ದಲಿತ ಯುವಕನೊಬ್ಬ ಲಾ ಕಾಲೇಜಿನಿಲ್ಲಿ ದಾಖಲಾಗುವ ವೇಳೆ ಮುಂದೆ ನೀನು ಏನಾಗಬೇಕೆಂದು ಬಯಸುತ್ತೀಯ ಎಂಬ ಪ್ರಿನ್ಸಿಪಲ್‌ರವರ ಪ್ರಶ್ನೆಗೆ ಆತ ಕೊಡುವ ಉತ್ತರ ಡಾಕ್ಟರ್‌ ಎಂದು. ಎಲ್ಲರೂ ಗೊಳ್ಳೆಂದು ನಗುತ್ತಾರೆ. ಆಗ ಪ್ರಿನ್ಸಿಪಲ್ ನೋಡಪ್ಪ ಇದು ಲಾ ಕಾಲೇಜು ಇಲ್ಲಿ ಡಾಕ್ಟರ್ ಆಗಲು ಸಾಧ್ಯವಿಲ್ಲವೆಂದಾಗ ಆ ಹುಡುಗ ಕೊಡುವ ಉತ್ತರ “ಸರ್‌ ನಾನು ಹೇಳಿದ್ದು ಡಾಕ್ಟರ್ ಅಂಬೇಡ್ಕರ್‌ರವರಂತೆ ಆಗಬೇಕೆಂದಾಗ” ಇಡೀ ಜನಸಮೂಹವೇ ಸ್ತಬ್ಧವಾಗುತ್ತದೆ. ಇದು ಪ.ರಂಜಿತ್‌ ನಿರ್ಮಾಣದ ಪರಿಯೆರುಮ್ ಪೆರುಮಾಳ್ ಸಿನಿಮಾದ ಒಂದು ಝಲಕ್ ಅಷ್ಟೆ.

ದಲಿತರ ಪರವಾಗಿ ಮತ್ತು ದಲಿತರ ಸಮಸ್ಯೆಗಳ ಕುರಿತು ಹಲವಾರು ಜನ ಸಿನೆಮಾಗಳನ್ನು ತೆಗೆದಿದ್ದಾರೆ. ಆದರೆ ತಾನೊಬ್ಬ ದಲಿತ ಎಂದು ಹೆಮ್ಮೆಯಿಂದ ಹೇಳಿಕೊಂಡು ದಲಿತ ಅಸ್ಮಿತೆಯನ್ನು ಬಹಿರಂಗವಾಗಿ ಸಾರುವ ಮೂಲಕ ಮುಖ್ಯವಾಹಿನಿ ಸಿನೆಮಾ ಮಾಡುತ್ತಿರುವ ಯುವತಾರೆ ಪ.ರಂಜಿತ್. ಅಷ್ಟೆಂದರೆ ಕೆಲವರಿಗೆ ಯಾರೆಂದು ಗೊತ್ತಾಗದಿದ್ದರೆ ರಜಿನಿಕಾಂತ್‌ ಅಭಿನಯದ ’ಕಾಲ’ ದ ನಿರ್ದೇಶಕ ಮತ್ತು ಪೆರಿಯೇರುಮ್ ಪೆರುಮಾಳ್ ಸಿನಿಮಾದ ನಿರ್ಮಾಪಕನೇ ಈ ಪ.ರಂಜಿತ್. ಇಂದು ಅವರ ಜನ್ಮದಿನ.

