ಬಿಹಾರ ವಿಧಾನಸಭಾ ಚುನಾವಣೆ ಮತ ಎಣಿಕೆ ದಿಢೀರ್ ತಿರುವುಗಳನ್ನು ನೀಡುತ್ತಿದೆ. ಬೆಳಿಗ್ಗೆ ಮತ ಎಣಿಕೆ ಶುರುವಾದಾಗ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡು ನಂತರ ದಿಢೀರ್ ಕುಸಿತ ಕಂಡಿದ್ದ ಮಹಾಘಟಬಂಧನ್ ಮತ್ತೆ ಮೇಲೇಳುತ್ತಿದೆ. ಬೆಳಿಗ್ಗೆ 10 ಗಂಟೆಯಿಂದಲೂ ಸತತ ಮುನ್ನಡೆ ಕಾಯ್ದುಕೊಂಡಿದ್ದ ಎನ್‌ಡಿಎ ಕ್ರಮೇಣ ಕುಸಿಯುತ್ತಿದೆ. ಒಟ್ಟಿನಲ್ಲಿ ಮುನ್ನಡೆ-ಹಿನ್ನಡೆಯ ಹಗ್ಗ ಜಗ್ಗಾಟ ಶುರುವಾಗಿದೆ.
ಸದ್ಯದ ಟ್ರೆಂಡ್ ಪ್ರಕಾರ ಎನ್‌ಡಿಎ ಈಗಲೂ 122 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 130 ರಿಂದ ಅದು 120ರವರೆಗೆ ಕುಸಿದಿತ್ತು. ಇನ್ನು ಮಹಾಘಟಬಂಧನ್ 100 ರಿಂದ 113 ಸ್ಥಾನಕ್ಕೆ ಏರಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ಬಿಜೆಪಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಹೊಂದಿರುವ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸದ್ಯ ಅದು 75 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆದರೆ ಮತ ಎಣಿಕೆಯು ರಾತ್ರಿವರೆಗೂ ಮುಂದುವರೆಯಬಹದು ಎಂದು ಚುನಾವಣಾ ಆಯೋಗ ತಿಳಿಸಿದೆ. 62.5% ಮತ ಎಣಿಕೆ ಮುಗಿದಿದ್ದು ಒಟ್ಟು ಚಲಾವಣೆಯಾದ 4.16 ಕೋಟಿ ಮತಗಳಲ್ಲಿ ಇದುವರೆಗೂ ಕೇವಲ 2.60 ಮತ ಎಣಿಕೆ ಅಷ್ಟೇ ಮುಗಿದಿದೆ. ಅಂದರೆ ಇನ್ನೂ ಒಂದೂವರೆ ಕೋಟಿ ಮತ ಎಣಿಕೆ ಬಾಕಿ ಇದೆ.
ಕೂತೂಹಲಕಾರಿಯಾಗಿ ಬಿಹಾರದ 20 ಕ್ಷೇತ್ರಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ. ಅಲ್ಲಿ ಕೇವಲ ಎರಡು ಪಕ್ಷಗಳ ನಡುವೆ ಕೇವಲ 1000 ಮತಗಳ ವ್ಯತ್ಯಾಸ ಕಂಡುಬಂದಿದೆ. ಇನ್ನೂ 73 ಕ್ಷೇತ್ರಗಳಲ್ಲಿ 5000 ಮತಗಳ ವ್ಯತ್ಯಾಸವಿದೆ. ಹಾಗಾಗಿ ಫಲಿತಾಂಶ ಯಾವ ಕ್ಷಣದಲ್ಲಿ ಬೇಕಾದರೂ ಯಾರ ಪರವಾದರೂ ವಾಲುವ ಸಾಧ್ಯತೆ ಇದೆ.
ಈಗಾಗಿಯೇ ಆರ್‌ಜೆಡಿ ಸರ್ಕಾರ ತಮ್ಮದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. “ಆರಂಭಿಕ ಸುತ್ತಿನ ಎಣಿಕೆಯಲ್ಲಿ ಎನ್‌ಡಿಎ ಸ್ಪಷ್ಟ ಮುನ್ನಡೆ ಸಾಧಿಸಿದ್ದರೂ ಸಹ, ನಾವು ಬಿಹಾರದಲ್ಲಿ ಹೊಸ ಸರ್ಕಾರ ರಚಿಸುವ ಭರವಸೆ ಇದೆ. ತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ನಮ್ಮ ಸರ್ಕಾರ ದೃಢ ಪಟ್ಟಿದೆ. ಬಿಜೆಪಿ ಬದಲಾಯಿಸಲು ಜನ ಮತ ಹಾಕಿದ್ದಾರೆ. ಎಣಿಕೆ ಮುಗಿಯುವವರೆಗೂ ಎಲ್ಲಾ ಅಭ್ಯರ್ಥಿಗಳನ್ನು ಎಣಿಕೆ ಕೇಂದ್ರಗಳಲ್ಲಿ ಇರಲು ಕೇಳಲಾಗುತ್ತಿದೆ” ಎಂದು ಪಕ್ಷವು ಟ್ವೀಟ್ ಮಾಡಿದೆ.
ಇದನ್ನೂ ಓದಿ: ತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ಸರ್ಕಾರ ನಮ್ಮದೆ: RJD ವಿಶ್ವಾಸ


