ಬೆಂಗಳೂರಿನ ಡ್ರಗ್ಸ್ ಜಾಲದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಅಂದಂದಿನ ಸುದ್ದಿಗಳನ್ನು ನೋಡಿದ ‘ಅಸಲೀ ಕ್ರೈಂ ರಿಪೋರ್ಟರ್’ಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಾಲೇಜು ಹೈಕಳು ನಿರಾಶರಾಗಿದ್ದಾರೆ. ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಸಂಪೂರ್ಣ ಮರೆಯಾಗಿ ಹೋಗಿಬಿಡುವ ಈ ಸುದ್ದಿಯಬ್ಬರದ ಜೊತೆಗೆ, ತನಿಖೆಯೂ ಮರೆಯಾಗಿಬಿಡುತ್ತದೆ. ಏಕೆಂದರೆ, ಈಗ ಇದ್ದಕ್ಕಿದ್ದಂತೆ ಕರ್ನಾಟಕದ ಹೊರಗಿನ ಪ್ರಕರಣವೊಂದರಿಂದ ಶುರುಮಾಡಿ, ಬೆಂಗಳೂರಿನಲ್ಲಿ ಡ್ರಗ್‍ಜಾಲವನ್ನು ಮೂಲೋತ್ಪಾಟನೆ ಮಾಡಿಬಿಡುತ್ತೇವೆಂದು ಗುಟುರು ಹಾಕುತ್ತಿರುವ ರೀತಿ ‘ಸಂಬಂಧಪಟ್ಟವರಿಗೆ’ ಯಾವ ಭಯವನ್ನೂ ಹುಟ್ಟಿಸುತ್ತಿಲ್ಲ. ಇಂತಹ ಅದೆಷ್ಟೋ ಪ್ರಕರಣಗಳು ಈ ಹಿಂದೆ ನಡೆದುಹೋಗಿವೆ. ಹಲವು ಸಂದರ್ಭಗಳಲ್ಲಿ ತನಿಖೆಯ ಪ್ರಸ್ತಾಪವನ್ನೂ ಮಾಡಲಾಗಿಲ್ಲ; ಉಳಿದ ಪ್ರಕರಣಗಳಲ್ಲಿ ತನಿಖೆ ಆ ಕ್ಷಣದ ‘ಅಪಘಾತ’ದ ಸುತ್ತ ನಡೆದು ಮುಗಿದುಹೋಗಿದೆ. ಏಕೆಂದರೆ ಆಗೆಲ್ಲಾ ‘ದೊಡ್ಡವರ ಮಕ್ಕಳು’ ಅದರಲ್ಲಿದ್ದರು.
ಈ ರೀತಿ ನಿಗೂಢವಾಗಿ ಹೇಳಿದರೆ ಏನೂ ಗೊತ್ತಾಗುವುದಿಲ್ಲ. ಹಾಗೆಂದು ಇಲ್ಲಿ ಮುದ್ರಿಸಬಹುದಾದ ಪುರಾವೆಯಿಲ್ಲದೇ ಬರೆಯುವುದೂ ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ಖಚಿತವಾಗಿ ಗೊತ್ತಿರುವ ಸಂಗತಿಗಳನ್ನು ಬರೆಯದೇ ಇರುವುದೂ ಅಪರಾಧವಾಗಬಹುದು ಎನ್ನುವ ಕಾರಣಕ್ಕೆ ಕೆಲವು ಘಟನೆಗಳನ್ನು ಇಲ್ಲಿ ಉದಾಹರಿಸಲಾಗಿದೆ. ಇವನ್ನು ಓದಿದರೆ ಓದುಗರಿಗೊಂದು ಚಿತ್ರಣ ಸಿಕ್ಕು, ಅಲ್ಲಿಂದ ಮುಂದಕ್ಕೆ ಇವತ್ತಿನ ದಂಧೆಯ ಸ್ವರೂಪ ಮತ್ತು ಇದರ ಸಾಮಾಜಿಕ ಆಯಾಮಗಳು ಅರ್ಥವಾಗುತ್ತವೆ.
ಘಟನೆ ಒಂದು, ಕೆಲವೇ ತಿಂಗಳುಗಳ ಹಿಂದೆ ಕೆಲವು ಎಳೆಯ ಯುವಕರು ಹಂಪೆಗೆ ಹೋಗಿದ್ದವರು ವಾಪಸ್ಸು ಬರುವಾಗ, ಅವರ ಕಾರಿಗೆ ಅಪಘಾತವಾಗಿತ್ತು. ಅದರಲ್ಲಿ ಕರ್ನಾಟಕದ ಸಚಿವರೊಬ್ಬರ ಪುತ್ರನಿದ್ದನೆಂದು ಗುಲ್ಲೆದ್ದಿತ್ತು. ವಾಸ್ತವದಲ್ಲಿ ಸಚಿವರ ಪುತ್ರ ಆ ಕಾರಿನಲ್ಲಿ ಇರಲಿಲ್ಲ. ಅದರ ಜೊತೆಗಿದ್ದ ಕಾರಿನಲ್ಲಿದ್ದ ಸುಪುತ್ರನ ಗೆಳೆಯರು ಅಪಘಾತಕ್ಕೆ ಕಾರಣರಾಗಿದ್ದರು. ಇವರ್ಯಾರೂ ಹಂಪೆಯ ಶಿಲ್ಪಕಲೆಯನ್ನು ಸವಿಯಲೆಂದೋ, ಇತಿಹಾಸವನ್ನರಿಯಲು ಹೋಗಿದ್ದವರೋ ಆಗಿರಲಿಲ್ಲ. ಬದಲಿಗೆ ವಿರೂಪಾಕ್ಷ ದೇವಸ್ಥಾನದ ಪಕ್ಕ ಹರಿಯುವ ನದಿಯನ್ನು ದಾಟಿದರೆ ಇರುವ ಬೇರೊಂದು ಲೋಕದಲ್ಲಿ, ಈ ಲೋಕವನ್ನು ಮರೆಯಲೆಂದೇ ಹೋಗಿದ್ದವರು. ಅಪಘಾತದ ಕುರಿತ ತನಿಖೆಯೂ ಅಸಲೀ ಕಾರಣವನ್ನು ಶೋಧಿಸಲಿಲ್ಲ. ಅಪಘಾತಕ್ಕೆ ಕಾರಣವಾಗಿರಬಹುದಾದ ‘ವಸ್ತುಗಳ’ ಮೂಲವನ್ನೂ ಹುಡುಕಲಿಲ್ಲ. ಆದರೆ ಆ ಸಚಿವರ ಒಬ್ಬರೇ ಮಗ ಹಾಳಾಗುತ್ತಿರುವುದರ ಕುರಿತು, ಅವರ ಸ್ನೇಹಿತರು ಬಹಳ ಅನುಕಂಪ ಹೊಂದಿದ್ದಾರೆ. ಆ ಸಚಿವರು ಕನಿಷ್ಠ ಒಂದು ಸಾವಿರ ಕೋಟಿ ರೂ ಒಡೆಯರು.
ಘಟನೆ ಎರಡು, ಬೆಂಗಳೂರಿನ ನಾಲ್ಕನೇ ಒಂದು ಭಾಗದ (ಅಕ್ರಮ) ಪಬ್, ಬಾರ್‍ಗಳಿಗೆ ರಕ್ಷಣೆ ಕೊಡುತ್ತಾ ಹಫ್ತಾ ವಸೂಲಿ ಮಾಡಿ ಭಾರೀ ಶ್ರೀಮಂತರಾಗಿರುವ ಅವರು ಶಾಸಕರು. ಅವರ ಮಗನ ಹೊಡೆದಾಟವೂ ಸುದ್ದಿಯಾಗಿದೆ. ಆ ಸುಪುತ್ರ ಖತರ್‍ನಾಕ್ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಆ ಹೊಡೆದಾಟದಲ್ಲಿ ಪೆಟ್ಟು ತಿಂದವನನ್ನು ಹುತಾತ್ಮನೆಂದು ಬಿಂಬಿಸಲಾಯಿತು. ಅದು ಮಾತ್ರ ಅಷ್ಟು ವಾಸ್ತವವಲ್ಲ. ಮಾಜಿ ದಿವಾನರೊಬ್ಬರ ಮೊಮ್ಮಗನೋ, ಮರಿಮಗನೋ ಆಗಿದ್ದ ವ್ಯಕ್ತಿಯದ್ದೂ ದಂಧೆಗಳಿದ್ದವು.
ಇಲ್ಲೇ ಒಂದು ಉಪಕಥೆ ಹೇಳಿಬಿಡಬೇಕು. ನಾವು ನೀವೆಲ್ಲರೂ ನೋಡುವ ವೆಬ್-ಅಂತರ್ಜಾಲ-ಒಂದಿದ್ದರೆ, ನಾವು ನೋಡದ ಡಾರ್ಕ್ ವೆಬ್ ಇದೆ. ಆ ಕರಾಳ ಜಾಲದ ಒಳಹೊಕ್ಕಲು ಅದರದ್ದೇ ಆದ ಬ್ರೌಸರ್‍ಗಳೂ ಇವೆ. ಅವುಗಳಲ್ಲಿ ಒಂದು ಆನಿಯನ್. ಅದು ಡೊಮೆಯ್ನ್ ಕೂಡ ಎನ್ನಲಾಗುತ್ತದೆ. ಅದನ್ನು ಈರುಳ್ಳಿಯ ಮೂಲಕ ಡ್ರಗ್ ದಂಧೆ ಎಂದು ಪತ್ರಿಕೆಯೊಂದು ವರದಿ ಮಾಡಿರುವುದು ತಮಾಷೆಯಾಗಿದೆ. ಅಲ್ಲಿನ ವ್ಯವಹಾರ ನಡೆಯುವುದು ಬಿಟ್ ಕಾಯಿನ್‍ಗಳಲ್ಲಿ. ಆ ಟ್ರೇಡಿಂಗ್ ವ್ಯವಹಾರದ ಒಳೇಟುಗಳು, ಈ ಪಬ್‍ನಲ್ಲಿ ಹೊರೇಟುಗಳಿಗೆ ಕಾರಣವಾಗಿದ್ದವು.
ಅದೇನೇ ಇದ್ದರೂ, ಹೊರಜಗತ್ತಿಗೆ ಕರಾಳವೆಂದು ಇವರುಗಳು ತೋರುತ್ತಿರುವ ಒಳಜಗತ್ತಿನ ಪಂಟರುಗಳೇ ಆಗಿದ್ದಾರೆ. ಇಂದಿಗೂ ವ್ಯವಹಾರಗಳು ನಿರಾತಂಕವಾಗಿ ನಡೆಯುತ್ತಿವೆ. ಇನ್ಫೆಂಟ್ರಿ ರಸ್ತೆಯ ಹಳೆಯ ಹೋಟೆಲಿನ ಅಡ್ಡಾವಲ್ಲದೇ, ಬೆಂಗಳೂರಿನಾದ್ಯಂತ ನಿರ್ದಿಷ್ಟವಾದ ಪಬ್ಬುಗಳು, ಮಸಾಜ್ ಪಾರ್ಲರ್‍ಗಳು ಇವೆ.
ಮೇಲಿನವೆರಡು ಎರಡು ದೊಡ್ಡ ಪಕ್ಷಗಳ ದೊಡ್ಡ ಕುಳಗಳಿಗೆ ಸಂಬಂಧಿಸಿದ್ದು ಎಂದು ಪ್ರಾದೇಶಿಕ ಪಕ್ಷಕ್ಕೆ ಬೇಸರವಾಗಬಹುದು. ಅಲ್ಲಿನ ವಾರಸುದಾರರಲ್ಲೂ ಇದಕ್ಕೆ ಹುರಿಯಾಳುಗಳಿದ್ದಾರೆ. ಬಹಳ ಹಿಂದೆ ಎಂಜಿ ರಸ್ತೆಯ ಆಸುಪಾಸಿನಲ್ಲಿ ಕುಡಿದು ಗಲಾಟೆ ಮಾಡಿಕೊಂಡ ವ್ಯಕ್ತಿಯತ್ತ ಎಲ್ಲರ ದೃಷ್ಟಿ ಹರಿಯಬಹುದಾದರೂ, ಅವರಲ್ಲ. ಅವರು ಒಂದಷ್ಟು ದೂರ ಹೋಗಿ, ವಾಪಸ್ಸು ಬಂದಿದ್ದಾರೆಂದು ಡ್ರೈವರ್‌ಗಳು, ಗನ್‍ಮ್ಯಾನ್‍ಗಳು ಹೇಳುತ್ತಾರೆ. ಬದಲಿಗೆ ಹೊರಗೆ ಅಷ್ಟು ಪರಿಚಿತವಲ್ಲದ ಮೊಮ್ಮಗ ಆ ದಿಕ್ಕಿನಲ್ಲಿದ್ದು, ಒಮ್ಮೆ ಮಾತ್ರ ‘ಕೇಸು’ ಹೊರಬಂದಿದೆ.
ಕೇವಲ ರಾಜಕಾರಣಿಗಳ ಮಕ್ಕಳ ಹೆಸರು ಮಾತ್ರ ಬರುತ್ತಿದೆ, ಗ್ಲ್ಯಾಮರ್ ಕಡಿಮೆ ಎಂದುಕೊಳ್ಳಬೇಡಿ. ಖ್ಯಾತ ಸಿನಿನಟರ (ನಟಿಯರಲ್ಲ) ಮಕ್ಕಳು ಡ್ರಗ್ಸ್ ವ್ಯವಹಾರದಲ್ಲಿ ಸಾಕಷ್ಟು ಮುಂದೆ ಹೋಗಿದ್ದಾರೆ. ಈಗಿನ ‘ಇಂಡಿಪೆಂಡೆಂಟ್ ಕ್ಯಾಂಡಿಡೇಟ್’ನ ಮಗನೂ ಅವರಲ್ಲೊಬ್ಬ. ಚಿತ್ರರಂಗದ ಗೌರವಾನ್ವಿತ ಕುಟುಂಬವೊಂದರ ಮೂರನೆ ತಲೆಮಾರಿನ ಕುಡಿಯೊಂದು ಡ್ರಗ್ಸ್‍ನಲ್ಲಿ ಡೀಪಾಗಿ ಇನ್ವಾಲ್ವ್ ಆಗಿರುವುದರ ಬಗ್ಗೆ ಕುಟುಂಬದ ಹೊರಗಿನವರಿಗೂ ಗೊತ್ತಿದೆ.
ಘಟನೆ ಮೂರು: ಕನ್ನಡದ ಖ್ಯಾತ ಹೀರೋ/ವಿಲನ್ ಖ್ಯಾತಿಯ ನಟರೊಬ್ಬರ ಮಗನೂ ಹೀರೋ ಆಗಿದ್ದಾರೆ. ಪಾಪ ಆತ ಸಭ್ಯನೇ. ಆದರೆ ಆತನ ತಮ್ಮ ಡ್ರಗ್ಸ್‍ನ ದಾಸಾನುದಾಸ. ಮೆಡಿಕಲ್ ಕಾಲೇಜು ಉದ್ಯಮಿಯ ಮೊಮ್ಮಗನ ಜೊತೆ ಆಕ್ಸಿಡೆಂಟ್ ಮಾಡಿಕೊಂಡಾಗ ಡ್ರಗ್ಸ್ ವ್ಯವಹಾರವೂ ಹೊರಗೆಬಂದಿತು.
ಇಲ್ಲೇ ಇನ್ನೊಂದು ಉಪಕಥೆ ಹೇಳಬೇಕು. ಈ ಮೊಮ್ಮಗನಿಗೆ ಸೇರಿದ ಅಡ್ಡಾವೊಂದು ಎರಡು ಪತ್ರಿಕಾ ಕಚೇರಿಗಳ ಆಸುಪಾಸಿನಲ್ಲಿದೆ. ಇದೇ ಅಡ್ಡಾಕ್ಕೆ ಎರಡನೇ ಘಟನೆಯಲ್ಲಿನ ಹುತಾತ್ಮನೂ ಖಾಯಂ ಗಿರಾಕಿ. ಆದರೆ, ಈ ಎರಡೂ ಪ್ರಕರಣಗಳ ‘ದೊಡ್ಡವರ’ ಮಕ್ಕಳು ಪರಸ್ಪರ ಲಿಂಕ್ ಹೊಂದಿರುವ ಸಾಧ್ಯತೆ ಕಡಿಮೆ. ಅಂದರೆ ಏನರ್ಥ? ಬೆಂಗಳೂರು ಬೃಹದಾಕಾರವಾಗಿ ಬೆಳೆದ ನಗರ. ನಗರ ಬೆಳೆದಹಾಗೆ ಹಡಬೆ ದುಡ್ಡು ಹುಟ್ಟಿಸುವ ವಿವಿಧ ಕಸುಬುಗಳೂ ಬೆಳೆಯುತ್ತವೆ. ಸಹಜವಾಗಿ ಅಂಥದ್ದರಲ್ಲಿ ದೊಡ್ಡವರೇ ಹೆಚ್ಚಿರುತ್ತಾರೆ. ಇದರಲ್ಲಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಇರುತ್ತಾರೆ. ಇಂತಹ ಹಡಬೆ ದುಡ್ಡು ಇರುವವರ ಮಕ್ಕಳಿಗೆ ಅದನ್ನು ರಾಯಲ್ ಆಗಿ ಖರ್ಚು ಮಾಡುವ ದಾರಿಗಳೂ ಬೇಕಾಗುತ್ತವೆ. ಆಗ ಕಾಣುವವೇ ಡ್ರಗ್ಸ್, ಆಲ್ಕೋಹಾಲ್, ಬೆಟ್ಟಿಂಗ್, ಕಾರ್ ರೇಸ್ ಚಟ ಮತ್ತು ಹುಡುಗಿಯರು. ಹುಡುಗಿಯರಲ್ಲಿ ಕೆಲವರು ತಾವೇ ನಂತರ ಪಬ್ಬುಗಳನ್ನು ನಡೆಸುವ ಮಟ್ಟಕ್ಕೂ ಬೆಳೆಯುತ್ತಾರೆ. ದೂರದೇಶದಲ್ಲಿ ಹೋಗಿ ಸತ್ತ ದೊಡ್ಡ ರಾಜಕಾರಣಿಯ ಮಗ ಅಂತಹ ಒಬ್ಬರನ್ನೇ ಮದುವೆಯಾಗಿದ್ದು. ಅಷ್ಟು ದೂರ ಹೋಗಿದ್ದೇಕೆ, ಅಲ್ಲಿ ಜೀವ ಕಳೆದುಕೊಂಡಿದ್ದೇಕೆ ಎಂಬುದು ಅವರ ವಲಯದಲ್ಲಿ ಯಾರಿಗೂ ಗೊತ್ತಿಲ್ಲದ ಸಂಗತಿಯಲ್ಲ. ಸತ್ತು ಹೋಗಿರುವವರ ಬಗ್ಗೆ ಆಡುವ ಮಾತುಗಳು, ಬದುಕಿದ್ದವರಿಗೆ ಎಚ್ಚರ ಮೂಡಿಸುವುದಕ್ಕೆ ಸಾಧ್ಯವಾದರೇ ಅವುಗಳು ಚರ್ಚೆಯಾಗಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಘಟನೆ ನಾಲ್ಕು: ಲಾಕ್‍ಡೌನ್ ಸಂದರ್ಭದಲ್ಲಿ ಅತ್ಯಗತ್ಯ ಸೇವೆ ಒದಗಿಸುವವರಲ್ಲದೇ ಯಾರೂ ಹೊರಗೆ ಹೋಗುವಂತಿರಲಿಲ್ಲ. ಆಗ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅಪಘಾತವೊಂದು ನಡೆಯಿತು. ಅಪಘಾತವೇ ನಡೆದಿತ್ತಾದ್ದರಿಂದ ಚಿತ್ರನಟಿಯೊಬ್ಬರು ಆ ಕಾರಿನಲ್ಲಿದ್ದದ್ದು ಬೆಳಕಿಗೆ ಬಂದಿತು. ಇದೊಂದು ದೊಡ್ಡ ಸುದ್ದಿಯಾಗಬೇಕಿತ್ತಲ್ಲವೇ? ಆಗಲಿಲ್ಲ, ದೊಡ್ಡವರಿಗೆ ಅದರೊಂದಿಗೆ ಸಂಬಂಧವಿತ್ತು.
ಬೆಂಗಳೂರಿನ ಹಿಂದಿನ ಕಮೀಷನರ್ ಒಮ್ಮೆ ಪತ್ರಿಕಾಗೋಷ್ಠಿಯಲ್ಲೇ ಇದ್ದಕ್ಕಿದ್ದಂತೆ ಒಂದು ಮಾತು ಜಾರಿಸಿದ್ದರು. ‘ಹೀರೋಯಿನ್ನುಗಳು ಒಂದು ಎರಡು ಸಿನೆಮಾ ಸಹಾ ಮಾಡಿಲ್ಲ. ಅವರಿಗೆ ಕೆಲವರು ಬೆಂಜ್, ಜಾಗ್ವಾರ್ ಕಾರ್ ಗಿಫ್ಟ್ ಕೊಡ್ತಿದ್ದಾರೆ. ಇದು ಹೇಗೆ ಸಾಧ್ಯ? ತನಿಖೆ ಮಾಡದೇ ಬಿಡಲ್ಲ’ ಅಂದುಬಿಟ್ಟಿದ್ದರು. ಅಂತಹ ಯಾವ ತನಿಖೆಯೂ ನಡೆದ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಂತೂ ಇಲ್ಲ.
ಗಮನಿಸಬೇಕಾದ ಸಂಗತಿಯೇನೆಂದರೆ ಇವೆಲ್ಲವೂ ಒಂದು ಪ್ಯಾಕೇಜ್. ಇವೆಲ್ಲಕ್ಕೂ ಒಬ್ಬರು ಕಿಂಗ್‍ಪಿನ್ ಇಲ್ಲ. ಡ್ರಗ್ಸ್ ದಂಧೆಗೂ ಇಲ್ಲ. ಇವು ಬೆಳೆಯುತ್ತಿರುವ ನಗರದಲ್ಲಿ ಹುಟ್ಟಿಕೊಳ್ಳುವ ಕಪ್ಪುಹಣದ ಮದ ಯಾವೆಲ್ಲಾ ಕುಟುಂಬಗಳಲ್ಲಿ ಏರುತ್ತಿರುತ್ತದೋ, ಆ ಕುಟುಂಬಗಳ ಕುಡಿಗಳ ಮದವನ್ನು ತಣಿಸುವ ನಿಟ್ಟಿನಲ್ಲಿ ಇವು ನಡೆಯುತ್ತಿವೆ. ರಾಜ್ಯದಲ್ಲೇ ಅತೀ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿರುವ ರಾಜಕಾರಣಿಗಳ ಪೈಕಿ ಮೊದಲ ಐದು ಜನರಲ್ಲಿ ನಾಲ್ಕು ಜನರ ಮನೆಗಳಲ್ಲಿ ಅಂತಹ ಕುಡಿಗಳಿದ್ದಾರೆ. ಇಂಥವರಿಗೆಂದೇ ಪಾರ್ಟಿಗಳು ಸಂಘಟಿತವಾಗುತ್ತವೆ. ತೀರಾ ಕಿಕ್ ಏರಿದಾಗ ಜೊತೆಯಲ್ಲಿದ್ದವರಿಗೋ, ಅಲ್ಲಿನ ಕೆಲಸಗಾರರಿಗೋ ಬಡಿಯುತ್ತಾರೆ, ಅಲ್ಲಿಂದ ಹಾಗೆ ಕಾರೇರಿ ಹೊರಟರೆ ಅಪಘಾತಗಳೂ ಆಗುತ್ತವೆ. ಅಥವಾ ಓವರ್‍ಡೋಸ್ ಆಗಿಯೂ ಸಾಯುತ್ತಾರೆ.
ಮೇಲೆ ಹೇಳಲಾದ ಘಟನೆಗಳಲ್ಲಿ ಯಾವೊಂದರ ಜಾಡುಹಿಡಿದು ಹೊರಟಿದ್ದರೂ, ಪೊಲೀಸರಿಗೆ ಅಂದೇ ಲಿಂಕ್ ಸಿಕ್ಕಿರುತ್ತಿತ್ತು. ಆದರೆ, ಅವರು ಒಂದು ಹಂತದ ನಂತರ ಹೋಗಲಿಲ್ಲ. ಒಂದು ವೇಳೆ ಇವೆಲ್ಲವನ್ನೂ ಪೊಲೀಸರು ಹಿಡಿದು ಬಂದ್ ಮಾಡಿಬಿಟ್ಟರೆ ಏನಾಗುತ್ತದೆ. ಈ ಕುಬೇರರ ಮಕ್ಕಳು ಗೋವಾಗೆ ಹೋಗಿ ಅದನ್ನೇ ಮಾಡುತ್ತಾರೆ. ಅಲ್ಲಿಯೂ ಆಗದಿದ್ದರೆ, ಮಾರಿಷಸ್, ಮಕಾವು, ಬೆಲ್ಜಿಯಂ ಇನ್ನೆಲ್ಲೋ ಹೋಗುತ್ತಾರೆ. ಬೇಕಾಬಿಟ್ಟಿ ಖರ್ಚು ಮಾಡಬಹುದಾದಷ್ಟು ಹಣ ಸೇರಿಕೊಳ್ಳುವುದನ್ನು ತಡೆಯಲಾಗದಷ್ಟು ಕಾಲ ಇವನ್ನೂ ತಡೆಯಲಾಗದು.
ಇಂತಹ ಕುಟುಂಬಗಳ ಗಂಡು ಮಕ್ಕಳು ಅಂತಹ ಏನೋ ಒಂದು ಆಗಿ ಹಾಳಾಗುವುದು ಭಾರೀ ದೊಡ್ಡ ಸಾಮಾಜಿಕ ಸಮಸ್ಯೆಯಲ್ಲ. ಜೊತೆಗೆ ಇಡೀ ಡ್ರಗ್ ದಂಧೆ ಇವರಿಗಾಗಿಯೇ ನಡೆಯುವುದಲ್ಲ. ವಿಪರೀತ ಒತ್ತಡಗಳಲ್ಲಿ ಕೆಲಸ ಮಾಡುತ್ತಾ, ವಿಪರೀತ ಸಂಬಳ ಸಂಪಾದಿಸುವ ಸಾಫ್ಟ್‍ವೇರ್ ಜನರು, ಕೆಲವು ಹಳೆಯ ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳದ್ದೊಂದು ಸ್ತರವಿದೆ. ಬೆಂಗಳೂರು ಮತ್ತು ಕರಾವಳಿಯ ತಲಾ ಒಂದೊಂದು ಮೆಡಿಕಲ್ ಕಾಲೇಜುಗಳು ಅದಕ್ಕೆ ಬಹುಕಾಲದಿಂದ ಖ್ಯಾತವಾಗಿವೆ. ಅದರ ನಂತರದ್ದು ವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ದೊಡ್ಡ ವಿಜ್ಞಾನಿಗಳ ಮಕ್ಕಳು (ಕೆಲವು ಪ್ರಖ್ಯಾತ ಪ್ರಕರಣಗಳಿದ್ದು, ತಂದೆ ತಾಯಂದಿರ ಘನತೆಯ ಕಾರಣಕ್ಕೆ ಗುಪ್ತವಾಗಿಯೂ ಹೇಳಲಾಗದ ಉದಾಹರಣೆಗಳವು) ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದಾರೆ. ಇದೇ ಸ್ತರದಲ್ಲಿ ಬೆಂಗಳೂರಿನ ಶ್ರೀಮಂತರ ಮಕ್ಕಳು ಓದುವ ವಿವಿಧ ಬಗೆಯ ಕಾಲೇಜುಗಳ ವಿದ್ಯಾರ್ಥಿಗಳೂ ಬರುತ್ತಾರೆ. ಅಲ್ಲಿಂದ ನಂತರದ್ದು ಬೆಂಗಳೂರಿನ ಬಡವರ ಏರಿಯಾಗಳದ್ದು. Thinner, paint, puncture solution, whitener ಇತ್ಯಾದಿಗಳಲ್ಲಿ ಮುಳುಗೇಳುವ ಯುವಕರ ಸ್ತರ ಅದು.
