`ಚಾಯ ಪೆ ಚರ್ಚಾ’ಗಿಂತಲೂ ಪ್ರಮುಖವಾದದ್ದು ಯಾವುದಾದರೂ ಐತಿ ಅಂದ್ರ ನಂಬತೀರಿ ಏನು? ಐತಿರೆಪೋ  ಐತಿ. `ಕಲೆ ಜೀವನದ ಮ್ಯಾಲೆ ಪ್ರಭಾವ ಬೀರುತ್ತದೋ ಅಥವಾ ಜೀವನ ಕಲೆ ಮ್ಯಾಲೆ ಪ್ರಭಾವ ಬೀರುತ್ತದೋ’ ಅನ್ನುವುದು ಮುಖ್ಯವಾದದ್ದು ಹಾಗೂ ಶತಮಾನಗಳಷ್ಟು ಹಳೆಯದು.

ಇದು ಈಗ ಯಾಕ ನೆನಪು ಆತಪ್ಪಾ ಅನ್ನಲಿಕ್ಕೆ ಎರಡು ಕಾರಣ ಅದಾವು.

ಫ್ರಾನ್ಸ್ ಕಾಫ್ಕ, photo courtesy: Wikipedia

ಇವತ್ತಿಗೆ ಒಂದು ನೂರು ವರ್ಷ ಫ್ರಾನ್ಸ್ ಕಾಫ್ಕ ಅನ್ನೋ ಜರ್ಮನ್ ಲೇಖಕ `ದ ಟ್ರಯಲ್’ ಅನ್ನೋ ಕಾದಂಬರಿ ಬರದ. ಅದರಾಗ ಜೋಸೆಫ್ ಅನ್ನುವ ಒಬ್ಬ ಬ್ಯಾಂಕ್ ನೌಕರನನ್ನ ಯಾವುದೋ ಹೆಸರಿಲ್ಲದ ವಿಚಾರಣಾ ಸಂಸ್ಥೆಯ ಹೆಸರಿಲ್ಲದ ಪೊಲೀಸರು, ಬಂಧಿಸತಾರ. ಅವನ ಮ್ಯಾಲೆ ಯಾವ ಆರೋಪವನ್ನೂ ಹೊರೆಸದೆ, ಯಾವ ಕಾನೂನಿನ ಕೆಳಗ ಅವನಿಗೆ ಬಂಧನ ಮಾಡ್ತೇವಿ ಅಂತ ಹೇಳದೇ, ವಿಳಾಸ ಇಲ್ಲದ ನ್ಯಾಯಾಲಯದಾಗ ಒಂದು ವರ್ಷ ವಿಚಾರಣೆ ನಡೆಸತಾರ.

ಕೊನೆಗೆ ಒಂದು ದಿವಸ ಇನ್ನೊಂದು ಇಬ್ಬರು ಹೆಸರಿಲ್ಲದ ಪೊಲೀಸರು ಬಂದು ಅವನನ್ನು ಊರು ಹೊರಗಿನ ಕಲ್ಲು ಗಣಿಯೊಳಗ ಚಾಕು ಹಾಕಿ ಕೊಂದುಬಿಡ್ತಾರ. ನಾನು ನಾಯಿಯಂತೆ ಸತ್ತು ಹೋದೆ ಅಂತ ನಾಯಕ ಕೊನೆಯ ಮಾತು ಹೇಳಿ ಉಸಿರು ಬಿಡತಾನ.

