ಖ್ಯಾತ ಮಲಯಾಳಂ ಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಅಕ್ಕಿತಂ ಅಚ್ಯುತನ್ ನಂಬೂದಿರಿ ಇಂದು ಬೆಳಿಗ್ಗೆ ನಿಧನರಾದರು. ಅವರ 94 ವಯಸ್ಸಾಗಿತ್ತು. ಅವರು ಕಳೆದ ಕೆಲವು ದಿನಗಳಿಂದ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಮಾರನಲ್ಲೂರ್ ಮೂಲದ ಅಕ್ಕಿತಂ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮಹಾತ್ಮ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅವರು ಕವನ, ಸಣ್ಣ ಕಥೆಗಳು, ನಾಟಕಗಳು, ಅನುವಾದಗಳು ಮತ್ತು ಪ್ರಬಂಧಗಳು ಸೇರಿದಂತೆ 40 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ
ಅಕ್ಕಿತಂಗೆ ಕಳೆದ ಸೆಪ್ಟೆಂಬರ್‌ನಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರು ಮಲಯಾಳಂ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಆರನೇ ಸಾಹಿತಿಯಾಗಿದ್ದರು. ಅಷ್ಟೇ ಅಲ್ಲದೆ ಅವರಿಗೆ ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಳುತಚ್ಚನ್ ಪ್ರಶಸ್ತಿಗಳನ್ನು ಪಡೆದಿದ್ದರು.
ಅಕ್ಕಿತಂ ಅವರ ಕೃತಿಗಳಲ್ಲಿ ’ಇರುವತಾಮ್ ನೂಟಾಡಿಂಡೆ ಇತಿಹಾಸಂ’, ’ಬಲಿದರಾಶನಂ’ ಮತ್ತು ‘ಧರ್ಮ ಸೂರ್ಯನ್’ ಪ್ರಮುಖವಾಗಿದೆ. ಮಲಯಾಳಂ ಕಾವ್ಯದಲ್ಲಿ ಆಧುನಿಕತಾವಾದವನ್ನು ತಿಳಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಆನ್ ಮನೋರಮ ಬರೆದಿದೆ.

ಸಾಂಪ್ರದಾಯಿಕ ನಂಬೂದಿರಿ (ಬ್ರಾಹ್ಮಣ) ಕುಟುಂಬದಲ್ಲಿ ಮಾರ್ಚ್ 18, 1926 ರಂದು ಜನಿಸಿದ ಅಕ್ಕಿತಂ ತನ್ನ ಎಂಟನೇ ವಯಸ್ಸಿನಲ್ಲಿ ಮಲಯಾಳಂ ಸಾಹಿತ್ಯಕ್ಕೆ ತನ್ನ ಮೊದಲ ಕವಿತೆಯನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಬಾಲ್ಯದಲ್ಲಿ ಚಿತ್ರಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಅವರು ವೇದ, ಇಂಗ್ಲಿಷ್, ಗಣಿತ ಮತ್ತು ತಮಿಳು ಭಾಷೆಯನ್ನು ಅಧ್ಯಯನ ಮಾಡಿದ್ದಾರೆ.
ಕೋಯಿಕೋಡ್‌ನ ಝಾಮೊರಿನ್ ಗುರುವಾಯೂರಪ್ಪನ್ ಕಾಲೇಜಿಗೆ ಸೇರಿಕೊಂಡಿದ್ದ ಅವರು, ಅನಾರೋಗ್ಯದ ಕಾರಣ ಅಧ್ಯಯನ ಕೈಬಿಟ್ಟರು. ನಂತರ ಅವರು ತ್ರಿಶೂರ್ ಮಂಗಳೋದಯಂ ಪ್ರೆಸ್ ಬಿಡುಗಡೆ ಮಾಡುವ ”ಉಣ್ಣಿ ನಂಬೂದಿರಿ”ಗೆ ಮುದ್ರಕ ಮತ್ತು ಪ್ರಕಾಶಕರಾದರು. ನಂತರ ಸಾಮಾಜಿಕ ಸುಧಾರಣೆ ಮತ್ತು ನವೋದಯ ಚಳುವಳಿಗಳಲ್ಲಿ ಪಾಲ್ಗೊಳ್ಳುವುದರ ಜೊತೆಜೊತೆಗೆ ಕವಿ, ಪ್ರಬಂಧಕಾರ ಮತ್ತು ಸಂಪಾದಕರಾಗಿ ಮಾನ್ಯತೆ ಪಡೆದರು. ಅಷ್ಟೇ ಅಲ್ಲದೆ ಯೋಗಕ್ಷೆಮಂ ಮತ್ತು ಮಂಗಳೋದಯಂ ನಿಯತಕಾಲಿಕೆಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದರು.
ಅಕ್ಕಿತಂ ಆಲ್ ಇಂಡಿಯಾ ರೇಡಿಯೊದಲ್ಲಿ ಕೆಲಸ ಮಾಡಿ 1985 ರಲ್ಲಿ ನಿವೃತ್ತರಾದರು. ಕೇರಳ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿ ಕೂಡಾ ಇವರು ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ’ಲಂಕೇಶ್ ಮೋಹಕ ರೂಪಕಗಳ ನಡುವೆ’: ಪುಸ್ತಕ ಪರಿಚಯ