ಅಷ್ಟು ಮಾತ್ರವಲ್ಲ 2013ರಲ್ಲಿ ಚನ್ನೈನ ರೈಲ್ವೆ ಹಳಿಗಳ ಮೇಲೆ ಇಳವರಸನ್ ಎಂಬ 20 ವರ್ಷದ ಸುಂದರ ಯುವಕನ ದೇಹ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ನಾವು ಮರೆತಿರಬಹುದು. ಆತ ಮೇಲ್ಜಾತಿಯ ಯುವತಿಯನ್ನು ಮದುವೆಯಾಗಿದ್ದೆ ಆ ಘೋರ ಕೊಲೆಗೆ ಕಾರಣವಾಗಿತ್ತು. ಆದರೆ ಅದನ್ನು ಪ.ರಂಜಿತ್‌ ಮರೆತಿಲ್ಲ. ಅವರ ತಲೆಯಲ್ಲಿ ಅದು ಸದಾ ಕೊರೆಯುತ್ತಿದೆ. ಅಷ್ಟೇ ಏಕೆ ಮೊನ್ನೆ ಮೊನ್ನೆ ತಾನೇ ಜಾತಿ ಗೋಡೆಯ ಕಾರಣಕ್ಕಾಗಿ ತಮಿಳುನಾಡಿನಲ್ಲಿ ತಮ್ಮದಲ್ಲದ ತಪ್ಪಿಗೆ, ಮೇಲ್ಜಾತಿಯವರ ಅಟ್ಟಹಾಸಕ್ಕೆ 17 ಜನ ದಲಿತರು ಸಾವನಪ್ಪಿದ್ದರು. ಅದು ಸಹ ಪ.ರಂಜಿತ್‌ ತಲೆಯಲ್ಲಿ ಕೋಲಾಹಲವೆಬ್ಬಿಸುತ್ತದೆ. ಅದರ ವಿರುದ್ಧ ಪ್ರತಿಭಟನೆಗೆ ಅವರು ಮುಂದಾಗಿದ್ದಾರೆ.

ಹೌದು ಈ ದೇಶದ ವಾಸ್ತವ ಜಾತಿ ತಾರತಮ್ಯವನ್ನು ಕೊನೆಗೊಳಿಸಲು, ಬಡವ ಬಲ್ಲಿದ ತಾರತಮ್ಯವನ್ನು ಅಳಿಸಲು, ಎಲ್ಲರೂ ನೆಮ್ಮದಿ ಮತ್ತು ಪ್ರೀತಿಯಿಂದ ಬದುಕುವ ಸಮಾಜಕ್ಕಾಗಿ ಹಂಬಲಿಸುವ, ಅದಕ್ಕಾಗಿ ದನಿಯೆತ್ತುವ 36 ವರ್ಷದ ಪ.ರಂಜಿತ್‌ ತನ್ನ ಪ್ರತಿಭೆ, ಸಾಮರ್ಥ್ಯ, ಸೃಜನಶೀಲತೆ ಮತ್ತು ಕಠಿಣ ಶ್ರಮದ ಮೂಲಕ ದೇಶದ ಅನಿಷ್ಠ ಸಮಸ್ಯೆಯನ್ನು ಎದುರಿಸಲು ಹೊರಟಿದ್ದಾರೆ.

ಹುಟ್ಟಿದ್ದ ಕೇರಳದ ದಲಿತ ಕುಟುಂಬದಲ್ಲಿ. ನಂತರ ಫೈನ್ ಆರ್ಟ್ಸ್‌ ಕಲಿಯಲು ಚನ್ನೈ ಸೇರಿದ ಇವರು ತನ್ನ ಹುಟ್ಟಿನಿಂದಲೇ ಹಿಂಬಾಲಿಸುತ್ತಿರುವ ಜಾತಿ ತಾರತಮ್ಯದ ರೋಗಕ್ಕೆ ಮದ್ದು ಕಂಡುಹಿಡಿಯಲು ಆರಿಸಿಕೊಂಡಿದ್ದು ಸಿನಿಮಾ ಮತ್ತು ಸಾಂಸ್ಕೃತಿಕ ಲೋಕ.

ತಮಿಳುನಾಡು ದೇಶದಲ್ಲೇ ವಿಶಿಷ್ಠವಾದಂತಹ ಭಾಷಾಭಿಮಾನವನ್ನು ಇಟ್ಟುಕೊಂಡಿರುವ ನಾಡಾಗಿದೆ. ಅಷ್ಟೇ ಭೀಕರ ಜಾತೀಯತೆಯ ನಾಡಾಗಿರುವುದು ದುರಂತ. ಇದರ ವಿರುದ್ಧವೇ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಹೋರಾಟವು ಇತ್ತು. ಇಲ್ಲಿ ತಮಿಳು ಭಾಷೆಯ ಮೇಲೆಯೇ ಅಣ್ಣದೊರೈ ಅಂತಹವರು ಕಟ್ಟಿದ ರಾಜಕಾರಣವು ಈಗಲೂ ಚಾಲ್ತಿಯಲ್ಲಿದೆ. ಇದೆದಲ್ಲರ ಸಮ್ಮಿಳಿತವಾಗಿ ಇಲ್ಲಿ ಬಹಳಷ್ಟು ಸಿನಿಮಾಗಳು ಬೀದಿಯಿಂದ ಹುಟ್ಟಿಬರುತ್ತವೆ. ರಸ್ತೆ, ಕೊಳಗೇರಿಗಳಲ್ಲಿ ಸಿನಮಾ ಕಥೆಗಳು ಹುಟ್ಟಿವೆ. ಅದಕ್ಕೂ ಮುಂದುವರಿದು ದಲಿತರ ಮನೆಗಳಿಂದ, ಮೇಲ್ಜಾತಿ ಮನಸ್ಸುಗಳಿಂದ ಕಥೆ ಹೆಕ್ಕಿ ತಂದವರು ಪ.ರಂಜಿತ್.

ಜನರ ಸಮಸ್ಯೆಗಳನ್ನು ಮಾತನಾಡುವ ಸಿನೆಮಾಗಳನ್ನು ಕೇವಲ ಕಲಾತ್ಮಕ ಸಿನೆಮಾಗಳೆಂದು ಬಿಂಬಿಸಿ, ಅವಕ್ಕೆ ಪ್ರಶಸ್ತಿಕೊಟ್ಟು ಸುಮ್ಮನಾಗಿಸುತ್ತಾರೆ ಹೊರತು ಅವುಗಳ ಕುರಿತು ಮುಖ್ಯವಾಹಿನಿಯಲ್ಲಿ ಚರ್ಚೆಯಾಗುವುದೇ ಇಲ್ಲ. ಆದರೆ ಕಲಾತ್ಮಕ ಸಿನೆಮಾ ಹೇಳುವ ವಿಚಾರಗಳನ್ನು ಕಮರ್ಶಿಯಲ್ ಟಚ್ ಅಲ್ಲಿ ಹೇಳುವ ಪ್ರತಿಭಾವಂತ ನಿರ್ದೇಶಕ ಪಾ.ರಂಜಿತ್. ಇವರು ಪ್ರತಿ ಸಿನೆಮಾದಲ್ಲಿಯೂ ಜಾತಿರಾಜಕಾರಣ ಮತ್ತು ಶೋಷಿತರ ಬಗಗಿನೆ ತಾರತಮ್ಯಗಳನ್ನು ಪ್ರೇಕ್ಷಕರ ಮುಂದಿಡುತ್ತಾರೆ. ನಾವು ಪರ್ಯಾಯ ಮಾಧ್ಯಮಗಳ ಮೂಲಕ ಮಾತ್ರ ಜಾತಿಯನ್ನು ಎದುರುಗೊಳ್ಳುವುದರ ಬದಲು ಮುಖ್ಯವಾಹಿನಿ ಮಾಧ್ಯಮಗಳ ಮೂಲಕವೇ ಎದುರುಗೊಳ್ಳಬೇಕು ಎಂಬುದು ಪ.ರಂಜಿತ್‌ರವರ ಅಚಲ ನಂಬಿಕೆ.

ಇವರು ನಿದೇರ್ಶಿಸಿರುವ ನಾಲ್ಕು ಸಿನೆಮಾಗಳು ಸಹ ವಿಭಿನ್ನವಾಗಿ ಜನರ ಮನಸ್ಸಿನಲ್ಲಿ ಇಳಿಯುತ್ತವೆ. ಇವರ ಮೊದಲ ಚಿತ್ರ ‘ಅಟ್ಟಕತ್ತಿ’ ಚೆನ್ನೈನಲ್ಲಿ ವಾಸಿಸುತ್ತಿರುವ ದಲಿತರ ಜೀವನ ಕಥೆಯನ್ನು ವಿವರಿಸಿದರೆ, ನಂತರ ಕಾರ್ತಿಕ್ ಜೊತೆಗಿನ ‘ಮದ್ರಾಸ್’ನಲ್ಲಿ ಚೆನ್ನೈನ ನಿವಾಸಿಗಳ ರಾಜಕೀಯ ಪ್ರಜ್ಞೆಯನ್ನು ದಾಖಲಿಸಿದ್ದಾರೆ. ಇವರೆಡನ್ನು ನೋಡಿಯೇ ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ‘ಕಬಾಲಿ’ ಮತ್ತು ’ಕಾಲ’ ಚಿತ್ರ ನಿರ್ದೇಶನಕ್ಕೆ ಪ.ರಂಜಿತ್‌ರನ್ನು ಆಯ್ದುಕೊಂಡಿದ್ದರು. ಭಾರೀ ಪ್ರಚಾರ ಪಡೆದ ಈ ಸಿನಿಮಾಗಳಲ್ಲಿ ಹೇಳಬೇಕಾದುದ್ದನ್ನು ಬಹಳ ಪರಿಣಾಮಕಾರಿಯಾಗಿ ಹೇಳಲು ಅವರು ಯಶ್ವಸಿಯಾಗಿದ್ದರು.

ಕಬಾಲಿ ಸಿನೆಮಾ ತಮಿಳು ವಲಸಿಗರ ಕುರಿತು ಮಾತನಾಡಿತ್ತು. ಇಲ್ಲಿ ಡಾ.ಅಂಬೇಡ್ಕರ್ ರಾಜಕಾರಣದ ಬಗ್ಗೆ ಒಂದು ಸಂಭಾಷಣೆ ಹೆಚ್ಚು ಗಮನಸೆಳೆದಿತ್ತು. ಇನ್ನೂ ಇತ್ತಿಚಿಗೆ ಬಂದ ‘ಕಾಲ’ ಸಿನೆಮಾದಲ್ಲಿ ಬಡವರ ಭೂಮಿ ಮತ್ತು ವಸತಿಯ ಹಕ್ಕಿನ ಕುರಿತು ಸಿನೆಮಾ ಸದ್ದು ಮಾಡಿತ್ತು. ಅಲ್ಲಿ ಪ.ರಂಜಿತ್‌ ಬಳಸಿದ್ದ ಬಣ್ಣಗಳ ರೂಪಕ ಇಡೀ ಪ್ರಪಂಚಕ್ಕೆ ಅನ್ವಯಿಸುವಂತದ್ದು. “‘ಭೂಮಿ ನಿಮಗೆ ವ್ಯಾಪಾರ, ಅಧಿಕಾರ. ಆದರೆ ನಮಗದು ಬದುಕು. ನಮ್ಮ ಈ ಒಂದು ಹಿಡಿ ಮಣ್ಣು ಕೂಡ ನಿಮಗೆ ದಕ್ಕಲು ಬಿಡುವುದಿಲ್ಲ. ಈ ನೆಲ ನನ್ನದು, ಅದಕ್ಕಾಗಿ ನಿಮ್ಮ ದೇವರೇ ಅಡ್ಡ ಬಂದರೂ ಆ ದೇವರನ್ನೂ ಕೂಡ ಲೆಕ್ಕಿಸಲಾರೆ’ ಎಂದು ಕಾಲಾ ಎದೆಯುಬ್ಬಿಸಿ ಹೇಳುವ ಡೈಲಾಗ್‌ ಕೇವಲ ಡೈಲಾಗ್‌ ಮಾತ್ರವಲ್ಲ ಅದು ದಲಿತರ ಸಾವಿರ ವರ್ಷದ ರಾಜಕೀಯ ಎಂಬುದನ್ನು ನಾವು ಮರೆಯಬಾರದು.

ಚಿತ್ರದಲ್ಲಿ ಏನದು ಕಾಲಾ, ಕಪ್ಪುಬಣ್ಣ, ಕಪ್ಪುಬಟ್ಟೆ ನೋಡೋಕೆ ಅಸಹ್ಯ’ ಎನ್ನುತ್ತಾನೆ ಖಳನಾಯಕ. ‘ಬಿಳಿ ಶ್ರೇಷ್ಠ, ಕಪ್ಪು ಕೊಳಕು ಎಂಬ ನಿಮ್ಮ ದೃಷ್ಟಿಕೋನವೆ ಸರಿಯಿಲ್ಲ. ಕಪ್ಪು ಶ್ರಮಸಂಸ್ಕೃತಿಯ ಸಂಕೇತ ಕಣೊ’ ಎನ್ನುವ ನಾಯಕನ ಮಾತು ಪೆರಿಯಾರರನ್ನು ನೆನಪಿಸುತ್ತದೆ. ಚಳವಳಿ ನಾಯಕ ಕೇಂದ್ರತವಾಗದೇ ಜನಕೇಂದ್ರತವಾದರೆ ಮಾತ್ರ ಜಯ ಸಾಧ್ಯ ಎಂಬುದನ್ನು ಚಿತ್ರ ನಿರೂಪಿಸುತ್ತದೆ. ಕ್ಲೀನ್‌ ಮತ್ತು ಪ್ಯೂರ್‌ ಎಂಬ ಫ್ಯಾಸಿಸಂ ಸಿದ್ದಾಂತವನ್ನು ಜೀವಪರ ಜನರು ಸೋಲಿಸುವ ಬಗೆಯನ್ನು ಈ ಸಿನಿಮಾ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದರ ಎಲ್ಲಾ ಶ್ರೇಯಸ್ಸು ಸಲ್ಲಬೇಕಾದುದು ಇದರ ಚಿತ್ರಕತೆ ಮತ್ತು ನಿರ್ದೇಶನದ ಹೊಣೆ ಹೊತ್ತ ಪ.ರಂಜಿತ್‌ಗೆ.

ಚನ್ನೈನ ಪ.ರಂಜಿತ್‌ ಕಚೇರಿಯಲ್ಲಿ ಕಣ್ಣು ಕುಕ್ಕುವುದು ವಿಶಾಲ ಗ್ರಂಥಾಲಯ. ಒಂದು ಕಡೆ ಜಗತ್‌ಪ್ರಸಿದ್ದ ಚಿತ್ರ ನಿರ್ದೇಶಕರಾದ ಗೊಡಾರ್ಡ್, ಅಕಿರ ಕುರೊಸಾವಾ ಮತ್ತು ಕುಬ್ರಿಕ್ ರವರ ಪುಸ್ತಕಗಳು ತುಂಬಿದ್ದರೆ ಮತ್ತೊಂದು ಸಾಲಿನಲ್ಲಿ ಅಂಬೇಡ್ಕರ್‌, ಪರಿಯಾರ್‌ ಮತ್ತು ಕಾರ್ಲ್‌‌ಮಾರ್ಕ್ಸ್‌ರವರ ಪುಸ್ತಕಗಳು ತುಂಬಿಕೊಂಡಿವೆ. ಇವಿಷ್ಟರಿಂದಲೇ ಪ.ರಂಜಿತ್‌ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಆಗಾಗ್ಗೆ ಕೆಲವು ಚಿಂತನೆಗಳ ಬಗ್ಗೆ ಕಾರ್ಯಾಗಾರಗಳನ್ನು ಕೂಡ ನಡೆಸುತ್ತಾರೆ.

ಪ.ರಂಜಿತ್‌ರವರ ನಿರ್ಮಾಣ ಸಂಸ್ಥೇಯ ಹೆಸರು ನೀಲಂ ಪ್ರೊಡಕ್ಷನ್. ಅವರ ಯೂಟ್ಯೂಬ್‌ ಚಾನೆಲ್‌ ನೀಲಂ. ಅವರ ಸಾಂಸ್ಕೃತಿಕ ಸಂಘಟನೆ ಕ್ಯಾಸ್ಟ್‌ಲೆಸ್‌ ಕಲೆಕ್ಷಿವ್. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚುರುಕಾಗಿರುವ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ’ಭೀಮ್‌ಜಿ’ ಎಂಬ ಹೆಸರಿನಿಂದ ಆರಂಭಿಸುವ ಮೂಲಕ ಬಾಬಾ ಸಾಹೇಬರ ಬಗ್ಗೆ ತಮಗಿರುವ ಪ್ರೀತಿಯನ್ನು ಅಭಿವ್ಯಕ್ತಿಸಿದ್ದಾರೆ.

ಪ.ರಂಜಿತ್ ಬರೀ ಸಿನೆಮಾ ನಿರ್ದೇಶಕರು ಮಾತ್ರವಲ್ಲ. ಜಗತ್ತಿನ ಜೀವಪರ ಸಿದ್ಧಾಂತಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅಧ್ಯಯನ ಮಾಡಿರುವ ಅವರು ಹಲವಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. LGBTQ ಸಮುದಾಯದ ಬಗೆಗಿನ ’ಲೇಡಿಸ್‌ ಅಂಡ್‌ ಜೆಂಟ್ಲ್‌ಮೆನ್’, ಜಾತಿ ತಾರತಮ್ಯದ ವಿರುದ್ಧದ ’ಬೀವೇರ್‌ ಆಫ್‌ ಕ್ಯಾಸ್ಟ್‌’, ಡಾ.ಬಿ.ಆರ್‌ ಅಂಬೇಡ್ಕರ್‌ ನೌ ಅಂಡ್‌ ದೆನ್‌ ಸಾಕ್ಷ್ಯಚಿತ್ರಗಳು ಗಮನಸೆಳೆದರೆ, ಮ್ಯಾನುವಲ್‌ ಸ್ಕ್ಯಾವೆಂಜಿಂಗ್‌ ಬಗ್ಗೆ ’ಮಂಜಲ್’ ನಾಟಕ ಸಹ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!

ಅವರ ಕ್ಯಾಸ್ಟ್‌ಲೆಸ್‌ ಕಲೆಕ್ಟಿವ್‌ ಆಧುನಿಕ ಪಾಪ್‌ – ರ್‍ಯಾಪ್‌ ಶೈಲಿಯಲ್ಲಿ ಜಾತಿ ಸಮಸ್ಯೆಗಳನ್ನು, ದೇಶದ ಸ್ಥಿತಿಯ ಕುರಿತು ಹಲವಾರು ಕಾಡುಗಳನ್ನು ಕಂಪೋಸ್ ಮಾಡಿದೆ. ಅವೆಲ್ಲವೂ ಯೂಟ್ಯೂಬ್‌ನಲ್ಲಿ ಹಿಟ್‌ ಆಗಿವೆ. 19 ಸದಸ್ಯರ ಸಂಗೀತ ತಂಡದ ಅವರ ಹಾಡುಗಳು ತೀವ್ರ ರಾಜಕೀಯ, ಜಾತಿ, ಲಿಂಗ, ಮೀಸಲಾತಿ, ಕೃಷಿ ಮತ್ತು ಭೂ ಹಕ್ಕುಗಳು ಸೇರಿದಂತೆ ಹಲವಾರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಪ್ರತಿ ವರ್ಷ ಇದರ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಇವರು ಈ ಬಾರಿ ಮೂರು ದಿನಗಳ ಸುದೀರ್ಘವಾದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮವಾದ ವನಂ ಆರ್ಟ್ಸ್ ಫೆಸ್ಟಿವಲ್ ಅನ್ನು ಆಯೋಜಿಸಿದ್ದರು. ಆ ಮೂಲಕ ಸಿನಿದಿಗ್ಗಜರನ್ನು ಅಲ್ಲಿ ನೆರಸಿ ಅವರಿಗೂ ಜಾತಿ ಸೂಕ್ಷ್ಮತೆಯನ್ನು ಅರ್ಥ ಮಾಡಿಸುವ ವಿಭಿನ್ನ ಪ್ರಯತ್ನ ನಡೆಸಿದ್ದಾರೆ.

ಬಹುಜನರ ದೃಷ್ಟಿಕೋನದಿಂದ ಹಲವು ಸಿನೆಮಾಗಳನ್ನು ಮಾಡುವ ಹಂಬಲವನ್ನು ಪ.ರಂಜಿತ್‌ ಇಟ್ಟುಕೊಂಡಿದ್ದಾರೆ. ತಮ್ಮ ನೀಲಂ ಬ್ಯಾನರ್‌ನಡಿ ಹಲವು ಕಲಾವಿದರನ್ನು ತಯಾರು ಮಾಡುತ್ತಿದ್ದಾರೆ. ಇಲ್ಲಿ ಹಾಡಿದ ಹಲವು ಗಾಯಕರು ಈಗ ಸಿನೆಮಾಗಳಿಗೂ ಹಾಡುವಂತೆ ತಯಾರಾಗಿದ್ದಾರೆ. ಹಲವು ಬಹುಜನ ಸಮುದಾಯಗಳ ಕಲಾವಿದರಿಗೆ ಈ ತಂಡ ವೇದಿಕೆಯಾಗಿದೆ. ಈ ದೇಶದ ನಾನಾ ಭಾಗಗಳಲ್ಲಿ ತನ್ನ ಕಲಾ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ.

