Homeಮುಖಪುಟಸರ್ಕಾರದೊಂದಿಗೆ ಶಾಮೀಲಾದರೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ? ಉತ್ತರ ಕೇಳುತ್ತಿದೆ ಖಟ್ಜು ಬರೆದ ಆ ನಾಲ್ಕು...

ಸರ್ಕಾರದೊಂದಿಗೆ ಶಾಮೀಲಾದರೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ? ಉತ್ತರ ಕೇಳುತ್ತಿದೆ ಖಟ್ಜು ಬರೆದ ಆ ನಾಲ್ಕು ಪ್ರಶ್ನೆಗಳ ಪತ್ರ

- Advertisement -
- Advertisement -

ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರ ಹುದ್ದೆ ಅಂದ್ರೆ, ಸೀಸರನ ಮಡದಿಯಂತೆ ಶಂಕೆಗೂ ಆಸ್ಪದವಿಲ್ಲದ ಸ್ಥಾನ. ರಾಮಜನ್ಮಭೂಮಿ ಪ್ರಕರಣದ ವಿಪರೀತ ವಿಳಂಬ ಮತ್ತು ಪದೇಪದೇ ಮುಂದೂಡುವಿಕೆಯೂ ಒಳಗೊಂಡು, ಇತ್ತೀಚಿನ ದಿನಗಳಲ್ಲಿ ಭಾರತದ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆಯೇ ಗುಸುಗುಸು ಪ್ರಶ್ನೆಗಳು ತಲೆ ಎತ್ತುವಂತೆ ಮಾಡಿವೆ, ಅವುಗಳಿಗೆ ಅವರೇ ಸೂಕ್ತ ಉತ್ತರ ಕೊಟ್ಟು ತೆರೆ ಎಳೆಯಬೇಕಾಗಿದೆ.

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶನಾಗಿ, ನಾನು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದ ಪವಿತ್ರ ಸಂಸ್ಥೆಯಲ್ಲಿ ನಡೆಯುತ್ತಿರುವುದರ ಬಗ್ಗೆ ನನಗೆ ಅತೀವ ಕಾಳಜಿ ಇದೆ. ಹಾಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿರುವ ರಂಜನ್ ಗೊಗೊಯ್ ಅವರಿಗೆ ಭಾರತದ ಜನರ ಪರವಾಗಿ ನಾನು ಕೆಳಕಂಡ ನಾಲ್ಕು ಪ್ರಶ್ನೆಗಳನ್ನು ಕೇಳಬಯಸುತ್ತೇನೆ, ಅವುಗಳಿಗೆ ಅವರು ಸಾರ್ವಜನಿಕವಾಗಿಯೇ ಉತ್ತರಿಸಲಿ.

  1. ಗೊಗೊಯ್ ಅವರ ಮಗಳನ್ನು ದೆಹಲಿ ಹೈಕೋರ್ಟಿನ ನ್ಯಾಯಾಧೀಶರಾದ ವಾಲ್ಮೀಕಿ ಮೆಹ್ತಾ ಅವರ ಮಗನನ್ನು ಮದುವೆ ಮಾಡಿಕೊಡಲಾಗಿದೆ. ವಾಲ್ಮೀಕಿ ಮೆಹ್ತಾ ಅವರ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು, ಅಂದಿನ ಸಿಜೆಐ ಆಗಿದ್ದ ನ್ಯಾ.ಥಾಕೂರ್ ಅವರೇ ಖುದ್ದಾಗಿ ವಿಚಾರಣೆ ಮಾಡಿ, ಆ ಆರೋಪಗಳೆಲ್ಲ ನಿಜ ಎಂಬ ತೀರ್ಮಾನಕ್ಕೆ ಬಂದಿದ್ದರು. ಹಾಗಾಗಿ ಮಾರ್ಚ್ 2016ರಲ್ಲಿ ಥಾಕೂರರೇ ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಡಳಿಯು ನ್ಯಾ.ವಾಲ್ಮೀಕಿ ಮೆಹ್ತಾರನ್ನು ಬೇರೊಂದು ಕೋರ್ಟಿಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಿತ್ತು.

