ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ, “ಯೋಗಿ ಆದಿತ್ಯನಾಥ್ ತನ್ನ ಜಾತಿಯವರನ್ನು ರಕ್ಷಿಸಲು ನನ್ನ ಮೇಲೆ ಆರೋಪಿಸಿದ್ದಾರೆ” ಎಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
“ರಾಜ್ಯದಲ್ಲಿ ಜಾತಿ ಹಿಂಸಾಚಾರ ಭುಗಿಲೇಳುವಂತೆ ಮಾಡಲು ಕೆಲವು ಸಂಘಟನೆಗಳಿಗೆ ಹಣ ಹರಿದು ಬರುತ್ತಿದೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: ಪ್ರಭುತ್ವಕ್ಕೆ “ಚಂದ್ರಶೇಖರ್ ಆಝಾದ್ ರಾವಣ್” ಎಂದರೆ ಆತಂಕ ಯಾಕೆ?
ಇದನ್ನು ತೀವ್ರವಾಗಿ ಖಂಡಿಸಿರುವ ಚಂದ್ರಶೇಖರ್ ಆಜಾದ್, “ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಲಿ. ನನ್ನ ಬಳಿ ಕೇವಲ 1 ಲಕ್ಷ ಪತ್ತೆಯಾದರೂ ನಾನು ರಾಜಕೀಯ ತೊರೆಯುತ್ತೇನೆ. ಇಲ್ಲಿದಿದ್ದಲ್ಲಿ, ಆದಿತ್ಯನಾಥ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ. ನನ್ನ ಖರ್ಚನ್ನು ಸಮಾಜವೇ ಭರಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
मैं योगी आदित्यनाथ जी को चैलेंज करता हूँ कि कोई भी जांच करवा लें 100 करोड़ तो दूर की बात यदि मेरे पास एक लाख रुपये भी मिल जाये तो मैं राजनीति छोड़ दूंगा वरना आप मुख्यमंत्री पद से इस्तीफा दीजिये। मेरा जीवन मेरे समाज को समर्पित है मेरा खर्च मेरा समाज उठाता है।
— Chandra Shekhar Aazad (@BhimArmyChief) October 9, 2020
ಇದನ್ನೂ ಓದಿ: ಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ : ಚಂದ್ರಶೇಖರ್ ರಾವಣ್
“ಉತ್ತರಪ್ರದೇಶದಲ್ಲಿ ನ್ಯಾಯದ ಪರ ದನಿಯೆತ್ತಿದರೆ ಅದನ್ನು ಅಂತರಾಷ್ಟ್ರೀಯ ಸಂಚು ಎಂದು ಕರೆಯಲಾಗುತ್ತದೆ. ದಲಿತರಿಗೆ ನ್ಯಾಯ ಕೊಡಿ ಎಂದು ಹೋರಾಡುತ್ತಿರುವುದಕ್ಕೆ ಸರ್ಕಾರ ಹೆದರುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ. ಅವರ ಪ್ರಕಾರ ದಲಿತರ ಜೀವನ ಅಗ್ಗವಾಗಿದೆ. ಹತ್ರಾಸ್ ಆರೋಪಿಗಳು ಯೋಗಿಯವರ ಜಾತಿಯವರಾಗಿದ್ದು, ಅವರನ್ನು ಉಳಿಸಬೇಕೆಂದು ನಮ್ಮ ಮೇಲೆ ಆರೋಪಿಸಿದ್ದಾರೆ” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 14 ರಂದು ತನ್ನ ಗ್ರಾಮದ ನಾಲ್ಕು ಮೇಲ್ಜಾತಿಯವರಿಂದ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಗಂಭೀರ ಗಾಯಗಳಿಂದಾಗಿ ದಲಿತ ಯುವತಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ: ಬಹುಜನರಿಗೆ ಬಂದೂಕು ನೀಡಿ: ಹತ್ರಾಸ್‌ಗೆ ಹೊರಟ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್
ಇದರ ನಂತರ ಯುಪಿ ಪೊಲೀಸರು ಯುವತಿಯ ಶವವನ್ನು ತೆಗೆದುಕೊಂಡು ಹತ್ರಾಸ್‌ಗೆ ಕೊಂಡೊಯ್ದಿದ್ದರು, ಶವವನ್ನು ಮನೆಗೆ ಕೊಂಡೊಯ್ಯಲು ಅನುಮತಿ ನೀಡುವಂತೆ ಆಕೆಯ ಕುಟುಂಬ ಪರಿಪರಿಯಾಗಿ ಬೇಡಿಕೊಂಡರು ಕೂಡಾ ಅದಕ್ಕೆ ಸಮ್ಮತಿಸದ ಪೊಲೀಸರು ಮನೆಯವರನ್ನು ಬಂಧಿಸಿ ಮಧ್ಯರಾತ್ರಿಯೇ ಶವವನ್ನು ಸುಟ್ಟಿದ್ದರು. ಈ ದೃಶ್ಯವನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
ಈ ಪ್ರಕರಣ ನಡೆದಾಗಿನಿಂದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಮೊದಲೇ ಅವರು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಹ ಪೊಲೀಸರು ಅವಕಾಶ ನೀಡದೇ ಅವರನ್ನು ಕೆಲ ಸಮಯದ ಗೃಹಬಂಧನದಲ್ಲಿಟ್ಟಿದ್ದರು. ನಂತರ ಆಜಾದ್ ಹತ್ರಾಸ್‌ಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್
“ಸಂವಿಧಾನದ ವಾಸಿಸುವ ಹಕ್ಕನ್ನು ಉಲ್ಲೇಖಿಸಿ, ಸರ್ಕಾರಗಳು ದಲಿತರ ರಕ್ಷಣೆ ಮಾಡುವುಲ್ಲಿ ವಿಫಲವಾಗಿವೆ. ಹಾಗಾಗಿ ದೇಶದ ಹಿಂದುಳಿದ ವರ್ಗಗಳಿಗೆ ಬಂದೂಕು ಪರವಾನಗಿ ನೀಡಬೇಕು. ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ” ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.
ಹತ್ರಾಸ್‌ಗೆ ಪ್ರತಿಪಕ್ಷಗಳ ನಾಯಕರು, ಮಾಧ್ಯಮಗಳು ಯಾರಿಗೂ ಪ್ರವೇಶ ನೀಡದಂತೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ನಾಯಕರ ಭೇಟಿಯನ್ನು ತಡೆಯಲಾಗಿತ್ತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿ, ಬಿಡುಗಡೆ ಮಾಡಿದ್ದರು. ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಇವುಗಳ ವಿರುದ್ಧ ದೇಶದ ಜನ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 5ಕ್ಕಿಂತ ಕಡಿಗೆ ಜನರ ಗುಂಪಿಗೆ ಹತ್ರಾಸ್ ಭೇಟಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹತ್ರಾಸ್: ಸಂತ್ರಸ್ಥೆಯ ಗುಪ್ತಾಂಗದಲ್ಲಿ ಆಳವಾದ ಗಾಯವಿದೆ; ಫೋರೆನ್ಸಿಕ್ ವರದಿ


