Photo Courtesy: Live Law

ಅಂದಿನ ತಿರುವಾಂಕೂರು ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪೆರಂಥಾನಮ್ ಎಂಬ ಕುಗ್ರಾಮದಲ್ಲಿ ಶ್ರೀ ಕೊಚೇರಿ ರಾಮನ್ ವಡಿಯರ್ ಮತ್ತು ಶ್ರೀಮತಿ ಪುನ್ನುಥುರುವೆಟ್ಟಲ್ ಪಪ್ಪಿಯಮ್ಮ ದಂಪತಿಗಳ ನಾಲ್ಕನೇ ಮಗನಾಗಿ ಶ್ರೀ ಕೆ.ಆರ್.ನಾರಾಯಣನ್ ಅಕ್ಟೋಬರ್ ೨೭, ೧೯೨೦ರಂದು ಜನಿಸಿದರು. ಕೇರಳ ರಾಜ್ಯದ ಸಾಮಾನ್ಯ ಭೂರಹಿತ ದಲಿತ ಕುಟುಂಬದಲ್ಲಿ ಜನಿಸಿದ ಇವರು ಪ್ರತಿಭೆ, ಪರಿಶ್ರಮ ಮತ್ತು ಮಹೋನ್ನತ ಸಾಧನೆಗಳಿಂದ ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಮೊದಲ ದಲಿತ ರಾಷ್ಟ್ರಪತಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದು ನಿರಂತರ ಜ್ಞಾನಾರ್ಜನೆ ಮತ್ತು ಅನುಭಾವಿಗಳ ಒಡನಾಟದಿಂದ ಉನ್ನತ ಶಿಕ್ಷಣ ಪಡೆದು ಪ್ರತಿಷ್ಟಿತ ಭಾರತೀಯ ವಿದೇಶಾಂಗ ಸೇವೆಗೆ ಇವರು ಸೇರಿದರು. ಜಾತಿ ಬಲ, ಧನಬಲ, ರಾಜಕೀಯ ಬಲ ಮೊದಲಾದವುಗಳಿಲ್ಲದೇ ರಾಷ್ಟ್ರದ ಅಧಿಕಾರಶಾಹಿಯಲ್ಲಿ ಉನ್ನತ ಸ್ಥಾನಮಾನವನ್ನು ಪಡೆದು ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಭಾರತದ ಸಾರ್ವಜನಿಕ ಆಡಳಿತಕ್ಕೆ ಇವರು ಹೊಸ ಆಯಾಮ ನೀಡಿದರು.

ವಿದೇಶಾಂಗ ಇಲಾಖೆಯಲ್ಲಿ ಬರ್ಮಾ ದೇಶದಲ್ಲಿ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇವರು ಉಷಾ ಎಂಬ ಮಹಿಳೆಯನ್ನು ೧೯೫೧ರಲ್ಲಿ ಭಾರತದಲ್ಲಿಯೇ ವಿವಾಹವಾದರು. ವಿದೇಶಾಂಗ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವಾಗಲೇ ಇವರ ಪ್ರತಿಭೆ, ದೇಶ ನಿಷ್ಟೆ, ಕಾರ್ಯಕ್ಷಮತೆ ಮತ್ತು ಹೊಣೆಗಾರಿಕೆಗಳನ್ನು ಗುರುತಿಸಿ ಹೆಚ್ಚಿನ ಸೇವೆಗಾಗಿ ೧೯೮೪ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಸೇರಿದ ಒಟ್ಟಪಾಲಮ್ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗುವಂತೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ನೋಡಿಕೊಂಡರು. ಇವರು ೧೯೮೪, ೧೯೮೯, ಮತ್ತು ೧೯೯೧ರಲ್ಲಿ ೩ ಬಾರಿ ಲೋಕಸಭಾ ಸದಸ್ಯರಾಗಿ ಕೇರಳ ರಾಜ್ಯದಿಂದ ಆಯ್ಕೆಗೊಂಡರು. ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೀತಿ ನಿರೂಪಣಾ ಪ್ರಕ್ರಿಯೆಯನ್ನು ತನ್ನ ವಿದ್ವತ್ಪೂರ್ಣ ವಿಚಾರಧಾರೆ ಮತ್ತು ಅನುಭವಗಳಿಂದ ಶ್ರೀಮಂತಗೊಳಿಸಿದ ಇವರನ್ನು ತದನಂತರ ರಾಜ್ಯಸಭೆ ಸದಸ್ಯರನ್ನಾಗಿಸಿ ಅಂದಿನ ಕಾಂಗ್ರೆಸ್ ಪಕ್ಷ ಪುರಸ್ಕರಿಸಿತು.

