ತಮಿಳುನಾಡಿನ ಕುಂಡ್ರತ್ತೂರ್‌ನಲ್ಲಿ ಅಕ್ರಮ ಸರ್ಕಾರಿ ಜಮೀನಿನ ಮಾರಾಟ ಮತ್ತು ಗಾಂಜಾ ಮಾರಾಟದ ಬಗ್ಗೆ ವರದಿ ಮಾಡಿದ್ದ ತಮಿಳನ್ ಟಿವಿ ಚಾನೆಲ್‌ನ 29 ವರ್ಷದ ವರದಿಗಾರನನ್ನು ಗುಂಪೊಂದು ಭಾನುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದೆ.
ಕುಂಡ್ರತ್ತೂರ್ ಚೆನ್ನೈನ ಹೊರವಲಯದಲ್ಲಿರುವ ಉಪನಗರವಾಗಿದ್ದು, ಕಾಂಚೀಪುರಂ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಪುದು ನೆಲ್ಲೂರು ಗ್ರಾಮದಲ್ಲಿ ವಾಸಿಸುತ್ತಿದ್ದ ಮೋಸಸ್ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿದ್ದರು. ಆಗಿನಿಂದಲೇ ಮಾರಣಾಂತಿಕ ಬೆದರಿಕೆಗಳನ್ನು ಎದುರಿಸುತ್ತಿದ್ದ ಮೋಸಸ್ ಅವರನ್ನು ಭಾನುವಾರ ಇಬ್ಬರು ದುಷ್ಕರ್ಮಿಗಳು ಕುಡಗೋಲುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ಹೇಳುವ ಪತ್ರಕರ್ತರನ್ನು ತುಳಿಯುತ್ತಿರುವ ಪ್ರಭುತ್ವಗಳು
ಇದರ ಬೆನ್ನಲ್ಲೇ, ಸಾವಿಗೆ ಸಂಬಂಧಿಸಿದಂತೆ ಅಕ್ರಮ ಭೂ ಮಾರಾಟ ಮತ್ತು ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವ ಗುಂಪಿನ ನಾಲ್ಕು ಜನರನ್ನು ಸೋಮಂಗಲಂ ಪೊಲೀಸರು ಬಂಧಿಸಿದ್ದಾರೆ.
ತಮಿಳನ್ ಚಾನೆಲ್‌ನಲ್ಲಿ ಸಿರಪ್ಪು ಪಾರ್ವೈ (ವಿಶೇಷ ಗಮನ) ಕಾರ್ಯಕ್ರಮದ ಮೂಲಕ ಮೋಸಸ್ ಈ ಪ್ರದೇಶದಲ್ಲಿನ ಸಮಾಜ ವಿರೋಧಿ ಅಂಶಗಳ ರಹಸ್ಯ ಕಾರ್ಯಾಚರಣೆಯನ್ನು ಬಹಿರಂಗಪಡಿಸುತ್ತಿದ್ದರು. ಕಳೆದ ವಾರ, ಈ ಪ್ರದೇಶದ ಗುಂಪೊಂದು ನಡೆಸುತ್ತಿದ್ದ ಗಾಂಜಾ ಮಾರಾಟದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಆ ಗುಂಪಿನಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದರು.
ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ
ತಮಿಳನ್ ಟಿವಿಯ ಮುಖ್ಯ ವರದಿಗಾರ ಮತ್ತು ವರ್ಕಿಂಗ್ ಜರ್ನಲಿಸ್ಟ್ಸ್ ಯೂನಿಯನ್ ರಾಜ್ಯ ಅಧ್ಯಕ್ಷ ಸಗಾಯರಾಜ್, “ಭಾನುವಾರ ರಾತ್ರಿ, ಮೋಸಸ್ ಅವರು ತಮ್ಮ ಮನೆಯಿಂದ ಹೊರಡುತ್ತಿದ್ದರು. ಶೀಘ್ರದಲ್ಲೇ ಅವರ ಕೂಗು ಕೇಳಿಸಿ ಏನಾಯಿತು ಎಂದು ನೋಡಲು ಅವನ ತಂದೆ ತಕ್ಷಣವೇ ಧಾವಿಸಿದರು. ಕುಡಗೋಲುಗಳೊಂದಿಗಿನ ಇಬ್ಬರು ಮೋಸಸ್ ಮೇಲೆ ಆಕ್ರಮಣ ಮಾಡುತ್ತಿದ್ದರು. ನಂತರ ಅವರು ಆತನ ತಂದೆಯನ್ನು ನೋಡಿ ಓಡಿಹೋದರು” ಎಂದು ಹೇಳಿದರು.
ಈ ದಾಳಿಯಲ್ಲಿ, ಮೋಸಸ್‌ಗೆ ತಲೆ ಮತ್ತು ಕೈಗೆ ತೀವ್ರವಾದ ಗಾಯಗಳಾಗಿದ್ದು, ತಕ್ಷಣ ಅವರನ್ನು ಕ್ರೋಮ್‌ಪೇಟ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತೀವ್ರ ಗಾಯಗಳು ಮತ್ತು ಅತಿಯಾದ ರಕ್ತಸ್ರಾವದಿಂದಾಗಿ ಅವರು ನಿಧನರಾದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇದನ್ನೂ ಓದಿ: ರಣಹದ್ದು ಮತ್ತು ಪತ್ರಕರ್ತರು : ತಣ್ಣನೆ ಹೆಸರಿನ ಪುಣ್ಯಾತ್ಮ ಹಸೀ ಸುಳ್ಳನ್ನ ಸುಡು ಬಿಸಲಿನ್ಯಾಗ ಹೇಳಿದ್ದು…
ಸ್ವತಃ ಪತ್ರಕರ್ತರೂ ಆಗಿರುವ ಮೋಸಸ್ ತಂದೆ ಜೆಸುದಾಸ್, “ನನ್ನ ಮಗ ಯಾವಾಗಲೂ ಈ ಪ್ರದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದನು. ಈ ಹಿಂದೆ ಭೂ ಕಬಳಿಕೆಯ ಬಗ್ಗೆ ವರದಿ ಮಾಡಿದ್ದನು. ಅಂದಿನಿಂದ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕಳೆದ ವಾರ ಅದೇ ಗುಂಪು ಗಾಂಜಾ ಮಾರಾಟದಲ್ಲಿ ಭಾಗಿಯಾಗಿದೆ ಎಂದು ವರದಿ ಮಾಡಿದ್ದನು. ಹಾಗಾಗಿ ಅವರು ನಮಗೆ ಬೆದರಿಕೆಗಳನ್ನು ಒಡ್ಡಿದ್ದರು. ನಂತರ ಪೊಲೀಸ್ ಠಾಣೆಗೆ ಹೋಗಿ ಬೆದರಿಕೆಗಳ ಬಗ್ಗೆ ತಿಳಿಸಿದ್ದನು. ಆದರೆ ಲಿಖಿತವಾಗಿ ದೂರು ನೀಡಿರಲಿಲ್ಲ. ಅದುವೇ ಈ ದಾಳಿಗೆ ಕಾರಣವಾಯಿತು” ಎಂದು ಹೇಳಿದರು.
ಆದರೆ ಪೊಲೀಸರು ಕ್ರಮ ಕೈಗೊಂಡು ವರದಿಗಾರನಿಗೆ ರಕ್ಷಣೆ ನೀಡಬೇಕಾಗಿತ್ತು ಎಂದು ಸಗಾಯರಾಜ್ ಹೇಳಿದ್ದಾರೆ. ತಕ್ಷಣದ ರಕ್ತಸಂಬಂಧಿಗಳಿಗೆ ಸರ್ಕಾರವು 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಕೆಲಸವನ್ನು ನೀಡಬೇಕು. ಪತ್ರಕರ್ತರ ರಕ್ಷಣೆಗಾಗಿ ತಮಿಳುನಾಡು ಸರ್ಕಾರ ಕಾನೂನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ಪತ್ರಕರ್ತರ ಮೇಲೆ ಸುಳ್ಳು ಆರೋಪ, ಬಂಧನ ಖಂಡನೀಯ – ಕೆ.ದೊರೈರಾಜ್
ಏತನ್ಮಧ್ಯೆ, ಸೋಮಂಗಲಂ ಪೊಲೀಸರು ದೂರು ದಾಖಲಿಸಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಮೋಸಸ್ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮಹಿಳಾ ಪತ್ರಕರ್ತರ ವೇದಿಕೆ ಹೀಗೆ ಹೇಳಿದೆ: “ಗಾಂಜಾ ಮಾರಾಟ ಮತ್ತು ಭೂ ಅತಿಕ್ರಮಣವನ್ನು ವರದಿ ಮಾಡಿದ್ದ ವರದಿಗಾರ ಮೋಸಸ್ ಅವರನ್ನು ಪುದು ನೆಲ್ಲೂರಿನಲ್ಲಿ ಹತ್ಯೆ ಮಾಡಲಾಗಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ನಾವು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಕೋರುತ್ತೇವೆ. ಈ ಕೊಲೆಗೆ ಪೊಲೀಸರೇ ಕಾರಣ. ಏಕೆಂದರೆ ಮೋಸೆಸ್ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ದೂರು ನೀಡಿದಾಗ್ಯೂ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ತನಿಖೆ ತೆರೆದಿಡುವ ಚರ್ಚೆಗಳು


