ಬೆಳಗಾವಿಯ ಬಿಜಾಗುಪ್ಪಿ ಗ್ರಾಮದಲ್ಲಿರುವ ಬಸವಣ್ಣನ ಪ್ರತಿಮೆಯ ಕೈಯ್ಯನ್ನು ಕಡಿದಿರುವ ದುಷ್ಕರ್ಮಿಗಳು ಪ್ರತಿಮೆಗೆ ಹಾನಿ ಮಾಡಿದ್ದಾಗಿ ವರದಿಯಾಗಿದೆ. ಘಟನೆಯನ್ನು ವಿರೋಧಿಸಿ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದ್ದು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ಧಾವಿಸಿದ ಗ್ರಾಮಸ್ಥರು, ಪೊಲೀಸರು ಕೂಡಲೆ ತನಿಖೆ ನಡೆಸಿ, ಆರೋಪಿಗಳನ್ನು ಗುರುತಿಸಿ ಬಂಧಿಸುವಂತೆ ಒತ್ತಾಯಿಸಿದ್ದು, ಸರ್ಕಾರವು ಸ್ಥಳದಲ್ಲಿ ಹೊಸ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ: ಆಕ್ರೋಶ, ಖಂಡನೆ
ಘಟನೆ ನಡೆದ ಗ್ರಾಮಕ್ಕೆ ಭೇಟಿ ನೀಡಿದ ರಾಮ್‌ದುರ್ಗ್‌ನ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ್, ಒಂದು ತಿಂಗಳಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ನ್ಯಾಯಯುತ ತನಿಖೆ ನಡೆಸಿ ಅಪರಾಧಿಗಳನ್ನು ಒಂದು ವಾರದಲ್ಲಿ ಬಂಧಿಸುವಂತೆ ನಾನು ಪೊಲೀಸರನ್ನು ಕೇಳಿಕೊಂಡಿದ್ದಾಗಿ ಹೇಳಿರುವ ಅವರು, ಜನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ದುಷ್ಕರ್ಮಿಗಳು ಬಸವಣ್ಣನ ಮೂರ್ತಿಗೆ ಹಾನಿ ಎಸಗಿರುವುದನ್ಉ ಗಮನಿಸಿದ ಕೆಲವು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಯುತ್ತಿದ್ದು, ಶಾಂತಿ ಕಾಪಾಡಿಕೊಳ್ಳಲು ಹೆಚ್ಚುವರಿ ಪಡೆಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?