ಇನ್ನ ಸುಮಾರು 75 ವರ್ಷದ ಹಿಂದೆ ಜಾರ್ಜ್ ಅರವೆಲ್ ಅವರು ಬರೆದ, `ಸಣ್ಣ ಕತೆಯಂತೆ ಕಾಣುವ ದಂತ ಕತೆ’ ಅಂತ ಕರೆಯಿಸಿಕೊಳ್ಳುವ ವಿಚಿತ್ರ ಹೆಸರಿನ ಕಾದಂಬರಿ `1984’. ಅದರಾಗ ಇರೋ ಮನುಷ್ಯ ಅತೀತ ಶಕ್ತಿ ಹೊಂದಿದ ಅಪ್ರತಿಮ ನಾಯಕ: ಹೆಸರು `ದೊಡ್ಡಣ್ಣ’ (ಬಿಗ್ ಬ್ರದರ್). ಈ ಮನುಷ್ಯನ ನೋಡಿದವರು ಯಾರೂ ಇಲ್ಲ. ಅವ ಅದಾನ ಇಲ್ಲೋ, ಅವ ಹೆಂಗ ಕಾಣತಾನು, ಹೆಂಗ ಮಾತು ಆಡತಾನು ಅನ್ನೋದು ಯಾರಿಗೂ ಗೊತ್ತಿಲ್ಲ.

ಆದರ ಅವನ ಶಕ್ತಿ ಅಪರಿಮಿತ. ಅವನು ಎಲ್ಲರ ಮ್ಯಾಲೆ, ಎಲ್ಲ ಕಾಲಕ್ಕೂ ಕಣ್ಣು ಇಟ್ಟಿರತಾನ. ಶತ್ರು ದೇಶಗಳ ಜೊತೆಗೆ ಯುದ್ಧ ಮಾಡೋ ಸೈನಿಕರಿಗಿಂತ ಜಾಸ್ತಿ ಅವನ ಹತ್ತರ ತನ್ನ ದೇಶದ ನಾಗರೀಕರ ಮ್ಯಾಲೆ ಕಣ್ಣು ಇಡಲಿಕ್ಕೆ ವಿಚಾರ ಪೊಲೀಸರು (ಥಿಂಕ್ ಪೋಲ್) ಅನ್ನೋ ವಿಚಕ್ಷಣ ದಳದವರು ಇದ್ದಾರ.

ಅವರು ಪ್ರತಿಯೊಬ್ಬರ ಮನಿಯೊಳಗ ಒಂದು ದ್ವಿಪಥ ಟಿವಿ ಸೆಟ್ ಕೂಡಿಸಿಬಿಟ್ಟರ. ನೀವು ಟಿವಿ ನೋಡುವಾಗ ಅದು ನಿಮ್ಮನ್ನ ನೋಡ್ತಾ ಇರತೇತಿ. ನಿಮ್ಮ ಮನಿಯೊಳಗ ಆಗೋ ಎಲ್ಲ ವಿಷಯನೂ ಅದು ಸಿ.ಸಿ.ಟಿವಿ ಗತೆ ರಿಕಾರ್ಡ್ ಮಾಡತೆತಿ.

ಥಿಂಕ್ ಪೋಲ್ ಸೈನಿಕರು, ನಾಗರೀಕರ ತಪ್ಪು ವಿಚಾರಗಳನ್ನ ಪತ್ತೆ ಹಚ್ಚತಾರ. ಅವರು ತಮ್ಮ ದೇಶದ ಜನರಿಗೆ ಅವರ ಮಾಡೋ ಕೆಲ್ಸಕ್ಕ ಅಲ್ಲ, ಅವರ ವಿಚಾರಗಳಿಗೆ ಶಿಕ್ಷೆ ಕೊಡತಾರ.

ಆ ದೇಶದಾಗ ನಾಗರಿಕ ಹಕ್ಕು ಅನ್ನುವವು ಯಾವುವೂ ಇಲ್ಲ. ದೊಡ್ಡಣ್ಣ ಹೇಳಿದ್ದ ಕಾನೂನು, ನ್ಯಾಯಾಧೀಶರು, ಪೋಲೀಸರು, ಅವನ ಮಾತು ಕೇಳೋರು.

ದಶಕಗಳ ಹಿಂದ ಬರೆದ ಈ ಕಾದಂಬರಿಗಳು ಈಗ ಮುನ್ನೆಲೆಗೆ ಬಂದಾವು.

