ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಉಪಚುನಾವಣೆಗೆ ಕೊನೆಗೂ ಚುನಾವಣಾ ಆಯೋಗ ದಿನಾಂಕ ನಿಗಧಿ ಮಾಡಿದೆ. ನವೆಂಬರ್ 03 ರಂದು ಶಿರಾ ಸೇರಿದಂತೆ ದೇಶಾದ್ಯಂತ 54 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮಣಿಪುರದ 2 ವಿಧಾನಸಭಾ ಕ್ಷೇತ್ರಗಳು ಮತ್ತು ಬಿಹಾರದ 1 ಲೋಕಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 07 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಎಲ್ಲಾ 56 ವಿಧಾನಸಭಾ ಕ್ಷೇತ್ರಗಳ ಮತ್ತು ಒಂದು ಲೋಕಸಭಾ ಕ್ಷೇತ್ರದ ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗಲಿದೆ. ಚತ್ತೀಸ್‌ಘಡ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ನಾಗಲ್ಯಾಂಡ್, ಓರಿಸ್ಸಾ, ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಉಪಚುನಾವಣೆ ನಡೆಯಲಿದೆ.
ಮೇಲಿನ ರಾಜ್ಯಗಳ ಪೈಕಿ ಮಧ್ಯಪ್ರದೇಶ ರಾಜ್ಯದಲ್ಲಿ ಅತಿ ಹೆಚ್ಚಿನ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ 27 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 10 ರಂದೇ ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶ ಸಹ ಪ್ರಕಟವಾಗಲಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ


