ಕೊರೊನ ನಡುವೆಯೂ ಗ್ರಾಮೀಣ ಶಾಲೆಗಳಲ್ಲಿ ತರಗತಿ ಆರಂಭ - ಶಿಕ್ಷಣ ಸಚಿವರ ದ್ವಂದ್ವಕ್ಕೆ ಆಕ್ರೋಶ

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಆರಂಭವಾಗಿವೆ. ವಾರದಲ್ಲಿ ಮೂರು ದಿನ ಶಾಲೆಯ ಆವರಣದಲ್ಲಿ ತರಗತಿಗಳು ನಡೆಸುತ್ತಿವೆ.

ದೈಹಿಕ ಅಂತರ ಕಾಪಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ತರಗತಿ ನಡೆಸದಂತೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಶಿಕ್ಷಕರು ಇದಕ್ಕಿ ಕಿವಿಗೊಡುತ್ತಿಲ್ಲ. ‘ಬಿಇಒ ಹೇಳಿದ್ದಾರೆ. ಅವರ ಆದೇಶ ಪಾಲಿಸುವುದಷ್ಟೇ ನಮ್ಮ ಕೆಲಸ’ ಎಂದು ಶಿಕ್ಷಕರು ಪೋಷಕರಿಗೆ ಹೇಳಿಕಳಿಸುತ್ತಿರುವ ಉದಾಹರಣೆ ಗಳು ಕಂಡುಬಂದಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೆಪ್ಟೆಂಬರ್ ತಿಂಗಳಲ್ಲೂ ಶಾಲಾ-ಕಾಲೇಜು ಆರಂಭವಾಗುವುದಿಲ್ಲ. ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಗ್ರಾಮೀಣ ಭಾಗದ ಒಂದೊಂದು ಗ್ರಾಮದ ಶಾಲೆಗಳು ಪ್ರಾರಂಭವಾಗಿದ್ದು ಸಚಿವರು ಹೇಳುತ್ತಿರುವುದು ಸುಳ್ಳು ಎಂಬುದು ಸಾಬೀತಾಗಿದೆ.

ಪಿಯು ಕಾಲೇಜುಗಳು ಆರಂಭವಾಗಿಲ್ಲ. ಆದರೆ ಗ್ರಾಮೀಣ ಪ್ರದೇಶದ ಎಲ್ಲಾ ಶಾಲೆಗಳಲ್ಲಿ ಪಾಠ ಭೋಧನೆ ಮಾಡಲಾಗುತ್ತಿದೆ. ಏಕೋಪಾಧ್ಯಾಯ ಶಾಲೆಗಳಲ್ಲಿ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಹೇಳಿಕೊಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಗುರುವಾರ ಮತ್ತು ಶನಿವಾರ ಮಾತ್ರ ಶಾಲೆಯ ಹೊರಾಂಗಣದಲ್ಲಿ ತರಗತಿಗಳು ನಡೆಯುತ್ತಿವೆ.

ಮೂರು-ನಾಲ್ಕು ಶಿಕ್ಷಕರು ಇರುವ ಶಾಲೆಗಳಲ್ಲಿ 1-7 ನೇ ತರಗತಿವರೆಗಿನ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಾಲೆಯ ಆವರಣದ ಜೊತೆಗೆ ದೇವಾಲಯ, ಸಮುದಾಯ ಭವನಗಳಲ್ಲೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ನಿದರ್ಶನಗಳು ಇದೆ. ವಿದ್ಯಾರ್ಥಿಗಳು ಹೆಚ್ಚು ವಾಸಿಸುವ ಕಡೆಗಳಲ್ಲಿ ದೊಡ್ಡ ಮನೆಯ ಅಂಗಳದಲ್ಲಿ ಮಕ್ಕಳನ್ನು ದೈಹಿಕ ಅಂತರದಲ್ಲಿ ಕೂರಿಸಿ ಬೋಧನೆ ಮಾಡಲಾಗುತ್ತಿದೆ.

ಕಳೆದ ಓಂದು ವಾರದಿಂದಲೂ ತರಗತಿಗಳು ಆರಂಭವಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಶಾಲೆಯ ಆವರಣ ದೇವಾಲಯದ ಆವರಣ, ಸಮುದಾಯ ಭವನ, ಮನೆಯ ಅಂಗಳದಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ಕೆಲವು ಕಡೆ ವಾರದಲ್ಲಿ ಮೂರು ದಿನ ನಡೆದರೆ, ಮತ್ತೆ ಕೆಲವು ಕಡೆ ವಾರದ ಏಳು ದಿನಗಳು ತರಗತಿ ನಡೆಯುತ್ತಿದೆ ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಶಿಕ್ಷಕರು ಪ್ರತಿನಿತ್ಯ ಶಾಲೆಗೆ ಹಾಜರಾಗಬೇಕು. ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು. ಪೋಷಕರ ಸಭೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ. ಆಯಾ ತಾಲೂಕು ಕೇಂದ್ರದ ಬಿಇಒಗಳು ಇಂತಹ ಸೂಚನೆ ನೀಡಿದ್ದು ಶಿಕ್ಷಕರು ವಾಹನ ವ್ಯವಸ್ಥೆ ಮಾಡಿಕೊಂಡು ತಾವು ಕೆಲಸ ಮಾಡುವ ಜಾಗಗಳಿಗೆ ತೆರಳಬೇಕಾದಂಥ ಅನಿವಾರ್ಯತೆ ಇದೆ. ಶಾಲೆಗೆ, ದೇವಸ್ಥಾನಕ್ಕೆ ಬರುವಷ್ಟು ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಸ್ಥಿತಿ ಬಂದಿದೆ. ಎಲ್ಲಾ ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಲ್ಲವಾದರೂ ಗೈರು ಆಗುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಸಚಿವ ಸುರೇಶ್ ಕುಮಾರ್ ಶಾಲೆಗಳು ಪ್ರಾರಂಭವಾಗಿಲ್ಲವೆಂದು ಮೇಲ್ನೋಟಕ್ಕೆ ಹೇಳುತ್ತಿದ್ದರೂ ಅದಕ್ಕೆ ವಿರುದ್ದ ದಿಕ್ಕಿನಲ್ಲಿ ಹಳ್ಳಿಗಳಲ್ಲಿ ತರಗತಿಗಳು ನಡೆಯುವಂತೆ ನೋಡಿಕೊಳ್ಳಲಾಗಿದೆ. ಇದು ಸಚಿವರ ದ್ವಂದ್ವ ನಡೆಗೆ ಹಿಡಿದ ಕನ್ನಡಿಯಾಗಿದೆ ಎಂದು ದೂರಲಾಗಿದೆ.

ಶಾಲೆಗೆ ಹೋಗದೆ ಇರುವ ಮಕ್ಕಳು ಪಾಠ ಕೇಳಲು ಸಾಧ್ಯವಾಗದೆ ಶಿಕ್ಷಣದಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆಯೇ ಎಂಬ ಬಗ್ಗೆ ಸಚಿವರು ಮತ್ತು ಸರ್ಕಾರದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.

ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಆರಂಭವಾಗಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಅನ್‌ಲೈನ್ ತರಗತಿಗಳು ನಡೆಯುತ್ತಿವೆ. ಕೆಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಂಡರೆ ಮತ್ತೆ ಕೆಲವು ಶಾಲೆಗಳಲ್ಲಿ ಆನ್ಲೈನ್‌ನಲ್ಲಿ ವಿಡಿಯೋ ಮಾಢಿ ಪೋಷಕರ ಮೊಬೈಲ್‌ಗಳಿಗೆ ರವಾನಿಸಲಾಗುತ್ತಿದೆ. ಹೋಂ ವರ್ಕ್ ಕೂಡ ಮೊಬೈಲ್‌ನಲ್ಲೇ ಫೋಟೋ ತೆಗೆದು ಸಂಬಂಧಪಟ್ಟ ಶಾಲೆಗಳಿಗೆ ಕಳಿಸುವಂತಹ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಜಿಲ್ಲೆಗಳಲ್ಲಿ ಕೊರೊನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಗ್ರಾಮೀಣ ಪ್ರದೇಶದಲ್ಲೂ ಹರಡುತ್ತಿದೆ. ಆದರೆ ಮಕ್ಕಳ ಜೀವ ರಕ್ಷಣೆ ಕಡೆ ಸರ್ಕಾರ ಗಮನಹರಿದಂತೆ ಕಾಣುತ್ತಿಲ್ಲ. ಆನ್‌ಲೈನ್ ಶಿಕ್ಷಣ ಇಲ್ಲ, ಆಫ್‌ಲೈನ್ ಶಿಕ್ಷಣವೂ ಇಲ್ಲ. ಕೋವಿಡ್-19 ರಿಂದ ಜೀವಗಳನ್ನು ರಕ್ಷಿಸುವುದು ಮುಖ್ಯ ಎಂದು ಹೇಳಿದ ಸರ್ಕಾರ ತನ್ನ ಮಾತಿನಂತೆ ತಾನೆ ನಡೆದುಕೊಳ್ಳದಿರುವುದು ಸೋಜಿಗದ ಸಂಗತಿಯಾಗಿದೆ.

ವಿದ್ಯಾಗಮದಡಿ ಎಲ್ಲಾ ಕಡೆ ಶಾಲೆ

ಶಿಕ್ಷಕರು ಪ್ರತಿಯೊಂದು ಹಳ್ಳಿಗಳಿಗೂ ಹೋಗಿ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಹೇಳುತ್ತಾರೆ. ಯಾವ ಮಕ್ಕಳನ್ನು ಕೈಬಿಡುವುದಿಲ್ಲ. ಖಾಸಗಿ ಶಾಲೆಗೆ ಹೋಗುತ್ತಿದ್ದರೂ ಆ ಮಕ್ಕಳನ್ನು ಸೇರಿಸಿಕೊಂಡೇ ಪಾಠ ಹೇಳಿಕೊಡಲಾಗುತ್ತಿದೆ. ಉದಾಹರಣೆಗೆ ಒಂದು ಶಾಲೆಗೆ ಮೂರು ಹಳ್ಳಿಗಳಿಂದ ಮಕ್ಕಳು ಬರುತ್ತಿದ್ದರೆ ಆ ಮೂರು ಹಳ್ಳಿಗಳಿಗೇ ಹೋಗಿ ಸೂಕ್ತ ಜಾಗವನ್ನು ನೋಡಿ ಅಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಹೆಸರು ಹೇಳಲಿಚ್ಚಿಸದ ಸಿಆರ್‌ಪಿ ಒಬ್ಬರು ನಾನುಗೌರಿ.ಕಾಮ್‌ಗೆ ತಿಳಿಸಿದ್ದಾರೆ.


ಓದಿ: ಯಾವಾಗ ಸಾಧ್ಯವೋ ಆಗ, ಎಷ್ಟು ಸಾಧ್ಯವೋ ಅಷ್ಟು ಶುಲ್ಕ ಕಟ್ಟಿ ಎಂದ ಬೆಂಗಳೂರು ಶಾಲೆ!


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts