ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ತಮ್ಮ ತಾಯಿಯನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಆಗಸ್ಟ್ 5 ಆರ್ಟಿಕಲ್ 370 ರದ್ದತಿಗೆ ಮೊದಲಿನಿಂದಲೇ ಬಂಧನದಲ್ಲಿಡಲಾಗಿದೆ.
ವಕೀಲ ಆಕಾಶ್ ಕಮ್ರಾ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ತನ್ನ ತಾಯಿಯ ಬಂಧನ ಮತ್ತು ನಂತರದ ಬಂಧನ ವಿಸ್ತರಣೆಗಳು ಕಾನೂನುಬಾಹಿರ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ನನ್ನ ತಾಯಿಗೆ ಏನಾದರೂ ಆದರೆ ಕೇಂದ್ರವೇ ಹೊಣೆ: ಮೆಹಬೂಬಾ ಮುಫ್ತಿ ಮಗಳ ಆತಂಕ
ಆರ್ಟಿಕಲ್ 370 ರದ್ದು ಮಾಡುವ ಕೆಲವೇ ಗಂಟೆಗಳ ಮೊದಲು, ರಾಜಕೀಯವಾಗಿ ಸಕ್ರಿಯವಾಗಿರುವ ನೂರಾರು ಜನರನ್ನು ಬಂಧಿಸಲಾಗಿತ್ತು. ಕಳೆದ ವರ್ಷದ ಆಗಸ್ಟ್ ನಿಂದಲೇ ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನೂ ಬಂಧಿಸಿಡಲಾಗಿದೆ. ಆರು ತಿಂಗಳ ಕಸ್ಟಡಿ ಅವಧಿ ಮುಗಿಯುವ ಮುನ್ನವೇ ಕಠಿಣ ಪಿಎಸ್‌ಎ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಜುಲೈ 31 ರಂದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಪಿಎಸ್ಎ ಅಡಿಯಲ್ಲಿ ಅವರ ಬಂಧನವನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿದೆ.
“ಪ್ರಜಾಪ್ರಭುತ್ವದ ದೇಶದಲ್ಲಿ ಅವರ ಬಂಧನ ಕಾನೂನುಬಾಹಿರವಾಗಿದೆ. ಪ್ರತಿಪಕ್ಷದ ಪ್ರಮುಖ ನಾಯಕಿನನ್ನು ಒಂದು ವರ್ಷದಿಂದ ವಿಚಾರಣೆಗೆ ಒಳಪಡಿಸದೆ ಜೈಲಿಗೆ ಹಾಕಲಾಗಿದೆ ”ಎಂದು ಇಲ್ತಿಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಹಬೂಬಾ ಬಂಧನವನ್ನು ಪ್ರಶ್ನಿಸಿ ಇಲ್ತಿಜಾ ಸಲ್ಲಿಸಿದ್ದ ಮೊದಲ ಅರ್ಜಿ ಫೆಬ್ರವರಿ 26 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಇನ್ನು ಬಾಕಿ ಇದೆ. ಇತ್ತೀಚಿನ ಅರ್ಜಿಯಲ್ಲಿ ಇಲ್ತಿಜಾ ಇಲ್ಲಿಯವರೆಗೆ ಪ್ರತಿವಾದಿಗಳು [ಜೆ & ಕೆ ಆಡಳಿತ] ಶೀರ್ಷಿಕೆಯ ರಿಟ್ ಅರ್ಜಿಗೆ ಯಾವುದೇ ಉತ್ತರ ಅಥವಾ ಪ್ರತಿ-ಅಫಿಡವಿಟ್ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಉತ್ತರ ಸಲ್ಲಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಆದೇಶಿಸಿದೆ.
ಇದನ್ನೂ ಓದಿ: ನಮ್ಮನ್ನು ಪ್ರಾಣಿಗಳಂತೆ ಪಂಜರದಲ್ಲಿ ಕೂಡಿ ಹಾಕಾಲಾಗಿದೆ- ಮೆಹಬೂಬಾ ಮುಫ್ತಿ ಅವರ ಮಗಳಾದ ಇಲ್ತೀಜಾ ಜಾವೇದ್ ಆರೋಪ
ದಿ ವೈರ್‌ಗೆ, ಪ್ರತಿಕ್ರಿಯೆ ನೀಡಿರುವ ಇಲ್ತಿಜಾ ’ಇದು… ನ್ಯಾಯಾಲಯಗಳು ಮತ್ತು ಸುಪ್ರೀಂಕೋರ್ಟ್ ಬಗ್ಗೆ ಅವರು ಹೊಂದಿರುವ ಗೌರವವನ್ನು ನಿಮಗೆ ತೋರಿಸುತ್ತದೆ” ಎಂದಿದ್ದಾರೆ.
ಅರ್ಜಿಯಲ್ಲಿ ಮೆಹಬೂಬಾರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಅವರ ವಿರುದ್ಧದ ಎಲ್ಲಾ ಬಂಧನ ಆದೇಶಗಳನ್ನು ರದ್ದುಪಡಿಸುವಂತೆ ಜೊತೆಗೆ ಆಕೆಯ ದೀರ್ಘಕಾಲದ ಜೈಲುವಾಸಕ್ಕೆ ಸೂಕ್ತ ಪರಿಹಾರವನ್ನು ನೀಡುವಂತೆ ಕೋರಲಾಗಿದೆ. ಮಾಜಿ ಸಿಎಂ ಪ್ರಸ್ತುತ ಫೇರ್‌ವ್ಯೂ ಬಂಗಲೆಯ ಅಧಿಕೃತ ನಿವಾಸದಲ್ಲಿದ್ದಾರೆ. ಇದನ್ನು ಜೈಲಿನ ಅಂಗಸಂಸ್ಥೆ ಎಂದು ಘೋಷಿಸಲಾಗಿದೆ. ಅವರು ಸದ್ಯ ಬಂಧನದಲ್ಲಿರುವ ಏಕೈಕ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕಾರಣಿಯಾಗಿದ್ದಾರೆ.


