ಭಾರತ ದೇಶದಲ್ಲಿ ಬೇರೆ ಯಾವುದೇ ಒಕ್ಕೂಟ ವ್ಯವಸ್ಥೆಯುಳ್ಳ ದೇಶಗಳಿಗಿಂತ ಭಿನ್ನವಾದ ಹಾಗೂ ಪ್ರತ್ಯೇಕವಾದ ಸಮಸ್ಯೆಗಳಿರುವುದರಿಂದ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತ್ಯೇಕವಾದ-ವಿಭಿನ್ನವಾದ ಒಕ್ಕೂಟ ವ್ಯವಸ್ಥೆಯನ್ನು ಅನುಸರಿಸಲಾಗಿದೆ. ಪ್ರಪಂಚದ ವಿವಿಧ ಒಕ್ಕೂಟ ವ್ಯವಸ್ಥೆಯುಳ್ಳ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತ ದೇಶಕ್ಕೆ ಸರಿಹೊಂದುವಂತೆ ರಚಿಸಿಕೊಳ್ಳಲಾಗಿದೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ಮುಖ್ಯವಾಗಿ ಮೂರು ಲಕ್ಷಣಗಳಿವೆ – 1) ಬಲಿಷ್ಠವಾದ ಕೇಂದ್ರ 2) ಹೊಂದಿಕೊಳ್ಳುವ ಒಕ್ಕೂಟ 3) ಸಹಕಾರಿ ಒಕ್ಕೂಟ ವ್ಯವಸ್ಥೆ.
ಈ ರೀತಿಯಾದ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಅಂದಿನ ಸಂವಿಧಾನ ರಚನಾ ಸಭೆಯಲ್ಲಿ ನಡೆದಂತಹ ಚರ್ಚೆಗಳನ್ನು ತಿಳಿಯುವ ಮುನ್ನ, ಯಾವ ಐತಿಹಾಸಿಕ ಒತ್ತಡಗಳ ಕಾರಣಗಳಿಂದಾಗಿ ಈ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಮೊದಲನೆಯದಾಗಿ ಭಾರತದ ವಿಶಾಲವಾದ ವಿಸ್ತೀರ್ಣ ಹಾಗೂ ವೈವಿಧ್ಯತೆ ಬಲಿಷ್ಠ ಕೇಂದ್ರವನ್ನು ಪ್ರತಿಪಾದಿಸಲು ಒಂದು ಕಾರಣವಾದರೆ, ಭಾರತದಲ್ಲಿ 1930ರ ದಶಕದಲ್ಲಿ ಬೆಳೆದ ಕೋಮುವಾದವು ಇನ್ನೊಂದು ಕಾರಣ. ಹಾಗೂ ಸಾಮಂತಶಾಹಿ ರಾಜ್ಯಗಳು, ಭಾರತ ಪಾಕಿಸ್ತಾನ ವಿಭಜನೆ, ಭಾರತ ಸ್ವತಂತ್ರವಾದ ಕೂಡಲೇ ಸಾಧಿಸಬೇಕಾದ ಸಾಮಾಜಿಕ ಕ್ರಾಂತಿಯ ಗುರಿಗಳು: ಉದಾಹರಣೆಗೆ ಜನರ ಜೀವನಮಟ್ಟವನ್ನು ಏರಿಸುವುದು, ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆಯ ಹೆಚ್ಚಳ, ಎಲ್ಲರಿಗೂ ಆಹಾರ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಹಾಗೂ ಜೀವನದ ಕನಿಷ್ಟ ಅಗತ್ಯಗಳನ್ನು ಪೂರೈಸುವುದು, ಈ ಎಲ್ಲಾ ಕಾರಣಗಳಿಗಾಗಿ ಭಾರತವನ್ನು ಒಟ್ಟಿಗೆ ನಿಯಂತ್ರಿಸಬೇಕಾದರೆ ಹಾಗೂ ರಾಜ್ಯಗಳು ವಿಭಜನೆಗೊಳಗಾಗಬಾರದೆಂದರೆ ಈ ರೀತಿಯಾದ ಬಲಿಷ್ಠ ಕೇಂದ್ರ ಹಾಗೂ ಸಹಕಾರಿ ಒಕ್ಕೂಟ ವ್ಯವಸ್ಥೆ ನಿರ್ಮಾಣ ಅನಿವಾರ್ಯವಾಯಿತು.