ಸ್ವಾತಂತ್ರ್ಯಾನಂತರದಲ್ಲಿ ರಾಷ್ಟ್ರದಲ್ಲಿ ಸಮಾಜವಾದ ಮತ್ತು ಜಾತ್ಯಾತೀತತೆಗಳಿಗೆ ಬದ್ಧರಾಗಿ ಸಾರ್ವಜನಿಕ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಿ ಸಾಮಾಜಿಕ ಬಂಡವಾಳ ಅಭಿವೃದ್ಧಿಗೆ ಐತಿಹಾಸಿಕ ಕೊಡುಗೆ ನೀಡಿದ  ಪಂಡಿತ್ ಜವಾಹರಲಾಲ್ ನೆಹರೂರವರ ಸಾರ್ವಜನಿಕ ಆಡಳಿತ ಪರಂಪರೆಯಲ್ಲಿ ಕೆ.ಆರ್.ನಾರಾಯಣನ್‌ರವರ ವಿಶಿಷ್ಟ ನಾಯಕತ್ವ ರೂಪುಗೊಂಡಿತು. ಬಡತನ ನಿರ್ಮೂಲನೆ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವಿತರಣೆಗೆ ಅಮೂಲ್ಯ ಕೊಡುಗೆ ನೀಡಿ ಭಾರತ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಘನತೆ ತಂದುಕೊಟ್ಟ ಶ್ರೀಮತಿ ಇಂದಿರಾಗಾಂಧಿಯವರ ರಾಜಕೀಯ ಒಡನಾಟದಿಂದ ಇವರು ರಾಷ್ಟ್ರರಾಜಕಾರಣದಲ್ಲಿ ಮಹೋನ್ನತ ಸ್ಥಾನಗಳಿಸಲು ಸಾಧ್ಯವಾಯಿತು. ದೇಶದ ಉಪರಾಷ್ಟ್ರಪತಿಯಾಗಿ ಹಿರಿಯ ಚಿಂತಕರು ಮತ್ತು ಮುತ್ಸದ್ದಿಗಳ ಸದನವೆಂಬ ಖ್ಯಾತಿ ಗಳಿಸಿರುವ ರಾಜ್ಯ ಸಭೆಯ ಸಭಾಪತಿ ಸ್ಥಾನದ ಘನತೆ ಹೆಚ್ಚಿಸುವಂತಹ ಸಾರ್ಥಕ ಕೆಲಸಗಳ ಮೂಲಕ ಇವರು ದೇಶದಲ್ಲಿ ಜನಮನ್ನಣೆ ಗಳಿಸಿದರು. ಆಧುನಿಕತೆ, ವೈಜ್ಞಾನಿಕತೆ, ಮಾನವೀಯತೆ ಮತ್ತು ಜಾತ್ಯಾತೀತತೆಗಳಿಂದಲೇ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವೆಂಬ ಮನೋಧರ್ಮವನ್ನು ಇವರು ಹೊಂದಿದ್ದರು. ವಿಶೇಷ ಸಂದರ್ಭವೊಂದರಲ್ಲಿ ಹೆಚ್‌ಐವಿ ಪೀಡಿತ ವ್ಯಕ್ತಿಯೊಬ್ಬರಿಗೆ ಪ್ರೀತಿಯಿಂದ ಹಸ್ತಲಾಘವ ಮಾಡಿ ತಮಗೆ ಮಾನವೀಯತೆಗಿಂತ ಮಿಗಿಲಾದ ಶಿಷ್ಟಾಚಾರ ಮತ್ತೊಂದಿಲ್ಲವೆಂಬುದನ್ನು ತೋರಿಸಿಕೊಟ್ಟರು. ಈ ಘಟನೆ ಬಹಳಷ್ಟು ಸಂಪ್ರದಾಯವಾದಿಗಳ ಮನಕಲಕಿತು.

ಒಳಗೊಳ್ಳುವ ಭಾರತದ ಕನಸುಗಾರ, ಸಾಂವಿಧಾನಿಕ ಮೌಲ್ಯಗಳ ಪ್ರತಿಪಾದಕ, ಸಾಮಾಜಿಕ ನ್ಯಾಯಪರ ಆಡಳಿತಗಾರ ಹಾಗೂ ಸರ್ವಜನಾಂಗಗಳ ಹಿತರಕ್ಷಕ ಕೆ.ಆರ್.ನಾರಾಯಣನ್ ಅವರನ್ನು ಭಾರತದ ಸಜ್ಜನ ಪ್ರಧಾನಿಯೆಂದೇ ಗೌರವಿಸಲ್ಪಟ್ಟಿರುವ ಐ.ಕೆ.ಗುಜ್ರಾಲ್ ನೇತೃತ್ವದ ಯುನೈಟೆಡ್ ಫ್ರೆಂಟ್ ಸರ್ಕಾರ ರಾಷ್ಟ್ರಪತಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತು. ಭಾರತವು ಸಂವಿಧಾನ, ಬಹುತ್ವ, ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ಪ್ರಬಲಶಕ್ತಿಯಾಗಿ ರೂಪುಗೊಳ್ಳಬೇಕಾದ ಪ್ರತಿಭೆ ಮತ್ತು ಸಾಮರ್ಥ್ಯಗಳ ಸಂಗಮವೇ ಆದ ಇವರು ದೇಶದ ರಾಷ್ಟ್ರಪತಿಯಾಗಲೇಬೇಕೆಂಬ ಪ್ರಬಲ ಇಚ್ಛಾಶಕ್ತಿಯನ್ನು ಅಂದಿನ ಕೇಂದ್ರ ಸರ್ಕಾರ ಹೊಂದಿತ್ತು.

ಕೆ.ಆರ್.ನಾರಾಯಣನ್‌ರವರ ಅಧಿಕಾರಾವಧಿಯಲ್ಲಿ ಜರುಗಿದ ಹಲವಾರು ಘಟನಾವಳಿಗಳು ಭಾರತೀಯ ಪ್ರಜಾಸತ್ತೆ ಮತ್ತು ಪ್ರಜೆಗಳ ಸಾರ್ವಭೌಮತ್ವಕ್ಕೆ ಗಂಭೀರ ಸವಾಲುಗಳನ್ನು ಒಡ್ಡಿದ್ದವು. ಅವರ ಪ್ರಬಲ ಸಂವಿಧಾನ ನಿಷ್ಟೆ ಮತ್ತು ರಾಷ್ಟ್ರೀಯ ಸಮಗ್ರತೆ ಕೇಂದ್ರಿತ ಬದ್ಧತೆಗಳ ಮುಂದೆ ಬಹುತ್ವ ವಿರೋಧಿಗಳ ಆಟ ನಡೆಯಲಿಲ್ಲ. ಅವರು ಬಹಳಷ್ಟು ಸವಾಲಿನ ಸಂದರ್ಭಗಳನ್ನು ಅತ್ಯಂತ ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯಿಂದ ಸಮರ್ಥವಾಗಿ ನಿರ್ವಹಿಸಿ ತಮಗೆ ದೇಶದ ಅತ್ಯುನ್ನತ ಸ್ಥಾನಮಾನ ನೀಡಿದ ಭಾರತೀಯ ಗಣರಾಜ್ಯದ ಋಣವನ್ನು ತೀರಿಸಿದರು. ಆಳುವವರ ಮರ್ಜಿಗೊಳಗಾಗಿ ಅವರ ಹಿತಕ್ಕೆ ತಕ್ಕಂತೆ ವರ್ತಿಸಿ ಅಧಿಕಾರ ನೀಡಿದವರ ಋಣ ತೀರಿಸುವ ರಬ್ಬರಸ್ಟಾಂಪ್ ರಾಷ್ಟ್ರಪತಿ ತಾವಲ್ಲ ಎಂಬುದನ್ನು ಇವರು ದಿಟ್ಟವಾಗಿ ಪ್ರತಿಪಾದಿಸಿದರು. ಇದಕ್ಕಾಗಿ ಇವರನ್ನು ಭಾರತೀಯ ಗಣರಾಜ್ಯದಲ್ಲಿ ಅಪ್ರತಿಮ ಸಂವಿಧಾನ ರಕ್ಷಕ ಎಂದು ಗೌರವಿಸಲಾಗಿದೆ.

ಅಂದು ಯುನೈಟೆಡ್ ಫ್ರೆಂಟ್ ಸರ್ಕಾರ ರಾಜಕೀಯ ಕಾರಣಕ್ಕಾಗಿ ಉತ್ತರಪ್ರದೇಶದಲ್ಲಿ ಕಲ್ಯಾಣ್‌ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ಸಂವಿಧಾನ ಪರಿಚ್ಛೇದ ೩೫೬ರ ಅನ್ವಯ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಇರಾದೆ ಹೊಂದಿದ್ದ ರೂಮೇಶ್ ಭಂಡಾರಿ ಎಂಬ ರಾಜ್ಯಪಾಲರನ್ನು ದಿಟ್ಟವಾಗಿ ಪಳಗಿಸಿದ ಪರಿ ಇಂದಿಗೂ ಹಸಿರಾಗಿದೆ. ಐ.ಕೆ.ಗುಜ್ರಾಲ್ ನೇತೃತ್ವದ ಭಾರತ ಸರ್ಕಾರಕ್ಕೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಸರ್ಕಾರ ಕುರಿತಂತೆ ಸರ್ವೋಚ್ಛ ನ್ಯಾಯಾಲಯದ ತೀರ್ಮಾನ ಮತ್ತು ಕೇಂದ್ರ ರಾಜ್ಯಗಳ ಸಂಬಂಧ ಕುರಿತಂತೆ ನ್ಯಾಯಮೂರ್ತಿ ಸರ್ಕಾರಿಯಾ ಆಯೋಗ ನೀಡಿದ ಶಿಫಾರಸ್ಸುಗಳನ್ನು ಪರಿಪಾಲಿಸಿ ಉತ್ತರಪ್ರದೇಶ ರಾಜ್ಯ ಸರ್ಕಾರ ಉಳಿಸಲು ಕೆ.ಆರ್.ನಾರಾಯಣನ್ ಮುಂದಾದ ಬಗೆ ಅವರ ನಿಷ್ಪಕ್ಷಪಾತ ನಿಲುವು ಮತ್ತು ಸಂವಿಧಾನ ನಿಷ್ಟೆಗೆ ಉದಾಹರಣೆಯಾಗಿದೆ. ಈ ಸಂಗತಿಯನ್ನು ಐ.ಕೆ.ಗುಜ್ರಾಲ್ ತಮ್ಮ ಆತ್ಮ ಚರಿತ್ರೆಯಲ್ಲಿ ಅರ್ಥಪೂರ್ಣವಾಗಿ ಉಲ್ಲೇಖಿಸಿ ಇವರು ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿದ ಬಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

೨೦೦೧ರ ಜುಲೈ ತಿಂಗಳಿನಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸರ್ಕಾರ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಮಾಜಿ ಕೇಂದ್ರ ಮಂತ್ರಿ ಮುರಸೋಳಿ ಮಾರನ್‌ರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹೀನಾಯವಾಗಿ ನಡೆಸಿಕೊಂಡ ಬಗೆಯನ್ನು ಕೆ.ಆರ್.ನಾರಾಯಣನ್ ಗಂಭೀರವಾಗಿ ಪರಿಗಣಿಸಿದರು. ಇಂತಹ ಕಠಿಣ ಸಂದರ್ಭದಲ್ಲಿ ದಿವ್ಯ ಮೌನ ತಾಳಿದ್ದ ಅಂದಿನ ರಾಜ್ಯಪಾಲೆ ಎಂ.ಫಾತಿಮಾ ಬಿವಿಯವರನ್ನು ಇವರು ತರಾಟೆಗೆ ತೆಗೆದುಕೊಂಡು ಪ್ರಕರಣದ ಬಗ್ಗೆ ಸೂಕ್ತ ವರದಿ ತರಿಸಿಕೊಂಡು ಕ್ರಮ ಜರುಗಿಸಿಕೊಂಡು ಅಂದಿನ ಪ್ರಧಾನಿ ವಾಜಪೇಯಿರವರಿಗೆ ನಿರ್ದೇಶನ ನೀಡಿದರು. ಕೂಡಲೇ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ಸು ಕರೆಸಿಕೊಂಡು ಸಂವಿಧಾನದ ಪ್ರಾಮುಖ್ಯತೆಯನ್ನು ಉಳಿಸಲು ಇವರು ಕಾರಣರಾದರು. ಕಠಿಣ ಸಂದರ್ಭಗಳಲ್ಲಿ ತಾವೆಷ್ಟೇ ಮೃದು ಹೃದಯಿಯಾಗಿದ್ದರೂ ದಿಟ್ಟ ನಿಲುವುಗಳನ್ನು ತೆಗೆದುಕೊಂಡು ರಾಷ್ಟ್ರಪತಿ ಸ್ಥಾನದ ಘನತೆಯನ್ನು ಕಾಪಾಡಿದರು. ರಾಜಭವನಗಳು ಸ್ಥಾಪಿತ ಹಿತಾಸಕ್ತಿಗಳ ಕಾರುಬಾರಿನ ಕೇಂದ್ರಗಳಾಗಬಾರದೆಂಬ ಎಚ್ಚರಿಕೆ ನೀಡಿದ ಇವರನ್ನು ಮಾಧ್ಯಮಗಳು ಮತ್ತು ನಾಗರೀಕ ಸಮಾಜ ಗೌರವಿಸಿತು.

ಕೆ.ಆರ್.ನಾರಾಯಣನ್ ವಾಜಪೇಯಿ ಅವರಿಗೆ ಸಂವಿಧಾನ ವಿಫಲಗೊಂಡಿದೆಯೇ? ಅಥವಾ ಸಂವಿಧಾನವನ್ನು ನೀವು ವಿಫಲಗೊಳಿಸಿರುವಿರಾ? ಎಂಬ ಗಂಭೀರ ಪ್ರಶ್ನೆಯನ್ನು ಮಂಡಿಸಿದರು. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ವಾಜಪೇಯಿ ಅವರ ಬಳಿ ಪ್ರಾಮಾಣಿಕ ಉತ್ತರವಿರಲಿಲ್ಲ.

ಭಾರತೀಯ ಸಂವಿಧಾನದಲ್ಲಿ ಪ್ರಧಾನಿ ಮತ್ತು ರಾಷ್ಟ್ರಪತಿ ಎಂಬ ಎರಡು ಪ್ರತ್ಯೇಕ ಶಕ್ತಿ ಕೇಂದ್ರಗಳು ರೂಪುಗೊಳ್ಳಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅನುವು ಮಾಡಿಕೊಟ್ಟಿಲ್ಲ. ಆದರೆ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಅಪಚಾರವೆಸಗುವ ಕಾರ್ಯದಲ್ಲಿ ತೊಡಗಿದಾಗ ಸೂಕ್ತ ಕಡಿವಾಣ ಹಾಕುವ ಪರಮಾಧಿಕಾರ ರಾಷ್ಟ್ರಪತಿಗಳಿಗೆ ಸಾಂವಿಧಾನಿಕವಾಗಿ ಲಭಿಸಿದೆ. ಅಂತಹ ಪರಮಾಧಿಕಾರವನ್ನು ಅತ್ಯಂತ ಪ್ರೀತಿ, ನಿರ್ಭೀತಿ ಮತ್ತು ಜವಾಬ್ದಾರಿಗಳಿಂದ ನಿರ್ವಹಿಸಿದ ಖ್ಯಾತಿಯನ್ನು ಕೆ.ಆರ್.ನಾರಾಯಣನ್ ಹೊಂದಿದ್ದಾರೆ. ಅಂದು ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿದ್ದ ವಾಜಪೇಯಿ ಸಂವಿಧಾನ ಪರಾಮರ್ಶೆ ನಡೆಸಲು ನ್ಯಾಯಮೂರ್ತಿ ವೆಂಕಟಾಚಲಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿದ್ದನ್ನು ಇವರು ಗಂಭೀರವಾಗಿ ಪರಿಗಣಿಸಿದರು. ಕೇಂದ್ರ ಸರ್ಕಾರದ ರಾಜಕೀಯ ನಡೆಯ ಹಿಂದೆ ಸಾಮಾಜಿಕ ನ್ಯಾಯವಿರೋಧಿಗಳ ಭಾರಿ ಸಂಚನ್ನು ಸೂಕ್ಷ್ಮವಾಗಿ ಗಮನಿಸಿದ ಕೆ.ಆರ್.ನಾರಾಯಣನ್ ವಾಜಪೇಯಿ ಅವರಿಗೆ ಸಂವಿಧಾನ ವಿಫಲಗೊಂಡಿದೆಯೇ? ಅಥವಾ ಸಂವಿಧಾನವನ್ನು ನೀವು ವಿಫಲಗೊಳಿಸಿರುವಿರಾ? ಎಂಬ ಗಂಭೀರ ಪ್ರಶ್ನೆಯನ್ನು ಮಂಡಿಸಿದರು. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ವಾಜಪೇಯಿ ಅವರ ಬಳಿ ಪ್ರಾಮಾಣಿಕ ಉತ್ತರವಿರಲಿಲ್ಲ.

ಇದೇ ಸಂದರ್ಭದಲ್ಲಿ ದೇಶದಾದ್ಯಂತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮೊದಲಾದ ಬಹುಜನರು ಪ್ರಬಲ ಜನಾಭಿಪ್ರಾಯ ರೂಪಿಸಿ ರಾಷ್ಟ್ರಪತಿಗಳಿಗೆ ಸಂವಿಧಾನದ ಮೌಲ್ಯವನ್ನು ನಾಶಮಾಡಲು ಹಿಂದುತ್ವವಾದಿಗಳಿಗೆ ಅವಕಾಶ ನೀಡಬೇಡಿ ಎಂದು ಆಗ್ರಹಪಡಿಸಿದರು. ಮೈಸೂರಿನ ಹಿರಿಯ ಕಾನೂನುತಜ್ಞ ಪ್ರೊ.ಸಿ.ಕೆ.ಎನ್.ರಾಜಾ ಸಂವಿಧಾನ ಪರಾಮರ್ಶೆ ಸಮಿತಿ ಸದಸ್ಯನಾಗಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲವೆಂಬ ದಿಟ್ಟ ನಿಲುವು ತಳೆದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡರು. ಆದರೆ ಅಂದು ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದ ಹಿರಿಯ ದಲಿತ ಧುರೀಣ ವಿ.ಶ್ರೀನಿವಾಸ್‌ಪ್ರಸಾದ್ ಸಂವಿಧಾನ ಪರಾಮರ್ಶೆಯನ್ನು ಬೆಂಬಲಿಸಿ ತಮ್ಮ ತೂಕ ಕಡಿಮೆ ಮಾಡಿಕೊಂಡರು. ಮತ್ತೋರ್ವ ಸಮರ್ಥಕ ಉತ್ತರ ಭಾರತದ ದಲಿತ ನಾಯಕ ರಾಮವಿಲಾಸ್ ಪಾಸ್ವಾನ್ ಮತ್ತಷ್ಟು ತೂಕ ಕಡಿಮೆ ಮಾಡಿಕೊಂಡು ಇತ್ತೀಚೆಗೆ ಕಾಲವಶವಾದರು. ಬಲಿಷ್ಟ ಎನ್‌ಡಿಎ ಸರ್ಕಾರದ ಪ್ರಬಲ ವಿರೋಧದ ನಡುವೆಯೂ ಕೆ.ಆರ್.ನಾರಾಯಣನ್ ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ಧೀಮಂತಿಕೆಯಿಂದ ಉಳಿಸಿ ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ತಮ್ಮ ಆತ್ಮಚರಿತ್ರೆಯಲ್ಲಿ ಕೆ.ಆರ್.ನಾರಾಯಣನ್ ಅವರನ್ನು ಅತ್ಯಂತ ಒಳ್ಳೆಯ ಕಾರಣಕ್ಕಾಗಿ ಸಂವಿಧಾನ ನಿಷ್ಟೆಯನ್ನು ಅಭಿವ್ಯಕ್ತಿಗೊಳಿಸಿದ ಚಳುವಳಿ ಮನೋಧರ್ಮವುಳ್ಳ ದಿಟ್ಟ ರಾಷ್ಟ್ರಪತಿ ಎಂದು ಶ್ಲಾಘಿಸಿದ್ದಾರೆ.

೧೯೯೯ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ವಾಜಪೇಯಿ ನೇತೃತ್ವದಲ್ಲಿ ಸಂವಿಧಾನ ಪರಾಮರ್ಶೆ ಸಮಿತಿಯನ್ನು ರಚಿಸಿತು. ಆದಾಗ್ಯೂ ಕೆ.ಆರ್.ನಾರಾಯಣನ್ ತಮ್ಮ ದಿಟ್ಟತನದಿಂದ ಸಣ್ಣಮನಸ್ಸಿನ ಜನರು ಸಂವಿಧಾನವನ್ನು ದುರ್ಬಲಗೊಳಿಸಲು ಅವಕಾಶ ನೀಡಲಿಲ್ಲ! ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ಅಮೇರಿಕಾ ಅಧ್ಯಕ್ಷ ಬಿಲ್‌ಕ್ಲಿಂಟನ್‌ರಿಗೆ ನೀಡಿದ ಔತಣಕೂಟದಲ್ಲಿ ಭಾರತವು ಅಲಿಪ್ತನೀತಿ ವಿಚಾರದಲ್ಲಿ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ ಎಂಬ ನೇರ ನುಡಿಯಿಂದ ಅಮೇರಿಕಾವನ್ನು ಓಲೈಸಲು ಸನ್ನದ್ಧವಾಗಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದರು. ಇಂತಹ ದಿಟ್ಟ ರಾಷ್ಟ್ರಪತಿ ಭಾರತದ ಇತಿಹಾಸದಲ್ಲಿ ಬಲು ಅಪರೂಪ. ಇದೇ ಸಂದರ್ಭದಲ್ಲಿ ವಾಜಪೇಯಿ ಸರ್ಕಾರ ಕೇವಲ ೧ ಮತದಿಂದ ಸೋತು ಅಧಿಕಾರ ಕಳೆದುಕೊಂಡಿದ್ದು ಇತಿಹಾಸ. ಅಂದು ಚಾಮರಾಜನಗರದ ಸಂಸದ ಎ.ಸಿದ್ದರಾಜು ಅವರಿಗೆ ಕೋಟ್ಯಾಂತರ ರೂಪಾಯಿಗಳು ಮತ್ತು ಕೇಂದ್ರ ಮಂತ್ರಿ ಹುದ್ದೆ ಆಮಿಷವೊಡ್ಡಿದಾಗ ಅವರು ಮಾನ ಮಾರಿಕೊಳ್ಳದೇ ಜಾತ್ಯಾತೀತತೆ ಪರವಾಗಿ ಗಟ್ಟಿಯಾಗಿ ನಿಂತರು. ಇವತ್ತಿನ ಅನರ್ಹ ಶಾಸಕರು ಮತ್ತು ಸಂಸದರ ಯುಗದಲ್ಲಿ ಎ.ಸಿದ್ದರಾಜು ಅವರಂತಹ ಮಾನವಂತ ಸಂಸದರನ್ನು ನೋಡುವುದುಂಟೇ?