ಸುಶಾಂತ ಸಿಂಗ್, photo courtesy: Businessworld

ಈಗ ಹಿಂದಿ ಚಲನಚಿತ್ರ ನಟ ಸುಶಾಂತ ಸಿಂಗ್ ಅವರ ಆತ್ಮಹತ್ಯೆ ಅನ್ನೋದು ಅವರ ಸಾವಿನ ಅನೇಕ ತಿಂಗಳ ನಂತರ ದೊಡ್ಡ ಸುದ್ದಿ ಆಗಿಬಿಟ್ಟದ. ಅವನ ಗೆಳತಿ ರಿಯಾ ಅನ್ನುವ ನಟಿ ಮಾಟಗಾತಿ, ಅಕಿ ಅವನಿಗೆ ನಶೆ ಪದಾರ್ಥದ ಚಟ ಹಚ್ಚಿಸಿದಳು ಅಂತ ಹೇಳಿ ಆರೋಪ ಮಾಡಿ ಆ ಹುಡುಗಿಯನ್ನ ವಿಲನ್ ಮಾಡಾಕ ಹತ್ತಿದಾರು. ಸರಕಾರದ ಪರವಾಗಿ ಇರೋ ಕಂಗನಾ ರಣಾವತ ಅನ್ನುವ ನಟಿ ಸರ್ವಾಂಗ ಶುದ್ಧ ಮಹಿಳೆ ಅಂತ ಬಿಂಬಿಸಿ ಟಿವಿಯವರು ಸುದ್ದಿ ಮಾಡ್ತಾ ಇದ್ದಾರ.

ಇದರಾಗ ಕಾಫ್ಕ ಹಾಗೂ ಅರವೆಲ್ ಅವರ ಇಬ್ಬರ ಕೃತಿಗಳ ಅಂಶಗಳೂ ಅದಾವು. ಇನ್ನೂ ಹೇಳಬೇಕ ಅಂದ್ರ ಇದರಾಗ ಮ್ಯಾಕಾರ್ಥಿವಾದದ ಛಾಯೆ ಐತಿ.

ಅಮೆರಿಕದ ರಾಜಕಾರಣಿ ಜೋಸೆಫ್ ಮ್ಯಾಕಾರ್ಥಿ ಅವರು 1950-55ರವರೆಗೆ ಒಂದು ದೊಡ್ಡ ಆಂದೋಲನ ನಡೆಸಿದರು. ಅದರ ಹಿಂದಿನ ಚಿಂತನೆಗೆ ಮ್ಯಾಕಾರ್ಥಿವಾದ ಅಂತ ಹೆಸರು. ಬಲಪಂಥೀಯರಾಗಿದ್ದ ಜೋಸೆಫ್, ಎಡಪಂಥೀಯರು ದೇಶದ್ರೋಹಿಗಳು ಅಂತ ಹೇಳಿ ಹಣೆಪಟ್ಟಿ ಕಟ್ಟಿ ಗುಲ್ಲು ಎಬ್ಬಿಸುವುದರಾಗ ಯಶಸ್ವಿ ಆದರು.

ಅವರು ಇಡೀ ದೇಶದ ಎಲ್ಲ ನೀತಿನಿರೂಪಣೆ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಚಲನಚಿತ್ರ ಉದ್ಯಮ, ಕಲೆ, ಸಾಹಿತ್ಯ, ಮುಂತಾದ ಕಡೆ ಬರೆ ಎಡಪಂಥೀಯರು ನುಸುಳಿಕೊಂಡುಬಿಟ್ಟಿದ್ದಾರೆ. ಅವರು ರಷಿಯ, ಚೈನಾ, ಕೊರಿಯಾದ ಪರ ಕೆಲಸ ಮಾಡತಾರ, ಅವರನ್ನ ಬಂಧಿಸಿ ಸೆರೆಮನೆಗೆ ತಳ್ಳಿ ಅಂತ ಹೋರಾಟ ನಡೆಸಿದರು.

ರಿಯಾ, photo courtesy: Sakshi Post

ಅಮೆರಿಕ ಸಂಸತ್ತು ಅಮೆರಿಕ ವಿರೋಧಿ ಚಟುವಟಿಕೆಗಳನ್ನ ಪತ್ತೆ ಹಚ್ಚಲಿಕ್ಕೆ ಒಂದು ಸಮಿತಿ ನೇಮಿಸಿ ಅದಕ್ಕ ಇವರನ್ನ ಅಧ್ಯಕ್ಷ ಮಾಡಿತು. ಅಂದಿನ ಕಾಲದ ಸುಮಾರು 20,000 ಸಾಹಿತಿ, ಕಲಾವಿದರು, ಚಿಂತಕರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಹಾಡುಗಾರರು, ಶಿಕ್ಷಕರು ಎಲ್ಲರನ್ನೂ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಅವರು ತಮ್ಮ ಸ್ನೇಹಿತರ ಹೆಸರು ಬಿಟ್ಟುಕೊಡುವಂತೆ, ಅವರ ವಿರುದ್ಧ ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಡ ಹಾಕಲಾಯಿತು.

ಯಾರ ಮನಿಯೊಳಗ ನವ್ಯಕಲೆಯ ಚಿತ್ರ ಇರತದೋ, ಯಾರು ಬಿಳಿಯರು ಹಾಗೂ ಕರಿಯರ ಸ್ನೇಹ ಮಾಡತಾರೋ, ಯಾರು ಅಣು ಬಾಂಬಿನ ವಿರುದ್ಧ ದನಿ ಎತ್ತತಾರೋ, ಅವರೆಲ್ಲರನ್ನೂ ಕಮ್ಯುನಿಸ್ಟ್ ಅಂತ ಪರಿಗಣಿಸಿ ವಿಚಾರಣೆ ನಡೆಸುವುದು, ಜೈಲಿಗೆ ಹಾಕುವುದು ಮಾಮೂಲು ಆಗಿ ಹೋಯಿತು.

ಎಷ್ಟೋ ಜನರ ಕಾಯಂ ನೌಕರಿ ಕಳೆದು, ಅವರನ್ನ ಜೈಲಿಗೆ ಅಟ್ಟಲಾಯಿತು. ರೋಮನ್ ಹಾಲಿಡೇ ಅಂತ ಮನಮೋಹಕ ಚಿತ್ರದ ಕತೆ ಬರೆದ ಡಾಲಟನ ಟ್ರಂಬೋ ಅನ್ನುವ ಲೇಖಕ ಬೇರೆಯವರ ಹೆಸರಿನಲ್ಲಿ ಕತೆ ಬರೆದ. ಅವನಿಗೆ ಆಸ್ಕರ್ ಪ್ರಶಸ್ತಿ ಬಂದರೂ ಅಲ್ಲಿಗೆ ಹೋಗಿ ಅದನ್ನ ಸ್ವೀಕರಿಸಲಿಕ್ಕೆ ಆಗಲಿಲ್ಲ.

ಜೋಸೆಫ್ ಮ್ಯಾಕಾರ್ಥಿ, photo courtesy: Alpha History

ಇದನ್ನು ಅಲ್ಲಿನ ಎರಡು ಪ್ರಮುಖ ಪಕ್ಷಗಳಾದ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಬಣಗಳ ನಾಯಕರು ಜೋಸೆಫ್ ಅವರನ್ನು ಬೆಂಬಲಿಸಿದರು. ಇಷ್ಟು ದೊಡ್ಡ ಅನ್ಯಾಯ ನಡೆಯುತ್ತಾ ಇದ್ದರೂ ಸಹ ಅಲ್ಲಿನ ನ್ಯಾಯಾಲಯಗಳು ಆರೋಪಿಗಳಿಗೆ ನ್ಯಾಯ ಒದಗಿಸಿಕೊಡಲಿಲ್ಲ. ಎಲ್ಲರೂ ಅಲ್ಲಿನ ಆಳುವ ಪಕ್ಷದ ಕೀಲುಗೊಂಬೆಯಂತೆ ನಡೆದುಕೊಂಡರು.

ಇದು ಯಾಕ ಅಂತ ಕೆಲವರು ವಿಶ್ಲೇಷಣೆ ಮಾಡಿದ್ದಾರ. ಟ್ರಂಬೊ ಅವರ ಪ್ರಕಾರ ಹಾಲಿವುಡ್ ಉದ್ಯಮ ಅಥವಾ ಚಿತ್ರಕಲೆ ಅಥವಾ ವಿಶ್ವವಿದ್ಯಾಲಯಗಳು ಜನಸಾಮನ್ಯರ ಚಿಂತನಕ್ರಮದ ಮ್ಯಾಲೆ ಪ್ರಭಾವ ಬೀರತಾವ. ಅದಕ್ಕ ಅವುಗಳ ಮೇಲೆ ಬಲಪಂಥೀಯ, ಅಥವಾ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಪ್ರಭಾವ ಇರಬೇಕೆ ಹೊರತು ಎಡಪಂಥೀಯರ ಪ್ರಭಾವ ಇರಬಾರದು ಅಂತ ಅಲ್ಲಿನ ರಾಜಕಾರಣಿಗಳು ಹಾಗೂ ಉದ್ಯಮಿಗಳು ನಿರ್ಧಾರ ಮಾಡಿದರು.

ಅದರಲ್ಲಿ ಅವರು ಸುಮಾರು ಯಶಸ್ಸುಗಳಿಸಿದರು. ಸೂಪರ್ ಹೀರೋಗಳ ಬಗ್ಗೆ ಮಾಡುವಷ್ಟು ಚಿತ್ರಗಳನ್ನು ಹಾಲಿವುಡ್‍ನವರು ಅಮೆರಿಕದ ಬಡವರ ಬಗ್ಗೆ, ಕರಿಯರ ಬಗ್ಗೆ, ಮಹಿಳೆಯರ ಸಮಸ್ಯೆಗಳ ಬಗ್ಗೆ, ಅಲ್ಪ ಸಂಖ್ಯಾತರ ಬಗ್ಗೆ ಮಾಡೋದಿಲ್ಲ.

ಅಲ್ಲಿನ ಸಿನಿಮಾದೊಳಗ ಖಳನಾಯಕರು ಬೇರೆ ಎಲ್ಲಿಯವರೇ ಆಗಿರಬಹುದು, ಆದರೆ ನಾಯಕರು ಅಮೆರಿಕಾದವರೇ ಮತ್ತ ಬಿಳಿಯರೇ ಆಗಿರತಾರ.

ಈ ಸುಶಾಂತ – ರಿಯಾ ವಿದ್ಯಮಾನ ಸಹಿತ ಅದೇ ರೀತಿ ನಡದದ. ಇದು ಬರೆ ಬಾಲಿವುಡ್ಡಿನ ಖಾನ್‍ಗಳ ಮುಂದಾಳತ್ವ ತಡೆಯಲಿಕ್ಕೆ ಅಲ್ಲ. ಅದು ಬರೆ ಬಿಹಾರ- ಪಶ್ಚಿಮ ಬಂಗಾಳದ ಚುನಾವಣೆ ಸಲುವಾಗಿ ಅಲ್ಲ. ಇದು ವಿಚಾರ ಮೂಲಗಳ ನಿಯಂತ್ರಣದ ಪ್ರಯತ್ನ.

ಬಡವರ- ದಲಿತರ, ಅಲ್ಪ ಸಂಖ್ಯಾತರ, ಮಹಿಳೆಯರ, ಇತರ ಅವಕಾಶ ವಂಚಿತರ ಬಗ್ಗೆ ಚಲನಚಿತ್ರ, ಲೇಖನ, ಚಿತ್ರಕಲೆ, ನಾಟಕ, ಇತ್ಯಾದಿ ಬರಕೂಡದು, ಬಂದರೂ ಹೆಚ್ಚು ಸಂಖ್ಯೆಯ ಜನರನ್ನ ಮುಟ್ಟಬಾರದು. ಅನ್ನೋದು ಅವರ ವಿಚಾರ.

ಎಲ್ಲಾ ರೀತಿಯ ಕಲೆಗಳು, ಲೇಖನ, ಸಿನಿಮಾ, ಸಂಗೀತ, ನಾಟಕ ಅನ್ನುವುದು ಸಹಿತ ಆಳುವ ಪಕ್ಷದ ಆಣತಿಯಂತೆ ನಡೆಯಬೇಕು ಅನ್ನುವುದು ಅವರ ಅಭಿಪ್ರಾಯ.

ಬೆನ್ ಬ್ರಾಡ ಲಿ, photo courtesy: Wikipedia

ಇಂದು ರಿಯಾಳನ್ನು ದಸ್ತಗಿರಿ ಮಾಡಿದವರು ನಾಳೆ ಯಾರ ಮನೆಗೂ ಬರಬಹುದು. ಸಕಾರಣವಿಲ್ಲದೇ ದೇಶದ್ರೋಹಿ ಎಂಬೋ ಹಣೆಪಟ್ಟಿ ಕಟ್ಟುವ ಸೋಂಕುರೋಗ ಎಲ್ಲೆಡೆ ಹರಡಬಹುದು.

ಇದು ಬರಿ ಟಿವಿ ಟಿಆರ್‌ಪಿಗೋಸ್ಕರ, ಅಥವಾ ಯಾವುದೋ ರಾಜ್ಯದ ಚುನಾವಣೆ ತಂತ್ರ ಅಂತ ತಿಳಕೋಂಡ್ರ ನಮ್ಮ ತಪ್ಪು. ಎಲ್ಲ ದೊಡ್ಡ ಸುದ್ದಿಗಳ ಹಿಂದೆ ಮಹತ್ವದ ಸುದ್ದಿ ಅಡಗಿರುತ್ತದೆ ಎನ್ನುವ ಪತ್ರಿಕೋದ್ಯಮ ಗುರು ಬೆನ್ ಬ್ರಾಡ ಲಿ ಅವರ ಮಾತನ್ನ ನಾವು ಮರೆಯಬಾರದು.

ಮರೆತರೆ ಹೆಸರಿಲ್ಲದ ಪೊಲೀಸರು ಬಂದು ಜೋಸೆಫ್‍ನನ್ನು ವಿಳಾಸ ಇಲ್ಲದ ನ್ಯಾಯಾಲಯಕ್ಕೆ ಕರಕೊಂಡು ಹೋಗಿ ಯಾವುದೇ ಆರೋಪ ಮಾಡದೆ ವಿಚಾರಣೆ ನಡೆಸಬಹುದು. ಆ ಜೋಸೆಫ್ ನಮ್ಮಲ್ಲಿ ಯಾರಾದರೂ ಆಗಬಹುದು.

ಏನೋ ಎಜೆಂಡಾ ಇಟ್ಟುಕೊಂಡು ತಪ್ಪು ಮಾಡದ ಮುಗ್ಧರ ಮ್ಯಾಲೆ ಆರೋಪ ಹೊರಿಸಿ ಶಿಕ್ಷೆ ಕೊಡೋ ಜೋಸೆಫ್‍ಗಳು ಸಹ ಹುಟ್ಟಿಕೊಳ್ಳಬಹುದು. ಆ ಜೋಸೆಫ್ ಕೂಡ ನಮ್ಮಲ್ಲಿ ಯಾರಾದರೂ ಆಗಬಹುದು.


ಇದನ್ನೂ ಓದಿ: ಶಿರಾ ಉಪಚುನಾವಣೆ: ಪಕ್ಷಕ್ಕೆ ಸತ್ವಪರೀಕ್ಷೆಯಾಗಿದ್ದು, ಚುನಾವಣೆ ಗೆಲ್ಲಲೇಬೇಕು -ಎಚ್.ಡಿ.ಕೆ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಡೇಟಾಮ್ಯಾಟಿಕ್ಸ್
+ posts