ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರುತ್ತಿರುವ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಇಂದು ನಡೆದ ಕರ್ನಾಟಕ ಬಂದ್‌ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಟೌನ್‌ಹಾಲ್ ಬಳಿ ನೂರಾರು ರೈತ, ಕಾರ್ಮಿಕ, ದಲಿತ, ಕನ್ನಡಪರ, ದಲಿತ, ವಿದ್ಯಾರ್ಥಿ, ಮಹಿಳಾ ಹಾಗೂ ರಾಜಕೀಯ ಸಂಘಟನೆಗಳು ಭಾಗವಹಿಸಿ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿದರು.

ಸುಮಾರು 12 ಗಂಟೆಯವರೆಗೂ ಟೌನ್‌ಹಾಲ್‌ನಲ್ಲೇ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಂತರ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ ಪ್ರತಿಭಟನಾ ಜಾಥಾ ಹೊರಟರು. ಜಾಥಾದ ಉದ್ದಕ್ಕೂ ಹಾಡು, ಘೋಷಣೆಗಳನ್ನು ಕೂಗುತ್ತಾ ಹೊರಟ ಪ್ರತಿಭಟನಾಕಾರರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ಕೂತರು.
Posted by Naanu Gauri on Sunday, September 27, 2020
ಮೈಸೂರು ಬ್ಯಾಂಕ್ ವೃತ್ತದಲ್ಲಿ ನೆರೆದ ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘಟನೆಗಳ ಮುಖಂಡರು ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ತಮ್ಮ ಆಕ್ರೋಶಗಳನ್ನು ಹೊರಹಾಕಿದರು.
ರೈತ ವಿರೋಧಿ ನೀತಿ ವಿರುದ್ಧ ಬೆಂಗಳೂರಲ್ಲಿ ನಡೆಯುತ್ತಿರುವ ಜಾಥಾ
Posted by Naanu Gauri on Sunday, September 27, 2020
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ರಾಜ್ಯ ಸರ್ಕಾರ ಎಪಿಎಂಸಿ ಕಾಯಿದೆಯನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಅದರಲ್ಲಿರುವ ಬಿಳಿಚೀಟಿ ಕಮೀಷನ್‌ನನ್ನು ತಿದ್ದುಪಡಿ ಮಾಡುವುದಾದರೆ ನಮ್ಮ ಬೆಂಬಲ ಇದೆ. ಮುಕ್ತ ಮನಸ್ಸಿನಿಂದ ನಮ್ಮನ್ನು ಮಾತಿಗೆ ಕರೆಯುವುದಾದರೆ ನಾವು ಸರ್ಕಾರದೊಂದಿಗೆ ಮಾತಿಗೆ ತಯಾರಿದ್ದೇವೆ. ಅದು ಬಿಟ್ಟು ನೀವು ಅಜೆಂಡಾವನ್ನು ತಯಾರಾಗಿಟ್ಟುಕೊಂಡು ಮಾತಿಗೆ ಕರೆಯುವುದಾದರೆ ಅದಕ್ಕೆ ತಯಾರಿಲ್ಲ” ಎಂದು ಹೇಳಿದರು.
ಮತ್ತೊಬ್ಬ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ಮುಖ್ಯಮಂತ್ರಿ ಯಡಿಯೂರಪ್ಪ ಇದು ಬೇರೆ ಪಕ್ಷಗಳ ರಾಜಕೀಯ ಪ್ರೇರಣೆಯಿಂದ ನಡೆಯುತ್ತಿದೆ ಎನ್ನುತ್ತಿದ್ದಾರೆ. ನಮಗೆ ಎಲ್ಲಾ ರಾಜಕೀಯ ಪಕ್ಷಗಳಿಗೂ ತಿಳವಳಿಕೆ ನೀಡುವಂತಹ ಶಕ್ತಿಯಿದೆ, ಇನ್ಯಾರದೋ ಪ್ರೇರೇಪಣೆಯಿಂದ ಚಳವಳಿಗೆ ಇಳಿಯುವ ಅಗತ್ಯವಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೋರಾಟಗಾರರ ಮೇಲೆ ಸುಳ್ಳು ಆರೋಪಗಳನ್ನು ಮಾಡುವಂತದ್ದು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಒಂದೇ. ರೈತ ವಿರೋಧಿಯಾಗಿ ಯಾರಿದ್ದಾರೋ ಎಲ್ಲರನ್ನೂ ವಿರೋಧಿಸುತ್ತಾ ಬಂದಿದ್ದೇವೆ. ಮುಖ್ಯಮಂತ್ರಿಗಳು ನಾಲಗೆ ಬಿಗಿಹಿಡಿದು ಮಾತನಾಡಬೇಕು. ಅಧಿಕಾರವಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ತಿಳಿದು ಕೊಂಡಿದ್ದರು, ಈಗ ಚಳವಳಿಯ ಬಿಸಿ ಮುಟ್ಟಿದೆ, ಕಾರ್ಪೊರೇಟ್‌ಗಳ ಗುಲಾಮರಾಗಿ ರೈತರನ್ನು ವಂಚಿಸಲು ಹೊರಟರೆ ರೈತ ಸುಮ್ಮನಿರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬುಬೆಳೆಗಾರರ ಸಂಘದ ಮುಖಂಡ ಕುರಬೂರು ಶಾಂತಕುಮಾರ್ ಮಾಡನಾಡಿ, “ಸರ್ಕಾರ ಬಂದನ್ನು ವಿಫಲ ಮಾಡಲು ಬಹಳ ಪ್ರಯತ್ನ ಮಾಡುತ್ತಿದೆ. ಆದರೂ ಕೂಡಾ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನೂರಾರು ಸಂಘಟನೆಗಳು ಬೆಂಬಲ ನೀಡಿದ್ದರಿಂದ ಬಂದ್ ಯಶಸ್ವಿಯಾಗಿದೆ” ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಹಲವಾರು ಕಾರ್ಮಿಕ, ದಲಿತ, ಮಹಿಳಾ ಹಾಗೂ ರಾಜಕೀಯ ಸಂಘಟನೆಯ ಮುಖಂಡರು ಮಾತನಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯ ಕಾವು ಹೆಚ್ಚಾದಂತೆ ಪತ್ರಿಭಟನಾಕಾರರನ್ನು ನಿಯಂತ್ರಿಸಲು ಪರದಾಡಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡರು.


