ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ದಲಿತ ಯುವತಿಯ ಗುಪ್ತಾಂಗದಲ್ಲಿ ಎರಡು ಆಳವಾದ ಗಾಯಗಳಾಗಿವೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ(ಫೋರೆನ್ಸಿಕ್)ವು ದೃಡಪಡಿಸಿದೆ. ಅಷ್ಟೇ ಅಲ್ಲದೆ ಹಲವಾರು ಅಧಿಕಾರಿಗಳು ಕೂಡಾ ಯುವತಿಯು ಅತ್ಯಾಚಾರಕ್ಕೆ ಒಳಗಾಗಿರುವ ಸಾಧ್ಯತೆಯನ್ನು ಬಹಿರಂಗವಾಗಿ ಹೇಳಿದ್ದಾರೆ.
“ಆಗ್ರಾದ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಯ ವರದಿಯು ಶನಿವಾರ ಸಂಜೆ ಬಂದಿದ್ದು, ಆಕೆಯ ಗುಪ್ತಾಂಗದಲ್ಲಿ ಎರಡು ಆಳವಾದ ಗಾಯಗಳನ್ನು ದೃಡಪಡಿಸಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ’’ದಿ ಟೆಲಿಗ್ರಾಫ್” ವರದಿ ಮಾಡಿದೆ.
ಇದನ್ನೂ ಓದಿ: ಅಡೆತಡೆ ದಾಟಿ ಹತ್ರಾಸ್ ತಲುಪಿದ ಭೀಮ್ ಆರ್ಮಿ ಆಜಾದ್‌ಗೆ ಠಾಕೂರ್ ಯುವಕರಿಂದ ಬಹಿರಂಗ ಬೆದರಿಕೆ
“ಆಂತರಿಕ ಆಕ್ರಮಣವಿಲ್ಲದೆ ಈ ಗಾಯಗಳಿರಲು ಸಾಧ್ಯವಿಲ್ಲ. ವರದಿಯು ಅತ್ಯಾಚಾರದ ಬಗ್ಗೆ ಮೌನವಾಗಿದೆಯಾದರೂ, ಗಾಯಗಳು ಯುವತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ಸೂಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಯುವತಿಯ ಅಂಗಾಂಗಗಳಿಗೆ ಗಾಯಗಳಾಗಿದೆ ಎಂಬುವುದನ್ನು ಪರೀಕ್ಷಿಸುವುದು ಮಾತ್ರ ಲ್ಯಾಬ್‌ನ ಆದೇಶ, ಅತ್ಯಾಚಾರ ನಡೆದಿದೆಯೆ ಎಂಬುವುದನ್ನು ಸೂಚಿಸುವುದಲ್ಲ” ಎಂದು ಅಧಿಕಾರಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಈ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
“ದೆಹಲಿಯ ಸಫ್ಡರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಯುವತಿಗೆ ಅಲಿಗಡ್‌ನ ಜೆಎನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಅಲ್ಲಿನ ವೈದ್ಯಕೀಯ ವರದಿಯು ಈ ಗಾಯದ ಬಗ್ಗೆ ಉಲ್ಲೇಖಿಸಿಲ್ಲ” ಎಂದು ಗೃಹ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
“ಸಫ್ದರ್ಜಂಗ್ ಆಸ್ಪತ್ರೆ ಮರಣೋತ್ತರ ವರದಿಯು ಯುವತಿಯ ಬೆನ್ನುಹುರಿಯ ಗಾಯವೇ ಸಾವಿಗೆ ಕಾರಣ ಎಂದು ಹೇಳಿದೆ” ಎಂದು ಅವರು ತಿಳಿಸಿದ್ದಾರೆ.
“ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಸ್ವತಃ ಸಂತ್ರಸ್ತೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿಂದೆ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ರವಿಯಿಂದ ಲೈಂಗಿಕ ದೌರ್ಜನ್ಯದಿಂದ ತಾನು ತಪ್ಪಿಸಿಕೊಂಡಿದ್ದೆ ಎಂದು ಯುವತಿ ಹೇಳಿದ್ದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣದ ಆರೋಪಿಗಳು ಈಗ ‘ಬಿಂಬಿಸಿರುವಷ್ಟು ತಪ್ಪಿತಸ್ಥರಲ್ಲ’: ಬಿಜೆಪಿ ಮುಖಂಡ
ವೈದ್ಯಕೀಯ ಕಾಲೇಜಿನ ವರದಿ ಮತ್ತು ಮರಣೋತ್ತರ ಪರೀಕ್ಷೆಯು ಅತ್ಯಾಚಾರ, ಗುಪ್ತಾಂಗದಲ್ಲಿ ಗಾಯಗಳು ಮತ್ತು ವೀರ್ಯ ಇರುವಿಕೆಯನ್ನು ದೃಡೀಕರಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲವಾದರೂ, ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅತ್ಯಾಚಾರದ ಸಾಧ್ಯತೆಯನ್ನು ಇಲ್ಲವಾಗಿಸಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಳೆದ ಗುರುವಾರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸಂತ್ರಸ್ಥೆಯ ಗುಪ್ತಾಂಗದಲ್ಲಿ ವೀರ್ಯಗಳು ಕಂಡುಬಂದಿಲ್ಲ ಎಂದು ಹೇಳಿದ್ದರು.
ಅಷ್ಟೇ ಅಲ್ಲದೆ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಬುಧವಾರ ನೀಡಿದ ಹೇಳಿಕೆಯಲ್ಲಿ, ಸಂತ್ರಸ್ಥೆಯ ಖಾಸಗಿ ಅಂಗಾಗಳಿಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆಂದು ಹೇಳುತ್ತಿರುವ ಸಂತ್ರಸ್ತೆಯ ಕುಟುಂಬ, ಸಾರ್ವಜನಿಕ ಪ್ರತಿಭಟನೆಯ ಒತ್ತಡ ಬರುವುದಕ್ಕಿಂತ ಮೊದಲು ಅತ್ಯಾಚಾರ ನಡೆದು ಎಂಟು ದಿನಗಳವರೆಗೂ ಕೊಲೆ ಯತ್ನದ ಪ್ರಕರಣ ದಾಖಲಿಸಿ, ಸಾಮೂಹಿಕ ಅತ್ಯಾಚಾರ ಆರೋಪವನ್ನು ಸೇರಿಸಲು ನಿರಾಕರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಆರೋಪವನ್ನು ಕೈಬಿಟ್ಟು, ಆರೋಪಿಗಳ ಮೇಲೆ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ.
ಇದನ್ನೂ ಓದಿ: ಹತ್ರಾಸ್‌ಗೆ ಹೊರಟ SP, RLD ಮುಖಂಡರ ಮೇಲೆ ಯುಪಿ ಪೊಲೀಸರ ಅಮಾನುಷ ದಾಳಿ!
ಆದರೆ ಸಾಮೂಹಿಕ ಅತ್ಯಾಚಾರದ ಜೊತೆಗೆ ಕೊಲೆ ಹಾಗೂ ಕ್ರೂರತೆಯನ್ನು ಸೇರಿಸಿದರೆ – ಸಂತ್ರಸ್ತೆಯ ನಾಲಿಗೆಯನ್ನು ಕತ್ತರಿಸಿ ಕುತ್ತಿಗೆ ಮುರಿದಿದ್ದಾರೆ – ನ್ಯಾಯಾಲಯಗಳು ಈ ಅಪರಾಧವನ್ನು “ಅಪರೂಪದ” ಪ್ರಕರಣ ಎಂದು ಪರಿಗಣಿಸಿ ಮರಣದಂಡನೆಯನ್ನು ವಿಧಿಸುವ ಸಾಧ್ಯತೆ ಇರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.
ಆದರೆ ಆಡಳಿತ ಪಕ್ಷ ಇನ್ನೂ ಯುವತಿಯ ಮೇಲೆ ಅತ್ಯಾಚಾರ ನಡೆಸಿಲ್ಲ ಎಂದು ಪ್ರಚಾರ ಮಾಡುತ್ತಿದೆ. ಬಿಜೆಪಿ ನಾಯಕ ವಿನಯ್ ಕಟಿಯಾರ್, “ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳುವುದು ತಪ್ಪು. ಅವರು ಬೆನ್ನುಮೂಳೆಯ ಗಾಯಗಳಿಂದ ಸಾವನ್ನಪ್ಪಿದ್ದಾರೆ” ಎಂದು ಶನಿವಾರ ಹೇಳಿದ್ದರು.
ಆದರೆ ಗೃಹ ಇಲಾಖೆಯ ಅಧಿಕಾರಿ “ಈ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವ ಆಧಾರದ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಫೋರೆನ್ಸಿಕ್ ಲ್ಯಾಬ್ ಒಳಾಂಗಗಳನ್ನು ಪರೀಕ್ಷಿಸಲು ಮತ್ತು ವರದಿಯನ್ನು ಕಳುಹಿಸಲು ತೆಗೆದುಕೊಂಡ ಮೂರು ದಿನಗಳವರೆಗೆಯಾದರೂ ಕಾಯಬಹುದಿತ್ತು ” ಎಂದು ಹೇಳಿದ್ದಾರೆ.
ವಿಡಿಯೋ ನೋಡಿ: ಹತ್ರಾಸ್ ಘಟನೆಯಲ್ಲಿ ಬಿಜೆಪಿಯ ಮಹಿಳಾ ನಾಯಕರ ಬಾಯಿ ಬಿದ್ದೋಗಿದೆ