ಸಾಮಾನ್ಯವಾಗಿ ಭಾರತ ಸರ್ಕಾರವು ಕೆಲವೇ ವಾರಗಳಲ್ಲಿ ಇಂಥಾ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ವಿಚಿತ್ರವೆಂದರೆ ಭಾರತ ಸರ್ಕಾರವು ಈ ಪ್ರಕರಣದ ಫೈಲನ್ನು ಒಂದು ವರ್ಷದ ಕಾಲ ಮೂಲೆಯಲ್ಲಿಟ್ಟಿತು. ಅದೇ ವೇಳೆ, ತಮ್ಮ ಶಿಫಾರಸ್ಸನ್ನು ಜಾರಿಗೆ ತರದಿದ್ದಕ್ಕೆ ಸಿಜೆಐ ಥಾಕೂರ್ ಹಲವು ಬಾರಿ ಕಿಡಿಕಾರಿದ್ದುಂಟು, ಮುಕ್ತ ನ್ಯಾಯಾಲಯದಲ್ಲೂ ಸಹಾ. ಅಲ್ಲದೇ ವಾಲ್ಮೀಕಿ ಮೆಹ್ತಾ ವಿರುದ್ಧ ಗಂಭೀರ ಆರೋಪಗಳು ಇರುವುದರಿಂದ ಅವರಿಗೆ ವಹಿಸಿದ ನ್ಯಾಯಾಂಗ ಕಾರ್ಯವನ್ನು ವಾಪಾಸ್ಸು ಪಡೆಯುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೂ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅವ್ಯಾವುವೂ ಪ್ರಯೋಜನವಾಗಲಿಲ್ಲ. 2017ರ ಜನವರಿಯಲ್ಲಿ ನ್ಯಾ.ಥಾಕೂರ್ ಅವರು ನಿವೃತ್ತರಾಗಿ, ಅವರ ಜಾಗಕ್ಕೆ ಹೊಂದಾಣಿಕೆ-ಸಾಧ್ಯ ನ್ಯಾ.ಖೆಹರ್ ಅವರು ಸಿಜೆಐ ಆಗಿ ನೇಮಕಗೊಂಡ ನಂತರವಷ್ಟೇ ಸರ್ಕಾರ ಆ ಫೈಲನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಿಕೊಡುವ ಬದಲು ಸುಪ್ರೀಂ ಕೋರ್ಟಿಗೆ ವಾಪಾಸು ಕಳಿಸಿತು. ಸಿಜೆಯ ಖೆಹರ್ ಅವರು ಅಧ್ಯಕ್ಷರಾಗಿದ್ದ ಹೊಸ ಕೊಲಿಜಿಯಂ ಮಂಡಳಿ ಹಳೆಯ ಶಿಫಾರಸ್ಸುಗಳನ್ನು ವಾಪಾಸ್ ಪಡೆಯಿತು. ಆ ಕಾರಣದಿಂದಾಗಿ ವಾಲ್ಮೀಕಿ ಮೆಹ್ತಾ ಅವರು ಇವತ್ತಿಗೂ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಮುಂದುವರೆದಿದ್ದಾರೆ. ಈ ನಿಗೂಢತೆಯ ಹಿಂದಿರುವ ಸತ್ಯ ಯಾವುದು?

ನನಗೆ ಬಂದಿರುವ ಮಾಹಿತಿ ಪ್ರಕಾರ, ಅದು ಸರಿಯೋ ತಪ್ಪೋ ಎಂಬುದನ್ನು ಗೊಗೊಯ್ ಮಾತ್ರ ಉತ್ತರಿಸಬಹುದು, ವಾಸ್ತವ ಹೀಗಿದೆ: ತನ್ನ ಸಂಬಂಧಿಯ ವರ್ಗಾವಣೆ ಶಿಫಾರಸ್ಸಿನ ಬಗ್ಗೆ ತಿಳಿಯುತ್ತಿದ್ದಂತೆಯೇ, ಗೊಗೊಯ್ ಅವರು ಪ್ರಧಾನಿ ಮೋದಿಯವರನ್ನು (ಅಥವಾ ಸಂಪುಟದ ಹಿರಿಯ ಸಚಿವರನ್ನು) ಭೇಟಿಯಾಗಿ, ವಾಲ್ಮೀಕಿ ಮೆಹ್ತಾರನ್ನು ವರ್ಗಾವಣೆ ಮಾಡದಂತೆ ಬೇಡಿಕೊಂಡಿದ್ದಾರೆ. ಸೀನಿಯಾರಿಟಿ ಆಧಾರದಲ್ಲಿ ಸದ್ಯದಲ್ಲೇ ಸುಪ್ರೀಂ ಕೋರ್ಟಿನ ಸಿಜೆಐ ಆಗುವ ಸಾಲಿನಲ್ಲಿದ್ದ ಗೊಗೊಯ್ ಅವರನ್ನು ಕಳೆದುಕೊಳ್ಳಲಿಚ್ಚಿಸದೆ, ಸರ್ಕಾರ ಅವರ ಮನವಿಗೆ ಓಗೊಟ್ಟು, ಫೈಲನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳಿಸುವ ಬದಲು ತೆಗೆದು ಮೂಲೆಗಿಟ್ಟಿದೆ.

