‘ರಸೋಕಿನ’ ತಂಡವು, “ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ” ಎಂಬ ಪೋಸ್ಟರ್ ತಯಾರಿಸಿ, ಹಿಂದಿ ದಿವಸ್‌ಗೆ ವಿಶಿಷ್ಟವಾದ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದೆ. ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇದು ವೈರಲ್ ಆಗುತ್ತಿದೆ.

ಮೈಸೂರಿನ ಸಮಾನ ಮನಸ್ಕ ಗೆಳೆಯರು ಒಟ್ಟುಗೂಡಿ ಆರಂಭಿಸಿರುವ ರಸೋಕಿನ ತಂಡವು, ಕನ್ನಡದ ಕಂಪನ್ನು ಪಸರಿಸುವ ಸಲುವಾಗಿ ಕೆಲಸ ಮಾಡುತ್ತಿದೆ.

ಸಿನಿಮಾ, ಸಂಗೀತ, ಸಾಹಿತ್ಯ, ರಂಗಭೂಮಿಗೆ ಸಂಬಂಧಿಸಿದಂತೆ ವಿಭಿನ್ನ ರೀತಿಯಲ್ಲಿ ಪೋಸ್ಟರ್‌ಗಳನ್ನು ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದರೊಟ್ಟಿಗೆ, ವಿಶಿಷ್ಟವಾದ ಸಾಹಿತ್ಯಿಕ ವಿನ್ಯಾಸಗಳುಳ್ಳ ಕನ್ನಡದ ಟೀ-ಶರ್ಟ್‌ಗಳ ತಯಾರಿಕೆಯನ್ನೂ ಮಾಡುತ್ತಿದ್ದಾರೆ. ವಾಲ್‌ಫ್ರೇಮ್, ಗ್ರೀಟಿಂಗ್ಸ್‌, ಪೋಸ್ಟರ್‌ಗಳನ್ನು ತಯಾರಿಸಿ ಒಂದು ಉತ್ಪನ್ನವಾಗಿಯೂ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ

ಇದೀಗ ಹಿಂದಿ ದಿವಸ್‌ಗೆ ವಿರೋಧವನ್ನು ವ್ಯಕ್ತಪಡಿಸುತ್ತಾ, ಕನ್ನಡದ ಪ್ರಮುಖ ಕವಿ ಜಿ.ಪಿ.ರಾಜರತ್ನಂ ಬರೆದಿರುವ ಪ್ರಖ್ಯಾತ ಸಾಲೊಂದನ್ನು ಬಳಸಿಕೊಂಡು ಪೋಸ್ಟರ್ ತಯಾರಿಸಿದ್ದಾರೆ. ಹಿಂದಿ ಹೇರಿಕೆಯನ್ನು ವಿರೋಧಿಸುವ ವಿಶಿಷ್ಟ ಪ್ರತಿಭಟನೆಗಳಲ್ಲಿ ಇದೂ ಒಂದು.

ಇದರೊಟ್ಟಿಗೆ, ಕನ್ನಡ ಮತ್ತು ಕಲೆಗೆ ಕೊಡುಗೆ ನೀಡಿರುವವರ ನೆನಕೆಗಾಗಿ, ಅವರ ಜನ್ಮದಿನದ ಗ್ರೀಟಿಂಗ್ಸ್‌‌ಗಳನ್ನು ವಿನ್ಯಾಸಗೊಳಿಸುತ್ತಾರೆ. ಇದು ಈಗಾಗಲೇ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ರಸೋಕಿನ ತಂಡದ ನನಿತ್.ಬಿ.ಎಸ್ ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿ, “ನಮ್ಮ ಪ್ರತಿಕ್ರಿಯೆಯಲ್ಲಿ ವಿಶೇಷತೆಯೇನಿಲ್ಲ. ನಮ್ಮ ನಿಲುವನ್ನು ಈ ಪೋಸ್ಟರ್ ಮುಖಾಂತರವೇ ಹೇಳಿದ್ದೇವೆ. ಹಿಂದಿ ದಿವಸ್ ಆಚರಿಸ್ತೀರ. ಆಚರಿಸಿಕೊಳ್ಳಿ. ಅದಕ್ಕೆ ನಮ್ಮ ವಿರೋಧವೇನಿಲ್ಲ.
ನಮ್ಮ ವಿರೋಧವಿರುವುದು ಕನ್ನಡನಾಡಿನಲ್ಲಿ ‘ಹಿಂದಿ ದಿವಸ್’ ಆಚರಣೆ ಮಾಡುವುದರ ಬಗ್ಗೆ. ಕನ್ನಡ ನಾಡಿನ ಮೇಲೆ ಇದು ಹಿಂದಿ ಹೇರಿಕೆಯಲ್ಲದೆ ಮತ್ತಿನ್ನೇನು ಆಗಿರಲಾರದು” ಎಂದು ಹೇಳಿದರು.

ತಂಡದ ಮತ್ತೊಬ್ಬರಾದ ಕಿರಣ್.ಬಿ.ಕೆ ಪ್ರತಿಕ್ರಿಯಿಸಿ, “ಇದೂ ಕೂಡ ಒಂದು ರೀತಿಯ ಪ್ರತಿಭಟನೆಯೇ ಆಗಿದೆ. ಯಾರಿಗೆ ಯಾವ ಪ್ರತಿಭಟನೆಯ ಭಾಷೆ ಗೊತ್ತಿದೆಯೋ ಹಾಗೆ ಪ್ರತಿಭಟಿಸುತ್ತಾರೆ. ನಮಗೆ ಭಾಷೆಯೇ ಪ್ರತಿಭಟನೆಯ ಸಾಧನ” ಎಂದು ಹೇಳಿದರು. 

ದೇಶದಲ್ಲಿ ಹಿಂದಿ ಹೇರಿಕೆಯ ಸಂಚು ವ್ಯಾಪಕವಾಗಿ ನಡೆಯುತ್ತಿದ್ದು, ಹಲವು ಜನ ಪ್ರಗತಿಪರ ಚಿಂತನೆಯುಳ್ಳವರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಸೇರಿದಂತೆ ಅನೇಕರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್ ದನಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts