ಲೋಕಸಭಾ ಚುನಾವಣೆ ವೇಳೆ ಬಿಜೆಪಿಯನ್ನು ಬೆಂಬಲಿಸಿತ್ತು ಎಂದು ಕಳೆದ ತಿಂಗಳಷ್ಟೇ ಭಾರಿ ವಿವಾದಕ್ಕೊಳಗಾಗಿದ್ದ ಫೇಸ್‌ಬುಕ್ ಇದೀಗ ಮತ್ತೊಂದು ಸಮಸ್ಯೆಯನ್ನು ಮೈಗೆಳೆದು ಕೊಂಡಿದೆ. ಫೇಸ್‌ಬುಕ್‌ನ ಸಹ ಅಪ್ಲಿಕೇಶನ್ ಆದ ಇನ್ಸ್ಟಾಗ್ರಾಮ್ ತನ್ನ ಬಳಕೆದಾರರ ಮೊಬೈಲ್ ಫೋನಿನ ಕ್ಯಾಮರಾಗಳನ್ನು ಅನಧಿಕೃತವಾಗಿ ಬಳಸಿ ಬೇಹುಗಾರಿಕೆ ನಡೆಸುತ್ತಿದೆ ಎಂದು ಫೇಸ್‌ಬುಕ್ ಕಂಪೆನಿ ಮೇಲೆ ಮೊಕದ್ದಮೆ ಹೂಡಲಾಗಿದೆ.
ಫೋಟೋ ಹಂಚಿಕೆ ಅಪ್ಲಿಕೇಶನ್ ಆದ ಇನ್ಸ್ಟಾಗ್ರಾಮ್, ಐಫೋನ್ ಕ್ಯಾಮೆರಾಗಳನ್ನು ಆಪ್ ಬಳಸದ ಸಮಯದಲ್ಲೂ ಸಹ ತೆರೆಯುತ್ತಿದೆ ಎಂದು ಜುಲೈನಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದಾಗಿ ವಿವಾದ ಹುಟ್ಟಿಕೊಂಡಿತ್ತು. ಆದರೆ ಫೇಸ್‌ಬುಕ್ ಈ ವರದಿಗಳನ್ನು ನಿರಾಕರಿಸಿ, ಅಪ್ಲಿಕೇಷನ್‌ನಲ್ಲಿ ದೋಷಗಳಿವೆ, ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿತ್ತು.
ಇದನ್ನೂ ಓದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದ ಫೇಸ್‌ಬುಕ್‌ನ ಅಂಖಿದಾಸ್: ವಾಲ್ ಸ್ಟ್ರೀಟ್ ಜರ್ನಲ್ ತೆರೆದಿಟ್ಟ ಸ್ಪೋಟಕ ಸತ್ಯ!
ಇದೀಗ ನ್ಯೂಜೆರ್ಸಿಯ ಬ್ರಿಟಾನಿ ಕಾಂಡಿಟಿ ಎಂಬ ಇನ್ಸ್ಟಾಗ್ರಾಮ್ ಬಳಕೆದಾರ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಅಪ್ಲಿಕೇಶನ್ ಕ್ಯಾಮೆರಾ ಬಳಕೆ ಮಾಡಿರುವುದು ಉದ್ದೇಶಪೂರ್ವಕವಾಗಿಯೆ ಆಗಿದೆ. ಬಳಕೆದಾರರ ಲಾಭದಾಯಕ ಮತ್ತು ಅಮೂಲ್ಯವಾದ ಡೇಟಾವನ್ನು ಸಂಗ್ರಹಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಅವರು ಆರೋಪಿದ್ದಾರೆ.

“ತಮ್ಮ ಸ್ವಂತ ಮನೆಗಳ ಗೌಪ್ಯತೆ ಸೇರಿದಂತೆ ತಮ್ಮ ಬಳಕೆದಾರರ ಮೇಲೆ ಅತ್ಯಂತ ಖಾಸಗಿ ಮತ್ತು ನಿಕಟವಾದ ವೈಯಕ್ತಿಕ ಡೇಟಾವನ್ನು ಪಡೆದು ಅದನ್ನು ಮಾರ್ಕೆಟ್ ರಿಸರ್ಚ್‌ಗೆ ಬಳಕೆ ಮಾಡುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಲು ಫೇಸ್‌ಬುಕ್ ನಿರಾಕರಿಸಿದೆ.
ಕಳೆದ ತಿಂಗಳು ಸಲ್ಲಿಸಿದ ಮೊಕದ್ದಮೆಯೊಂದರಲ್ಲಿ, ಫೇಸ್‌ಬುಕ್ ತನ್ನ 100 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಬಳಕೆದಾರರ ಬಯೋಮೆಟ್ರಿಕ್ ಡೇಟಾವನ್ನು ಅಕ್ರಮವಾಗಿ ಪಡೆಯಲು ಮಾಡಲು ಮುಖ-ಗುರುತಿಸುವಿಕೆ(facial-recognition) ತಂತ್ರಜ್ಞಾನವನ್ನು ಬಳಸಿದೆ ಎಂದು ಆರೋಪಿಸಲಾಗಿತ್ತು. ಆದರೆ ಫೇಸ್‌ಬುಕ್ ಇದನ್ನು ನಿರಾಕರಿಸಿ ಇನ್‌ಸ್ಟಾಗ್ರಾಮ್ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಫೇಸ್‌ಬುಕ್‌ಗೆ ಬಿಜೆಪಿಯೇ ಅತಿದೊಡ್ಡ ಜಾಹೀರಾತುದಾರ: ಮೋದಿ ಪಕ್ಷದಿಂದ ಶೇ.70ರಷ್ಟು ಜಾಹೀರಾತುಗಳು


