ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?

ಗುರುವಾರ ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಯ ಮೇಲೆ ಹಸಿರುಬಣ್ಣದ ಬಾವುಟ ಬಿದ್ದಿದ್ದ ಘಟನೆ ಬೆಳಕಿಗೆ ಬಂದಿತ್ತು. ಈಗ ಆ ಪ್ರಕರಣ ಹಲವು ತಿರುವುಗಳನ್ನು ಪಡೆದಿದೆ. ಆ ಬಾವುಟ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ) ಪಕ್ಷಕ್ಕೆ ಸೇರಿದ್ದಾಗಿದೆ ಎಂದು ಗುಲ್ಲು ಎಬ್ಬಿಸಿ ಎರಡು ಕೋಮುಗಳ ನಡುವೆ ದ್ವೇಷ  ಮತ್ತು ಗಲಭೆ ಹುಟ್ಟಿಸುವ ಪ್ರಯತ್ನ ಮಾಡಲಾಗಿತ್ತು.

ಶೃಂಗೇರಿಯ ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಇದಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದ್ದವರಲ್ಲಿ ಪ್ರಮುಖರಾಗಿದ್ದರು. ಅವರು ಪೊಲೀಸರೊಂದಿಗೆ ನಡೆಸಿದ ಸಂಭಾಷಣೆಯ ತುಣುಕುಗಳು ವೈರಲ್ ಆಗಿದ್ದವು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡಿ, ಈ ಪ್ರಕರಣಕ್ಕೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರಣ ಎಂದು ಹೇಳಿ ಆ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿದ್ದರು. ಇದರ ಆರ್ಕೈವ್ ಇಲ್ಲಿದೆ.

ಆದರೆ ಈಗ ಶಂಕರಾಚಾರ್ಯರ ಪುತ್ಥಳಿ ಮೇಲೆ ಬಿದ್ದಿರುವ ಬಾವುಟ ಎಸ್‌ಡಿಪಿಐಗೆ ಸೇರಿದ್ದಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಒಂದು ಹಸಿರು ಬಣ್ಣದ ಬಾವುಟವನ್ನು ಪುತ್ಥಳಿಯ ಹತ್ತಿರವಿದ್ದ ಮಸೀದಿಯಿಂದ ಮಿಲಿಂದ್ ಎಂಬ ಯುವಕ ಕದ್ದು ಹೋಗುತ್ತಿದ್ದ ದೃಶ್ಯಗಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಬಾವುಟ ಗಾಳಿಗೆ ಹಾರಿ ಬಂದು ಬಿದ್ದಿರುವ ಸಾಧ್ಯತೆಯೂ ಇದೆ ಎಂದು ಚಿಕ್ಕಮಗಳೂರು ಸೂಪರಿಂಡೆಂಟ್ ಪೊಲೀಸ್ ಹಕೈ ಅಕ್ಷಯ್ ಮಚೀಂದ್ರ ಅವರು ಹೇಳಿರುವುದಾಗಿ ‘ದ ಪ್ರಿಂಟ್’ ವರದಿ ಮಾಡಿತ್ತು. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು “ಶಂಕರಾಚಾರ್ಯ ಅವರ ಪ್ರತಿಮೆ ಮೇಲೆ ಬಿದ್ದಿದ್ದು ಎಸ್‌ಡಿಪಿಐ ಬಾವುಟ ಅಲ್ಲವೇ ಅಲ್ಲ. ನಮ್ಮ ಪಕ್ಷದ ಘಟಕ ಅಲ್ಲಿ ಇಲ್ಲವೇ ಇಲ್ಲ. ಬಹುಸಂಖ್ಯಾತ ಕೋಮಿನ ಕೆಲವು ಕಿಡಿಗೇಡಿಗಳು ಬೇಕಂತಲೇ ಅನ್ಯ ಧರ್ಮವನ್ನು ಪ್ರತಿನಿಧಿಸುವ ಬಾವುಟವನ್ನು ಅಲ್ಲಿ ಹಾಕಿ, ಕೋಮು ಗಲಭೆಗೆ ಪ್ರಯತ್ನಿಸಿದ್ದಾರೆ”.

“ಇದಕ್ಕೆ ನೇರ ಕಾರಣ ಅಲ್ಲಿನ ಮಾಜಿ ಶಾಸಕ ಜೀವರಾಜ್ ಅವರು. ತಾವು ಚುನಾವಣೆಯಲ್ಲಿ ಸೋತ ನಂತರ ಅಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಈಗ ಕೋಮು ಸೌಹಾರ್ದ ಕೆಡಿಸುವ ಪಿತೂರಿಗೆ ಮುಂದಾಗಿದ್ದಾರೆ. ಅಲ್ಲದೆ ಬೆಂಗಳೂರಿನ ಡಿಜಿ ಹಳ್ಳಿಯಲ್ಲಿ ನಡೆದ ಘರ್ಷಣೆ ಅಲ್ಲಿಗೆ ಸೀಮಿತವಾಗಿ ನಿಂತುಹೋಗಿದ್ದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ರಾಜ್ಯಾದ್ಯಂತ ಹರಡಲು ಪ್ರಯತ್ನ ಮಾಡುತ್ತಿದ್ದಾರೆ.”

“ಅಲ್ಲದೆ ಮಸೀದಿಯಿಂದ ಮಿಲಿಂದ್ ಎಂಬುವವರು ಬಾವುಟವನ್ನು ಕದಿಯುತ್ತಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಿಕ್ಕಿಬಿದ್ದಿದೆ. ಇವೆಲ್ಲಾ ಘಟನೆಯ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಾವು ಆಗ್ರಹಿಸುತ್ತೇವೆ. ಮತ್ತು ಈ ಪಿತೂರಿಯನ್ನು ಖಂಡಿಸುತ್ತೇವೆ” ಎಂದಿದ್ದಾರೆ.

ಮಾಜಿ ಶಾಸಕ ಜೀವರಾಜ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಅಪ್ಸರ್ ಅವರು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಪೊಲೀಸರು ಮಿಲಿಂದ್ ಅವರನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.


ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts