ದೆಹಲಿಯ ರೈಲ್ವೇ ಹಳಿಗಳ ಬಳಿ ಇರುವ ಕೊಳಗೇರಿಗಳನ್ನು ತಕ್ಷಣಕ್ಕೆ ಕೆಡವಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ಕಾನೂನು ಸುದ್ದಿ ವೆಬ್‌ಸೈಟ್ ಲೈವ್ ಲಾ.ಇನ್ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ಆಗಸ್ಟ್ 31ರಂದು ಈ ಕೊಳೆಗೇರಿಗಳನ್ನು ತೆಗೆದುಹಾಕುವಂತೆ ಆದೇಶಿಸಿತ್ತು.
ರೈಲ್ವೇ ಇಲಾಖೆಯು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ 4 ವಾರಗಳಲ್ಲಿ ಪರಿಹಾರ ಕಂಡುಕೊಳ್ಳುವವರೆಗೆ ರೈಲ್ವೆ ಹಳಿಗಳ ಬಳಿಯ ಕೊಳಗೇರಿಗಳನ್ನು ತೆರವುಗೊಳಿಸಲಾಗುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬಾಬ್ದೆ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ
ಮೂರು ತಿಂಗಳ ಒಳಗಾಗಿ ನವದೆಹಲಿಯ 140 ಕಿಲೋಮೀಟರ್ ಉದ್ದದ ರೈಲ್ವೆ ಹಳಿಗಳ ಸುತ್ತಲಿನ ಸುಮಾರು 48,000 ಕೊಳಗೇರಿ ವಾಸಸ್ಥಳಗಳನ್ನು ತೆಗೆದುಹಾಕುವಂತೆ ಸುಪ್ರೀಂ ನಿರ್ದೇಶಿಸಿತ್ತು. ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಅರ್ಜಿ ಸಲ್ಲಿಸಿದ್ದರು.
ಕೊಳಗೇರಿಗಳನ್ನು ತೆಗೆದುಹಾಕುವ ಆದೇಶಕ್ಕೆ ಯಾವುದೇ ನ್ಯಾಯಾಲಯ ತಡೆ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ನಿರ್ದೇಶಿಸಿತ್ತು.
ಇದನ್ನೂ ಓದಿ: ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ; ‘ರಸೋಕಿನ’ ತಂಡದಿಂದ ವಿಶಿಷ್ಟ ಪ್ರತಿರೋಧ
ದೆಹಲಿಯ ಎನ್‌ಸಿಟಿ (National Capital Territory) ಪ್ರದೇಶದಲ್ಲಿ 140 ಕಿ.ಮೀ ಮಾರ್ಗದ ಉದ್ದದ ಟ್ರ್ಯಾಕ್ ಬಳಿ ಕೊಳಗೇರಿಗಳಿವೆ ಎಂದು ರೈಲ್ವೆ ಇಲಾಖೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ನಂತರ ನ್ಯಾಯಪೀಠ ಈ ಆದೇಶ ನೀಡಿತ್ತು. ಇದರಲ್ಲಿ ಸುಮಾರು 70 ಕಿ.ಮೀ ಮಾರ್ಗದ ಉದ್ದದ ಹಳಿಗಳ ಮೇಲೆ ಸಮೀಪದಲ್ಲಿರುವ ದೊಡ್ಡ ಕೊಳಗೇರಿ ಗುಡಿಸಲುಗಳು ಪರಿಣಾಮ ಬೀರುತ್ತಿವೆ ಎಂದು ರೈಲ್ವೆ ಹೇಳಿದೆ. ಜೊತೆಗೆ ಅತಿಕ್ರಮಣ ಮಾಡಿರುವ ಕೊಳಗೇರಿಗಳನ್ನು ತೆಗೆದುಹಾಕುವಲ್ಲಿ “ರಾಜಕೀಯ ಹಸ್ತಕ್ಷೇಪ”ವಿದೆ ಎಂದು ರೈಲ್ವೆ ನ್ಯಾಯಾಲಯಕ್ಕೆ ತಿಳಿಸಿತ್ತು.
ಸುಪ್ರೀಂ ಆದೇಶದ ನಂತರ, ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕೋರಿ ಅಜಯ್ ಮಾಕನ್ ಈ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಕೊಳಗೇರಿ ನಿವಾಸಿಗಳನ್ನು ಹೊರಹಾಕುವ ಆದೇಶವನ್ನು ಹಿಂಪಡೆಯಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೂ ಸುಪ್ರೀಂ ಕೋರ್ಟ್ ಕೊಳಗೇರಿಗಳನ್ನು ತೆಗೆದುಹಾಕುವಂತೆ ಆದೇಶಿಸಿತ್ತು.
ಸದ್ಯ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಕಾರ್ಯರೂಪಕ್ಕೆ ತರಲು ಸಮಯ ಬೇಕು ಎಂದಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಇದು ಸ್ಲಂ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್ ನೀಡಿದಂತಾಗಿದೆ.