ಸಂವಿಧಾನ ರಚನಾ ಸಭೆಯು ಜನವರಿ 1947ರಲ್ಲೇ ಒಕ್ಕೂಟ ಅಧಿಕಾರಗಳ ಸಮಿತಿಯನ್ನು ನೆಹರುರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಆ ಸಮಿತಿಯ ಕೆಲಸ ವೇಗವಾಗಿ ನಡೆದದ್ದು ಭಾರತ-ಪಾಕಿಸ್ತಾನ ವಿಭಜನೆ ಘೋಷಣೆಯಾದ ನಂತರ. ಮೊದಲನೆಯ ವರದಿಯು ಬಲಹೀನ ಕೇಂದ್ರವನ್ನು ಸೂಚಿಸಿತ್ತು. ಏಪ್ರಿಲ್ 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಚರ್ಚೆಗಳು ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಮೌಂಟ್ ಬ್ಯಾಟನ್ ನಡುವೆ ಬಿರುಸಾಗಿ ನಡೆಯುತ್ತಿದ್ದವು. 3 ಜೂನ್ 1947ರಂದು ಮೌಂಟ್ ಬ್ಯಾಟನ್ ಭಾರತ-ಪಾಕಿಸ್ತಾನ ವಿಭಜನೆಯನ್ನು ಘೋಷಿಸಿದ ನಂತರ, 5 ಜೂನ್ 1947ರಂದು ಕೇಂದ್ರ ಹಾಗೂ ಪ್ರಾಂತೀಯ ಸಂವಿಧಾನ ಸಮಿತಿಗಳು ಸಭೆಯನ್ನು ಸೇರಿ ಜೂನ್ 3ರ ಘೋಷಣೆಯ ಆಧಾರದಲ್ಲಿ ಕ್ಯಾಬಿನೆಟ್ ಮಿಷನ್ ಪ್ಲಾನ್ ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ನಿರ್ಧಾರ ಮಾಡಲಾಯಿತು. ಮರುದಿನವೇ ಕೇಂದ್ರ ಸಂವಿಧಾನ ಸಮಿತಿ ಸಭೆ ಸೇರಿ, ಜವಾಹರ್ ಲಾಲ್ ನೆಹರು, ಸಂವಿಧಾನ ಸಮಿತಿ ಸಭೆ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್, ಪಂಡಿತ್ ಪಂತ್, ಜಗಜೀವನ್ ರಾಮ್, ಅಂಬೇಡ್ಕರ್, ಗೋಪಾಲಸ್ವಾಮಿ ಅಯ್ಯರ್, ಕೆ ಎಂ ಮುನ್ಷಿ, ಎಸ್.ಪಿ ಮುಖರ್ಜಿ, ಕೆ.ಟಿ ಶಾ, ಟಿ ಟಿ ಕೃಷ್ಣಮಾಚಾರಿ, ಕೆ.ಎನ್ ಪಣಿಕ್ಕರ್, ಗೋಪಾಲಸ್ವಾಮಿ ಅಯ್ಯಂಗಾರ್ ಹಾಗೂ ಪಿ ಗೋವಿಂದ ಮೆನನ್ ಹಾಜರಿದ್ದು ಈ ಕೆಳಕಂಡ ತೀರ್ಮಾನಗಳನ್ನು ತಾತ್ಕಾಲಿಕವಾಗಿ ಕೈಗೊಂಡರು:
ಸಂವಿಧಾನವು ಒಕ್ಕೂಟ ವ್ಯವಸ್ಥೆಯನ್ನು ಅನುಸರಿಸಬೇಕು. ಈ ಒಕ್ಕೂಟ ವ್ಯವಸ್ಥೆಯು ಬಲಿಷ್ಠವಾದ ಕೇಂದ್ರವನ್ನು ಪ್ರತಿಪಾದಿಸಬೇಕು. ಮೂರು ಶಾಸಕಾಂಗ ಪಟ್ಟಿಗಳನ್ನು ತಯಾರಿಸುವುದು ಹಾಗೂ ಸಾಮಂತ ರಾಜ್ಯಗಳನ್ನು ಬ್ರಿಟಿಷ್ ಪ್ರಾಂತ್ಯಗಳಂತೆ ಸಮಾನವಾಗಿ ಕಾಣುವುದು, ಶಾಸಕಾಂಗ ಅಧಿಕಾರದ ಒಟ್ಟಿಗೆ ಕಾರ್ಯಾಂಗ ಅಧಿಕಾರವನ್ನು ಇರಿಸುವುದು.
ನಂತರ, 7 ಜೂನ್ 1947ರಂದು ಕೇಂದ್ರ ಹಾಗೂ ಪ್ರಾಂತೀಯ ಸಂವಿಧಾನ ಸಮಿತಿಗಳ ಸಭೆ ಸೇರಿ ಈ ಮೇಲ್ಕಂಡ ತೀರ್ಮಾನಗಳನ್ನು ಅಂಗೀಕರಿಸಿದವು. ನಂತರ ಕೇಂದ್ರ ಸಂವಿಧಾನ ಸಮಿತಿಯು ತನ್ನ ವರದಿಯಲ್ಲಿ ಒಕ್ಕೂಟ ವ್ಯವಸ್ಥೆಯ ಈ ಕೆಳಕಂಡ ಅಂಶಗಳನ್ನು ಹೊಂದಿತ್ತು; 1) ಅಧಿಕಾರಗಳ ಹಂಚುವಿಕೆ 2) ಕೇಂದ್ರ ಕಾರ್ಯಾಂಗದ ಅಧಿಕಾರದ ವಿಸ್ತೀರ್ಣ 3) ಕಂದಾಯ ಅಥವಾ ಆದಾಯದ ಹಂಚುವಿಕೆ 4) ತಿದ್ದುಪಡಿ.
ಅಧಿಕಾರಿಗಳ ಹಂಚುವಿಕೆ.
ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳ ನಡುವೆ ಅಧಿಕಾರಗಳ ಹಂಚುವಿಕೆಯು ಸಂವಿಧಾನದ ಭಾಗ 9 ರಲ್ಲಿ 2 ಪಟ್ಟಿಗಳಲ್ಲಿ ಉಲ್ಲೇಖವಾಗಿದೆ. 1) ಶಾಸಕಾಂಗ ಸಂಬಂಧಗಳು 2) ಆಡಳಿತಾತ್ಮಕ ಸಂಬಂಧಗಳು
ಶಾಸಕಾಂಗ ಪಟ್ಟಿಯಲ್ಲಿ ಅಧಿಕಾರಗಳ ವಿಭಜನೆ
ಶಾಸಕಾಂಗ ಅಧಿಕಾರಗಳ ವಿಭಜನೆ ಮಾಡುವ ವ್ಯವಸ್ಥೆಯ ಮೂಲ 1919ರ ಗೌವರ್ನಮೆಂಟ್ ಆಫ್ ಇಂಡಿಯಾ ಆಕ್ಟ್. ನಂತರ ದುಂಡು ಮೇಜಿನ ಸಭೆಗಳಲ್ಲಿ ಪ್ರಾಂತೀಯ ಶಾಸಕಾಂಗ ಅಧಿಕಾರಗಳ ವಿಭಜನೆಯ ಪಟ್ಟಿ ಹಾಗೂ ಒಕ್ಕೂಟ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿಯ (concurrent list) ಒಂದು ಕಲ್ಪನೆ ಜನಿಸುತ್ತದೆ. ಗೋಪಾಲಸ್ವಾಮಿ ಅಯ್ಯಂಗಾರ್‍ರವರು ಕೇಂದ್ರ ಅಧಿಕಾರಿಗಳ ಸಮಿತಿಯ ವರದಿಯನ್ನು ಮಂಡಿಸುತ್ತಾ ಕೇಂದ್ರಕ್ಕೆ ಹೆಚ್ಚು ಅಧಿಕಾರಗಳನ್ನು ಕೊಟ್ಟು ಬಲಿಷ್ಠ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಹೇಳುತ್ತಾರೆ. ಈ ತರಹದ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಡುವುದರಲ್ಲಿ ಸಂವಿಧಾನ ರಚನಾ ಸಭೆಯು ಮುಖ್ಯವಾಗಿ ಎರಡು ಉದ್ದೇಶಗಳನ್ನು ಹೊಂದಿರುತ್ತದೆ.
1) ಹೊಂದಿಕೊಳ್ಳುವ ಸಂವಿಧಾನ ಹಾಗೂ ಒಕ್ಕೂಟ (Constitutional flexibility)
2) ಅಂದಿನ ಭಾರತದ ಪರಿಸ್ಥಿತಿಯಲ್ಲಿ ಜನರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು ಬಲಿಷ್ಠ ಕೇಂದ್ರ ಅವಶ್ಯಕ.
ಮಧ್ಯಂತರ ಸರ್ಕಾರ (ಸೆಪ್ಟಂಬರ್ 1946 ರಿಂದ 14 ಆಗಸ್ಟ್ 1947) ಸಮಸ್ಯೆಗಳನ್ನು ಪರಿಶೀಲಿಸಿ ತುರ್ತಾಗಿ ಗಮನಹರಿಸಬೇಕೆಂದು ಕೊಟ್ಟಿರುವ ಒಂದು ಜ್ಞಾಪಕ ಪತ್ರದಲ್ಲಿ ಕೃಷಿ ಉತ್ಪಾದನೆಯ ನೀತಿಗಳು, ಕೃಷಿ ಉತ್ಪನ್ನಗಳ ಬೆಲೆ ನಿಯಂತ್ರಣ, ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಹಾಗೂ ಆಹಾರ ವಿತರಣೆ ಇತ್ಯಾದಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ಜಗಜೀವನ್ ರಾಮ್ ಕಾರ್ಮಿಕ ಸಚಿವರಾಗಿ, ಸಮಾಜ ಕಲ್ಯಾಣ ಹಾಗೂ ಕಾರ್ಮಿಕ ಯೋಜನೆಯು ಕೇಂದ್ರದ ಜವಾಬ್ದಾರಿ ಆಗಬೇಕೆಂದು ಕೇಂದ್ರ ಅಧಿಕಾರಗಳ ಸಮಿತಿಗೆ ಜ್ಞಾಪಕ ಪಾತ್ರವನ್ನು ನೀಡಿರುತ್ತಾರೆ ಹಾಗೆಯೇ ಕೃಷಿ ಮಂತ್ರಿ ಗಳಾದ ಜಯರಾಮ್ ದಾಸ್ ದೌಲತ್ ರಾಮ್ ರವರು ಆಹಾರ ಪೂರೈಕೆಯು ಕೇಂದ್ರದ ಜವಾಬ್ದಾರಿ ಎಂದು ಅಂಬೇಡ್ಕರ್ ಅವರಿಗೆ ಜ್ಞಾಪಕ ಪತ್ರ ನೀಡಿರುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಏಪ್ರಿಲ್ 1948 ರಲ್ಲಿ ಸರ್ಕಾರದ ನೀತಿಯ ಅನುಸಾರವಾಗಿ ಕರಡು ಸಂವಿಧಾನದಲ್ಲಿ ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಾರೆ. ಸರ್ಕಾರದ ನೀತಿಗಳ ಪ್ರಕಾರ ಕೈಗಾರಿಕೆಗಳು ಹಾಗೂ ಕೃಷಿ ಅಭಿವೃದ್ಧಿ, ಕಲ್ಲಿದ್ದಲು, ಕಬ್ಬಿಣ ಹಾಗೂ ಸ್ಟೀಲ್, ವೈಮಾನಿಕ ಕಾರ್ಖಾನೆಗಳು, ಹಡಗು ಕಾರ್ಖಾನೆಗಳು, ವಾಹನಗಳ ಕಾರ್ಖಾನೆಗಳು, ರಬ್ಬರ್, ಹತ್ತಿ, ಸಿಮೆಂಟ್, ಮಷೀನ್ ಟೂಲ್ಸ್, ಉಪ್ಪು ಉತ್ಪಾದನೆ, ಎಲ್ಲವೂ ಕೇಂದ್ರದ ಅಧೀನದಲ್ಲಿ ಇರಬೇಕು. 14 ಜುಲೈ 1949ರಲ್ಲಿ ಬಿ.ಎನ್ ರಾವ್ ಅಧ್ಯಕ್ಷತೆಯಲ್ಲಿ ಎಲ್ಲಾ ಕೇಂದ್ರ ಮಂತ್ರಿಗಳ ಕಾರ್ಯದರ್ಶಿಗಳು ಸಭೆ ಸೇರಿ ಗಣಿ, ವಿದ್ಯುತ್ ಶಕ್ತಿ, ಪೆಟ್ರೋಲಿಯಂ ಉತ್ಪನ್ನಗಳು ಕೇಂದ್ರದ ಒಡೆತನದಲ್ಲಿ ಇರಬೇಕೆಂದು ತೀರ್ಮಾನಿಸುತ್ತಾರೆ. ರಾಜಕುಮಾರಿ ಅಮೃತ್ ಕೌರ್ ಅವರು ಸಾರ್ವಜನಿಕ ಆರೋಗ್ಯ ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧೀನದಲ್ಲಿರಬೇಕು ಎಂದು ಪ್ರತಿಪಾದಿಸುತ್ತಾರೆ. ಪಂಡಿತ್ ಪಂತ್‍ರವರು ಇದನ್ನು ವಿರೋಧಿಸುತ್ತಾರೆ. ಅವರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅರಣ್ಯಗಳನ್ನು ಸಹವರ್ತಿ ಪಟ್ಟಿಯಲ್ಲಿ ಸೇರಿಸುವುದನ್ನು ಪಂಡಿತ್‍ಅವರು ವಿರೋಧಿಸುತ್ತಾರೆ. ಹಾಗೆಯೇ ಬಿ.ಸಿ ಖೇರ್‍ರವರು ಕೂಡ ವಿರೋಧಿಸುತ್ತಾರೆ. ಮೌಲಾನಾ ಆಜಾದ್ ರವರು ಉನ್ನತ ಶಿಕ್ಷಣ ಸಂಸ್ಥೆ, ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಕೇಂದ್ರದ ಅಧೀನದಲ್ಲಿರುವ ಹಾಗೆಯೇ ವೃತ್ತಿಪರ ಹಾಗೂ ತಾಂತ್ರಿಕ ತರಬೇತಿ ಕೇಂದ್ರಗಳು ಸಹವರ್ತಿ ಅಧೀನದಲ್ಲಿರಬೇಕು ಇನ್ನುಳಿದ ಶಿಕ್ಷಣ ರಾಜ್ಯಗಳ ಜವಾಬ್ದಾರಿ ಎಂದು ಪ್ರತಿಪಾದಿಸುತ್ತಾರೆ. ಸೆಪ್ಟೆಂಬರ್ 1949ರಲ್ಲಿ ಸಂವಿಧಾನ ರಚನಾಸಭೆಯು ಈ ಪಟ್ಟಿಗಳನ್ನು ಅಂಗೀಕರಿಸುತ್ತದೆ.
ಕೇಂದ್ರ ಕಾರ್ಯಾಂಗ ಅಧಿಕಾರವು ಸಹಜವಾಗಿ ಕೇಂದ್ರ ಪಟ್ಟಿಯಲ್ಲಿರುವ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಅನುಚ್ಛೇದ 73ರ ಅಡಿಯಲ್ಲಿ ಸಂಸತ್ತು ತನ್ನ ಅಧಿಕಾರವನ್ನು ಸಮವರ್ತಿ ಪಟ್ಟಿಗೆ ವಿಸ್ತರಿಸಬಹುದು. ಅನುಚ್ಛೇದ 256 ಹಾಗೂ 257ರ ಪ್ರಕಾರ ರಾಜ್ಯಗಳು ತಮ್ಮ ಕಾರ್ಯಾಂಗ ಅಧಿಕಾರಗಳನ್ನು ಕೇಂದ್ರದ ಕಾನೂನುಗಳನ್ನು ಅನುಸರಿಸುವ ನಿಟ್ಟಿನಲ್ಲಿ ಇರಬೇಕು ಹಾಗೂ ಕೇಂದ್ರದ ಕಾನೂನುಗಳನ್ನು ವಿರೋಧಿಸುವ ಅಥವಾ ಕೇಂದ್ರ ಕಾರ್ಯಾಂಗದ ಕೆಲಸಕ್ಕೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ ಇರಬಾರದು. ಹಾಗೆ ಇಲ್ಲದ ಪಕ್ಷದಲ್ಲಿ ಅನುಚ್ಛೇದ 365ರ ಅಡಿಯಲ್ಲಿ ತುರ್ತು ಪರಿಸ್ಥಿತಿಯ ನಿಬಂಧನೆಗಳನ್ನು ಅನುಸರಿಸಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬಹುದು. ಈ ಸೂಚನೆಗಳನ್ನು ಪಾಲಿಸದೆ ಇದ್ದ ಪಕ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳನ್ನು ವಜಾ ಮಾಡಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬಹುದು.
ಹಾಗೆ ಮಾಡಬೇಕೆಂದರೆ ಮೇಲ್ಮನೆಯಲ್ಲಿ 2/3ರಷ್ಟು ಬಹುಮತ ಇರಬೇಕು. ಹಾಗೆಯೇ ಅನುಚ್ಛೇದ 226ರ ಅಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಪಟ್ಟಿಯಲ್ಲಿ ಬರುವ ಯಾವುದೇ ವಿಷಯದ ಬಗ್ಗೆ ಶಾಸನವನ್ನು ತರಬೇಕಾದರೆ ಮೇಲ್ಮನೆಯಲ್ಲಿ 2/3ರಷ್ಟು ಬಹುಮತ ಇರಬೇಕು. ಈ ಅನುಚ್ಛೇದವು ಭಾರತದ ಆವಿಷ್ಕಾರ ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಕಾರ್ಯಾಂಗ ಪ್ರಾಧಿಕಾರ ಮತ್ತು ಅಧಿಕಾರಗಳ ವಿಭಜನೆ
15 ನವಂಬರ್ 1969ರಂದು ಅಂಬೇಡ್ಕರ್ ಅವರು ಅನಿರೀಕ್ಷಿತವಾಗಿ ಅನುಚ್ಛೇದ 365ನ್ನು ಮಂಡನೆ ಮಾಡುತ್ತಾರೆ. ಈ ಅನುಚ್ಛೇದದ ಅಡಿಯಲ್ಲಿ ಯಾವುದೇ ರಾಜ್ಯ, ಕೇಂದ್ರ ಕಾರ್ಯಾಂಗದ ಆದೇಶವನ್ನು ಪಾಲಿಸದಿದ್ದರೆ ರಾಷ್ಟ್ರಪತಿಗಳು ಅಂತಹ ರಾಜ್ಯಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ತುರ್ತು ನಿಬಂಧನೆಗಳ ಅಡಿಯಲ್ಲಿ ರಾಜ್ಯಗಳ ನಿರ್ವಹಣೆಯನ್ನು ರಾಷ್ಟ್ರಪತಿಗಳ ಆಡಳಿತಕ್ಕೆ ಒಳಪಡಿಸಬಹುದು. ಈ ಅನುಚ್ಛೇದಕ್ಕೆ ಠಾಕೂರ್ ದಾಸ್ ಭಾರ್ಗವ ಮತ್ತು ಪಂಡಿತ್ ಕುಂಜ್ರುರವರು ವಿರೋಧವನ್ನು ವ್ಯಕ್ತಪಡಿಸುತ್ತಾರೆ.

ಅನುಚ್ಛೇದ 175ರ ಪ್ರಕಾರ ಪ್ರಾಂತೀಯ ಶಾಸಕಾಂಗ ಅನುಮೋದಿಸಿದ ಬಿಲ್ಲನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ತಂದು ತಡೆಹಿಡಿಯಬಹುದು ಮತ್ತು ಅನುಚ್ಛೇದ 176ರ ಪ್ರಕಾರ ರಾಷ್ಟ್ರಪತಿಗಳು ಅಂತಹ ಬಿಲ್ಲನ್ನು ಎತ್ತಿ ಹಿಡಿಯಬಹುದು ಅಥವಾ ತಿರಸ್ಕರಿಸಬಹುದು. ಅನುಚ್ಛೇದ 176 ಚರ್ಚೆ ಇಲ್ಲದೇ ಅಂಗೀಕಾರವಾಗುತ್ತದೆ. ಆದರೆ ಅನುಚ್ಛೇದ 175ಕ್ಕೆ ಒಂದು ತಿದ್ದುಪಡಿಯನ್ನು ಅಂಬೇಡ್ಕರ್‍ರವರು ಸೂಚಿಸಿದ ನಂತರ ಅನುಮೋದಿಸಲಾಗುತ್ತದೆ. ಆ ತಿದ್ದುಪಡಿ ಏನೆಂದರೆ, ಮನಿ ಬಿಲ್‍ಅನ್ನು ರಾಜ್ಯಪಾಲರು ತಡೆ ಹಿಡಿಯಲು ಸಾಧ್ಯವಿಲ್ಲ ಎಂಬುದು.
ಕೇಂದ್ರದ ತುರ್ತು ನಿಬಂಧನೆಗಳು
ತುರ್ತು ನಿಬಂಧನೆಗಳು, ಸಂವಿಧಾನದ ಭಾಗ 18ರ ಅಡಿಯಲ್ಲಿ 9 ಅನುಚ್ಛೇದಗಳಲ್ಲಿ ಉಲ್ಲೇಖಿಸಲಾಗಿದೆ. ಮೊದಲನೆಯ ಅನುಚ್ಛೇದ 352ರ ಅಡಿಯಲ್ಲಿ ರಾಷ್ಟ್ರಪತಿಗಳಿಗೆ ದೇಶದ ಭದ್ರತೆಗೆ ಆಂತರಿಕ ತಲ್ಲಣಗಳಿಂದ ಅಥವಾ ಬಾಹ್ಯ ಆಕ್ರಮಣಗಳಿಂದ ಅಪಾಯ ಉಂಟಾಗಿದೆ ಎಂದರೆ, ಆಗ ರಾಷ್ಟ್ರಪತಿಗಳು ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಈ ಘೋಷಣೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಬೇಕು ಹಾಗೂ ಈ ಘೋಷಣೆಗೆ ಎರಡು ತಿಂಗಳು ಮಾತ್ರ ಮಾನ್ಯತೆ ಇರುತ್ತದೆ. ಆದರೆ ಈ ಅವಧಿಯನ್ನು ಹೆಚ್ಚಿಸಲು ಸಂಸತ್ತು ಅನುಮೋದಿಸಬೇಕಾಗುತ್ತದೆ. ಅದೇ ರೀತಿ ಅನುಚ್ಛೇದ 360ರ ಅಡಿಯಲ್ಲಿ ದೇಶದ ಹಣಕಾಸು, ಸಾಲ ಅಥವಾ ದೃಢತೆಗೆ ಧಕ್ಕೆ ಉಂಟಾಗಿದೆ ಎಂದು ರಾಷ್ಟ್ರಪತಿಗಳಿಗೆ ನಂಬಿಕೆ ಉಂಟಾದರೆ, ಆಗ ಕೂಡ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಆಗಸ್ಟ್ 1949ರಲ್ಲಿ ಈ ತುರ್ತುಪರಿಸ್ಥಿತಿಯ ನಿಬಂಧನೆಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಅಂದು ಪಂಡಿತ್ ಪಂತ್, ಪಂಡಿತ್ ಕುಂಜ್ರು, ಪಿ.ಎಸ್ ದೇಶಮುಖ್, ಬಿ. ದಾಸ್ ಹಾಗೂ ಕೆ.ವಿ ಕಾಮತ ತೀವ್ರವಾಗಿ ಈ ತುರ್ತು ನಿಬಂಧನೆಗಳಿಗೆ ವಿರೋಧ ವ್ಯಕ್ತಪಡಿಸಿ, ದೇಶದಲ್ಲಿ ಮುಂದೆ ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತದೆ ಹಾಗೂ ಹಿಟ್ಲರ್ ಮಾದರಿಯ ನಿರಂಕುಶ ಸ್ಥಿತಿ ಉಂಟಾಗುತ್ತದೆ ಎಂದು ಹೇಳುತ್ತಾರೆ. ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಟಿ ಟಿ ಕೃಷ್ಣಮಾಚಾರಿ, ಅಂಬೇಡ್ಕರ್, ಕೆ ಎಂ ಮುನ್ಷಿ ಹಾಗೂ ಸಂತಾನಂ ತುರ್ತು ನಿಬಂಧನೆಗಳ ಪರ ಇದ್ದು ಹಾಗೂ ವಿರೋಧ ಇರುವವರಿಗೆ ವಿಪ್ ಜಾರಿ ಮಾಡಿ ಎಲ್ಲಾ ನಿಬಂಧನೆಗಳನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸುವಂತೆ ಮಾಡಲಾಗುತ್ತದೆ.
ಕಂದಾಯ ಹಂಚಿಕೆ
ಸಹಕಾರಿ ಕಂದಾಯ ಹಂಚಿಕೆಯ ನಿಬಂಧನೆಗಳು ಸಂವಿಧಾನದ ಭಾಗ 12ರ ಮೊದಲ ಎರಡು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಿಬಂಧನೆಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ: 1) ತೆರಿಗೆ ಹಾಕುವ ಅಧಿಕಾರ ಮತ್ತು ತೆರಿಗೆ ಆದಾಯವನ್ನು ಹಂಚುವಿಕೆ 2) ಕೇಂದ್ರದ ಅಧಿಕಾರ, ನೆರವು ಅನುದಾನ 3) ಸಾಲ ಮಾಡಲು ನಿಯಂತ್ರಣಗಳನ್ನು ವಿಧಿಸುವ ಅನುಚ್ಛೇದಗಳು 4) ಹಣಕಾಸು ಆಯೋಗ ನೇಮಿಸಲು ನಿಬಂಧನೆಗಳು.
ಕೇಂದ್ರಕ್ಕೆ ತೆರಿಗೆ ಸಂಗ್ರಹಕ್ಕೆ ಹೆಚ್ಚು ಅಧಿಕಾರವನ್ನು ಕೊಟ್ಟು ಪ್ರಾಂತಗಳಿಗೆ ಕಂದಾಯದ ಹಂಚಿಕೆಯನ್ನು ಹಣಕಾಸು ನಿಯೋಗಗಳಿಗೆ ಬಿಟ್ಟಿರುವುದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಲಕ್ಷಣ.
ಹಣಕಾಸು ನಿಬಂಧನೆಗಳನ್ನು ಆಗಸ್ಟ್ 1949ರಲ್ಲಿ ಚರ್ಚೆಗೆ ತೆಗೆದುಕೊಂಡು, ಅನುಚ್ಛೇದ 270ರ ಅಡಿಯಲ್ಲಿ ಕೇಂದ್ರ ತೆರಿಗೆಯನ್ನು ಸಂಗ್ರಹಿಸಿ, ಆದಾಯವನ್ನು ರಾಜ್ಯಗಳಿಗೆ ಹಂಚುವುದನ್ನು ಸಂಸತ್ತು ನಿರ್ಧರಿಸುವುದು ಎಂದು ಸಂವಿಧಾನ ರಚನಾ ಸಭೆ ತೀರ್ಮಾನಿಸುತ್ತದೆ.
ಈ ರೀತಿ ನಿರ್ಧರಿಸಲು ಸಂವಿಧಾನ ರಚನಾ ಸಭೆಯ ಮೇಲೆ ಎರಡು ಒತ್ತಡಗಳು ಇದ್ದವು,
1) ಸಂವಿಧಾನ ರಚನಾ ವರ್ಷಗಳಲ್ಲಿ ದೇಶದಲ್ಲಿದ್ದ ಅಸ್ಥಿರ ಆರ್ಥಿಕ ಪರಿಸ್ಥಿತಿ.
2) ಸಂವಿಧಾನ ರಚನಾ ಸಭೆಯ ಸದಸ್ಯರಲ್ಲಿ ಇದ್ದ ಒಂದು ಅಭಿಪ್ರಾಯ, ಏನೆಂದರೆ, ಪ್ರಾಂತಗಳಿಗೆ ಅವಶ್ಯಕತೆ ತಕ್ಕಂತೆ ಆರ್ಥಿಕ ಅನುದಾನ ನೀಡುವುದು.
ಹೀಗಾಗಿ ಸಂವಿಧಾನ ರಚನಾ ಸಭೆಯಲ್ಲಿ ಪ್ರಾಂತಗಳು ತಮ್ಮ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ಬದಲಿಗೆ ಕೇಂದ್ರದಿಂದ ಹೆಚ್ಚಿನ ಪಾಲಿಗಾಗಿ ವಾದಿಸಿದವು. ಈ ಎಲ್ಲ ಪರಿಣಾಮಗಳಿಂದಾಗಿ ಭಾರತದಲ್ಲಿ ನಾವು ನೋಡುವುದು ಅಸಮ್ಮಿತ ಒಕ್ಕೂಟ ವ್ಯವಸ್ಥೆ.
ಕೇಂದ್ರ ಪಕ್ಷಪಾತ ಸಂವಿಧಾನ ನಿಬಂಧನೆಗಳು
1) ಕೇಂದ್ರ ಸರ್ಕಾರಗಳಿಗೆ ರಾಜ್ಯಗಳ ಗಡಿಗಳನ್ನು ಪುನರ್ ರಚಿಸುವ ಅಧಿಕಾರ ಇದೆ.
2) ಕೇಂದ್ರ ಪಟ್ಟಿಯಲ್ಲಿ, ರಾಜ್ಯ ಪಟ್ಟಿಗಿಂತ ಹೆಚ್ಚು ವಿಷಯಗಳು ಇವೆ.
3) ಕೇಂದ್ರ ಹಾಗೂ ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿ ಇರುವ ವಿಷಯಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು ಬಂದಾಗ ಕೇಂದ್ರದ ಕಾನೂನು ಮೇಲುಗೈ ಸಾಧಿಸುತ್ತದೆ.
4) ವೈಪರೀತ್ಯ ಪರಿಸ್ಥಿತಿಯಲ್ಲಿ ರಾಜ್ಯದ ವಿಷಯಗಳ ಮೇಲೆ ಕೇಂದ್ರ ಸರ್ಕಾರಗಳು ಶಾಸನಗಳನ್ನು ಮಾಡಬಹುದು.
5) ಕೇಂದ್ರ ಸರ್ಕಾರಗಳಿಗೆ ಆರ್ಥಿಕ ವಿಷಯಗಳಲ್ಲಿ ಮೇಲುಗೈಯನ್ನು ಸಂವಿಧಾನವು ಕೊಟ್ಟಿದೆ. ದೇಶದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಹಾಗೂ ಹಂಚುವ ವಿಶೇಷ ಅಧಿಕಾರಗಳನ್ನು ಕೊಟ್ಟಿದೆ.
6) ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ರಾಜ್ಯಪಾಲರನ್ನು ನೇಮಿಸುವ ಅಧಿಕಾರ ಹಾಗೂ ತುರ್ತುಪರಿಸ್ಥಿತಿಯನ್ನು ಘೋಷಿಸಿ ರಾಜ್ಯ ಸರ್ಕಾರಗಳನ್ನು ವಿಸರ್ಜಿಸುವ ಅಧಿಕಾರವನ್ನು ಕೊಟ್ಟಿದೆ.