ಸಿನೆಮಾರಂಗದಲ್ಲಿ ಯಶಸ್ವಿಯಾಗಿ ತಳ ಸಮುದಾಯಗಳ ಬಗ್ಗೆ ದನಿಯಾಗಿ ತನ್ನ ಅಸ್ತಿತ್ವ ಉಳಿಸಿಕೊಂಡ ಪಾ.ರಂಜಿತ್ ಕೆಲವು ಯಥಾಸ್ಥಿತಿವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಒಂದು ವಿವಾದವನ್ನು ಅವರ ತಲೆಗೆ ಕಟ್ಟಿ ಆತನನ್ನು ಜೈಲಿಗೆ ಕಳುಹಿಸುವ ಹುನ್ನಾರ ಸಹ ನಡೆದಿತ್ತು. ಕೆಲವು ತಿಂಗಳುಗಳ ಹಿಂದೆ ದಲಿತ ಹೋರಾಟಗಾರ ಉಮರ್ ಫರೂಕ್ ಸಂಸ್ಮರಣೆಯ ದಿನದಂದು ಅತಿಥಿಯಾಗಿದ್ದ ಪಾ.ರಂಜಿತ್, ರಾಜ ರಾಜ ಚೋಳರ ಕಾಲದಲ್ಲಿ ನಡೆದಿದ್ದ ದಲಿತ ಮಹಿಳೆಯರನ್ನು ದೇವದಾಸಿಯನ್ನರಾಗಿಸಿದ ವ್ಯವಸ್ಥೆಯ ಕುರಿತು ಮತ್ತು ದಲಿತರ ಭೂಮಿಗಳನ್ನು ದೌರ್ಜ್ಯನ್ಯದಿಂದ ಕಿತ್ತುಕೊಂಡದ್ದಂತಹ ವಿಚಾರಗಳ ಬಗ್ಗೆ ಮಾತನ್ನಾಡಿದ್ದರು. ಈ ಕುರಿತ ಅವರ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಆಗ ತಮಿಳುನಾಡಿ 300ಕ್ಕೂ ಹೆಚ್ಚು ಕಲಾವಿದರು ರಂಜಿತ್‌ ಪರ ನಿಂತಿದ್ದರು. ಅಂದರೆ ಪ.ರಂಜಿತ್ ಮಾತನಾಡುವ ದಲಿತ ಬಹುಜನರ ರಾಜಕಾರಣ ಸಾಕಷ್ಟು ಪಟ್ಟಭದ್ರರ ಕಣ್ಣಿಗೆ ಬಿದ್ದಿದೆ ಎಂಬುದಂತೂ ಸತ್ಯ.

ಒಬ್ಬರಿಂದ ಚಳುವಳಿ ಕಟ್ಟಲು ಸಾಧ್ಯವಿಲ್ಲ ಎಂದು ನಂಬಿರುವ ಪಾ ರಂಜಿತ್ ಅದಕ್ಕಾಗಿ ಸಾಂಸ್ಕೃತಿಕ ರಾಜಕಾರಣ ಬಹಳ ಮುಖ್ಯ ಎಂದು ನಂಬಿದ್ದಾರೆ. ಬಾಲ್ಯದಿಂದಲೂ ತನ್ನನ್ನು ಹಿಂಬಾಲಿಸುತ್ತಿರುವ ಜಾತಿ ವಿರುದ್ಧ ಶೋಷಿತರ ದನಿಯಾಗಿಯೇ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಮಿಂಚುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವ ಇವರು ಬುಡಕಟ್ಟು ಜನಾಂಗದ ಸ್ವಾತಂತ್ಯ ಹೋರಾಟಗಾರ ಬಿರ್ಸಾಮುಂಡಾರ ಬಗ್ಗೆ ಸಿನೆಮಾ ಮಾಡುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.