ಈ ಮಾಹಿತಿ ಸತ್ಯವೇ ಆದಲ್ಲಿ, ಗೊಗೊಯ್ ಅವರು ಬಿಜೆಪಿ ಸರ್ಕಾರದ ಋಣಕ್ಕೆ ಸಿಕ್ಕಿಬಿದ್ದಿದ್ದು, ಈಗದನ್ನು ತೀರಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಸುಪ್ರೀಂ ಕೋರ್ಟಿನ ಬಹಳಷ್ಟು ಆಗುಹೋಗುಗಳನ್ನು ಈ ಮಾಹಿತಿ ವಿವರಿಸುತ್ತದೆ.

ಗೊಗೊಯ್ ಅವರು ಈಗ ಭಾರತದ ಸರ್ವೋಚ್ಛ ನ್ಯಾಯಮೂರ್ತಿಗಳು, ಹಾಗಾಗಿ ಸುಪ್ರೀಂ ಕೋರ್ಟಿನ ಎಲ್ಲಾ ರೆಕಾರ್ಡು ದಾಖಲೆಗಳು ಅವರಿಗೆ ಸುಲಭವಾಗಿ ಲಭ್ಯವಿರುತ್ತವೆ. ಹಾಗಾಗಿ ನಾನು ಕೇಳುವ ಈ ದಾಖಲೆಗಳನ್ನು ಅವರು ಸಾರ್ವಜನಿಕರ ಮುಂದಿಡಲಿ, (1) ವಾಲ್ಮೀಕಿ ಮೆಹ್ತಾರನ್ನು ವರ್ಗಾವಣೆ ಮಾಡುವಂತೆ ಅಂದಿನ ಸಿಜೆಐ ಥಾಕೂರ್ ನೇತೃತ್ವದ ಕೊಲಿಜಿಯಂ ಮಂಡಳಿ ಮಾಡಿದ್ದ ಶಿಫಾರಸ್ಸು ವರದಿ, (2) ವರ್ಗಾವಣೆ ಶಿಫಾರಸ್ಸನ್ನು ಯಾಕೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಅಂದಿನ ಸಿಜೆಐ ಥಾಕೂರ್ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರಗಳು ಮತ್ತು ಆ ಪತ್ರಗಳಿಗೆ ಸರ್ಕಾರದ ಉತ್ತರಗಳು, (3) ಹೊಸ ಸಿಜೆಐ ಖೆಹರ್ ನೇತೃತ್ವದ ಸುಪ್ರೀಂ ಕೋರ್ಟಿಗೆ ಶಿಫಾರಸ್ಸನ್ನು ವಾಪಾಸು ಕಳುಹಿಸಿಕೊಡುತ್ತಿರುವುದಾಗಿ ಸರ್ಕಾರ ಬರೆದ ಪತ್ರ, (4) ನ್ಯಾ.ಖೆಹರ್ ಅವರ ನೇತೃತ್ವದ ಕೊಲಿಜಿಯಂ ಮಂಡಳಿಯು ನ್ಯಾ.ಮೆಹ್ತಾ ಅವರ ವರ್ಗಾವಣೆ ಶಿಫಾರಸ್ಸನ್ನು ವಾಪಾಸು ಪಡೆದ ನಿರ್ಣಯ.

2. ವಾಲ್ಮೀಕಿ ಮೆಹ್ತಾ ಅವರ ಮಗ (ಗೊಗೊಯ್ ಅವರ ಅಳಿಯ) ಒಬ್ಬ ಲಾಯರ್. ಮದುವೆಯ ನಂತರ ಆತನ ಪ್ರಾಕ್ಟೀಸ್ ಮತ್ತು ಆದಾಯ ಇದ್ದಕ್ಕಿದ್ದಂತೆ ಜಿಗಿದಿದೆ ಎಂಬ ವರ್ತಮಾನಗಳಿವೆ. ಹಾಗಾಗಿ, ಗೊಗೊಯ್ ಅವರು, ಮದುವೆಗೆ ಮುನ್ನ ಮತ್ತು ಮದುವೆಯ ನಂತರ ತಮ್ಮ ಅಳಿಯನ ಆದಾಯ ಎಷ್ಟು ಎಂಬುದನ್ನು ತಿಳಿಸಲಿ.

3. ದೆಹಲಿ ಹೈಕೋರ್ಟಿನ ನ್ಯಾ.ಪ್ರದೀಪ ನಂದ್ರಜೋಗ್ (ಹಾಲಿ ರಾಜಸ್ಥಾನ ಹೈಕೋರ್ಟ್ ಸಿಜೆ), ನ್ಯಾ. ಗೀತಾ ಮಿತ್ತಲ್ (ಹಾಲಿ ಜಮ್ಮು-ಕಾಶ್ಮೀರ್ ಹೈಕೋರ್ಟ್ ಸಿಜೆ) ಮತ್ತು ನ್ಯಾ.ರವೀಂದ್ರ ಭಟ್, ಈ ಮೂವರೂ ಸೇವಾ ಹಿರಿತನದಲ್ಲಿ ನ್ಯಾ.ಸಂಜೀವ್ ಖನ್ನಾ ಅವರಿಗಿಂತ ಸೀನಿಯರ್.ಗಳು. ಆದರೂ ಅವರನ್ನು ಪಕ್ಕಕ್ಕೆ ಸರಿಸಲಾಯಿತು (ಸೂಪರ್ ಸೀಡ್). ಯಾಕೆ? ನಾನು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದವನು, ಈ ಮೂವರನ್ನೂ ವೈಯಕ್ತಿಕವಾಗಿ ಚೆನ್ನಾಗಿ ಬಲ್ಲೆ (ಆ ಸಮಯದಲ್ಲಿ ಈ ಮೂವರು ಕೆಳಹಂತದ ಜಡ್ಜ್ ಗಳಾಗಿದ್ದರು), ಕರ್ತವ್ಯನಿಷ್ಠೆ ಮತ್ತು ಸಾಮರ್ಥ್ಯದ ವಿಚಾರದಲ್ಲಿ ಕಳಂಕರಹಿತ ರೆಕಾರ್ಡ್ ಉಳ್ಳವರು. ನಿಜ ಹೇಳಬೇಕೆಂದರೆ 12.12.2018ರಲ್ಲಿ ಸಭೆ ಸೇರಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಡಳಿಯು ನ್ಯಾ.ನಂದ್ರಜೋಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಪದೋನ್ನತಿಗೆ ಶಿಫಾರಸ್ಸು ಮಾಡಿತ್ತು. ಆ ಶಿಫಾರಸ್ಸಿಗೆ ಕೊಲಿಜಿಂ ಮಂಡಳಿಯ ಎಲ್ಲಾ 5 ಸದಸ್ಯರು ಸಹಿ ಹಾಕಿದ್ದರು, ಆದರೆ ಸಿಜೆಐ ಗೊಗೊಯ್ ಅವರು ಅದನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಡುವ ಬದಲು ತಮ್ಮ ಜೇಬಿಗಿಳಿಸಿಕೊಂಡು ಸುಮ್ಮನಾದರು. ಯಾಕೆ? ಆ ಕೊಲಿಜಿಯಂ ಮಂಡಳಿಯಲ್ಲಿದ್ದ ನ್ಯಾ.ಲೊಕೂರ್ ಅವರ ಬಳಿ (ಗೊಗೊಯ್ ನಂತರದ ಸೀನಿಯಾರಿಟಿಯಲ್ಲಿದ್ದವರು) ನಾನು ಈ ವಿಚಾರವಾಗಿ ಮಾತನಾಡಿದೆ, ಆ ಶಿಫಾರಸ್ಸನ್ನು ಅನುಮೋದಿಸಿ ಅವರೆಲ್ಲ ಸಹಿ ಮಾಡಿದ ನಂತರ, ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಯಿತೆ ಎಂದು ತಿಳಿದುಕೊಳ್ಳಲು ಲೊಕುರ್ ಅವರು ಗೊಗೊಯ್ ಅವರ ನಿವಾಸಕ್ಕೆ ಪದೇಪದೇ ಫೋನ್ ಮಾಡಿದರಂತೆ, ಪ್ರತಿ ಬಾರಿ ಅವರ ಸೆಕ್ರೆಟರಿ ಫೋನ್ ಎತ್ತಿಕೊಂಡು ಸಿಜೆಐ ಅವರಿಗೆ ಹುಶಾರಿಲ್ಲ ಎಂದು ಹೇಳುತ್ತಿದ್ದರಂತೆ, ಗೊಗೊಯ್ ಯಾವತ್ತೂ ವಾಪಸ್ ಫೋನ್ ಕೂಡಾ ಮಾಡಲಿಲ್ಲವಂತೆ. ನಂತರದಲ್ಲಿ, ಕನ್ಸಲ್ಟಿಂಗ್ ಜಡ್ಜ್ ಗಳಿಂದ ಕನ್ಸಲ್ಟೇಷನ್ ಪಡೆದಿಲ್ಲವಾದ್ದರಿಂದ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿಲ್ಲ ಎಂಬ ಉತ್ತರ ಕೊಟ್ಟರು ಗೊಗೊಯ್. ನನಗಿರುವ ವೈಯಕ್ತಿಕ ಅನುಭವದ ಪ್ರಕಾರ ಇಂಥಾ ಕನ್ಸಲ್ಟೇಷನ್ ಅನ್ನು ಒಂದು ಅಥವಾ ಎರಡು ದಿನಗಳಲ್ಲಿ ಪಡೆದುಬಿಡಬಹುದು.

ಪ್ರತಿಭಾವಂತ ಮೂವರು ನ್ಯಾಯಮೂರ್ತಿಗಳನ್ನು ಸೂಪರ್ ಸೀಡ್ ಮಾಡಿದ ಈ ಪ್ರಕರಣವು ಇಂದಿರಾ ಗಾಂಧಿಯವರ ಸರ್ಕಾರ ಮೂವರು ಸೀನಿಯರ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಪಕ್ಕಕ್ಕೆ ಸರಿಸಿದ ಪ್ರಕರಣವನ್ನು ನೆನಪಿಸುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಸಂದೇಶ ರವಾನಿಸುವುದಷ್ಟೇ ಅಲ್ಲ, ಆ ಮೂವರು ನ್ಯಾಯಮೂರ್ತಿಗಳ ಮೇಲೆ ಅನೈತಿಕ ಪರಿಣಾಮವನ್ನು ಬೀರುತ್ತದೆ. ಸುಪ್ರೀಂ ಕೋರ್ಟಿನ ಹಿರಿಯ ವಕೀಲರೊಬ್ಬರು ಹೇಳುವ ಪ್ರಕಾರ ಬಿಜೆಪಿ ಸರ್ಕಾರ ನಿರ್ದೇಶನದಂತೆ ಹೀಗೆ ಮಾಡಲಾಗಿದೆ. ನ್ಯಾ.ಖನ್ನಾ ಹೆಸರನ್ನು ಶಿಫಾರಸ್ಸು ಮಾಡಿದ ಕೊಲಿಜಿಯಂನಲ್ಲಿ ಇತರೆ ನ್ಯಾಯಮೂರ್ತಿಗಳೂ ಇದ್ದರು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ, ಆದರೆ ನ್ಯಾ.ಖನ್ನಾ ಹೆಸರನ್ನು ಗಟ್ಟಿಯಾಗಿ ಪ್ರತಿಪಾದಿಸಿದ ಗೊಗೊಯ್ ಮುಂದೆ ಅವರೆಲ್ಲ ಸಣ್ಣ ಪ್ರತಿರೋಧವನ್ನಷ್ಟೇ ಒಡ್ಡಿ ಶರಣಾಗಿದ್ದಾರೆ (ಸುಪ್ರೀಂ ಕೋರ್ಟಿನ ಹಲವಾರು ನ್ಯಾಯಮೂರ್ತಿಗಳು ನಾನೇ ಖುದ್ದಾಗಿ ಭೇಟಿ ಮಾಡಿ, ಮಾತಾಡಿಸಿದಾಗ ಈ ವಿಚಾರ ತಿಳಿದುಬಂದಿದೆ).

ನ್ಯಾ. ಖನ್ನಾ ಅವರಿಗಿಂತ ಸೇವಾ ಹಿರಿತನ ಹೊಂದಿದ್ದ ಈ ಮೂವರ ವಿರುದ್ಧ ಯಾವುದೇ ಆರೋಪಗಳಿದ್ದರೆ ಸಾರ್ವಜನಿಕರಿಗೆ ಅವು ಗೊತ್ತಾಗಲಿ. 12.12.2018ರಂದು ಕೊಲಿಜಿಯಂ ಮಂಡಳಿಯಿಂದ ಶಿಫಾರಸ್ಸು ಮಾಡಲ್ಪಟ್ಟ ನ್ಯಾ.ನಂದ್ರಜೋಗ್ ಅವರ ವಿರುದ್ಧ ಆ ದಿನಾಂಕಕ್ಕೆ ಸರಿಯಾಗಿ ಯಾವ ಆರೋಪಗಳೂ ಇಲ್ಲ ಎಂದಾದರೆ, ಅದರಾಚೆಗಿನ ಮೂರು ವಾರಗಳಲ್ಲಿ ಹುಟ್ಟಿಕೊಂಡವಾ? ಇದೊಂದು ನಿಗೂಢ.

ಈಗ ಸುಪ್ರೀಂ ಕೋರ್ಟಿಗೆ ಪದೋನ್ನತಿ ನೀಡಲಾಗಿರುವ ನ್ಯಾ.ಮಹೇಶ್ವರಿಯವರ ಹೆಸರನ್ನು ನಿರ್ದಿಷ್ಟವಾಗಿ, 12.12.2018ರಂದು ಸಭೆ ಸೇರಿದ್ದ ಕೊಲಿಜಿಯಂ ಮಂಡಳಿ ತಿರಸ್ಕರಿಸಿತ್ತು (ಆ ಕೊಲಿಜಿಯಂ ಮಂಡಳಿಯಲ್ಲಿದ್ದ ನ್ಯಾ.ಲೋಕೂರ್ ಅವರು ನನಗೆ ತಿಳಿಸಿರುವಂತೆ). ಮೂರೇ ವಾರಗಳ ಅಂತರದಲ್ಲಿ ತಿರಸ್ಕಾರ ಗೊಂಡಿದ್ದ ಅವರು ಪದೋನ್ನತಿಗೆ ಅರ್ಹತೆ ಸಂಪಾದಿಸಿಕೊಂಡುಬಿಟ್ಟರೇ?

4. ಒಂದಲ್ಲ ಒಂದು ಕಾರಣಕ್ಕೆ ರಾಮಜನ್ಮಭೂಮಿ ಪ್ರಕರಣವನ್ನು ಪದೇಪದೇ ಯಾಕೆ ಮುಂದೂಡಲಾಗುತ್ತಿದೆ? ವಿಚಾರಣೆ ಶುರು ಮಾಡುವ ದಿನಾಂಕ ಗೊತ್ತು ಮಾಡುವುದಕ್ಕೇ ಯಾಕೆ ದಿನಾಂಕಗಳನ್ನು ಪದೇಪದೇ ಗೊತ್ತು ಮಾಡಲಾಗುತ್ತಿದೆ? ಇದೂ, ನಿಗೂಢ. ಇದು ಒಂದು ಬಗೆಯ ಋಣ ಸಂದಾಯ ಇದ್ದಿರಬಹುದಾ? ಗೊಗೊಯ್ ಮಾತ್ರ ಉತ್ತರಿಸಬಲ್ಲರು.

ನ್ಯಾ. ಮಾರ್ಖಂಡೇಯ ಖಟ್ಜು
ಲೇಖಕರು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿಗಳು ಮತ್ತು
ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷರು.

ಲೇಖನದಲ್ಲಿರುವುದು ಅವರ ಸ್ವಂತ ಅಭಿಪ್ರಾಯಗಳು ಎಂದು ಹೇಳಿ, ಇಂಡಿಕಾ ನ್ಯೂಸ್ ಪ್ರಕಟಿಸಿರುವ ಸುದ್ದಿ ಇದು. ಅದರ ಮೂಲ ಇಂಗ್ಲಿಷ್ ಲೇಖನ ನೋಡಲು ಈ ಲಿಂಕನ್ನ ಕ್ಲಿಕ್ಕಿಸಿ.

Four questions for Ranjan Gogoi

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...