ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಉತ್ತರ ಪ್ರದೇಶದ ಠಾಕುರ್‌ಗಂಜ್ ನಿವಾಸಿಯಾಗಿರುವ 16 ವರ್ಷದ ಅಪ್ರಾಪ್ತ ಬಾಲಕನನ್ನು 11 ತಿಂಗಳ ನಂತರ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ ಎಂದ ದಿವೈರ್ ವರದಿ ಮಾಡಿದೆ.
ಕಳೆದ ಡಿಸೆಂಬರ್ 25 ರಂದು ಸ್ನೇಹಿತನೊಬ್ಬರ ಮನೆಯಿಂದ ಬಾಲಕನನ್ನು ಬಂಧಿಸಲಾಗಿದ್ದು, 10 ತಿಂಗಳ ಕಾಲ ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ದಿ ವೈರ್ ಹೇಳಿದೆ. ಡಿಸೆಂಬರ್ 19 ರಂದು ಪೊಲೀಸರು ದಾಖಲಿಸಿದ್ದ ಎಫ್‍ಐಆರ್‌ನಲ್ಲಿ 25 ಮಂದಿಯ ಹೆಸರುಗಳಲ್ಲಿ ಬಾಲಕನ ಹೆಸರನ್ನು ಕೂಡಾ ಸೇರಿಸಲಾಗಿತ್ತು. ಆದರೆ ತಾನು ಯಾವುದೇ ಪ್ರತಿಭಟನೆಯಲ್ಲೂ ಭಾಗಿಯಾಗಿಲ್ಲ ಎಂದಿರುವ ಬಾಲಕ, ಬಂಧನದ ಸಮಯದಲ್ಲಿ ಹೆತ್ತವರಿಗೆ ಕರೆ ಮಾಡಲು ಕೂಡ ಅನುಮತಿಯನ್ನು ನೀಡಿಲ್ಲ ಹಾಗೂ ಬಂಧನದ ಮಾಹಿತಿಯನ್ನೂ ಕುಟುಂಬಕ್ಕೆ ನೀಡಿರಲಿಲ್ಲ ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ: ಸಿಎಎ ಶೀಘ್ರವೇ ಜಾರಿ; ಕೊರೊನಾ ಕಾರಣದಿಂದ ವಿಳಂಬವಾಗಿತ್ತು: ಜೆ.ಪಿ.ನಡ್ಡಾ
ಠಾಕೂರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಕೈಲಾಶ್ ನಾರಾಯಣ್ ತ್ರಿವೇದಿ ಸಲ್ಲಿಸಿದ ಎಫ್‌ಐಆರ್‌ನಲ್ಲಿ, ಭಾರತೀಯ ದಂಡ ಸಂಹಿತೆಯ 14 ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ಮೇಲೆ ಆರೋಪ ಹೊರಿಸಲಾಗಿದೆ. ಬಾಲಕನಿಗೆ ನವೆಂಬರ್ 13 ರಂದು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಈ ಪ್ರಕರಣದ ಮೊದಲ ಜಾಮೀನು ಅರ್ಜಿಯನ್ನು ಬಾಲಕನನ್ನು ಬಂಧಿಸಿ ಎಂಟು ತಿಂಗಳ ನಂತರ ಸೆಪ್ಟೆಂಬರ್ 15 ರಂದು ಬಾಲಾಪರಾಧಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಆದರೆ ಬಾಲಕನನ್ನು ಬಿಡುಗಡೆ ಗೊಳಿಸಿದರೆ ಸಮಾಜಕ್ಕೆ “ಬೆದರಿಕೆ” ಒಡ್ಡಬಹುದು ಎಂಬ ಕಾರಣಕ್ಕೆ ವಜಾಗೊಳಿಸಲಾಗಿತ್ತು. ಇದರ ನಂತರ ಸೆಪ್ಟೆಂಬರ್ 29 ರಂದು ಸಲ್ಲಿಸಿದ ಅರ್ಜಿಯನ್ನು ಮನ್ನಿಸಿದ ಸೆಶನ್ಸ್ ನ್ಯಾಯಾಲಯ ಬಾಲಕನಿಗೆ ಜಾಮೀನು ನೀಡಿದೆ.
ಬಾಲಕನ ಪರವಾಗಿ ವಾದಿಸಿದ ನ್ಯಾಯವಾದಿ ಆಶ್ಮಾ ಇಝ್ಝತ್, “ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಯುಪಿ ಪೊಲೀಸರು ಗಲಭೆಯ ಹೆಸರಿನಲ್ಲಿ ಮುಸ್ಲಿಂ ಯುವಕರನ್ನು ಗುರಿಯಾಗಿಸಿ ಬಂಧಿಸಿದ್ದರು. ಬಂಧನಕ್ಕೆ ಪೊಲೀಸರ ಮೇಲೆ ಭಾರಿ ಒತ್ತಡವಿತ್ತು. ರಾಜ್ಯ ಸರ್ಕಾರವನ್ನು ತೃಪ್ತಿಪಡಿಸುವುದಕ್ಕಾಗಿ ಪೊಲೀಸರು ಯಾದೃಚ್ಛಿಕ ಬಂಧನಗಳನ್ನು ಮಾಡಿದರು. ಐದು ದಿನಗಳ ಕಾಲ ಲಕ್ನೋದಲ್ಲಿ ಮುಸ್ಲಿಮರನ್ನು ನಿರಂತರವಾಗಿ ಬಂಧಿಸಲಾಯಿತು” ಎಂದಿದ್ದಾರೆಂದು ವೈರ್ ಬರೆದಿದೆ.
ಇದನ್ನೂ ಓದಿ: ಮಂಗಳೂರು: ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್


