ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹತ್ರಾಸ್‌ನ ದಲಿತ ಯುವತಿಯ ಬಗ್ಗೆ ಉತ್ತರ ಪ್ರದೇಶದ ಬರಾಬಂಕಿಯ ಬಿಜೆಪಿ ನಾಯಕನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದು, “ಯುವತಿಯೇ ತನ್ನ ಗೆಳೆಯನನ್ನು ಹೊಲಕ್ಕೆ ಕರೆಸಿಕೊಂಡಿರಬೇಕು, ಈ ಸಮಯದಲ್ಲಿ ಅವರು ಸಿಕ್ಕಿಬಿದ್ದಿರಬಹುದು” ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನವಾಬ್‌ಗಂಜ್ ಪುರಸಭೆಯ ಮಾಜಿ ಅಧ್ಯಕ್ಷರಾಗಿರುವ ರಂಜೀತ್ ಶ್ರೀವಾಸ್ತವ (67) ಘಟನೆಯಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಅಂತಹ” ಯುವತಿಯರ ಮೃತದೇಹಗಳು ಹೊಲಗಳಲ್ಲಿ ಮಾತ್ರ ಏಕೆ ಕಂಡುಬರುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ
“ಸಾಮಾನ್ಯವಾಗಿ ಹೊಲಗಳಲ್ಲಿ ಹೀಗೆಯೆ ನಡೆಯುತ್ತದೆ. ಈ ರೀತಿ ಸಾಯುವವರು ಹೊಲಗಳಲ್ಲಿ, ಕಾಲುವೆಗಳಲ್ಲಿ, ಕಾಡಿನಲ್ಲಿ ಯಾಕೆ ಸಿಗುತ್ತಾರೆ. ಈ ಯುವತಿಯೇ ತನ್ನ ಗೆಳೆಯನನ್ನು ಹೊಲಕ್ಕೆ ಕರೆಸಿಕೊಂಡಿರಬೇಕು ಎಂದು ಶ್ರೀವಾಸ್ತವ ವಿಡಿಯೋದಲ್ಲಿ ಹೇಳಿದ್ದಾರೆ.
ಶ್ರೀವಾಸ್ತವ ಮೂವರು ಗಂಡು ಮಕ್ಕಳ ತಂದೆಯಾಗಿದ್ದು, ಅವರಲ್ಲಿ ಒಬ್ಬ ಉತ್ತರ ಪ್ರದೇಶ ಬಿಜೆಪಿಯ ಯುವ ವಿಭಾಗದ ಸದಸ್ಯರಾಗಿದ್ದಾರೆ.
ಶ್ರೀವಾಸ್ತವ ಅವರು ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮಥುರಾದ ಮಾಜಿ ಸಂಸದ ಜಯಂತ್ ಚೌಧರಿ, “ಇಂತಹ ಮೂರ್ಖತನದ, ಜಾತಿವಾದಿ, ಹುಚ್ಚುಚ್ಚಾಗಿ ಮಾತನಾಡುವವರು ಬಿಜೆಪಿಯಲ್ಲಿ ಮಾತ್ರ ಯಾಕೆ ಸಿಗುತ್ತಾರೆ” ಎಂದು ಕಿಡಿಕಾರಿದ್ದಾರೆ.
और सारी बकवास, जातिवादी, उन्मादी बातें करने वाले भाजपा में ही क्यों पाए जाते हैं? https://t.co/KziEKwGIgd
— Jayant Chaudhary (@jayantrld) October 6, 2020
ಮೇವನ್ನು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದ ದಲಿತ ಯುವತಿಯನ್ನು ನಾಲ್ವರು ಮೇಲ್ಜಾತಿಯ ಯುವಕರು ಅತ್ಯಾಚಾರ ಮಾಡಿ ಚಿತ್ರಹಿಂಸೆ ನೀಡಿದ್ದರು. ಇದರಿಂದ ಯುವತಿಯ ಬೆನ್ನು ಮೂಳೆ, ಕುತ್ತಿಗೆಯ ಮೂಳೆಗಳು ಮುರಿದು ಆಕೆ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರು. ದೆಹಲಿ ಆಸ್ಪತ್ರೆಯಲ್ಲೇ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.ಈ ಘಟನೆ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ಘಟನೆಯನ್ನು “ಭಯಾನಕ” ಎಂದು ಕರೆದಿತ್ತು.
ಇದನ್ನೂ ಓದಿ: ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸದಂತೆ ಜಿಗ್ನೇಶ್ ಮೇವಾನಿಗೆ ಗೃಹ ಬಂಧನ
ವಿಡಿಯೋ ನೋಡಿ: ನಿಜವಾಗಿಯೂ ರಾಮರಾಜ್ಯ ಬಂದರೆ ಹೇಗಿರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.


