ಆದಿಮ ಕಾಲದ ಮಾದಿಗರು ಸಮಾಜದ ಬ್ರಾಹ್ಮಣ್ಯೀಕರಣದಿಂದ ಅಸ್ಪೃಶ್ಯರಾದರು. ಗಾಂಧೀಜಿಯವರಿಂದ ಹರಿಜನರಾದರು. ಅಂಬೇಡ್ಕರರಿಂದ ಸ್ವಾಭಿಮಾನಿ ದಲಿತರಾದರು. ಹಲವು ಪರಿಶಿಷ್ಟ ಜಾತಿಗಳಲ್ಲಿಂದು ಮಾದಿಗರು ಸಹ ಒಂದು ಸಮುದಾಯವಾಗಿದೆ.
ಮಾದಿಗ ಸಮುದಾಯವು ಸ್ವತಂತ್ರಪೂರ್ವದಲ್ಲಿ ಜಂಡಾ ಹಿಡಿದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಮುದಾಯವಾಗಿದೆ. ಆದರೆ ಸ್ವಾತಂತ್ರ್ಯದ ನಂತರದ ರಾಜಕೀಯದಲ್ಲಿ ಮಾದಿಗ ಸಮುದಾಯವನ್ನು ಬೆಲೆಯಿಲ್ಲದ, ನೆಲೆಯಿಲ್ಲದ ಸಮುದಾಯವನ್ನಾಗಿ ಮಾಡಲಾಗಿದೆ. ಇಂದಿಗೂ ಕೃಷಿ ಭೂಮಿ ರಹಿತರಾಗಿರುವ ಮಾದಿಗ ಸಮುದಾಯ ಜಮೀನ್ದಾರರ ಕೈ ಕೆಳಗೆ ನರಳುತ್ತಿದೆ. ಉತ್ತರ ಕರ್ನಾಟಕದಲ್ಲಂತು ಇದು ಎದ್ದು ಕಾಣುವ ಸಂಗತಿಯಾಗಿದೆ. ಬೆನ್ನಿಗೆ ನಿಲ್ಲದ ಸಹೋದರ ಸಮುದಾಯಗಳು, ಕೈಗೆ ಅಧಿಕಾರ ನೀಡದ ರಾಜಕೀಯ ಪಕ್ಷಗಳು, ನಿಷ್ಟೆ ಇಲ್ಲದ ಸಮುದಾಯದ ಮುಖಂಡರು, ಅಸ್ಪೃಶ್ಯತೆಯನ್ನು ಮೆರೆಯುವ ಮೇಲ್ವರ್ಗಗಳು. ಹೀಗೆ ಎತ್ತ ನೋಡಿದರೂ ಅಡ್ಡಗಾಲುಗಳು. ನಮ್ಮ ಹಾಸಿಗೆಯಲ್ಲಿ ನಾವೇ ಕಾಲು ಚಾಚದ ಸ್ಥಿತಿ.
ಇಂತಹ ಪರಿಸ್ಥಿತಿಯಲ್ಲಿ ಎಂದಿಗೂ ಮಾದಿಗರ ಪರ ನಿಲ್ಲದ ವಿವಿಧ ಭ್ರಷ್ಟ ರಾಜಕಾರಣಿಗಳ ಮನೆಯ ಹೆಬ್ಬಾಗಿಲುಗಳಲ್ಲಿ ನಮ್ಮ ಸಮುದಾಯದ ಮುಖಂಡರುಗಳಿಂದು ನಿಂತಿದ್ದಾರೆ. ಮತ್ತಷ್ಟೂ ಹಾದಿ ತಪ್ಪಿ ಅಸ್ಪೃಶ್ಯತೆಯನ್ನು ನಮ್ಮ ಮಾದಿಗರ ಮೇಲೆ ಹೇರಿದ ಬ್ರಾಹ್ಮಣ್ಯದ ತವರು ಸ್ಥಾನ ಸಂಘಪರಿವಾರ, ಆರೆಸ್ಸೆಸ್ ದ್ವಾರದ ಮುಂದೆ ಹೋರಾಟ ಮಾಡದೇ, ಒಳಮೀಸಲಾತಿಯ ಧರ್ಮಭಿಕ್ಷೆ ಬೇಡಲು ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಪರ ಹೋರಾಟಗಾರರ ಮೈತುಂಬಾ ಬಾಸುಂಡೆ ಬರುವಂತೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಯಾರದಾಗಿತ್ತು? ಇದು ಖಂಡಿತವಾಗಿಯೂ ಮಾದಿಗ ಸಮುದಾಯದಲ್ಲಿನ ಪ್ರಾಮಾಣಿಕ ಹೋರಾಟಗಾರರಿಗೆ ಚಿಂತೆಗೀಡು ಮಾಡಿದೆ.
ಇಂದು ಮಾದಿಗ ಸಮುದಾಯ ತನ್ನೊಳಗೂ ಹಾಗೂ ಹೊರಗೂ ಪ್ರಾಮಾಣಿಕ ಹೋರಾಟಗಾರರನ್ನು ಕಂಡುಕೊಳ್ಳಬೇಕಿದೆ. ಸದಾ ಚುನಾವಣಾ ರಾಜಕೀಯ ಹಿತಾಸಕ್ತಿಯನ್ನೇ ಬಯಸುವ ದಲಿತ ರಾಜಕಾರಣಿಗಳ ವಿರುದ್ಧವೂ ನಿಲ್ಲಬೇಕಿದೆ. ನಮ್ಮ ಸಂಕಟಗಳು ಬೆಟ್ಟದಷ್ಟಿರುವಾಗ ಆ ಬೆಟ್ಟವನ್ನು ನೆಲಸಮಗೊಳಿಸಲು ಒಳಮೀಸಲಾತಿ ಜಾರಿಯಾಗಲೇಬೇಕಿದೆ.
ಮೊದಲು ಸದಾಶಿವ ಆಯೋಗದ ವರದಿ ಬಹಿರಂಗಗೊಳ್ಳಬೇಕು. ಕಾಲ್ಪನಿಕ ಸೋರಿಕೆ ವಿಚಾರಗಳನ್ನು ಬದಿಗಿಟ್ಟು ಸಾರ್ವಜನಿಕ ಚರ್ಚೆಗಳಾಗಬೇಕು. ಇಡೀ 101 ದಲಿತ ಜಾತಿಗಳ ಪ್ರತಿನಿಧಿಗಳು ಒಂದೆಡೆ ಕುಳಿತು ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ ಒಳಮೀಸಲಾತಿ ಜಾರಿಗೊಳ್ಳುವ ಸರಿಯಾದ ಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಒಳಮೀಸಲಾತಿ ದಲಿತರ ಒಗ್ಗಟ್ಟನ್ನು ಮುರಿಯುತ್ತದೆ ಎಂಬ ಕಾಲ್ಪನಿಕ ಭಯದೊಂದಿಗೆ ಗುದ್ದಾಡದೆ, ಅದನ್ನು ಬಗೆಹರಿಸಿಕೊಂಡು ಮುಂದೆ ದಲಿತ ಜಾತಿಗಳು ಖಾಸಗಿ ಮೀಸಲಾತಿಗಾಗಿ ಹೋರಾಡಬೇಕು. ಸಮಸಮಾಜದೆಡಗೆ ನಮ್ಮ ನಡಿಗೆ ಆದಷ್ಟು ಬೇಗ ಮತ್ತೆ ಗಟ್ಟಿಗೊಳ್ಳಬೇಕು.

- ಕರಿಯಪ್ಪ ಗುಡಿಮನಿ
(ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಗುಡಿಮನಿಯವರು ಮೂರ್ನಾಲ್ಕು ದಶಕಗಳಿಂದ ದಲಿತ, ಎಡಪಂಥೀಯ ಚಳುವಳಿಯಲ್ಲಿ ಸಕ್ರಿಯವಾಗಿರುವವರು. ಬಳ್ಳಾರಿ ಭಾಗದ ಭೂಹೋರಾಟದಲ್ಲಿ ಪ್ರಧಾನವಾಗಿ ಮಾದಿಗ ಸಮುದಾಯದ ಜೊತೆ, ಆದರೆ ಎಲ್ಲಾ ಜಾತಿಗಳಿಗೆ ಸೇರಿದ ಶೋಷಿತರ ಪರವಾದ ಯಶಸ್ವಿ ಹೋರಾಟಗಳನ್ನು ಸಂಘಟಿಸಸಿದವರು.)


