ಹತ್ರಾಸ್‌ನಲ್ಲಿ ಇತ್ತೀಚೆಗೆ ನಡೆದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ) ಸಂಘಟನೆಯು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಅರ್ಜಿಯನ್ನು (ಐಎ) ಸಲ್ಲಿಸಿದೆ.
ಇಡೀ ಉತ್ತರ ಪ್ರದೇಶ ಸರ್ಕಾರವೇ ಸಂತ್ರಸ್ತ ಕುಟುಂಬದ ವಿರುದ್ಧವಿದೆ. ಅತ್ಯಾಚಾರವೇ ನಡೆದಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಆರೋಪಿಯೊಬ್ಬ ಪೊಲೀಸರಿಗೆ ಪತ್ರ ಬರೆದು ಆಕೆಯೊಂದಿಗೆ ನನಗೆ ಸಂಬಂಧವಿತ್ತು, ಅವರ ಪೋಷಕರೆ ಕೊಂದಿದ್ದಾರೆ ಎಂದಿದ್ದಾನೆ. ಹಲವರು ಇದನ್ನು ಮರ್ಯಾದಹೀನ ಹತ್ಯೆ ಎಂದು ಕರೆದಿದ್ದಾರೆ. ಕುಟುಂಬಕ್ಕೆ ಹಣ ನೀಡಲಾಗಿದೆ ಎಂದು ಇಡಿ ತನಿಖೆ ನಡೆಸುತ್ತಿದೆ. ಇತರ ಕೆಲ ಸಂಘಟನೆಗಳ ಮೇಲೆ ಪೊಲೀಸರು ಗೂಬೆ ಕೂರಿಸುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಬಲಿಪಶು ಮಾಡುತ್ತಿರುವ ಹುನ್ನಾರದ ಹಿನ್ನೆಲೆಯಲ್ಲಿ ಸಿಜೆಪಿ ಸುಪ್ರೀಂನಲ್ಲಿ ಸಲ್ಲಿಸಿದ ಅರ್ಜಿಗೆ ಮಹತ್ವ ಬಂದಿದೆ.
ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವಲ್ಲಿ ನ್ಯಾಯಾಂಗದಲ್ಲಿ ಮತ್ತು ನ್ಯಾಯಾಂಗದ ಹೊರಗೆ ಹೋರಾಟ ನಡೆಸುತ್ತಿರುವ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಘಟನೆಯು ಹತ್ರಾಸ್ ಘಟನೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯಕ್ಕಾಗಿ ವಕೀಲರಾದ ಅಪರ್ಣ ಭಟ್‌ರವರ ಮೂಲಕ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದ್ದಾರೆ. ಆಕೆ ಆರೋಪಿಯೊಂದಿಗೆ ಫೋನ್ ಸಂಪರ್ಕದಲ್ಲಿದ್ದಳು ಎಂದು ಮತ್ತೊಬ್ಬ ಪೊಲೀಸ್ ಹೇಳಿದ್ದಾರೆ. “ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಆ ಮಟ್ಟದ ಅಧಿಕಾರಿಯೊಬ್ಬರು ಈ ರೀತಿ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿರುವುದು ಆತಂಕಕಾರಿಯಾಗಿದೆ ಮತ್ತು ಇದು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ನಿರ್ವಹಿಸಬೇಕಾಗಿದೆ ಎಂದು ಈ ಮಾನ್ಯ ನ್ಯಾಯಾಲಯವು ಪದೇ ಪದೇ ಹೇಳಿದಾಗ್ಯೂ, ಈ ರೀತಿಯ ಸಂತ್ರಸ್ತೆಯ ವಿರುದ್ಧದ ಲಜ್ಜೆಗೆಟ್ಟ ಹೇಳಿಕೆಗಳು ಹೊರಬರುತ್ತಿವೆ. ಇದನ್ನು ಸುಪ್ರೀಂ ಕೋರ್ಟ್ ಪರೀಶಿಲಿಸಬೇಕು” ಎಂದು ಸಿಜೆಪಿಯ ಅರ್ಜಿಯಲ್ಲಿ ತಿಳಿಸಿದೆ.
