ಅಪ್ರಾಪ್ತ ಬಾಲಕಿಯೊಬ್ಬಳು ನೀಡಿದ ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು, ವೇಶ್ಯಾವಾಟಿಕೆ ಆರೋಪದಲ್ಲಿ ರಾಜಸ್ಥಾನದ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಸೇರಿದಂತೆ ಐದು ಜನರನ್ನು ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಸರ್ಕಾರಿ ನೌಕರರಾಗಿದ್ದಾರೆ.
ಬಿಜೆಪಿ ನಾಯಕಿ ಸುನೀತಾ ವರ್ಮಾ ಅಕ್ಟೋಬರ್ 2019 ಮತ್ತು ಮೇ 2020 ರ ನಡುವೆ ಹಲವಾರು ವ್ಯಕ್ತಿಗಳೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ್ದಾರೆ ಮತ್ತು ತನ್ನ ತಂದೆಯ ಹಣವನ್ನು ಸಹ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿ ದೂರು ನೀಡಿದ್ದರು. ಬಾಲಕಿಯ ಮೇಲೆ ಮೊದಲ ಬಾರಿಗೆ ಹೋಟೆಲ್ ಒಂದರಲ್ಲಿ ಅತ್ಯಾಚಾರ ಎಸಗಲಾಗಿತ್ತು, ಅದನ್ನು ವಿಡಿಯೋ ಮಾಡಿದ್ದ ಆರೋಪಿ ನಂತರ ಆ ವಿಡಿಯೋ ತುಣುಕುಗಳನ್ನು ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಹಿಳಾ ನಾಯಕಿ ಬಟ್ಟೆಗೆ ಕೈಹಾಕಲು ಆತನಿಗೆಷ್ಟು ಧೈರ್ಯ..?- ಬಿಜೆಪಿಯ ಚಿತ್ರಾ ವಾಘ್ ಆಕ್ರೋಶ
ಬಿಜೆಪಿಯ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆಯಾಗಿರುವ ಸುನೀತಾ ವರ್ಮಾ ಬಂಧನವಾಗುತ್ತಿದ್ದಂತೆ ಪಕ್ಷದಿಂದ ವಜಾ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೋ ಕಾಯ್ದೆಯಡಿ ಬಿಜೆಪಿ ನಾಯಕಿ ಮತ್ತು ಆಕೆಯ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾಲೆಯಿಂದ ಹಿಂತಿರುಗುತ್ತಿದ್ದ ಬಾಲಕಿಯೊಂದಿಗೆ ಸುನಿತಾ ವರ್ಮಾರ ಸಹಚರರು ಸ್ನೇಹ ಬೆಳೆಸಿದ್ದರು, ನಂತರ ಸುನಿತಾ ವರ್ಮಾ ಬಾಲಕಿಯನ್ನು ಹಲವಾರು ವ್ಯಕ್ತಿಗಳನ್ನು ಭೇಟಿಯಾಗಲು ಕಳುಹಿಸುತ್ತಿದ್ದರು. 17 ವರ್ಷದ ಬಾಲಕಿಯನ್ನು ಎಂಟಕ್ಕೂ ಹೆಚ್ಚು ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಾಚಾರಕ್ಕೆ ಒಳಪಡಿಸಲಾಗಿತ್ತು ಎಂದು ಸವಾಯಿ ಮಾಧೋಪುರ್ ಮಹಿಳಾ ಸೆಲ್‌ನ ಅಧಿಕಾರಿ ಓಂ ಪ್ರಕಾಶ್ ಸೋಲಂಕಿ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ ಕರೆ
ಬಂಧಿತರಾದವರಲ್ಲಿ ಸವಾಯಿ ಮಾಧೋಪುರ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಗುಮಾಸ್ತರಾಗಿರುವ ಸಂದೀಪ್ ಶರ್ಮಾ, ಜಿಲ್ಲಾ ಕಲೆಕ್ಟರೇಟ್‌ನಲ್ಲಿ ಪಿಯೋನ್ ಆಗಿರುವ ಶ್ಯೋರಜ್ ಮೀನಾ ಮತ್ತು ಎಲೆಕ್ಟ್ರಿಷಿಯನ್ ರಾಜು ಲಾಲ್ ರಾಯಗರ ಸೇರಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ತಡೆಯಲು ಹೆಣ್ಣುಮಕ್ಕಳಲ್ಲಿ ‘ಸಂಸ್ಕಾರ’ ತುಂಬಬೇಕು: ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದ
ಸುನಿತಾ ವರ್ಮಾ ಬೇರೆ ಹುಡುಗಿಯರನ್ನು ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿ ಬಲವಂತವಾಗಿ ವೇಶ್ಯಾವಾಟಿಕೆಗೆ ಒಳಪಡಿಸಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬಂಧನಗಳು ನಡೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ನೋಡಿ: ಈ ಮೂರು ಪತ್ರಿಕೆಗಳನ್ನು ಮುಗಿಸಲು ಹೊರಟಿದೆಯೇ ಮೋದಿ ಸರ್ಕಾರ?