ಇದನ್ನೂ ಓದಿ: ಅಂದು ಗಾಂಧೀಜಿಯನ್ನು ಕಾಡಿದ ಭಯ ಇಂದು ನಮ್ಮೆಲ್ಲರನ್ನೂ ಕಾಡುತ್ತಿದೆ : ಎ.ನಾರಾಯಣ

ವಾಜಪೇಯಿ ಅವರ ಎನ್‌ಡಿಎ ಸರ್ಕಾರ ಪತನಗೊಂಡ ನಂತರ ಕೆ.ಆರ್.ನಾರಾಯಣನ್‌ರವರು ಭಾರತದಲ್ಲಿ ಜಾತ್ಯಾತೀತತೆ ಮತ್ತು ಪ್ರಜಾಸತ್ತೆಗಳನ್ನು ಉಳಿಸಲು ಕಾಂಗ್ರೆಸ್ ಮತ್ತಿತರ ಯುಡಿಎಫ್ ನೇತಾರರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸುರವರನ್ನು ಪ್ರಧಾನಿ ಹುದ್ದೆಗೆ ನೇಮಿಸಲು ಗಂಭೀರ ಪ್ರಯತ್ನ ನಡೆಸಿದರು. ಆದರೆ ಕಾಂಗ್ರೆಸ್‌ನ ಎಂ.ಎಲ್.ಫೋತೆದಾರ್ ಮತ್ತು ಪ್ರಣಬ್ ಮುಖರ್ಜಿ ಎಂಬ ಮನುವಾದಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಒಂದು ವೇಳೆ ಆ ಪ್ರಯತ್ನದಲ್ಲಿ ಕೆ.ಆರ್.ನಾರಾಯಣನ್ ಯಶಸ್ವಿಯಾಗಿದ್ದರೆ ವಾಜಪೇಯಿಯವರಿಗೆ ೨ನೇ ಬಾರಿ ಅಧಿಕಾರ, ಗುಜರಾತ್ ೨೦೦೨ ಮೋದಿ ಮಾಯೆ, ೨೦೧೪ ಮತ್ತು ೨೦೧೯ರ ಮೋದಿ ಪ್ರಭುತ್ವದಿಂದಾಗಿ ಭಾರತೀಯ ಸಂವಿಧಾನ ಮತ್ತು ಪ್ರಜಾಸತ್ತೆಗಳಿಗೆ ಗಂಡಾಂತರ ಖಂಡಿತ ಉಂಟಾಗುತ್ತಿರಲಿಲ್ಲ. ಭಾರತದ ರಾಜಕಾರಣದ ದಿಕ್ಕೆ ಕ್ರಾಂತಿಕಾರಕ ರೀತಿಯಲ್ಲಿ ಬದಲಾಗುತ್ತಿತ್ತು. ಭಾರತದ ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ಉಳಿಸಲು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕೆ.ಆರ್.ನಾರಾಯಣನ್ ಮೊದಲಾದವರು ಮತ್ತೆ ಹುಟ್ಟಿ ಬರಬೇಕು.

  • ಡಾ.ಬಿ.ಪಿ ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಮತ್ತು ಜಾತ್ಯತೀತ ವ್ಯಕ್ತಿ. ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

LEAVE A REPLY

Please enter your comment!
Please enter your name here