ನಟಿ ಕಂಗನಾ ರಣಾವತ್ ಅವರ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ನಿಲುವಿನ ಬಗ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹಿಮಾಚಲ ಪ್ರದೇಶದ ವಿವಿಧ ವ್ಯಕ್ತಿಗಳಿಂದ ದೇಶ್ಮುಖ್ ಈ ಕರೆಗಳನ್ನು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ಮುಂಬೈಯನ್ನು ಪಿಒಕೆಗೆ ಹೋಲಿಕೆ ವಿಚಾರ: ಟ್ವಿಟ್ಟರ್‌ನಲ್ಲಿ ಕಂಗನಾ ವಿರುದ್ಧ ಆಕ್ರೋಶ
ಈ ಹಿಂದೆಯು ಅವರಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ತನ್ನ ನಾಗ್ಪುರ ಕಚೇರಿಗೆ ಫೋನ್ ಮಾಡಿ ತನಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ಗೂ ಬೆದರಿಕೆ ಹಾಕಿದ್ದಾನೆ ಎಂದು ಸಚಿವರು ಸೋಮವಾರ ತಿಳಿಸಿದ್ದರು.
ಕಂಗನಾಗೆ ‘ವೈ-ಪ್ಲಸ್’ ಭದ್ರತೆ ನೀಡುವ ಕೇಂದ್ರದ ನಿರ್ಧಾರದ ಬಗ್ಗೆ ದೇಶ್ಮುಖ್ ಸೋಮವಾರ ಆಶ್ಚರ್ಯ ವ್ಯಕ್ತಪಡಿಸಿದ್ದು, ಅವರು ತಮ್ಮ ಹೇಳಿಕೆಗಳಿಂದ ಮುಂಬೈ ಮತ್ತು ಮಹಾರಾಷ್ಟ್ರವನ್ನು “ಅವಮಾನಿಸಿದ್ದಾರೆ” ಎಂದು ಹೇಳಿದ್ದರು.
ಕಂಗನಾ ರಾಣಾವತ್ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದ ಎಬ್ಬಿಸಿದ್ದರು.
ಅಷ್ಟೇ ಅಲ್ಲದೆ ಕಳೆದ ಶನಿವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ನಿವಾಸ ‘ಮಾತೋಶ್ರೀ’ ಗೆ ಕರೆಗಳು ಬಂದಿದ್ದು, ಕರೆ ಮಾಡಿದವರು ನಿವಾಸವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕರೆ ಮಾಡಿದವರು ಮುಂಬೈನ ಭೂಗತ ಡಾನ್ ದಾವೂದ್ ಇಬ್ರಾಹಿಂ ಸಹಾಯಕ ಎಂದು ಪರಿಚಯಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಂಗನಾಗೆ ನಮ್ಮ ರಾಜ್ಯದಲ್ಲಿ ವಾಸಿಸುವ ಹಕ್ಕಿಲ್ಲ: ಮಹಾರಾಷ್ಟ್ರ ಗೃಹ ಸಚಿವ
ಈ ನಡುವೆ, ಸಿನೆಮಾ ಮಾಫಿಯಾಕ್ಕಿಂತ ತನಗೆ ಮುಂಬೈ ಪೊಲೀಸರ ಬಗ್ಗೆ ಭಯವಿದೆ. ತಾನು ಹಿಮಾಚಲ ಪ್ರದೇಶ ಅಥವಾ ಕೇಂದ್ರದಿಂದ ಭದ್ರತೆ ಬಯಸುತ್ತೇನೆ ಎಂದು ಕಂಗನಾ ಹೇಳಿದ್ದು, ಇದಕ್ಕೆ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆಕ್ಷೇಪ ವ್ಯಕ್ತಪಡಿಸಿ ಕಂಗನಾ ಹೇಳಿಕೆ ಪೊಲೀಸ್ ಇಲಾಖೆಯ ‘ಅವಮಾನ’ಕ್ಕೆ ಸಮನಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರದಲ್ಲಿದ್ದುದರಿಂದ ಮುಂಬೈ ಪೊಲೀಸರ ಸಾಮರ್ಥ್ಯದ ಕುರಿತು ತಮಗೆ ಅರಿವಿದೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಬಹುದು, ಅವರು ಸುಶಾಂತ್ ಸಿಂಗ್ ರಾಜಪುತ್ ಪ್ರಕರಣವನ್ನು ತಪ್ಪಾಗಿ ನಿಭಾಯಿಸಿದ್ದರಿಂದ ಅದರ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದರು.