ರಂಜಿತ್ ಅವರ ಹಿತೈಷಿಗಳೂ ಸಹ ಅವರ ಮೇಲೆ ಮಾಡುವ ಆರೋಪವೆಂದರೆ ಅವನು ಅವಸರದ ಮನುಷ್ಯ. ಆದರೆ ಅದನ್ನು ರಂಜಿತ್‌ ಒಪ್ಪುವುದಿಲ್ಲ. “ನಾವು ವಾಸ್ತವವಾಗಿ, ತುಂಬಾ ನಿಧಾನವಾಗಿದ್ದೇವೆ. ದಲಿತರ ಭೂ ಹಕ್ಕುಗಳ ಕುರಿತು ಭಾಷಣ ಮಾಡಲು ನನಗೆ 36 ವರ್ಷಗಳು ಬೇಕಾಯಿತು. ಪ್ರಸ್ತುತ ನಾವಿರುವ ವೇಗಕ್ಕಿಂತಲೂ ಇನ್ನೂ ವೇಗವಾಗಿರಬೇಕು, ”ಎಂದು ಅವರು ಅಭಿಪ್ರಾಯಪಡುತ್ತಾರೆ.

ಪ. ರಂಜಿತ್‌ರವರ ಮೇಲಿನ ಎಲ್ಲಾ ಕೆಲಸಗಳನ್ನು ತಾವು ರಾಜಕೀಯಕ್ಕೆ ಬರುವುದಕ್ಕಾಗಿ ಮಾಡುತ್ತಿರುವ ಸಿದ್ಧತೆ ಎಂದು ಕೆಲವು ಆರೋಪಿಸಿದ್ದಾರೆ. ಆದರೆ ಆ ವಾದವನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಅದೇ ಸಮಯದಲ್ಲಿ ದಲಿತ ಮೀಸಲಾತಿ ಕ್ಷೇತ್ರಗಳಿಂದ ತಮಿಳುನಾಡಿನಲ್ಲಿ 45 ಶಾಸಕರಿದ್ದಾರೆ. ಆದರೆ ಅವರು ದಲಿತರ ನೈಜ ಧ್ವನಿಯಾಗಲು ಸಾಧ್ಯವಾಗಲಿಲ್ಲ ಏಕೆ? ಎಂದು ಪ್ರಶ್ನಿಸುತ್ತಾರೆ.

ಜೊತೆಗೆ “ಡಾ. ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಸುಧಾರಣೆಯಿಲ್ಲದೆ ನಾವು ಯಾವುದೇ ರಾಜಕೀಯ ಸುಧಾರಣೆಯನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಕಲೆಯ ಮೂಲಕ ಸಾಮಾಜಿಕ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ” ಎಂದು ಖಚಿತವಾಗಿ ಹೇಳುತ್ತಾರೆ ಪ.ರಂಜಿತ್.

ಈ ಡಿಸೆಂಬರ್‌ 08 ಪ ರಂಜಿತ್‌ರವರ 38ನೇ ಹುಟ್ಟು ಹಬ್ಬ. ಅವರ ಮುಂದಿನ ಸಿನೆಮಾಗಳಿಗೆ ಶುಭ ಹಾರೈಸೋಣ.


ಇದನ್ನೂ ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

1 COMMENT

 1. “ಪಾ ರಂಜಿತ್ ಸಾರ್ ಗೆ ಕ್ರಾ0ತಿಕಾರಿ ಜೈಬೀಮ್!!!
  ನನ್ನದೊ0ದು ಮನವಿ ,ವೀರಕೊರೆಗಾ0 ನ,
  ಯೂದ್ದದಲ್ಲಿ ಮಡಿದ ಬಹು ದೊಡ್ಡ ವೀರ
  ಮರಣವನ್ನ ಸೀನಮದಲ್ಲಿ ತಂದು ತೊರಿಸಿ
  ಈ ಯುವ ಸಮೂಹಕ್ಕೆ ದಿಕ್ ಸೂಜಿಯಾಗಿ
  ಸಾರ್!!! I m kranthigovind (ಪ್ರಪೆಸರ್)

LEAVE A REPLY

Please enter your comment!
Please enter your name here