ಹೀಗೆ ನಮ್ಮ ಸಂವಿಧಾನವು ಬಲಿಷ್ಠ ಕೇಂದ್ರ ಹಾಗೂ ಹೊಂದಿಕೊಳ್ಳುವ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸಿದೆ. ಕೇಂದ್ರಕ್ಕೆ ಹೆಚ್ಚು ಅಧಿಕಾರಗಳು ಇದ್ದರೂ ಕೇಂದ್ರ ಸರ್ಕಾರಗಳು ರಾಜ್ಯದ ಹಕ್ಕುಗಳನ್ನು ಅಧಿಕ್ರಮಿಸುವಂತಿಲ್ಲ. ಆದರೆ ಕಳೆದ ಏಳು ದಶಕಗಳಲ್ಲಿ ಅನೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರಗಳು ತನ್ನ ಸಂವಿಧಾನಿಕ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ರಾಜ್ಯಗಳ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿವೆ.
ಇನ್ನು ಮುಂದೆ ನಮ್ಮ ಒಕ್ಕೂಟ ವ್ಯವಸ್ಥೆ ಸದೃಢವಾಗಿ ಉಳಿಯಬೇಕಾದರೆ ಕೇಂದ್ರ ಸರ್ಕಾರದಲ್ಲಿರುವ ನಾಯಕರಿಗೆ, ರಾಜ್ಯ ಸರ್ಕಾರದಲ್ಲಿರುವ ನಾಯಕರಿಗೆ, ವಿರೋಧ ಪಕ್ಷದ ನಾಯಕರಿಗೆ ಹಾಗೂ ಭಾರತದ ಪ್ರಜೆಗಳಾದ ನಮಗೆ ಸಂವಿಧಾನಿಕ ನೈತಿಕತೆಯು ಬಹಳ ಮುಖ್ಯವಾಗಬೇಕಿದೆ ಹಾಗೂ ಸಂವಿಧಾನ ನೈತಿಕತೆಯನ್ನು ನಾವು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕು. ಸಂವಿಧಾನ ನೈತಿಕತೆ ಎಂದರೆ, ಸಂವಿಧಾನದ ಆಶಯಗಳನ್ನು ಗೌರವಿಸುವುದು ಹಾಗೂ ಸಂವಿಧಾನ ವಿಧಾನಗಳನ್ನು ತಿಳಿದು ಅದರಂತೆ ನಡೆಯುವುದು. ಆಡಳಿತ ನಡೆಸುವವರು ಸಂವಿಧಾನ ನೈತಿಕತೆಗೆ ಧಕ್ಕೆ ತರುವ ರೀತಿಯಲ್ಲಿ ವ್ಯವಹರಿಸಿದರೆ ಸಾಮಾನ್ಯ ಜನರು ಅಂತಹ ಸರ್ಕಾರಗಳಿಗೆ ಗೌರವವನ್ನು ತೋರಿಸದೆ ಬಹಿರಂಗವಾಗಿ ಸರ್ಕಾರದ ವಿಧಾನಗಳ ಬಗ್ಗೆ ಮಾತನಾಡುವ, ಪ್ರತಿರೋಧ ತೋರಿಸುವ ಹಾಗೆ ಇರಬೇಕು. ಜನಸಾಮಾನ್ಯರಲ್ಲಿ ಈ ಸಂವಿಧಾನ ನೈತಿಕತೆಯು ಸಹಜ ಗುಣವಾಗಿ ಬೆಳೆಯಬೇಕಾದರೆ ಭಾರತದ ಸಮಾಜದಲ್ಲಿ ಈ ಗುಣವನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಬೇಕು. ಆಗ ಮಾತ್ರ ನಮ್ಮ ಸಂವಿಧಾನವನ್ನು, ಸಂವಿಧಾನದ ಮೂಲ ತತ್ವಗಳನ್ನು, ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು ಹಾಗೂ ವಿಶೇಷವಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಇನ್ನಷ್ಟು ಬಲಿಷ್ಠಗೊಳಿಸಲು ಸಾಧ್ಯ. ಆದ್ದರಿಂದ ಭಾರತೀಯ ಸಮಾಜದಲ್ಲಿ ಸಮಾನತೆ ಮೂಡಿಸಲು ಶ್ರಮಿಸುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಬೇಕು.

ಬಾಗೇಪಲ್ಲಿಯ ಪೀಪಲ್ಸ್ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ಶಸ್ತ್ರಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅನಿಲ್ ಜನಪರ ವೈದ್ಯರೆಂದೇ ಪರಿಚಿತ. ಹಾಗೆಯೇ ಜನಪರ ಚಳವಳಿಗಳ ಒಡನಾಡಿ. ಎಡಪಕ್ಷದ ಸಕ್ರಿಯ ಕಾರ್ಯಕರ್ತರೂ ಆದ ಅವರು ಭಿನ್ನವಾಗಿ ಚಿಂತಿಸುವ organic intellectual.


