ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ ರಾಜಧಾನಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಆದರೂ ಕೂಡ ಸರ್ಕಾರ ಐಸಿಯು ಮತ್ತು ಐಸಿಯು ವೆಂಟಿಲೇಟರ್‌ಗಳ ಕೊರತೆಯನ್ನು ನೀಗಿಸಲಾಗಿಲ್ಲ.
ಬೆಡ್‌ಗಳ ಕೊರತೆ ಶುರುವಾಗಿ ಐದು ದಿನಗಳಾದರೂ ಈವರೆಗೆ ಬಿಬಿಎಂಪಿ ಯಾವುದೆ ಕ್ರಮ ಕೈಗೊಂಡಿಲ್ಲ. ಬೆಡ್ ಇಲ್ಲದ ಕಾರಣ 46 ವರ್ಷದ ಸೋಂಕಿತ ವ್ಯಕ್ತಿಬಲಿಯಾಗಿದ್ದಾರೆ. ರೋಗಿಯನ್ನು ಬೊಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಸರ್ಕಾರಿ ಕೋಟ ಅಡಿಯಲ್ಲಿ ಕಳುಹಿಸಲಾಗಿತ್ತು.
ಇದನ್ನೂ ಓದಿ: ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಕೇಂದ್ರದ ವಿರುದ್ಧ ರಾಹುಲ್ ಕಿಡಿ
ಆದರೆ, ರಾತ್ರಿ ಅವರ ಪರಿಸ್ಥಿತಿ ಹದಗೆಟ್ಟರೂ ಆಸ್ಪತ್ರೆ ಸಿಬ್ಬಂದಿ ಭಯದಿಂದ ರೋಗಿಯನ್ನು ದೂರವೇ ಇಟ್ಟಿದ್ದಾರೆ. ರೋಗಿಯ ಆಕ್ಸಿಜನ್ ಲೆವೆಲ್ 40% ಗೆ ಇದ್ದರೂ ಆಸ್ಪತ್ರೆ ಬೆಡ್ ವ್ಯವಸ್ಥೆ ಮಾಡಲಿಲ್ಲ. ಬದಲಾಗಿ ಆಪೊಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿದರು. ಆದರೆ ಮಾರ್ಗ ಮಧ್ಯೆಯೇ ರೋಗಿ ಸಾವನ್ನಪ್ಪಿದ್ದಾರೆ ಎಂದು ಮರ್ಸಿ ಏಂಜಲ್ಸ್ ಎಂಬ ಎನ್‌ಜಿಒದ ತೌಸೀಫ್ ಅಹ್ಮದ್ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಸರಿಯಾಗಿ ಅಂದಾಜು ಮಾಡಿಲ್ಲ. ಹಾಗಾಗಿ ನಾವು ಬೆಡ್‌ಗಳ ಸಮಸ್ಯೆ ಎದುರಿಸುತ್ತಿದ್ದೇವೆ. ಅವರಿಗೆ ಒದಗಿಸಿರುವ ಅಂಕಿ ಅಂಶಗಳು ಬೋಗಸ್ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಹೇಳಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ನಗರದ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 144 ಐಸಿಯು ವೆಂಟಿಲೇಟರ್ ಹಾಸಿಗೆಗಳಿವೆ, ಜೊತೆಗೆ ಖಾಸಗಿ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ 418 ಹಾಸಿಗೆಗಳಿವೆ. ಆದರೆ, ಕೊರೊನಾ ರೋಗಿಗಳಿಗೆ ಮಾತ್ರ ಹಾಸಿಗೆಗಳು ಸಿಗುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಉಮರ್ ಖಾಲಿದ್ ಮತ್ತು ಕೆ.ಎಲ್.ಅಶೋಕ್: ನಮ್ಮ ಕಣ್ಣೆದುರಿಗಿನ ಸತ್ಯವೊಂದನ್ನು ಚರ್ಚಿಸೋಣ.
ಆದರೆ, ಅಧಿಕೃತವಾಗಿ, ನಗರದಲ್ಲಿ ಐಸಿಯುನಲ್ಲಿ ದಾಖಲಾಗಿರುವ ಕೋವಿಡ್ -19 ರೋಗಿಗಳು 263 ಮಾತ್ರ. ಇದು 46.7% ರಷ್ಟು. ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಹೇಳುವಂತೆ ಖಾಸಗಿ ಕೋಟಾ ರೋಗಿಗಳು ಅನೇಕ ಹಾಸಿಗೆಗಳನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ.

ಐಸಿಯು ಬೆಡ್ ಕೊರತೆ ಬಗ್ಗೆ ಕುರಿತು ಮಾತನಾಡಿದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, ಆಸ್ಪತ್ರೆಗೆ ಕಳುಹಿಸಬೇಕಿದ್ದ ಅನೇಕ ಕೊರೊನಾ ಸೋಂಕಿತರನ್ನು ಮನೆಗಳಿಗೆ ಕಳುಹಿಸಲಾಯಿತು. ಹೀಗಾಗಿ ಅನೇಕ ರೋಗಿಗಳು ಗಂಭೀರ ಪರಿಸ್ಥಿತಿಯಲ್ಲಿದ್ದು, ಐಸಿಯು ಬೆಡ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಜೊತೆಗೆ ವೈದ್ಯಕೀಯ ಮೂಲಸೌಕರ್ಯಗಳು ದುರ್ಬಲವಾಗಿರುವ ಸುತ್ತಮುತ್ತಲಿನ ಜಿಲ್ಲೆಗಳ ಜನರು ಸಹ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದು ಕೂಡ ಬೆಡ್‌ಗಳ ಕೊರತೆಗೆ ಕಾರಣವಾಗಿದೆ ಎನ್ನಲಾಗಿದೆ.


