Homeಮುಖಪುಟಹಳತು ವಿವೇಕ: ನಾಗರಿಕ/ ಸೈನಿಕ ಸ್ವಾತಂತ್ರ್ಯದ ಮತ್ತು ಯಾಂತ್ರಿಕತೆಯ ನಡುವಿನ ಮನೋವ್ಯಾಪಾರದ ಪ್ರಶ್ನೆಗಳು - ಗಿರೀಶ...

ಹಳತು ವಿವೇಕ: ನಾಗರಿಕ/ ಸೈನಿಕ ಸ್ವಾತಂತ್ರ್ಯದ ಮತ್ತು ಯಾಂತ್ರಿಕತೆಯ ನಡುವಿನ ಮನೋವ್ಯಾಪಾರದ ಪ್ರಶ್ನೆಗಳು – ಗಿರೀಶ ಕಾರ್ನಾಡ್

3 ಜನವರಿ 1997ರಂದು ಅಹಮದನಗರದಲ್ಲಿ ಜರುಗಿದ ಎಪ್ಪತ್ತನೆಯ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಗಿರೀಶ್ ಕಾರ್ನಾಡ್ ರವರು ಮಾಡಿದ ಭಾಷಣ

- Advertisement -
- Advertisement -

ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿಕ್ಕೆ ನನ್ನನ್ನು ಆಮಂತ್ರಿಸಿ ನೀವು ನನಗೆಂಥ ಅಪರೂಪದ ಸನ್ಮಾನ ಮಾಡಿದ್ದೀರಿ ಎಂಬುದರ ಅರಿವು ನನಗಿದೆ. ಇಂದು ಕನ್ನಡ ಸಾಹಿತ್ಯದಲ್ಲಿ ಎಷ್ಟೊಂದು ಅತ್ಯುತ್ತಮ ಲೇಖಕರಿರುವಾಗ ಆ ಸಾಹಿತ್ಯದ ಪ್ರತಿನಿಧಿಯಾಗಿ ನೀವು ನನ್ನನ್ನು ಆಯ್ಕೆ ಮಾಡಿರುವುದು ಒಂದು ವಿಶೇಷ ಗೌರವವೇ ಸರಿ.

ಒಂದು ಮಾತನ್ನು ನಾನು ಪ್ರಾರಂಭದಲ್ಲೇ ಒಪ್ಪಿಕೊಳ್ಳಬೇಕು. ಮರಾಠಿ ಸಾಹಿತಿಗಳ ಈ ಮಹಾನ್ ಸಭೆಯೆದುರು ನಿಂತಾಗ ನನ್ನಲ್ಲಿ ’ನಾನು ಹೊರಗಿನವ’ ಎಂಬ ಭಾವನೆ ಕಿಂಚಿತ್ತೂ ಇಲ್ಲ. ನಾನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ನನ್ನ ಪ್ರಾರಂಭಿಕ ಶಿಕ್ಷಣ ಮರಾಠಿಯಲ್ಲೇ ಆಯಿತು. ಮತ್ತು ನನ್ನ ಇಡೀ ಕುಟುಂಬಕ್ಕೆ ಮರಾಠಿ ಸಾಹಿತ್ಯದ ಬಗ್ಗೆ ಒಲುಮೆಯಿದ್ದುದರಿಂದ ನಾನು ’ಆನಂದ’, ’ಶಾಲಾಪತ್ರಕ’, ’ಹರಿ ನಾರಾಯಣ ಅಪಟೇ’, ’ಫಡಕೇ’, ’ಖಾಂಡೇಕರ್’ ಹಾಗೂ ’ಸ್ವರಾಜ್ಯ’ ಇನ್ನು ’ಸ್ತ್ರೀ’, ’ಕಿರ್ಲೋಸ್ಕರ್’ ಮತ್ತು ’ಸಕಾಳ’ಗಳನ್ನು ಬೇರೆಯಾಗಿ ಹೆಸರಿಸಲೇಬೇಕಾಗಿಲ್ಲ. ಇವುಗಳನ್ನೋದುತ್ತಲೇ ಬೆಳೆದೆ ಬಲಿತೆ.

ಸುದೈವದಿಂದ ಸಮಕಾಲೀನ ಮರಾಠಿ ರಂಗಭೂಮಿಯ ಮೇಲೆ ದುಡಿಯುತ್ತಿರುವ ಹಲವಾರು ಪ್ರತಿಭಾವಂತರ ಸಮೀಪದ ಸಂಪರ್ಕ ನನಗೆ ದೊರೆತಿದೆ. ಅಷ್ಟೇ ಅಲ್ಲ, ನನ್ನ ತಂದೆ-ತಾಯಂದಿರ ಕಾರಣದಿಂದಾಗಿ ಮರಾಠಿ ನಾಟ್ಯಪರಂಪರೆಯನ್ನು ನಾನು ನನ್ನ ವೈಯಕ್ತಿಕ ವಾರಸು ಎಂದೇ ಎಣಿಸಿದ್ದೇನೆ. ನನ್ನ ತಂದೆ ’ಶಾರದಾ’, ’ಸಂಶಯ ಕಲ್ಲೋಳ’ ನಾಟಕಗಳ ಮೂಲಪ್ರಯೋಗಗಳನ್ನು ನೋಡಿದ್ದರು. ಅವುಗಳ ಬಗ್ಗೆ ಅತಿ ಆಸ್ಥೆಯಿಂದ ಮಾತನಾಡುತ್ತಿದ್ದರು. ನನ್ನ ತಾಯಿ ಹದಿವಯಸ್ಸಿನಲ್ಲಿ ಹಿರಿಯರ ಕಣ್ಣುತಪ್ಪಿಸಿ ತಾನು ಬಾಲಗಂಧರ್ವರ ಅನುಕರಣೆ ಮಾಡುತ್ತಾ ಬೆರಳ ತುದಿಗೆ ಸೆರಗನ್ನು ಸುತ್ತುತ್ತ ಹೇಗೆ ಹಾಡುಹಾಡುತ್ತಿದೆ ಎಂಬುದನ್ನು ಅಭಿನಯಿಸಿ ತೋರಿಸುತ್ತಿದ್ದಳು. ನಾನು ಕನ್ನಡ ನಾಟಕ ಮಂಡಳಿಗಳನ್ನು ನೋಡಿದ್ದು ಎರಡನೆಯ ಮಹಾಯುದ್ಧದ ಕೊನೆಗಾಲದಲ್ಲಿ. ಆಗ ಅವು ಸಾಕಷ್ಟು ಇಳಿಮುಖವಾಗಿದ್ದವು. ಆದರೂ ಅವುಗಳ ಮೇಲೆ ಮರಾಠಿ ಮಾದರಿಯ ಪಡಿಯಚ್ಚು ಸ್ಪಷ್ಟವಾಗಿ ಕಾಣುತ್ತಿತ್ತು. ಅವರಿಂದ ನಾನು ಪ್ರಭಾವಿತನಾದೆ. ಪ್ರೇರಣೆ ಪಡೆದೆ.
ಕನ್ನಡ- ಮರಾಠಿ! ಇಂಥ ಎರಡು ಶ್ರೀಮಂತ ಸಂಸ್ಕೃತಿಗಳ ಸಂಗಮದಲ್ಲಿ ಬೆಳೆಯುವುದು, ಬರೆಯುವುದು ಎಂಥ ಅಪೂರ್ವ ಸೌಭಾಗ್ಯ ಎಂಬುದಕ್ಕೆ ವರಕವಿ ದ.ರಾ. ಬೇಂದ್ರೆ ಹಾಗೂ ವಿದ್ವಾಂಸರಾದ ಶಂ.ಬಾ. ಜೋಶಿ ಅವರ ಉದಾಹರಣೆಯೇ ಸಾಕು. ಅವರಿಬ್ಬರ ಮಾತೃಭಾಷೆಯೂ ಮರಾಠಿ. ಧಾರವಾಡದಲ್ಲಿ ನೆರೆಹೊರೆಯಲ್ಲೇ ಬಾಳಿದರು. ನಿಜವಾದ ನೆರೆಹೊರೆಯವರಂತೆ ಜಗಳ ಕೂಡ ಆಡಿದರು. ಆದರೆ ಅವರ ಬಡಿದಾಟ ಮಾತ್ರ ಕನ್ನಡದಲ್ಲಾಗುತ್ತಿತ್ತು.

ಭಕ್ತಿ ಸಂಪ್ರದಾಯ ತಮಿಳುನಾಡಿನಲ್ಲಿ ಉಗಮವಾಗಿ ಕರ್ನಾಟಕಕ್ಕೆ ಬಂದು ಇಲ್ಲಿ ವಚನಸಾಹಿತ್ಯಕ್ಕೆ ಜನ್ಮವಿತ್ತು ಮಹಾರಾಷ್ಟ್ರದತ್ತ ಹರಿಯಿತು. ಇಲ್ಲಿ ಈ ಪುಣ್ಯಭೂಮಿಯಲ್ಲಿ ಜ್ಞಾನೇಶ್ವರ-ನಾಮದೇವಾದಿ ಸಂತರ ವಾಙ್ಮಯವನ್ನು ಸಾಕಾರಗೊಳಿಸಿ ಮತ್ತು ಕರ್ನಾಟಕಕ್ಕೆ ಹೊರಳಿ ವೈಷ್ಣವ ದಾಸಸಾಹಿತ್ಯಕ್ಕೆ ಸ್ಫೂರ್ತಿಯಿತ್ತು ಉತ್ತರಭಾರತದತ್ತ ಸಾಗಿತೆಂದು ಇತಿಹಾಸಕಾರರು ಹೇಳುತ್ತಾರೆ. ಧರ್ಮ, ಕಲೆ, ಸಾಹಿತ್ಯ, ನಾಟ್ಯ, ದರ್ಶನ ಈ ಎಲ್ಲ ಕ್ಷೇತ್ರಗಳಲ್ಲಿ ಈ ಎರಡೂ ಸಂಸ್ಕೃತಿಗಳ ನಡುವೆ ನಡೆದ ವಿನಿಮಯ ಬೇರ್ಪಡಿಸಿ ನೋಡಲಾಗದಷ್ಟು ಹಾಸುಹೊಕ್ಕಾಗಿದೆ.

ವ್ಯತ್ಯಾಸಗಳನ್ನೇ ನೋಡುವುದಾದರೆ ಕನ್ನಡ ಸಾಹಿತ್ಯದ ಮಹತ್ವದ ಅಂಶವೆಂದರೆ ಮಹಾಕಾವ್ಯಗಳ ಪರಂಪರೆ. ಹತ್ತನೆಯ ಶತಮಾನದಲ್ಲಿ ಆರಂಭವಾಗುವ ಮಹಾಕಾವ್ಯಗಳ ರಚನೆ ಕನ್ನಡದಲ್ಲಿ ಇಂದಿನತನಕ ಆವ್ಯಾಹತವಾಗಿ ನಡೆದುಬಂದಿದೆ. ಕನ್ನಡ ಸಂವೇದನೆಗೊಂದು ವಿಶಿಷ್ಟ ಶಕ್ತಿಯನ್ನಿತ್ತಿದೆ.

ಇದಕ್ಕೆ ಪ್ರತಿಯಾಗಿ ಆಧುನಿಕ ಕನ್ನಡಿಗ ಮರಾಠಿಯತ್ತ ಕೌತುಕದಿಂದ, ಆದರಪೂರ್ವಕವಾಗಿ ನೋಡುವಂತಹ ಎರಡು ಕ್ಷೇತ್ರಗಳಿವೆ. ಮೊದಲಿನದು ದಾಸಸಾಹಿತ್ಯ. ನಾವು ಕನ್ನಡಿಗರು ನಗುತ್ತೇವೆ ಆದರೆ ಬರವಣಿಗೆಯಲ್ಲಿ ನಗುವುದು ವಿರಳ. ಹೀಗಾಗಿ ಗಡಕರಿ, ಅತ್ರೇ, ಕೋಲ್ಹಟಕರ, ಚಿ.ವಿ. ಜೋಶಿಯಿಂದ ಹಿಡಿದು ಪು.ಲ ದೇಶಪಾಂಡೆಯವರೆಗಿನ ಶ್ರೇಷ್ಠ ನಗೆಬರಹಗಾರರು ನಿಮಗಿತ್ತ ಕೊಡುಗೆಯನ್ನು ಕಂಡು ನಮಗೆ ಅಸೂಯೆಯಾಗುತ್ತದೆ. ಪು.ಲ ಅಂತೂ ರಂಗಭೂಮಿ ಹಾಗೂ ವಿನೋದ ಈ ಎರಡೂ ಕ್ಷೇತ್ರಗಳನ್ನು ಆಳಿದರು. ತನ್ನ ಮಹತ್ತರ ಸಾಧನೆಗೆ ವಿಶಾಲ ಹೃದಯ, ನಿರ್ವ್ಯಾಜ ಮಾನವೀಯತೆಯ ಪುಟವನ್ನಿತ್ತರು. ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ.

ಎರಡನೆಯ ಕ್ಷೇತ್ರ ನಿಷ್ಠಾವಂತ ಸಾಮಾಜಿಕ – ರಾಜಕೀಯ ದಾರ್ಶನಿಕ ಪರಂಪರೆ. ಆಗರ್‌ಕರ್, ಫುಲೇ, ಗೋಖಲೇ, ಟಿಳಕ, ಅಂಬೇಡ್ಕರ್, ಕರ್ವೇ- ಈ ಬುದ್ಧಿವಾದಿಗಳು, ಕಾರ್ಯಕರ್ತರು ಮರಾಠಿಯಲ್ಲಿ ಚರ್ಚೆ, ವಾದ-ವಿವಾದ, ಚಿಂತನ-ಪರೀಕ್ಷಣೆಗಳ ನಿರ್ಭಯ ಪರಂಪರೆಯನ್ನು ಸೃಷ್ಟಿಸಿದರು. ಧುಳೇ ಊರಿನಲ್ಲಿ ನನ್ನ ಮಿತ್ರರಾದ ಶ್ರೀ ಶರದ ಪಾಟೀಲ ಇರುತ್ತಾರೆ. ಫುಲೇ-ಅಂಬೇಡ್ಕರ್-ಮಾರ್ಕ್ಸ್‌ವಾದಿ ಪಕ್ಷವನ್ನು ಹುಟ್ಟು ಹಾಕಿದವರು. ಅವರಿಂದ ನನಗೆ ಬರುವ ನಿರ್ಭಿಡೆಯ, ಒರಟು ಆದರೆ ಅಷ್ಟೇ ವಿಚಾರಪ್ರಚೋದಕ ಪತ್ರಗಳನ್ನೋದಿದಾಗ ಈ ಪರಂಪರೆ ಮರಾಠಿಯಲ್ಲಿ ಇಂದಿಗೂ ಜೀವಂತವಾಗಿದೆ, ಚೈತನ್ಯಶಾಲಿಯಾಗಿದೆ ಎಂಬ ಭರವಸೆ ಹುಟ್ಟುತ್ತದೆ. ಕೇವಲ ಮರಾಠಿಯ ಮಾತನ್ನಾಡದೆ ಮಹಾರಾಷ್ಟ್ರದ ಬಗ್ಗೆ ಮಾತನಾಡುವದಾದರೆ ಈ ನಾಡಿನಲ್ಲಿ ಹುಟ್ಟಿ ಬೆಳೆದ ಅನೇಕ ಪಾರಸೀ, ಗುಜರಾತೀ, ಮುಸಲ್ಮಾನ ಹಾಗೂ ಇತರ ವಿಚಾರವಂತರ ಹೆಸರನ್ನು ತೆಗೆದುಕೊಳ್ಳಬೇಕಾದೀತು ಎಂಬುದನ್ನು ನಾನು ಬಲ್ಲೆ.

ಆಧುನಿಕ ಕರ್ನಾಟಕದಲ್ಲಿ ಇಂಥ ಬುದ್ಧಿವಾದಿ ಪರಂಪರೆಯೇ ಇಲ್ಲ. ಕಳೆದ ಎರಡು-ಮೂರು ಶತಮಾನಗಳಲ್ಲಿ ಮೇಲೆ ಹೆಸರಿಸಿದ ಮರಾಠಿ ವಿಚಾರವಂತರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಒಬ್ಬ ವಿಚಾರವಂತನಾದರೂ ಕನ್ನಡದಲ್ಲಿ ಹುಟ್ಟಿಲ್ಲ. ಇಷ್ಟು ನಿಕಟ ಸಂಪರ್ಕವಿದ್ದ ಎರಡು ಸಂಸ್ಕೃತಿಗಳಲ್ಲಿ ಇಷ್ಟೊಂದು ವೈಪರೀತ್ಯವಿರಬೇಕು ಎಂಬುದು ಆಶ್ಚರ್ಯದ ಸಂಗತಿ. ಅದನ್ನು ನಾವು ಆಳವಾಗಿ ವಿಶ್ಲೇಷಣೆ ಮಾಡಿ ನೋಡಬೇಕು.

ಈ ಭೇದಕ್ಕೆ ಒಂದು ಮಹತ್ವದ ಕಾರಣವೆಂದರೆ ವಿಜಯನಗರ ಪತನವಾದ ನಂತರ ಕನ್ನಡನಾಡು ತುಂಡುತುಂಡಾಯಿತು. ಆಮೇಲಿನ ನಾಲ್ಕು ನೂರು ವರ್ಷಗಳಲ್ಲಿ ರಾಷ್ಟ್ರೀಯ ಮಹತ್ವದ ಒಬ್ಬನೇ ಒಬ್ಬ ರಾಜಕೀಯ ವಿಚಾರವಂತ ನಮ್ಮ ಕಣ್ಣಿಗೆ ಬೀಳುತ್ತಾನೆ. ಅವನೆಂದರೆ ಟೀಪು ಸುಲ್ತಾನ್. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರ ವ್ಯಾಪಾರಿ ದೇಶಾವರಿ ನಗೆಯ ಹಿಂದೆ ಎಂಥ ಸಾಮ್ರಾಜ್ಯವಾದಿ ಮಹತ್ವಾಕಾಂಕ್ಷೆ ಅಡಗಿದೆ ಎಂಬುದನ್ನು ಖಚಿತವಾಗಿ ಕಂಡುಕೊಂಡ ಏಕಮೇವ ರಾಜಕಾರಣಿ ಟೀಪು. ಆತ ಪಶ್ಚಿಮದಿಂದ ಆಗತಾನೇ ಭಾರತಕ್ಕೆ ಬಂದ ಹೊಸ ಅರ್ಥಶಾಸ್ತ್ರವನ್ನು ಅಭ್ಯಾಸ ಮಾಡಿ, ಮೈಸೂರನ್ನು ಈ ಹೊಸ ಆರ್ಥಿಕ ತಳಹದಿಯ ಮೇಲೆ ಪುನರ್ರಚಿಸುವ ಯತ್ನ ಕೂಡ ಮಾಡಿದ. ಅದಕ್ಕಾಗಿ ಭಾರಿ ಬೆಲೆ ತೆತ್ತ. ಶಿವಾಜಿ ಮಹಾರಾಷ್ಟ್ರವನ್ನು ಒಂದುಗೂಡಿಸಿದಂತೆ ಕರ್ನಾಟಕವನ್ನು ಒಂದುಗೂಡಿಸಿ ಅದಕ್ಕೊಂದು ಸ್ವಂತಿಕೆ ಕೊಡುವುದರಲ್ಲಿ ಕೊನೆಗೂ ಅಸಫಲನಾದ.

ಇಂಗ್ಲಿಷರ ಆಡಳಿತದಲ್ಲಿ ಕನ್ನಡನಾಡು ನಾಲ್ಕು ಹೋಳಾಯಿತು. ಒಂದೊಂದು ಹೋಳು ಒಂದೊಂದು ದಿಕ್ಕಿನಲ್ಲಿ ಸಾಗಿತು. ಅವುಗಳ ನಡುವೆ ಯಾವ ಮಾತುಕತೆಯೂ ಇರಲಿಲ್ಲ. ಮೈಸೂರ ಒಡೆಯರು ಶಿಕ್ಷಣ- ಕಲೆಗಳಿಗೆ ಉತ್ತೇಜನೆಯನ್ನಿತ್ತರೂ ಬ್ರಿಟಿಷ್ ಸರಕಾರದ ಮರ್ಜಿ ಕಾಯುವ ಅಗತ್ಯದಿಂದಾಗಿ ಮೂಲಭೂತ ರಾಜಕೀಯ ಚರ್ಚೆಗೆ ಎಡೆಗೊಡಲಿಲ್ಲ. 1956ರಲ್ಲಿ ನಾಲ್ಕೂ ಭಾಗಗಳ ಏಕೀಕರಣವಾಗಿ ಇಂದಿನ ಕರ್ನಾಟಕ ಮುಟ್ಟಿದಾಗಲೇ ಈ ನಾಡಿನಲ್ಲಿ ಒಂದು ಹೊಸ ಚೈತನ್ಯ ಹರಿಯಲಾರಂಭಿಸಿತು. ಆದರೂ ಹೊಸದಾಗಿ ಮೂಡಿಬಂದ ಸರಹದ್ದಿನ ಕಾರಣದಿಂದಾಗಿ ಮರಾಠಿ- ಕನ್ನಡಗಳ ನಡುವಿನ ಅನ್ಯೋನ್ಯ ಸಂಬಂಧ ಶಿಥಿಲವಾಯಿತೆಂಬುದನ್ನು ಒಪ್ಪಿಕೊಳ್ಳಲೇಬೇಕು.

ನಾನು ಈ ಬಗ್ಗೆ ಇಷ್ಟೊಂದು ವಿವರವಾಗಿ ಮಾತನಾಡಲಿಕ್ಕೆ ಕಾರಣವಿದೆ: ಕವಿಗಳು, ಬರಹಗಾರರು ಒಬ್ಬಂಟಿಯಾಗಿ ಬರೆಯಬಲ್ಲರು. ಆದರೆ ವಿಚಾರಪರಂಪರೆ ಏಕಾಂತದಲ್ಲಿ ಬೆಳೆಯಲಾರದು. ಬೌದ್ಧಿಕ ಸಮೃದ್ಧಿಗೆ ಅದಕ್ಕೆ ಪೋಷಕವಾದ ವಾತಾವರಣ ಬೇಕಾಗುತ್ತದೆ. ವಾದ ಬೇಕು. ಜಗಳ ಬೇಕು. ಪ್ರೇಮಪ್ರಕರಣ ಕೂಡ ಬೇಕು. ಸುಪ್ರಸಿದ್ಧ ರಶಿಯನ್ ದಾರ್ಶನಿಕ ಎಂ.ಎಂ. ಬಾಖ್ತಿನ್ ಎಂದಂತೆ ಜೀವಂತ ಸಂಸ್ಕೃತಿಯ ಅಸಲು ಸ್ವರೂಪವೇ ಸಂವಾದಾತ್ಮಕವಾಗಿರುತ್ತದೆ.

ಸಾಂಪ್ರದಾಯಿಕ ಭಾರತೀಯ ದರ್ಶನದಲ್ಲಿ ವಾದಕ್ಕಿಳಿದ ವ್ಯಕ್ತಿ ಮೊದಲು ’ಪೂರ್ವಪಕ್ಷ ಮಂಡಿಸಬೇಕಾಗುತ್ತಿತ್ತು. ತನಗೆ ವಿರುದ್ಧ ಪಕ್ಷದ ಯುಕ್ತಿವಾದ ಅರ್ಥವಾಗಿದೆ ಹಾಗೂ ತಾನು ಅದನ್ನು ಖಂಡಿಸಬಲ್ಲೆ ಎಂಬುದನ್ನು ಸಿದ್ಧಮಾಡಿ ತೋರಿಸಿದ ನಂತರವೇ ವಾದಿ ತನ್ನ ಸ್ವಂತದ ಭೂಮಿಕೆಯನ್ನು ಮಂಡಿಸುತ್ತಿದ್ದ.

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ವಚನಕ್ರಾಂತಿ ಕೂಡ ’ಅನುಭವ ಮಂಟಪ’ದ ಕಠೋರ ಚರ್ಚೆಗಳಲ್ಲಿ ರೂಪುಗೊಂಡಿತು. ಆ ಚರ್ಚೆಯಿಂದಲೇ ಸಂಸ್ಕೃತದಿಂದ ಬೇರೆಯಾದ ಕನ್ನಡದ್ದೇ ಆದ ಸ್ವತಂತ್ರ ದರ್ಶನ ಹಾಗೂ ಸಾಹಿತ್ಯಗಳು ಹುಟ್ಟಿಬಂದವು. ಹೀಗೆ ತನ್ನ ಸಮಕಾಲೀನ ಬೌದ್ಧಿಕ ವಾತಾವರಣದಲ್ಲಿ ಬೇರು ಬಿಟ್ಟು ಸಾಹಿತ್ಯ ಮಾತ್ರ ಮುಂಬರುವ ಪೀಳಿಗೆಗಳಿಗೂ ಅರ್ಥಪೂರ್ಣವಾಗಬಲ್ಲದು.

ವಿವೇಚನೆಯ ಹಲವಾರು ಶಬ್ದಗಳಂತೆ Intellectual – ’ಬುದ್ಧಿವಾದಿ’ ಎಂಬ ಶಬ್ದ ಕೂಡ ನಮ್ಮಲ್ಲಿ ಪಶ್ಚಿಮದಿಂದಲೇ ಬಂದದ್ದು. ಆದ್ದರಿಂದ ಆ ಶಬ್ದದ ಇತಿಹಾಸವನ್ನು ಪರೀಕ್ಷಿಸಿ ನೋಡುವುದು ಪ್ರಯೋಜನಕಾರಿಯಾದೀತು.

ಹತ್ತೊಂಭತ್ತನೆಯ ಶತಮಾನದ ಕೊನೆಯ ಹಂತದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕುಖ್ಯಾತ ದ್ರೇಫಸ್ ಖಟ್ಲೆಯಲ್ಲಿ ಈ ಶಬ್ದ ಜನಿಸಿತು. ಅಲ್ಫ್ರೆದ್ ದ್ರೇಫಸ್ ಫ್ರೆಂಚ್ ಸೈನ್ಯದಲ್ಲಿ ಒಬ್ಬ ಕಪ್ತಾನನಾಗಿದ್ದ. ಅವನು ಧರ್ಮದಿಂದ ಯಹೂದಿ (ಜ್ಯೂ) ಆಗಿದ್ದ.

ಅನೇಕ ಶತಮಾನಗಳಿಂದ ಯುರೋಪಿನಲ್ಲಿ ಯಹೂದಿ ಸಮಾಜ ಒಂದು ಬೇರೆಯಾದ ವಿಶಿಷ್ಟ ಸ್ವರೂಪದ ಅಲ್ಪಸಂಖ್ಯಾತ ಸಮುದಾಯವಾಗಿತ್ತು. ಅವರು ಬಹುಸಂಖ್ಯಾತರ ಕ್ರೈಸ್ತಧರ್ಮವನ್ನು ಸ್ವೀಕರಿಸಿರಲಿಲ್ಲ. ಬದಲಾಗಿ ತಮ್ಮದೇ ಆದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಪ್ರದಾಯಗಳನ್ನು ಅನುಸರಿಸುತ್ತ ಅಭಿಮಾನದಿಂದ ಬಾಳುತ್ತಿದ್ದರು. ಪರಿಣಾಮವಾಗಿ ಅವರ ಮೇಲೆ ನಾನಾ ತರಹದ ಅತ್ಯಾಚಾರಗಳಾಗುತ್ತಿದ್ದವು. ವಾಸಕ್ಕಾಗಿ ಅವರನ್ನು ’ಘೆಟ್ಟೋ’ಗಳಲ್ಲಿ ತುರುಕಲಾಗುತ್ತಿತ್ತು. ಹಲವಾರು ಶತಮಾನಗಳವರೆಗೆ ಶಿಕ್ಷಣ ವ್ಯವಸ್ಥೆಯಿಂದ ಮಾತ್ರವಲ್ಲ ಸಾರ್ವಜನಿಕ ಜೀವನದಿಲೇ ಅವರನ್ನು ಹೊರಗಿಡಲಾಗಿತ್ತು. ಅವರನ್ನು ಅಣಕಿಸುವುದು, ಸಾರ್ವಜನಿಕವಾಗಿ ಹೀಗಳೆಯುವುದು, ಬೈಯ್ಯುವುದು, ಅವಮಾನ ಮಾಡುವುದು, ಸಂಯೋಜಿತ ದೊಂಬಿಗಳನ್ನೆಬ್ಬಿಸಿ ಅವರ ಕೊಲೆ-ಸುಲಿಗೆ ಮಾಡುವುದು ಇದೆಲ್ಲ ನಿರಂತರವಾಗಿ ನಡೆಯುತ್ತಿತ್ತು. ಯಹೂದಿ ದ್ವೇಷ ಸರ್ವೇಸಾಮಾನ್ಯವಾಗಿತ್ತು. ಅಷ್ಟೇ ಅಲ್ಲ ಸರ್ವಮಾನ್ಯವೂ ಆಗಿತ್ತು.
ಆದ್ದರಿಂದ ಫ್ರೆಂಚ್ ಸೈನ್ಯದಲ್ಲಿ ನಡೆದ ಒಂದು ಅಕೃತ್ಯವನ್ನು ಕುರಿತು ಗುಲ್ಲೆದ್ದಾಗ, ಅದನ್ನು ಹೇಗಾದರೂ ಮಾಡಿ ಮುಚ್ಚಿಬಿಡಬೇಕಾದ ಪ್ರಸಂಗ ಒದಗಿದಾಗ ಅದರ ಒಟ್ಟೂ ದೋಷವನ್ನು ಯಹೂದಿಯಾದ ದ್ರೇಫನ್‌ನ ಕೊರಳಿಗೆ ಕಟ್ಟಿ ಪಾರಾಗುವುದು ಎಲ್ಲರ ದೃಷ್ಟಿಯಿಂದಲೂ ಅನುಕೂಲವಾಗಿತ್ತು. ಅವನು ಅಲ್ಪಸಂಖ್ಯಾತನಾದ್ದರಿಂದ ಅವನನ್ನು ರಾಷ್ಟ್ರದ್ರೋಹಿ, ದಗಾಬಾಜ್ ಎಂದು ಕರೆಯುವುದು ಸುಲಭವಾಗಿತ್ತು. ಸಾರ್ವಜನಿಕರು ಈ ಆರೋಪಗಳನ್ನು ಸಹಜವಾಗಿ ನಂಬಿದರು. ಗುಟ್ಟಾಗಿ ನಡೆಸಿದ ವಿಚಾರಣೆಯೊಂದರಲ್ಲಿ ದ್ರೇಫಸ್‌ನನ್ನು ಅಪರಾಧಿ ಎಂದು ಠರಾಯಿಸಲಾಯಿತು. ಅವನಿಗೆ ಒಂಟಿ ಕಾರಾವಾಸ ವಿಧಿಸಲಾಯಿತು.

ಆಗ ದ್ರೇಫಸ್‌ನ ಪರವಾಗಿ ಬಡಿದಾಡಲಿಕ್ಕೆಂದು ಒಂದು ಫ್ರೆಂಚ್ ಲೇಖಕ-ಶಿಕ್ಷಕ-ಪತ್ರಕಾರರ ಗುಂಪು ಮುಂದೆ ಬಂದಿತು. ನೊಬೆಲ್ ಪಾರಿತೋಷಕ ವಿಜೇತ ಅನಾತೋಲ್ ಫ್ರಾನ್ಸ್‌ನೂ ಆವರಲ್ಲೊಬ್ಬನಾಗಿದ್ದ. ದೇಶದ ಪ್ರತಿಯೊಬ್ಬ ನಾಗರಿಕ ಅವನ ಜನ್ಮ, ಧರ್ಮ, ನಂಬಿದ ತತ್ವಪ್ರಣಾಲಿ ಏನೇ ಇರಲಿ ಕಾಯಿದೆಯ ಎದುರಿಗೆ ಸಮಾನವಾಗಿರಬೇಕು. ’ರಾಷ್ಟ್ರೀಯ ಸುಭದ್ರತೆ’, ’ದೇಶಪ್ರೇಮ’, ’ರಾಷ್ಟ್ರಾಭಿಮಾನ’ದಂಥ ಮೋಹಕ ಮೈಮರೆಸುವ ಶಬ್ದಗಳಿಗಿಂತ ಕಾಯ್ದೆ ಮತ್ತು ನ್ಯಾಯ ಇವುಗಳ ಕಟ್ಟುನಿಟ್ಟಾದ ಚಲಾವಣೆ ರಾಷ್ಟ್ರದ ಸ್ವಾಸ್ಥ್ಯಕ್ಕೆ ಹೆಚ್ಚು ಮಹತ್ವದ್ದು ಎಂದು ವಾದಿಸಿ ಈ ಗುಂಪು ಧಾರ್ಮಿಕ-ರಾಜಕೀಯ ಪೂರ್ವಗ್ರಹಗಳನ್ನು ಖಂಡಿಸಿತು.
ಕಾದಂಬರಿಕಾರ ಎಮಿಲ್ ಝೋಲಾ ’ನಾನು ಆರೋಪ ಮಾಡುತ್ತೇನೆ’ (J’Accuse) ಎಂಬ ದೀರ್ಘ ಲೇಖನ ಬರೆದು, ಸರ್ಕಾರ ಹಾಗೂ ಸೇನಾಧಿಕಾರಿಗಳು ಬೇಕಂತಲೇ ಫ್ರೆಂಚ್ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆಂದೂ ವಾದಿಸಿದ.

ಈ ತಂಡಕ್ಕೆ ’ಬುದ್ಧಿವಾದಿ’ (Intellectual) ಎಂಬ ಲೇಬಲ್ ಅಂಟಿಸಲಾಯಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಲೇಬಲ್ಲು, ಕೌತುಕ ಅಥವಾ ಹೊಗಳಿಕೆಯ ದ್ಯೋತಕವಾಗಿರಲಿಲ್ಲ. ತುಚ್ಛತೆ, ತಿರಸ್ಕಾರದ ಕುರುಹಾಗಿತ್ತು. ರಾಷ್ಟ್ರ-ಧರ್ಮ-ಸೈನ್ಯದ ಬಗ್ಗೆ ಯಾವ ಅಭಿಮಾನವೂ ತಳೆಯದಿದ್ದ ಈ ತರುಣ ಪುಂಡರ ಮೇಲೆ ಒತ್ತಿದ ಒಂದು ನಿಂದಾಸೂಚಕ ಮುದ್ರೆಯಾಗಿತ್ತು. ಸರ್ಕಾರ ಝೋಲಾನ ವಿರುದ್ಧ ಅರೆಸ್ಟ್ ವಾರೆಂಟ್ ಕೂಡ ಹೊರಡಿಸಿತು. ಆದರೆ ಆತ ಇಂಗ್ಲೆಂಡಿಗೆ ಓಡಿಹೋಗಿ ತಪ್ಪಿಸಿಕೊಂಡ.

ಆದರೆ ಹತ್ತು ವರ್ಷ ನಡೆದ ಈ ಚಳವಳಿಯ ಪರಿಣಾಮವಾಗಿ ದ್ರೇಫಸ್ ಖಟ್ಲೆ ಮತ್ತೆ ಆರಂಭವಾಯಿತು. ಅವನು ನಿರಪರಾಧಿ ಎಂಬ ಮಾತನ್ನು ಸರ್ಕಾರ ಒಪ್ಪಿಕೊಂಡಿತು. ಅವನನ್ನು ಸನ್ಮಾನದಿಂದ ಮತ್ತೆ ಸೈನ್ಯದಲ್ಲಿ ಸೇರಿಸಿಕೊಳ್ಳಲಾಯಿತು. ಅಲ್ಲಿಯವರೆಗೆ ಕ್ರೈಸ್ತ ಧರ್ಮ ಫ್ರಾನ್ಸ್‌ನ ರಾಜ್ಯಧರ್ಮವಾಗಿತ್ತು. ಈ ಘಟನೆಯ ನಂತರ ಧರ್ಮಾತೀತ ರಾಜ್ಯವಾಯಿತು. ಸರ್ಕಾರ ಮತ್ತು ಚರ್ಚ್ ಬೇರೆಯಾದವು.

’ಬುದ್ಧಿವಾದಿ’ ಎಂಬ ಶಬ್ದಕ್ಕೆ ಸಮತೆ, ಧರ್ಮ ನಿರಪೇಕ್ಷತೆ ಹಾಗೂ ವಾಕ್‌ಸ್ವಾತಂತ್ರ್ಯ ಇವೆಲ್ಲವುಗಳ ಜೊತೆಗೆ ಎಂಥ ಘನವಾದ ಸಂಬಂಧವಿದೆ ಎಂಬುದು ಈ ಸಂಕ್ಷಿಪ್ತ ಇತಿಹಾಸದಿಂದ ಗೊತ್ತಾಗುವಂತಿದೆ. ಬೆಲೆ ಇರಬೇಕಾದದ್ದು ಒಬ್ಬ ವ್ಯಕ್ತಿಯ ಮನುಷ್ಯತ್ವಕ್ಕೆ ಹೊರತು ಅವನ ಧರ್ಮ, ಜಾತಿ, ವರ್ಗ, ಮತಗಳಿಗಲ್ಲ.

ನಮ್ಮ ಸಮಾಜದಲ್ಲಿ ಈ ನಿಷ್ಠೆಗೆ ಯಾವ ಸ್ಥಾನವಿದೆ ಎಂಬುದನ್ನು ನಾವು ಪರೀಕ್ಷಿಸಬೇಕಾಗಿದೆ.

ಭಾರತ ಪ್ರಜಾಸತ್ತೆ. ನಮ್ಮ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯದ ಅರ್ಧಶತಮಾನದಲ್ಲಿ ತುರ್ತು ಪರಿಸ್ಥಿತಿಯ ಎರಡು ಲಜ್ಜಾಸ್ಪದ ವರ್ಷಗಳನ್ನು ಬಿಟ್ಟರೆ ನಮ್ಮ ಶಾಸಕರು ಯಾವಾಗಲೂ ಸಾಮಾನ್ಯ ಜನತೆಯ ಆಯ್ಕೆ ಮಾಡಿದ ಪ್ರತಿನಿಧಿಗಳಾಗಿದ್ದರು. ಆಗಿದ್ದಾರೆ ಎಂಬುದು ನಾವು ಖಂಡಿತವಾಗಿ ಹೆಮ್ಮೆಪಡಬೇಕಾದ ವಿಷಯ. ವಿಚಾರಸ್ವಾತಂತ್ರ್ಯ, ಮತ್ತೊಬ್ಬನ ಮತವೊಲಿಸುವ ಅಧಿಕಾರ, ತನಗೆ ಕಂಡಂತೆ ಒಳ್ಳೆಯ ಜೀವನವನ್ನರಸುವ ಹಕ್ಕು ಇವನ್ನು ತಾತ್ವಿಕವಾಗಿಯಾದರೂ ಒಪ್ಪಿರುವುದು ನಮ್ಮ ರಾಜಕೀಯ ರಚನೆಯ ಮಹತ್ವದ ಅಂಶವಾಗಿದೆ.

ಐವತ್ತು ವರ್ಷ ನಾವು ಈ ಆದರ್ಶವನ್ನು ಕಾಪಾಡಿಕೊಂಡು ಬಂದಿದ್ದರೆ ಅದರ ಶ್ರೇಯಸ್ಸು ನಮ್ಮ ಸೇನಾಪಡೆಗೂ ಸಿಗಲೇಬೇಕು. ಪ್ರಜಾಸತ್ತೆ ಎಷ್ಟೇ ಗೂಂದಲಮಯವಾಗಿರಲಿ ಮಿಲಿಟರಿ ಶಾಸನ ಅದಕ್ಕಿಂತ ಎಷ್ಟೋ ವಿನಾಶಕಾರಿಯಾಗಿರುತ್ತದೆ ಎಂಬ ಮಾತನ್ನು ನಮ್ಮ ನೆರೆಹೊರೆಯ ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ದೇಶಗಳು ಈಗಾಗಲೇ ತೋರಿಸಿಕೊಟ್ಟಿವೆ.

ನಮ್ಮ ರಾಜಕೀಯ ಆಗುಹೋಗುಗಳತ್ತ ತಟಸ್ಥ ವೃತ್ತಿಯನ್ನಿಟ್ಟುಕೊಂಡು ನಮ್ಮ ಸೇನಾದಳ ಭಾರತೀಯ ಪ್ರಜಾಸತ್ತೆಗೆ ನೆರವು ನೀಡುತ್ತಿರುವಾಗ ಆಶ್ಚರ್ಯದ ಮಾತೆಂದರೆ ಇಂದು ಭಾರತದಲ್ಲಿ ಎಷ್ಟೋ ಸಂಘಟನೆಗಳು, ಪಕ್ಷಗಳು, ತತ್ವಪ್ರಣಾಲಿಗಳು ಸಾಮಾನ್ಯ ನಾಗರಿಕನೆದುರಿಗೆ ಸೈನಿಕನ ಆದರ್ಶವನ್ನಿಡುವ ಪ್ರಯತ್ನ ಮಾಡುತ್ತಿವೆ. ನಾಗರಿಕ ’ಸೈನಿಕ’ನಾಗಬೇಕು. ಭಾಷೆ. ಧರ್ಮ, ಪ್ರಾಂತ, ರಾಷ್ಟ್ರ ಇಲ್ಲವೆ ಇನ್ಯಾವುದೋ ತತ್ವದ ಹೆಸರಿನಲ್ಲಿ ಯೋಧನಾಗಬೇಕು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ವ್ಯಾವಸಾಯಿಕ ಸೈನಿಕರಂತೆ ತಾವೂ ಗಣವೇಷ ತೊಟ್ಟು ಬೀದಿ- ಬಯಲುಗಳಲ್ಲಿ ಕವಾಯತು ಮಾಡುವ ನಾಗರಿಕರ ಪಥಕಗಳು ನಮಗೆ ಪ್ರತಿನಿತ್ಯ ಕಾಣುತ್ತವೆ.

ಈ ಹೋರಾಟಗಾರಿಕೆಯ ಬಗ್ಗೆ ನಾಗರಿಕರಿಗೆ ಇಷ್ಟೇಕೆ ಆಕರ್ಷಣೆಯೆನಿಸಬೇಕು?

ಸಾಮಾನ್ಯವಾಗಿ ಈ ಪ್ರಶ್ನೆಗೆ ಸಿಗುವ ಉತ್ತರವೆಂದರೆ ನಮ್ಮಲ್ಲಿ ಶಿಸ್ತು ಕಡಿಮೆ. ನಾವು ಸುಸ್ತಾಗಿದ್ದೇವೆ. ಕಂಗಾಲಾಗಿದ್ದೇವೆ. ನಮ್ಮ ಸಮಾಜಕ್ಕೆ ಶಿಸ್ತಿನ ಅವಶ್ಯಕತೆಯಿದೆ.

ಆದರೆ ಶಿಸ್ತು ಕೇವಲ ಸೈನಿಕನಲ್ಲಿ ಮಾತ್ರ ಇರುವುದಿಲ್ಲ. ಶಾಸ್ತ್ರಜ್ಞ, ಕಲಾಕಾರ, ರೈತ-ಇವರೆಲ್ಲರ ಬಾಳಿನಲ್ಲೂ ಶಿಸ್ತು ಇರಲೇಬೇಕಾಗುತ್ತದೆ. ಎಂದಾಗ ಸೈನಿಕನಿಗೆ ಮಾತ್ರ ಇಷ್ಟು ಮಹತ್ವ ಕೊಡುವುದಕ್ಕೆ ಕಾರಣವಾದರೂ ಏನು?

ಉತ್ತರ ಸರಳವಾಗಿದೆ. ಸೈನಿಕ ವಿಚಾರ ಮಾಡುವುದಿಲ್ಲ. ಸೈನಿಕ ವಿಚಾರ ಮಾಡಬೇಕು ಎಂಬ ಅಪೇಕ್ಷೆಯನ್ನೇ ನಾವು ಇಟ್ಟುಕೊಳ್ಳುವುದಿಲ್ಲ. ಆತನಿಗೆ ವಿಚಾರ ಮಾಡುವ ಅಧಿಕಾರವೇ ಇಲ್ಲ. ಒಬ್ಬ ವಾಸ್ತುಶಾಸ್ತ್ರಜ್ಞ, ಗರತಿ, ವ್ಯಾಪಾರಿ ಇವರೆಲ್ಲರಿಗೂ ಶಿಸ್ತು ಅತ್ಯವಶ್ಯ. ಆ ಶಿಸ್ತಿನಿಂದ ಅವರು ತಮ್ಮ ಯೋಜನೆಗಳಿಗೆ ಸಾಕಾರ ಸ್ವರೂಪ ಕೊಡಬಲ್ಲರು. ಆದರೆ ಸೈನಿಕ ಶಿಸ್ತುಬದ್ಧನಾಗಿರುವುದು, ಸನ್ನದ್ಧನಾಗಿರುವುದು ಸಜ್ಜಾಗಿರುವುದು – ಬೇರೆ ಯಾರೋ ಕೊಟ್ಟ ಆಜ್ಞೆಯನ್ನು ಪಾಲಿಸಲಿಕ್ಕೆ ಮಾತ್ರ. ಸೈನಿಕನ ಪರವಾಗಿ ಯಾರೋ ಇನ್ನೊಬ್ಬ ವಿಚಾರ ಮಾಡುತ್ತಾನೆ. ಯೋಜನೆಗಳನ್ನು ಕೈಗೊಳ್ಳುತ್ತಾನೆ.

ಯಾವ ಯುದ್ಧ ಪರಿಸ್ಥಿತಿಗಾಗಿ ವ್ಯಾವಸಾಯಿಕ ಸೈನಿಕ ತರಬೇತಿ ಪಡೆಯುತ್ತಾನೋ ಆ ಪರಿಸ್ಥಿತಿಯಲ್ಲಿ ವಿಚಾರ ಮಾಡದೆ ಇರುವುದೇ ಯುಕ್ತವಾಗಿರಬಹುದು. ರಣಭೂಮಿಯಲ್ಲಿ ಪ್ರತಿಯೊಬ್ಬ ಸೈನಿಕ ಸ್ವತಂತ್ರವಾಗಿ ವಿಚಾರ ಮಾಡಲಾರಂಭಿಸಿದರೆ ಹಾಗೂ ತನಗೆ ಸರಿ ಕಂಡಂತೆ ವರ್ತಿಸಿದರೆ ತನ್ನ ಹಾಗೂ ತನ್ನ ಸಂಗಡಿಗರ ಜೀವಕ್ಕೆ ಕುತ್ತನ್ನುಂಟುಮಾಡಬಹುದು. ಇಂಥ ವರ್ತನೆ ಇಡೀ ಸೈನ್ಯದ ಸೋಲಿಗೆ ಕಾರಣವಾಗಬಹುದು.
ಆದರೆ ನಾವು ಇಲ್ಲಿ ಮಾಡುತ್ತಿರುವುದು ಮುಕ್ತ, ಪ್ರಜಾಸತ್ತಾತ್ಮಕ ಸಮಾಜದ ಬಗ್ಗೆ ಪ್ರತಿಯೊಬ್ಬ ನಾಗರಿಕ-ಸ್ತ್ರೀ ಇರಲಿ, ಪುರುಷನಿರಲಿ ಸ್ವತಂತ್ರವಾಗಿ ವಿಚಾರ ಮಾಡಬೇಕು ಎಂಬುದೇ ಈ ಸಮಾಜದ ಮೂಲಭೂತ ತತ್ವವಾಗಿದೆ. ಸರಕಾರ ಪ್ರತಿಯೊಬ್ಬ ನಾಗರಿಕನಿಗೆ ಶಿಕ್ಷಣ ದೊರಕುವಂತೆ ವ್ಯವಸ್ಥೆ ಮಾಡಬೇಕು ಎಂಬ ಅಪೇಕ್ಷೆಗೆ ಮುಖ್ಯ ಕಾರಣ ಇದೇ: ಸುಶಿಕ್ಷಿತ ವ್ಯಕ್ತಿ, ತರ್ಕಶುದ್ಧವಾಗಿ, ಸ್ಪಷ್ಟವಾಗಿ ವಿಚಾರ ಮಾಡುವ ಶಕ್ತಿ ಬೆಳೆಸಿಕೊಂಡಿರುತ್ತಾನೆ ಎಂಬ ನಂಬುಗೆ.

ನಾವು ಅಧಿಕಾರದಲ್ಲಿದ್ದ ಪಕ್ಷವನ್ನು ಕೆಳಗುರುಳಿಸಬಲ್ಲೆವು. ಮುಖ್ಯಮಂತ್ರಿ, ಪ್ರಧಾನಿಗಳನ್ನು ಕೂಡ ಬದಲಾಯಿಸಬಲ್ಲೆವು. ಪ್ರತಿಯೊಬ್ಬ ನಾಗರಿಕನಿಗೆ ಆ ಮತಾಧಿಕಾರ ಇದೆ. ಆದರೆ ವೋಟು ಹಾಕುವ ಮೊದಲು ತನ್ನ ಸುತ್ತಲಿನ ಪರಿಸ್ಥಿತಿಯನ್ನು ಕುರಿತು ಸಾರಾಸಾರ ವಿಚಾರ ಮಾಡುವ ಆರ್ಹತೆ ಅವನು ಪಡೆಯಬೇಕು. ಸಮಾಜದ ’ವಿಚಾರಶೀಲ’ ಘಟಕ ಎಂದೇ ನಾಗರಿಕನಿಗೆ ಅಧಿಕಾರ ಕೊಟ್ಟಿರುತ್ತದೆ.

ಸೈನಿಕನನ್ನು ಮಾದರಿ ಎಂದೆಣಿಸುವ ಪ್ರವೃತ್ತಿ ನಾಗರಿಕನ ಈ ಮೂಲಭೂತ ಜವಾಬುದಾರಿಯನ್ನೇ ಅಲ್ಲಗಳೆಯುತ್ತದೆ.

ಒಬ್ಬ ವ್ಯಕ್ತಿ ಗಣವೇಷ ಏಕೆ ತೊಡುತ್ತಾನೆ? ಗಣವೇಷವನ್ನು ತೊಟ್ಟು ಉಳಿದವರ ಹಾಗೆಯೇ ಕಾಣಬೇಕು ಎಂದು ಕವಾಯತ್ತು ಮಾಡುವಾಗ ನಡಿಗೆ, ಠೀವಿ, ಕೈಕಾಲುಗಳ ಚಲನವಲನ ಕೂಡ ಪಥಕದಲ್ಲಿರುವ ಇತರರಂತೆಯೇ ಮಾಡಬೇಕಾಗಿರುತ್ತದೆ. ಬೇರೆತನ ಸ್ವಂತಿಕೆಗಳಿಗೆ ಇಲ್ಲಿ ಸ್ಥಾನವೇ ಇಲ್ಲ. ಸೈನಿಕ ಸ್ವತಂತ್ರ ವ್ಯಕ್ತಿಯಾಗಿರುವುದಿಲ್ಲ. ಅವನು ಯಾಂತ್ರಿಕ ರಚನೆಯ ಭಾಗವಾಗುತ್ತಾನೆ. ತಾನೂ ಯಂತ್ರವಾಗುತ್ತಾನೆ ಅವನು ಮಾತನಾಡುವುದಿಲ್ಲ. ಕೇವಲ ಹುಕುಂ ಪಾಲಿಸುತ್ತಾನೆ.

ಭಾಷೆ ಕೂಡ ಯಾಂತ್ರಿಕವಾಗಿಬಿಡುತ್ತದೆ. ಒಂದು ಬಟನ್ ಒತ್ತಿದಕೂಡಲೆ ಪಥಕ ನಿಲ್ಲುತ್ತದೆ. ಇನ್ನೊಂದು ಬಟನ್ ಒತ್ತಿದೊಡನೆ ಸಲಾಮು ಹೊಡೆಯುತ್ತದೆ. ಮೂರನೆಯದನ್ನು ಒತ್ತಿದೊಡನೆ ಹೆಜ್ಜೆಗೆಹೆಜ್ಜೆ ಹೊಂದಿಸಿ ಮುಂದೆ ಸಾಗುತ್ತವೆ. ತನ್ನ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸುವ ಹೊಣೆ ಯಾರಿಗೂ ಇದ್ದಂತಿಲ್ಲ.

ಪ್ರಜಾಸತ್ತೆಯಲ್ಲಿ ಪ್ರತಿ ವ್ಯಕ್ತಿಗೆ ತನ್ನ ವ್ಯಕ್ತಿತ್ವವನ್ನು ತನಗೆ ಬೇಕಾದ ರೀತಿಯಲ್ಲಿ ಬೆಳೆಸಿಕೊಳ್ಳಲು ನಿರ್ಣಯ ಕ್ಷಮತೆಯನ್ನು ಹೆಚ್ಚಿಸಲು ಆಸ್ಪದವಿರುವಾಗ ಮನುಷ್ಯನಾಗಿ ಬೆಳೆಯುವುದರ ಬದಲು ಯಂತ್ರವಾಗಿ ಚಲಿಸುವುದೇ ಯಾರಿಗಾದರೂ ಆಕರ್ಷಕವೆನಿಸಿದರೆ ಎಲ್ಲೋ ಏನೋ ಗೊಂದಲವಿದೆ ಎಂಬುದು ಸ್ಪಷ್ಟ.

ಸೈನಿಕನಂತೆ ವರ್ತಿಸುವುದರಿಂದ ನಾಗರಿಕರಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ ಎಂದು ಅಸ್ತಿತ್ವವಾದ ನಮಗೆ ಕಲಿಸಿದೆ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು. ಬಸವಣ್ಣನವರೆಂದಂತೆ ಅಂತರಂಗದ ಅರಿವೇ ಬಹಿರಂಗದಲ್ಲಿ ಕೃತಿಯಾಗಬೇಕು.

ನನಗೆ ಯಾರಾದರೂ ನನ್ನ ನೆರೆಮನೆಯವನ ಕೆನ್ನೆಗೆ ಹೊಡೆಯಲಿಕ್ಕೆ ಹೇಳಿದರೆ ನಾನು ’ಹಾಗೇಕೆ ಮಾಡಬೇಕು?’ ಎಂದು ಕೇಳುತ್ತೇನೆ. ’ಕಾರಣ ಕೊಡಿರಿ?’ ಎನ್ನುತ್ತೇನೆ. ಆದರೆ ನಾನು ಸೈನಿಕನಾಗಿದ್ದರೆ ಆಜ್ಞೆಯಾದ ಗಳಿಗೆಗೆ ಹೊಡೆದಾಟ, ಬಡಿದಾಟ, ವಿಧ್ವಂಸ ಯಾವುದಕ್ಕೂ ಸನ್ನದ್ಧನಾಗುತ್ತೇನೆ – ನನ್ನ ನೆರೆಯವರು ನಿರಪರಾಧಿಗಳು ಎಂದು ಗೊತ್ತಿದ್ದರೂ ಕೂಡ.

ಎರಡನೆಯ ಮಹಾಯುದ್ಧ ಮುಗಿದಾಗ ನಾತ್ಸಿಗಳು ತಾವು ಯಹೂದಿಗಳ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದಕ್ಕೆ ಕೊಟ್ಟ ಕಾರಣ: ’ನಮಗೆ ಹಾಗೆ ಆಜ್ಞೆಯಿತ್ತು’.

ಆಜ್ಞಾಪಾಲನೆ ಮಾತ್ರ ಯಾಂತ್ರಿಕವಾಗಿರುತ್ತದೆ ಎಂದಲ್ಲ, ಇಡೀ ಮನೋವ್ಯಾಪಾರವೇ ಯಾಂತ್ರಿಕವಾಗಿರುತ್ತದೆ. ’ನಾವು’ ವಿರುದ್ಧ ’ಅವರು’ ’ನಮ್ಮದು’ ಸರಿಯೋ ತಪ್ಪೋ ಎಂದು ಕೇಳುವ ಪ್ರಶ್ನೆಯೇ ಇಲ. ’ನಾವು’ ಯಾವಾಗಲೂ ಸರಿ. ಇದನ್ನು ಒಪ್ಪಿಕೊಳ್ಳಲಿಕ್ಕೆ ’ಅವರು’ ಸಿದ್ಧರಾಗಿರದಿದ್ದರೆ ನಾವು ’ಅವರಿಗೆ’ ತಕ್ಕ ಶಾಸ್ತಿ ಮಾಡಿ ನಮ್ಮದೇ ಸರಿ ಎಂಬ ಮಾತನ್ನು ಒಪ್ಪಿಕೊಳ್ಳಲಿಕ್ಕೆ ಹಚ್ಚತಕ್ಕದ್ದು.

ಹಾಗಾದರೆ ಈ ’ಅವರು’ ಯಾರು? ಮೋಜಿನ ಮಾತೆಂದರೆ ಈ ಸ್ಥಾನ ಯಾವಾಗಲೂ ಬರಿದಾಗಿರುತ್ತದೆ. ನಮ್ಮ ಮಾತನ್ನೊಪ್ಪದಿದ್ದ ಯಾರನ್ನಾದರೂ ಅಲ್ಲಿ ತುರುಕಬಹುದು.

ಈ ಸರ್ವನಾಮಗಳೆಲ್ಲ ಬಹುವಚನದಲ್ಲಿರುತ್ತವೆ. ಏಕೆಂದರೆ ಬಹುವಚನಗಳಿಂದ ಸಾರ್ವಜನಿಕ ಹಿಂಸೆ ಸುಲಭವಾಗುತ್ತದೆ.

ಒಂದು ದೇಶದ ಆರ್ಥಿಕ ಪರಿಸ್ಥಿತಿ ಆಯುಧಗಳನ್ನು ನಿರ್ಮಿಸುವುದರ ಮೇಲೆ ಅವಲಂಬಿಸಿದ್ದರೆ, ಆ ಯುದ್ಧ ಸಾಮಗ್ರಿಯೆಲ್ಲ ಬಳಕೆಯಾಗುವಂತೆ ವ್ಯವಸ್ಥೆ ಮಾಡುವುದು ಆ ದೇಶದ ಸರಕಾರದ ಕರ್ತವ್ಯವಾಗುತ್ತದೆ. ಅಂದರೆ ಹೊಸ ಯುದ್ಧಗಳನ್ನು ಉಂಟುಮಾಡಬೇಕಾಗುತ್ತದೆ. ಈ ನ್ಯಾಯ ಮನುಷ್ಯ ಸಾಮಗ್ರಿಗೂ ಅನ್ವಯಿಸುತ್ತದೆ. ಸೈನಿಕರ ಬಳಕೆಗಾಗಿ ಸಂಘರ್ಷ ಹುಟ್ಟಿಸಬೇಕಾಗುತ್ತದೆ.

ಆದರೆ ಈ ಸೈನಿಕ ಎಂದೂ ಹೊರಗಿನ ಶತ್ರುಗಳನ್ನು ಎದುರಿಸುವ ಸಂಭಾವ್ಯತೆಯೇ ಇರುವುದಿಲ್ಲವಾದ್ದರಿಂದ ಸಮಾಜದ ಒಳಗಡೆಯೇ ವೈರಿಗಳನ್ನು ಹುಡುಕಬೇಕಾಗುತ್ತದೆ. ಆತ್ಮ ಸಂರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರು, ಅಲ್ಪಸಂಖ್ಯಾತರು, ಚಿಕ್ಕ-ಪುಟ್ಟ ಸಮುದಾಯಗಳು ಈ ಪೌರುಷಕ್ಕೆ ಗುರಿಯಾಗುತ್ತವೆ. ಹಲವು ಸಲ ಬಲಿಯಾಗುತ್ತವೆ.

ಹಿಂಸೆ ಸಾಮಾನ್ಯವಾಗಿ ನಾಶವಾಗುವುದಿಲ್ಲ. ಅದು ಬಲವಾಗುತ್ತದೆ, ಹರಡುತ್ತದೆ. ವಿಚಾರಶಕ್ತಿಯನ್ನು ಹತ್ತಿಕ್ಕುವುದೇ ಲಷ್ಕರೀ ಆದರ್ಶವಾಗಿರುವುದರಿಂದ ವಿಚಾರ ಮಾಡುವ ಧೈರ್ಯ ತೋರಿಸುವವರೆಲ್ಲ ವೈರಿಗಳಾಗುತ್ತಾರೆ. ’ಅವರು’ ಬೇರೆಯಾಗಿರಲೆತ್ನಿಸುತ್ತಾರೆ. ಆದ್ದರಿಂದ ’ಅವರಿಗೆ’ ಪಾಠ ಕಲಿಸಬೇಕು.

ಒಂದು ದಬ್ಬಾಳಿಕೆ ಇನ್ನೊಂದು ದಬ್ಬಾಳಿಕೆಯನ್ನು ಸಹಿಸಬಹುದು ಎದುರಿಸಬಹುದು. ಪಾಶವೀ ಶಕ್ತಿಗಳೊಡನೆ ಒಪ್ಪಂದ ಮಾಡಿಕೊಳ್ಳಬಹುದು, ಬಡಿದಾಡಬಹುದು. ಆದರೆ ವೈಚಾರಿಕತೆ-ಸೃಷ್ಟಿಶೀಲತೆಗಳು ದಬ್ಬಾಳಿಕೆಯ ಅಸ್ತಿತ್ವವನ್ನೇ ಪ್ರಶ್ನಿಸುತ್ತವಾದ್ದರಿಂದ ಅವುಗಳ ಜೊತೆಗೆ ಸಂಧಾನ ಮಾಡುವುದು ಅದಕ್ಕೆ ಅಸಾಧ್ಯವಾಗುತ್ತದೆ. ಅನಿವಾರ್ಯವಾಗಿ ಹೊರಗಿನ ವೈರಿಗಳ ಕಡೆಗೆ ಬೆರಳು ತೋರಿಸಿ ಸಮರ್ಥಿಸಲಾದ ಹಿಂಸೆ ಕೊನೆಗೆ ತನ್ನ ಸಮಾಜದ ವಿರುದ್ಧವೇ ಹೊರಳುತ್ತದೆ. ಮತ್ತು ಅಲ್ಲಿಯ ಪತ್ರಕರ್ತರು, ಲೇಖಕರು, ಕಲಾಕಾರರು, ಬುದ್ಧಿವಾದಿಗಳು, ಸಾಮಾಜಿಕ ಕಾರ್ಯಕರ್ತರು ಇವರನ್ನೇ ನಾಶಗೊಳಿಸಲು ಯತ್ನಿಸುತ್ತದೆ.

ಹಿಟ್ಲರನ ಗುಪ್ತ ಪೊಲೀಸ್ ಪಡೆಯ ಪ್ರಮುಖ ಫೀಲ್ಡ್ ಮಾರ್ಷಲ್ ಹರ್‍ಮನ್ ಗೋಆರಿಂಗ್ ಒಂದು ಸಲ ಎಂದಿದ್ದ: ’ಸಂಸ್ಕೃತಿ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ನಾನು ನನ್ನ ಬ್ರೌನಿಂಗ್ ಹುಡುಕುತ್ತೇನೆ’. ಇಲ್ಲಿ ’ಬ್ರೌನಿಂಗ್ ಎಂದರೆ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್ ಅಲ್ಲ. ಆ ಹೆಸರಿನ ಒಂದು ರಿವಾಲ್ವರ್. ಚೈತನ್ಯಶೀಲ ಸಾಂಸ್ಕೃತಿಕ ವಾತಾವರಣ ದಬ್ಬಾಳಿಕೆಯನ್ನು ಅಣಕಿಸಿ, ನಗೆಗೀಡು ಮಾಡಬಲ್ಲುದು ಎಂಬುದನ್ನು ಗೋಆರಿಂಗ್ ಚೆನ್ನಾಗಿ ಅರಿತಿದ್ದ.

ಹಿಟ್ಲರ್, ಸ್ಟಾಲಿನ್, ಮಾವೋ- ಎಲ್ಲರ ಕತೆಯೂ ಒಂದೇ! ವೈರಿಗಳ ಕೈಯಲಿದ್ದ ಅಣುಬಾಂಬಿಗಿಂತ ನಮ್ಮದೇ ಸಮಾಜದ ಚಿತ್ರಕಾರನ ರೇಖಾಚಿತ್ರ ಹೆಚ್ಚು ಅಪಾಯಕಾರಿ – ಆತ ನಮ್ಮವ, ಸಮೀಪದವ ಆದ್ದರಿಂದಲೇ ನಿಜವಾದ ವೈರಿ.

ರವೀಂದ್ರನಾಥ ಟಾಗೋರರದೊಂದು ಸುಂದರ ಕವಿತೆಯಿದೆ:
Where the mind is without Fear
and the Head is held high
Where knowledge is free…
Into that haven of freedom, my Father
let my country awake.

ಟಾಗೋರರು ಈ ಕವಿತೆ ಬರೆದಾಗ ಬ್ರಿಟಿಷರ ಅಧಿಪತ್ಯವಿತ್ತು. ಆದರೆ ಬ್ರಿಟಿಷರು ಈ ಕವಿತೆಗೆ ಅಡ್ಡಿ ಮಾಡಲಿಲ್ಲ, ಅದಕ್ಕೆ ಸಂಕಟವೊದಗಿದ್ದು ಯಾವಾಗ ಗೊತ್ತೇನು? ತುರ್ತು ಪರಿಸ್ಥಿತಿಯಲ್ಲಿ. ಎಮರ್ಜನ್ಸಿಯಲ್ಲಿ ಈ ಕವಿತೆಯನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿತ್ತು.

ಇದೇ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಪ್ರಸಾರಣಾ ಮಂತ್ರಾಲಯ(Ministry of Information and Broadcasting) ದಿಲ್ಲಿಯಲ್ಲಿ ಒಂದು ಸಭೆ ಕರೆದಿತ್ತು. ಅದಕ್ಕೆ ಸತ್ಯಜಿತ್ ರಾಯ್, ಹೃಷಿಕೇಶ್ ಮುಖರ್ಜಿ, ಶ್ಯಾಮ್ ಬೆನಗಲ್, ನನ್ನನ್ನು ಹಾಗೂ ಇತರರನ್ನು ಆಮಂತ್ರಿಸಲಾಗಿತ್ತು. ಆ ಸಭೆಯಲ್ಲಿ ನಮಗೆ ಕೊಡಲಾದ ’ಸೂಚನೆ’ ಎಂದರೆ ನಮ್ಮ ಸಮಾಜದಲ್ಲಿ ದಲಿತರು ಹಾಗೂ ಸ್ತ್ರೀಯರು ಇವರ ಮೇಲೆ ಅತ್ಯಾಚಾರವಾದದ್ದಕ್ಕೆ ಯಾವ ಪುರಾವೆಯೂ ಇಲ್ಲ. ನಮ್ಮದು ಅತ್ಯಂತ ಸಹನಶೀಲ ಸಮಾಜ. ಆದ್ದರಿಂದ ಚಿತ್ರ ನಿರ್ಮಾಪಕರು ಇಂಥ ವಿಷಯಗಳಿಂದ ದೂರವಿರತಕ್ಕದ್ದು.

ಆಜ್ಞಾಪಾಲನೆ ಸೈನಿಕರ ತತ್ವಜ್ಞಾನವಾಗಿರುವಂತೆ ಸತ್ತೆ ಮುಖಂಡರದಾಗಿರುತ್ತದೆ. ಆದ್ದರಿಂದಲೇ ರಾಜಕಾರಣದಲ್ಲಿ ಸಿಲುಕಿಕೊಂಡ ಲಷ್ಕರೀ ಮನೋವೃತ್ತಿ ತನ್ನ ಉದ್ದೇಶ ಸಾಧನೆಗಾಗಿ ಜನತೆಗೆ ಪವಿತ್ರ- ಆತ್ಮೀಯವೆನಿಸುವ ಅಂಶಗಳನ್ನೆಲ್ಲ ಎತ್ತಿಕೊಂಡು ತನ್ನದಾಗಿಸಿಕೊಳ್ಳುತ್ತದೆ: ಧರ್ಮ, ಭಾಷೆ, ಇತಿಹಾಸ, ಇತ್ಯಾದಿ.
ಪ್ರಾಚೀನ ಗ್ರೀಸ್‌ದಲ್ಲಿ ನಮಗೆ ಎರಡು ಬಗೆಯ ರಾಜಕೀಯ ಸಂಘಟನೆ ನೋಡಸಿಗುತ್ತವೆ: ಸ್ಪಾರ್ಟಾ ಮತ್ತು ಅಥೆನ್ಸ್.

ಸ್ಪಾರ್ಟಾದ ಪ್ರತಿಯೊಬ್ಬ ಗಂಡಸು ಸೈನಿಕನಾಗಲೇಬೇಕಾಗಿತ್ತು. ಚಿಕ್ಕಂದಿನಲ್ಲೇ ಅವನನ್ನು ತಾಯ್ತಂದೆಗಳಿಂದ ಬೇರ್ಪಡಿಸಿ, ಸರಕಾರ ಅವನಿಗೆ ನಿರಂತರವಾಗಿ ಮತ್ತು ನಿರ್ದಯವಾಗಿ ಸೈನಿಕೀ ತಾಲೀಮು ಕೊಡುತ್ತಿತ್ತು.
ಅಥೆನ್ಸ್‌ದ ನಾಗರಿಕರು ದೇಶಕ್ಕೆ ಕುತ್ತು ಒದಗಿದಾಗ ಯುದ್ಧಕ್ಕೆ ಹೋಗುತ್ತಿದ್ದರು. ಶೌರ್ಯದಿಂದ ಕಾದಾಡುತ್ತಿದ್ದರು. ಆದರೆ ಶಾಂತಿಕಾಲದಲ್ಲಿ ಒಂದು ಮುಕ್ತ ಪ್ರಜಾರಾಜ್ಯವನ್ನು ನಡೆಸಿಕೊಂಡು ಹೋಗುವ ಜವಾಬುದಾರಿಯನ್ನು ವಹಿಸುತ್ತಿದ್ದರು. ಪ್ರತಿಯೊಬ್ಬನಿಗೆ ಒಂದು ಸಾರ್ವಜನಿಕ ಹುದ್ದೆ ಸಂಭಾಳಿಸಿಕೊಂಡು ಹೋಗಬೇಕಾಗುತ್ತಿತ್ತು. ಮಹತ್ವದ ಸಮಸ್ಯೆಗಳನ್ನು ಕುರಿತು ಸಾರ್ವಜನಿಕ ಚರ್ಚೆಯಾಗುತ್ತಿತ್ತು.

ತನ್ನ ಸುತ್ತಲಿದನ್ನೆಲ್ಲ ನಾಶಗೊಳಿಸಿದ ಬಳಿಕ ಸಾಮಾಜಿಕ ದಬ್ಬಾಳಿಕೆ ತನ್ನ ಮೇಲೆಯೇ ಹೊರಳುತ್ತದೆ. ತನ್ನ ಪರಿಸರದಲ್ಲಿದ್ದುದೆಲ್ಲವನ್ನು ಭಕ್ಷಣೆ ಮಾಡಿರುವ ಡ್ರಾಗನ್ನಿಗೆ ತಿನ್ನಲಿಕ್ಕೆ ಇನ್ನೇನೂ ಸಿಗುವುದಿಲ್ಲ. ಆಗ ಅದು ತನ್ನನ್ನು ತಾನೇ ನುಂಗಿಬಿಡುತ್ತದೆ.

ನಿರ್ದೇಶಕ ಮೃಣಾಲ್ ಸೇನ್ ಅವರು ಹೇಳಿದ ಒಂದು ಬೋಧಕತೆಯೊಂದಿಗೆ ನಾನು ನನ್ನ ಮಾತನ್ನು ಮುಗಿಸುತ್ತೇನೆ. ಈ ಕತೆ ಅವರಿಗೆ ಚಾರ್ಲಿ ಚಾಪ್ಲಿನ್‌ನ ಒಂದು ಪುಸ್ತಕದಲ್ಲಿ ಸಿಕ್ಕಿತಂತೆ.
ಒಬ್ಬ ರಾಜಕೀಯ ಅಪರಾಧಿಗೆ ದೇಹಾಂತದ ಶಿಕ್ಷೆಯಾಗಿತ್ತು. ಅವನನ್ನು ಗುಂಡಿಕ್ಕಿ ಕೊಲ್ಲಲಿಕ್ಕೆಂದು ಒಂದು ಸೈನಿಕ ಪಥಕ ಸಿದ್ಧವಾಗಿ ನಿಂತಿತ್ತು. (ನಿಮಗೆಲ್ಲ ಗೊತ್ತೇ ಇದೆ. ಇಂಥ ಪಥಕದಲ್ಲಿ ಸುಮಾರು ಎಂಟು-ಹತ್ತು ಜನ ಸಿಪಾಯಿಗಳಾದರೂ ಇರುತ್ತಾರೆ. ಅದರಿಂದ ತಾನು ಈ ಹತ್ಯೆಗೆ ವೈಯಕ್ತಿಕವಾಗಿ ಹೊಣೆಗಾರನಾಗಿದ್ದೇನೆ ಎಂಬ ಭಾವನೆ ಯಾವ ಸೈನಿಕನಿಗೂ ತಟ್ಟುವುದಿಲ್ಲ.)

ಶಿಕ್ಷೆ ರದ್ದಾಗಬಹುದು ಎಂಬ ಅಪೇಕ್ಷೆಯಿತ್ತು. ಆದ್ದರಿಂದ ಪಥಕದ ಅಧಿಕಾರಿ ಮಾಫಿಯ ಆಜ್ಞಾಪತ್ರವನ್ನು ತೆಗೆದುಕೊಂಡು ಬರಬೇಕಾದ ದೂತನಿಗಾಗಿ ತವಕದಿಂದ ಕಾದಿದ್ದ. ಆದರೆ ದೂತನ ಪತ್ತೆಯಿರಲಿಲ್ಲ.

ನಿಯಮಿತ ವೇಳೆಗೆ ಸರಿಯಾಗಿ ಅಧಿಕಾರಿ ಆಜ್ಞೆಯಿತ್ತ: ’ಸಿದ್ಧರಾಗಿರಿ!’ ಕೂಡಲೇ ಅಷ್ಟು ಸೈನಿಕರು ಒಂದೇ ಯಂತ್ರದ ಅಂಗಗಳಂತೆ ನುಣುಪಾಗಿ ಒಟ್ಟಿಗೆ ಸಿದ್ಧರಾಗಿ ನಿಂತರು.

ಅಧಿಕಾರಿ ಮುಂದಿನ ಅಪ್ಪಣೆಯಿತ್ತ: ’ಗುರಿ ಹಿಡಿಯಿರಿ!’

ಅಷ್ಟೂ ಸೈನಿಕರು ಯಂತ್ರದಂತೆ ನುಣುಪಾಗಿ ಒಟ್ಟಿಗೆ ಗುರಿ ಹಿಡಿದರು.

ಆಗಲೇ ದಿಗಂತದ ಮೇಲೆ ಕುದುರೆ ಸವಾರ ಕಾಣಿಸಿಕೊಂಡ. ಅವನು ಜೀವಪಣಕ್ಕೆ ಹಚ್ಚಿ ಕುದುರೆಯೋಡಿಸುತ್ತ ತನ್ನ ಕೈಯಲಿದ್ದ ಮಾಫಿಯ ಆಜ್ಞೆಯನ್ನು ಕೈಬೀಸಿ ತೋರಿಸುತ್ತಿದ್ದ.

ಅವನನ್ನು ಕಂಡು ರೋಮಾಂಚಿತನಾದ ಅಧಿಕಾರಿ ಸಂತೋಷದಿಂದ ಕೂಗಿದ: ’ತಡೆಯಿರಿ’.

ಮತ್ತು ಅಷ್ಟೂ ಸೈನಿಕರು ಯಂತ್ರದಂತೆ ನುಣುಪಾಗಿ ಒಟ್ಟಿಗೆ ಗುಂಡು ಹಾರಿಸಿದರು.

ಇದು ಬರಿಯ ಕತೆಯಲ್ಲ ನಾವು ಎಚ್ಚರವಾಗಿರದಿದ್ದರೆ ನಮ್ಮ ಸಮಾಜದ ಭವಿತವ್ಯ ಏನಾಗಬಹುದು ಎಂಬುದರ ಖಚಿತ ಚಿತ್ರವಾಗಿದೆ.

ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲು ನನ್ನನ್ನು ಆಮಂತ್ರಿಸಿ ಸನ್ಮಾನಿಸಿದ್ದಕ್ಕಾಗಿ ನಿಮಗೆಲ್ಲ ನನ್ನ ಹಾರ್ದಿಕ ಕೃತಜ್ಞತೆಗಳು. ಇಂದು ಜನವರಿ ಮೂರು. ನಾವು ಹೊಸ ವರ್ಷದಲ್ಲಿ ಕಾಲಿಡುತ್ತಿದ್ದೇವೆ. ಈ ವರ್ಷ ವಿಧ್ವಂಸಕ್ಕಾಗಿ ಅಲ್ಲ, ಸಾಮಾನ್ಯ ಮಾನವತೆಗಾಗಿ ಸ್ಮರಣೀಯವಾಗಲಿ ಎಂಬುದೇ ನಿಮಗೆಲ್ಲ ನನ್ನ ಹೊಸ ವರ್ಷದ ಶುಭೇಚ್ಛೆ.

 

* ಗಿರೀಶ ಕಾರ್ನಾಡ್
ಕನ್ನಡದ ಖ್ಯಾತ ಚಿಂತಕರು ಮತ್ತು ನಾಟಕಕಾರರು. ಯಯಾತಿ, ಟೀಪು ಕಂಡ ಕನಸು, ತಲೆದಂಡ, ತುಘಲಕ್, ಅಂಜುಮಲ್ಲಿಗೆ ಇತ್ಯಾದಿ ನಾಟಕಗಳಿಂದ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದ್ದಾರೆ. ಚಲನಚಿತ್ರ ನಟರಾಗಿಯೂ ಕಾರ್ನಾಡ ಭಾರತದಾದ್ಯಂತ ಚಿರಪರಿಚಿತರು. ಸಾಹಿತ್ಯ, ಸಿನಿಮಾ, ಕಿರುತೆರೆ, ನಾಟಕ ಹೀಗೆ ಹಲವು ವಲಯಗಳಲ್ಲಿ ತೊಡಗಿಸಿಕೊಂಡಿದ್ದ ಗಿರೀಶ ಕಾರ್ನಾಡ ಅವರು ಭೌತಿಕವಾಗಿ ನಮ್ಮನ್ನಗಲಿದ ಮೇಲೆಯೂ ತಮ್ಮ ಚಿಂತನೆಗಳ ಮೂಲಕ ಪ್ರಗತಿಪರ ಚಿಂತನೆಗಳನ್ನು ಇಂದಿಗೂ ಪ್ರಭಾವಿಸುತ್ತಿದ್ದಾರೆ.
ಪ್ರಸಕ್ತ ಭಾಷಣ ನೀನಾಸಮ್ ಮಾತುಕತೆಯಲ್ಲಿ ಕೂಡ ಪ್ರಕಟವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...