ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಪ್ರಕರಣದ ವಿಚಾರಣೆಯಲ್ಲಿ ಸಂತ್ರಸ್ತೆಯ ಕುಟುಂಬದ ಪರ ಹಾಜರಾದ ವಕೀಲೆ ಸೀಮಾ ಕುಶ್ವಾಹ ಪ್ರಕರಣವನ್ನು ಉತ್ತರಪ್ರದೇಶದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್.ಎ.ಬೋಬ್ಡೆ ನೇತೃತ್ವದ ಪೀಠಕ್ಕೆ ವಿನಂತಿಸಿದರು.
ಇದನ್ನೂ ಓದಿ: ಹತ್ರಾಸ್ ಪ್ರಕರಣ ತನಿಖೆ: CBI ತಂಡದಲ್ಲಿ SC/ST/OBC ಸಮುದಾಯದವರಿಲ್ಲ- ಚಂದ್ರಶೇಖರ್ ಆಜಾದ್
ತನಿಖೆಯ ವರದಿಯನ್ನು ನೇರವಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಬೇಕು ಹಾಗೂ ತನಿಖೆ ಮುಗಿದ ನಂತರ ದಿಲ್ಲಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಎಂದು ವಕೀಲೆ ನ್ಯಾಯಾಲಯವನ್ನು ಕೋರಿದರು.
ಸಂತ್ರಸ್ತೆಯ ಪರ ವಕೀಲರ ಆತಂಕಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಬೋಬ್ಡೆ, “ಅಲಹಾಬಾದ್ ಹೈಕೋರ್ಟ್ ಇದರ ಮೇಲ್ಚಿಚಾರಣೆಯನ್ನು ನಿಭಾಯಿಸಲಿದೆ. ಏನಾದರೂ ಸಮಸ್ಯೆ ಇದ್ದರೆ ನಾವಿದ್ದೇವೆ” ಎಂದರು.
ಸಂತ್ರಸ್ತ ದಲಿತ ಯುವತಿಯ ಕುಟುಂಬಕ್ಕೆ ಮೂರು ಸ್ತರದ ಭದ್ರತೆಯನ್ನು ನೀಡಲಾಗುವುದು ಎಂದು ಉತ್ತರಪ್ರದೇಶ ಸರಕಾರ ಹೇಳಿದ್ದು, ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಅಫಿಡವಿಟ್‌ನ್ನು ಸರ್ಕಾರದ ಪರವಾಗಿ ವಾದಿಸಲು ಬಂದಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಲ್ಲೇಖಿಸುವುದರೊಂದಿಗೆ ವಿಚಾರಣೆ ಆರಂಭವಾಯಿತು.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸುಳ್ಳು, ಇದು ಕಾಂಗ್ರೆಸ್ ಪಿತೂರಿ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ!