ತೀರಾ ದೊಡ್ಡವರಾದರೆ LSD, MDMA ತೆಗೆದುಕೊಳ್ಳುತ್ತಾರೆ. ಇವನ್ನು ಪಾರ್ಟಿ ಡ್ರಗ್ಸ್ ಎಂದೂ ಕರೆಯುತ್ತಾರೆ. ಜನರೇಟರ್ ಹೊರಡಿಸುವ ಶಬ್ದಕ್ಕೂ ಡ್ಯಾನ್ಸ್ ಮಾಡುವಷ್ಟು ಯೂಫೋರಿಯಾ ತಂದುಕೊಡಬಲ್ಲವು ಎಂದೇ ಅವು ಫೇಮಸ್ಸು. ಮಧ್ಯಮ ಸ್ತರದವರ ನಡುವೆ ಹ್ಯಾಷ್ ಆಯಿಲ್ (ಗಾಂಜಾದಿಂದಲೇ ತಯಾರಿಸುವ ಈ ಸದ್ಯ 10 ಮಿ.ಲೀ.ಗೆ ಏಳೆಂಟು ಸಾವಿರ ತಗುಲುವ), ಕೊಕೈನ್ ಇತ್ಯಾದಿಗಳು ಹೆಚ್ಚು ಚಲಾವಣೆಯಲ್ಲಿವೆ. ಈ ಮಧ್ಯಮ ಹಾಗೂ ತಳಸ್ತರದ ಯುವಜನರನ್ನು ಹಾಳು ಮಾಡುತ್ತಿರುವ ದಂಧೆಯ ಮೇಲೆ ಹೆಚ್ಚು ದಾಳಿ ನಡೆದರೆ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅನುಕೂಲವಾಗುತ್ತದೆ.
ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟರೆ ಅಂಥದ್ದನ್ನು ಮಾಡಿಯೂಬಿಟ್ಟಾರು. ಆದರೆ, ಅವೇನು ಆಗುವ ಸಾಧ್ಯತೆ ಕಾಣುತ್ತಿಲ್ಲ. ಏಕೆಂದರೆ ಹಿಂದಿನ ಯಾವ ಎಪಿಸೋಡಿನಲ್ಲೂ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ. ಈಗಂತೂ ಇದಕ್ಕೆ ಬೇರೊಂದು ಆಯಾಮವೂ ಕಾಣುತ್ತಿದೆ. ‘ಬಿಜೆಪಿಯೊಳಗಿನ ನಾಯಕರು ಇದರಲ್ಲಿ ಇದ್ದರೂ ಬಿಡುವುದಿಲ್ಲ’ವೆಂದು ಮುಖ್ಯಮಂತ್ರಿಗಳ ಸುಪುತ್ರ ಹೇಳುತ್ತಿರುವುದರ ಹಿಂದೆ ಹಲವರಿಗೆ ಬೇರೆ ವಾಸನೆ ಕಾಣುತ್ತಿದೆ. ಅದ್ಯಾಕೆ ಬಿಜೆಪಿಯೊಳಗಿನ ನಾಯಕರು ಎಂದು ನಿರ್ದಿಷ್ಟವಾಗಿ ಹೇಳುತ್ತಿದ್ದಾರೆ? ಸದ್ಯದಲ್ಲೇ ನಡೆಯಬೇಕಿರುವ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಕೆಲವರನ್ನು ಹದ್ದುಬಸ್ತಿನಲ್ಲಿಡಲು ನಡೆಯುತ್ತಿರುವ ಹುನ್ನಾರವಿದು ಎಂಬುದು ಅವರ ಗುಮಾನಿ.
ಅದೇನೇ ಇದ್ದರೂ, ಈ ಡ್ರಗ್ ದಂಧೆಯ ತನಿಖೆ ದೊಡ್ಡವರ ಮನೆ ಬಾಗಿಲಿಗೆ ಹೋಗಿ ನಿಲ್ಲುವ ತನಕ ಇನ್ನು ಕೆಲವೇ ದಿನಗಳಲ್ಲಿ ತಣ್ಣಗಾಗುತ್ತದೆ. ಅಷ್ಟು ಹೊತ್ತಿಗೆ ಟಿವಿ ಚಾನೆಲ್ಲುಗಳಿಗೆ ಬೇರೊಂದು ಟಿಆರ್‍ಪಿ ಸರಕು ಸಿಕ್ಕಿರುತ್ತದೆ. ಕನಿಷ್ಠ ಜನಸಾಮಾನ್ಯರ ಮನೆ ಮಕ್ಕಳನ್ನು ನಾಶ ಮಾಡುತ್ತಿರುವ ದಂಧೆಗಾದರೂ ಕಡಿವಾಣ ಹಾಕುವತ್ತ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಕೊಂಡೊಯ್ದರೆ ಈ ಪ್ರಕರಣದಿಂದ ಆಗುವ ಲಾಭ ಅದು ಎಂದು ಸಮಾಧಾನ ಪಟ್ಟುಕೊಳ್ಳಬಹುದು.