ಇನ್ನು ಈ ಪ್ರಕರಣದಲ್ಲಿ ಸಂತ್ರಸ್ತೆಯ ಶವವನ್ನು ಕುಟುಂಬಕ್ಕೆ ಏಕೆ ನೀಡಲಾಗಿಲ್ಲ? ಪೊಲೀಸರು ಮಧ್ಯರಾತ್ರಿ ಏಕೆ ಪೆಟ್ರೋಲ್ ಹಾಕಿ ಸುಟ್ಟರು? ಇಲ್ಲಿ ಆ ಕುಟುಂಬದ ಹಕ್ಕು ಚ್ಯುತಿಯಾಗಿದೆ. ಕುಟುಂಬವು ಐತಿಹಾಸಿಕವಾಗಿ ತುಳಿತಕ್ಕೊಳಗಾದ ದಲಿತ ಸಮುದಾಯದಕ್ಕೆ ಸೇರಿದ್ದು ಅವರಿಗೆ ಬಲಾಢ್ಯ ಬಹುಸಂಖ್ಯಾತರಾದ ಠಾಕೂರರು ದಿನನಿತ್ಯ ಬೆದರಿಕೆ ಹಾಕುತ್ತಿದ್ದಾರೆ. ಹಲವಾರು ‘ಮೇಲ್ಜಾತಿ’ ಗುಂಪುಗಳು ಸಭೆ ಸೇರಿ ತಮ್ಮ ಪರವಾದ ನಿರೂಪಣೆಯನ್ನು ಹರಿಯಬಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬದ ಸುರಕ್ಷತೆಯೂ ಸಹ ಮಹತ್ವದ್ದಾಗಿದೆ. ಜೊತೆಗೆ ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ ಸಾಕ್ಷಿ ರಕ್ಷಣೆ. ಇದಕ್ಕಾಗಿ ಯುಪಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಸಿಜೆಪಿ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸಂತ್ರಸ್ತ ಕುಟುಂಬದ ನಾರ್ಕೊ ಅನಾಲಿಸಿಸ್ ಪರೀಕ್ಷೆ ಮಾಡಿಸಲು ಯುಪಿ ಸರ್ಕಾರ ಮುಂದಾಗಿದ್ದು ಏಕೆ? ಸಂತ್ರಸ್ತ ಯುವತಿ ಸಾವಿನ ಮುನ್ನ ನೀಡಿದ ಹೇಳಿಕೆಗೆ ಬೆಲೆಯಿಲ್ಲವೇ?
ಅತ್ಯಾಚಾರ ಪ್ರಕರಣಗಳಲ್ಲಿ ವಿಧಿವಿಜ್ಞಾನ ವರದಿಗಳು ಮತ್ತು ಇತರ ವೈದ್ಯಕೀಯ ಸಾಕ್ಷ್ಯಗಳ ಪ್ರಸ್ತುತತೆ ಏನು? ಪುರಾವೆಗಳನ್ನು ಸಂರಕ್ಷಿಸುವುದು ರಾಜ್ಯದ ಕರ್ತವ್ಯವಲ್ಲವೇ? ಮಹಿಳೆಯರ ಮೇಲಿನ ಅಪರಾಧಗಳು ಮತ್ತು ದಲಿತರ ವಿರುದ್ಧದ ಅಪರಾಧಗಳ ಬಗ್ಗೆ ಎನ್‌ಸಿಆರ್‌ಬಿ ದತ್ತಾಂಶಗಳ ಹಿನ್ನೆಲೆಯಲ್ಲಿ ತನಿಖೆಯ ವರ್ಗಾವಣೆ ಆಗಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಸಿಜೆಪಿ ಮೂರು ಪ್ರಮುಖ ವಿಷಯಗಳ ಬಗ್ಗೆ ತನ್ನ ಹಕ್ಕೊತ್ತಾಯ ಮಂಡಿಸಿದೆ.
- ಅತ್ಯಾಚಾರ, ಹತ್ಯೆಯ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ನಡೆಸಬೇಕು.
- ಕೇಂದ್ರ ಅರೆಸೈನಿಕ ಪಡೆಗಳಿಂದ ಸಾಕ್ಷಿಗಳಿಗೆ ಮತ್ತು ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು.
- ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ, ಕುಟುಂಬದ ಒಪ್ಪಿಗೆಯಿಲ್ಲದೆ ಸಂತ್ರಸ್ತೆಯ ಶವವನ್ನು ಮಧ್ಯರಾತ್ರಿಯಲ್ಲಿ ಸುಟ್ಟಿದ್ದರ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸಬೇಕು.
ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA


