯಲ್ಲಿ ಮಾತಾಡಿದ ವ್ಯಕ್ತಿಯ ಮಾತುಗಳನ್ನು ಖಂಡಿಸುತ್ತೇನೆ ಎಂದು ಸ್ವತಃ ಆಂಕರ್ ಹೇಳುವ ಚೋದ್ಯ ನಡೆಯುತ್ತದೆ.

ಇದು ಪಾದರಾಯನಪುರದ ಮುಂದುವರಿಕೆಯಾ, ಮಂಗಳೂರು ಗಲಭೆಯ ಮುಂದುವರಿಕೆಯಾ ಎಂಬ ಮಾತುಗಳನ್ನು ಗಲಭೆಯ ವರದಿಯಲ್ಲಿ ಸೇರಿಸಿ ರಿಪೋರ್ಟರ್ ಮಾತಾಡುತ್ತಾರೆ. ಬೆಂಗಳೂರಿಗೆ ಬೆಂಕಿ ಹಚ್ಚಿದ ಪುಂಡರು, ಬೆಂಗಳೂರು ಧಗಧಗ ಎಂಬ ಶೀರ್ಷಿಕೆಗಳನ್ನು ಕೊಟ್ಟು, ಬೆಂಗಳೂರಿನ ಉಳಿದ ಭಾಗದ ಜನರು ಅಚ್ಚರಿಗೊಳ್ಳುವಂತೆ ಮಾಡುತ್ತಾರೆ. ಬೆಂಗಳೂರಿನ ಬೀದಿ ಬೀದಿಯಲ್ಲಿ ಕೊರೊನಾದಿಂದ ಹೆಣ ಉರುಳುತ್ತಿದೆ ಎಂದು ಸುದ್ದಿ ಮಾಡಿ ದೂರದ ಊರುಗಳಲ್ಲಿನ ತಂದೆ ತಾಯಂದಿರು ಗಾಬರಿಯಾಗಿ ತಮ್ಮ ಮಕ್ಕಳಿಗೆ ಊರಿಗೆ ಬಂದು ಬಿಡಿ ಎಂದು ಹೇಳುವಂತೆ ಆಗಿತ್ತು. ಇಲ್ಲಿ ಗಲಭೆಯ ವಿಡಿಯೋಗಳನ್ನು ಪದೇ ಪದೇ ತೋರಿಸುತ್ತಾ, ಒಂದಿಡೀ ಸಮುದಾಯವೇ ಈ ಕೃತ್ಯದಲ್ಲಿ ತೊಡಗಿದೆ ಎಂಬಂತೆ ಬಿಂಬಿಸುವ ಕೆಲಸವನ್ನು ಒಂದೆರಡು ಟಿವಿ ಚಾನೆಲ್‌ಗಳು ಮಾಡಿದವು.

ಯಾವ ಒಬ್ಬ ಟಿವಿ ಚಾನೆಲ್ಲೂ ಸಹಾ ಫೇಸ್‌ಬುಕ್ ಪೋಸ್ಟ್ನ ಕುರಿತು ಖಂಡನೀಯ ಧಾಟಿಯಲ್ಲಿ ಮಾತಾಡಿದ್ದು ಕಂಡುಬಂದಿಲ್ಲ. ಬದಲಿಗೆ ಇದೊಂದು ಯೋಜಿತ ಗಲಭೆಯೆಂದೂ, ನಿರ್ದಿಷ್ಟ ಸಂಘಟನೆಗಳು ಇದಕ್ಕೆ ಕಾರಣವೆಂದೂ ಬಿಂಬಿಸುವುದನ್ನು ವ್ಯವಸ್ಥಿತವಾಗಿ ಕೆಲವು ಚಾನೆಲ್ಲುಗಳು ಬಿತ್ತರಿಸಲಾರಂಭಿಸಿದವು. ಅದೇ ಸಂಘಟನೆಯು ನೀಡಿದ ಸ್ಪಷ್ಟೀಕರಣವನ್ನೂ ಪ್ರಕಟಿಸುವುದು ಕನಿಷ್ಠ ಪತ್ರಿಕಾ ಧರ್ಮ ಎಂತಲೂ ಅನಿಸಲಿಲ್ಲ. ಸದರಿ ಸಂಘಟನೆಯು (ಎಸ್‌ಡಿಪಿಐ) ನಡೆಸಿದ ಪತ್ರಿಕಾಗೋಷ್ಠಿಯ ವಿವರವನ್ನು ಪ್ರಸಾರ ಮಾಡಲಿಲ್ಲವಷ್ಟೇ ಅಲ್ಲ, ಪೊಲೀಸ್ ಠಾಣೆಯ ಮುಂದೆ ಮೈಕ್‌ನಲ್ಲಿ ಆ ಸಂಘಟನೆಯ ಮುಖಂಡರು ಮಾತನಾಡಿ ‘ನೆಲದ ಕಾನೂನನ್ನು ಪಾಲಿಸುವುದು ಎಲ್ಲರ ಕರ್ತವ್ಯ’ ಎಂದು ಹೇಳಿದ ವಿಡಿಯೋಗಳೂ ಇರುವುದನ್ನೂ ತಿರುಚಿದವು. ಮೊದಲೇ ತೀರ್ಮಾನಕ್ಕೆ ಬಂದಿರುವುದನ್ನು ಹೇಳಲು ಈ ವಿಡಿಯೋಗಳು ಅಡ್ಡಿಯಾಗುವುದರಿಂದ ‘ಬಾಯಲ್ಲಿ ಬೆಣ್ಣೆ ಮಾತು ಆಡಿ, ದೊಣ್ಣೆ ಬೀಸುತ್ತಿದ್ದಾರೆ’ ಎಂದು ತೀರ್ಪನ್ನೇ ನೀಡಿಬಿಟ್ಟವು.

ನೀವು ಧರ್ಮ ಒಪ್ಪುತ್ತೀರೋ, ಸಂವಿಧಾನ ಒಪ್ಪುತ್ತೀರೋ ಎಂದು ಆಂಕರ್ ಒಬ್ಬರು ಕೇಳಿದ್ದು ನಡೆಯಿತಂತೆ. ತನ್ನ ದೇಶದ ಸಂವಿಧಾನವು ತನ್ನ ಧರ್ಮವನ್ನು ಅನುಸರಿಸಲು ಅವಕಾಶ ಕೊಡುತ್ತದೆ ಎಂಬುದನ್ನು ಹೇಳಲು ಅಲ್ಲಿ ಅವಕಾಶವಿರುವುದಿಲ್ಲ. ಬಿಜೆಪಿ ಪಕ್ಷದ ಜನರು ಸಂವಿಧಾನವನ್ನು ನೇರವಾಗಿ ಅವಹೇಳನ ಮಾಡಿದಾಗ, ಸಂವಿಧಾನ ವಿರೋಧಿ ಮಾತುಗಳು, ಕೃತ್ಯಗಳು ನಡೆದಾಗ ಇಂತಹ ಚರ್ಚೆಯನ್ನು ಮಾಡುವುದನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಒಟ್ಟಿನಲ್ಲಿ ಇದನ್ನು ಒಂದು ಕೋಮುಗಲಭೆಯೆಂತಲೂ, ನಿರ್ದಿಷ್ಟ ಸಮುದಾಯವೊಂದು ನೆಲದ ಕಾನೂನನ್ನು ಒಪ್ಪದೇ (ಇಡೀ ಸಮುದಾಯ!) ಗಲಭೆಗಳಲ್ಲಿ ನಿರತವಾಗಿದೆಯೆಂತಲೂ ಬಿಂಬಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ಕೆಲಸವನ್ನು ಈ ಕೆಲವು ಟಿವಿ ಚಾನೆಲ್‌ಗಳು ಮಾಡಿದವು.

ಡಿಜೆ ಹಳ್ಳಿಯ ಕಿಡಿಗೇಡಿಗಳು ಒಂದೆರಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಸಿದ ಗಲಭೆಯನ್ನು, ರಾಜ್ಯಾದ್ಯಂತ ಕೋಮುಗಲಭೆಯನ್ನಾಗಿ ಪರಿವರ್ತಿಸಲು ಬೇಕಾದ ಸರಕನ್ನಾಗಿ ಈ ಕೆಲವು ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಇದನ್ನು ನೋಡಿದರೆ ಸ್ಪಷ್ಟವಾಗುವ ಒಂದು ಮಾತಿದೆ. ಡಿಜೆ ಹಳ್ಳಿಯ ಗಲಭೆಕೋರರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಮಾತ್ರವಲ್ಲದೇ, ಇಂತಹ ಘಟನೆಗಳು ಮತ್ತೆ ನಡೆಯದಂತೆ ಬೇಕಾದ ಕಾನೂನಾತ್ಮಕ, ಆಡಳಿತಾತ್ಮಕ ಕ್ರಮಗಳು ಮಾತ್ರವಲ್ಲದೇ, ಸಮುದಾಯದ ಮುಖಂಡರೂ ಜವಾಬ್ದಾರಿ ತೆಗೆದುಕೊಳ್ಳಲು ತಾಕೀತು ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಧಾರ್ಮಿಕ ನಿಂದನೆ ಮಾಡುವ (ಯಾವುದೇ ಸಮುದಾಯದ) ಕೃತ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತೇವೆ ಎಂಬ ಸಂದೇಶವನ್ನು ಪೊಲೀಸ್ ಇಲಾಖೆಯೂ ನೀಡಬೇಕು. ಸಂಬಂಧಪಟ್ಟವರು ಜವಾಬ್ದಾರಿ ವಹಿಸಿದರೆ ಇದು ಅಸಾಧ್ಯವೇನೂ ಅಲ್ಲ.

ಆದರೆ, ಇಡೀ ರಾಜ್ಯಕ್ಕೆ ಕೋಮುಗಲಭೆ ನಡೆದಿದೆ ಎನ್ನುವ ರೀತಿ, ಒಂದಿಡೀ ಸಮುದಾಯವೇ ಹೀಗೆ ಎಂಬ ಸಂದೇಶವನ್ನು ರವಾನಿಸಿದ ಕೆಲವು ಮಾಧ್ಯಮಗಳು ಹಚ್ಚುತ್ತಿರುವ ಕಿಡಿಗಳು, ಮುಂದೊಂದು ದಿನ ದೊಡ್ಡ ಬೆಂಕಿ ಹತ್ತಿಸುವುದನ್ನು ಹೇಗೆ ತಡೆಯುವುದು? ಇದು ನಿಜಕ್ಕೂ ಅಪಾಯಕಾರಿ ವಿದ್ಯಮಾನವಾಗಿದೆ. ಇದು ಹೊಸ ವಿದ್ಯಮಾನವೇನೂ ಅಲ್ಲ. ಈಗಾಗಲೇ ಕಳೆದ 10 ವರ್ಷಗಳಿಂದ ದೇಶದ ಮಾಧ್ಯಮಗಳ ಒಂದು ವಿಭಾಗ ವ್ಯವಸ್ಥಿತವಾಗಿ ನಡೆಸುತ್ತಿರುವ ಕಾರ್ಯಾಚರಣೆಯ ಹಿಂದೆ ಒಂದು ಅಜೆಂಡಾ ಇದೆ ಮತ್ತು ಅದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿ ಎಂಬುದು ಈಗಾಗಲೇ ಎಲ್ಲರ ಗಮನಕ್ಕೆ ಬಂದಿರುವ ಸಂಗತಿಯಾಗಿದೆ. ಅದಕ್ಕೆ ಡಿಜೆ ಹಳ್ಳಿಯ ಪ್ರಕರಣ ಮತ್ತೊಂದು ಉದಾಹರಣೆಯಾಗಿ ಒದಗಿ ಬಂದಿದೆ ಅಷ್ಟೇ.

ಗಲಭೆಕೋರರು ಬೆಂಕಿ ಹಚ್ಚುವುದನ್ನು ನಿಭಾಯಿಸುವ ಸಂದರ್ಭದಲ್ಲಿ ಮಾಧ್ಯಮಗಳು ಬೆಂಕಿ ಹಚ್ಚುವುದನ್ನು ನಿಭಾಯಿಸಲೂ ಸರ್ಕಾರ ಹಾಗೂ ಸಮಾಜ ಕಾರ್ಯಪ್ರವೃತ್ತವಾಗಬೇಕಿದೆ.


ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು? 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Website | + posts