ಕನ್ನಡ ಚಿತ್ರರಂಗದ ಗಣ್ಯ ವ್ಯಕ್ತಿಗಳಿಗೆ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದವರ ಬಂಧನವಾದ ನಂತರ ಡ್ರಗ್ಸ್ಜಾಲದ ಬಗ್ಗೆ ರಾಜ್ಯದಾದ್ಯಂತ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ಆರೋಪಿ ಕಾರ್ತಿಕ್ ರಾಜ್ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬ ಆರೋಪ ಎದ್ದಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ; ನಟಿಯರಿಂಲೇ ಹೆಚ್ಚು ಬೇಡಿಕೆ: ತನಿಖೆಯಿಂದ ಬಹಿರಂಗ
ಪ್ರಕರಣದ ವಿಚಾರಣೆಯನ್ನು ಸಿಸಿಬಿ ಪೊಲೀಸರು ಕೈಗೆತ್ತಿಕೊಂಡ ದಿನಗಳಿಂದ ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿದೆ. ಈ ನಡುವೆ ಇದೀಗ ವಿಚಾರಣೆಯ ನಡುವೆ ಆರೋಪಿ ಕಾರ್ತಿಕ್ ರಾಜ್ ಮತ್ತು ಮಾಜಿ ಸಚಿವ ಜನಾರ್ಧನ ರೆಡ್ಡಿ ಜೊತೆಗಿರುವ ಪೋಟೋವೊಂದು ಬಹಿರಂಗವಾಗಿ ಹಲವಾರು ಅನುಮಾನ ಮತ್ತು ಪ್ರಶ್ನೆಗಳಿಗೆ ವೇದಿಕೆ ಕಲ್ಪಿಸಿದೆ.

ಕಳೆದ ಗುರುವಾರ ಬೆಂಗಳೂರಿನ ಪೊಲೀಸರು ಅಕ್ರಮ ಡ್ರಗ್ಸ್ ಜಾಲವನ್ನು ಭೇದಿಸಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಡ್ರಗ್ಸ್ ಜಾಲದ ಜೊತೆಗೆ ಸ್ಯಾಂಡಲ್ವುಡ್ ನಂಟು ಇರುವುದು ತಿಳಿದುಬಂದಿತ್ತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಜಾಲದ ಬಗ್ಗೆ ತನಗೆ ಮಾಹಿತಿಯಿದೆ ಎಂದು ಹೇಳಿದ್ದರು.
ಇದರ ಬೆನ್ನಿಗೆ ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾಗುವ ರಾಹುಲ್ ಎಂಬಾತನನ್ನು ವಶಕ್ಕೆ ಪಡೆದಿತ್ತು. ಆದರೆ ಆತನ ವಿಚಾರಣೆ ವೇಳೆ ಬಾಯಿಬಿಟ್ಟ ಆ ಹೆಸರು ಮಾತ್ರ ಇದೀಗ ಸ್ವತಃ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದನ್ನೂ ಓದಿ: ಡ್ರಗ್ಸ್ ನಿಯಂತ್ರಣ: ಪೊಲೀಸ್ ಅಧಿಕಾರಿಗಳ ಜೊತೆ ಗೃಹಸಚಿವರ ಸಭೆ
ಮಾದ್ಯಮಗಳು ಅಕ್ರಮ ಡ್ರಗ್ಸ್ ಜಾಲದ ಸುದ್ದಿ ಮಾಡಲು ಶುರು ಮಾಡಿದ ದಿನದಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ತೊಡಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರ ಬಂಧನಕ್ಕೆ ಒಳಗಾಗಿರುವ ಆರೋಪಿ ಕಾರ್ತಿಕ್ ರಾಜ್ ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಆರೋಪಿಸಲಾಗುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕಾರ್ತಿಕ್ ರಾಜ್ ಪ್ರಸ್ತುತ ಸಿಸಿಬಿ ವಶದಲ್ಲಿದ್ದು, ಈ ಡ್ರಗ್ ಪೆಡ್ಲರ್ಗೂ ಬಿಜೆಪಿಗೂ ಪಕ್ಷಕ್ಕೂ ನಂಟು ಇದೆ ಎಂದು ಹೇಳಲಾಗುತ್ತಿದೆ.
ಆರೋಪಿ ಕಾರ್ತಿಕ್ ರಾಜ್ 2017 ರಲ್ಲಿ ಶಿವಾಜಿ ನಗರದಲ್ಲಿ ಬಿಜೆಪಿ ಯುವಮೋರ್ಚ ಕಾರ್ಯಕರ್ತನಾಗಿ ಸೇರ್ಪಡೆಯಾಗಿದ್ದರು. ಸ್ವತಃ ಜನಾರ್ಧನ ರೆಡ್ಡಿ ಪಕ್ಷದ ಲೆಟರ್ ಹೆಡ್ನಲ್ಲಿ ಆತನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬರೆಯಲಾಗಿದ್ದ ಪ್ರಮಾಣ ಪತ್ರವನ್ನು ನೀಡಿ ಪಕ್ಷಕ್ಕೆ ಬರಮಾಡಿ, ಪೋಟೋಗೂ ಫೋಸ್ ನೀಡಿದ್ದರು. ಈ ಫೋಟೋದಲ್ಲಿ ಕಾರ್ತಿಕ್ ರಾಜ್, ಗಾಲಿ ಜನಾರ್ಧನ ರೆಡ್ಢಿ ಜೊತೆಗೆ ನಟ ಸಾಯಿಕುಮಾರ್ ಇದ್ದರು.

ಅಷ್ಟೇ ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈತ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ತೆಲಂಗಾಣದ ಬಿಜೆಪಿ ಶಾಸಕನನ್ನು ನಿಷೇಧಿಸಿದ ಫೇಸ್ಬುಕ್
ಅಸಲಿಗೆ 2018 ನವೆಂಬರ್ 3 ರಂದು ಸಿಸಿಬಿ ಪೊಲೀಸರು 1.5 ಕೆಜಿ ಕೊಕೇನ್ ಅನ್ನು ವಶಪಡಿಸಿದ್ದರು. ಅಂದಿನ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ನೇತೃತ್ವದಲ್ಲಿ ಮೂವರ ಬಂಧನ ಆಗಿತ್ತು. ಈ ವೇಳೆ ಪ್ರತೀಕ್ ಶೆಟ್ಟಿ ಎಂಬಾತನನ್ನು ಬಂಧನ ಮಾಡಲಾಗಿತ್ತು. ಕಾರ್ತಿಕ್ ರಾಜ್ ಈ ಪ್ರತೀಕ್ ಶೆಟ್ಟಿಯ ಸ್ನೇಹಿತ ಎನ್ನಲಾಗಿದೆ.
ಕಾರ್ತಿಕ್ ರಾಜ್ ಹೆಸರು ಅಂದು ಡ್ರಗ್ಸ್ ಮಾಫಿಯಾ ಜೊತೆ ತಳುಕು ಹಾಕಿಕೊಂಡಿದ್ದರೂ ಸೂಕ್ತವಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಆತನನ್ನು ಬಿಟ್ಟುಕಳಿಸಲಾಗಿತ್ತು. ಆದರೆ, ಪೊಲೀಸರು ಇಂದು ಈಗ ಹಳೆ ಪ್ರಕರಣದ ಕೇಸ್ ಪೈಲ್ ಅನ್ನು ಮತ್ತೆ ಹೊರತೆಗೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಸಬ್ಸಿಡಿಗೆ ಕೇಂದ್ರ ಸರ್ಕಾರದಿಂದ ಕತ್ತರಿ


