ಗರ್ಭಪಾತಕ್ಕೆ ಒಳಗಾದ 28 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಮೂರನೆಯ ಮಗುವೂ ಹೆಣ್ಣು ಎಂಬ ಕಾರಣಕ್ಕೆ ಬಲವಂತ ಗರ್ಭಪಾತ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಾಗೆಪಲ್ಲಿಯ ಪೋಲವರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ ಅವರು 2014 ರಲ್ಲಿ ಕೊಥಪಲ್ಲಿ ಗ್ರಾಮದ ನಿವಾಸಿ 38 ವರ್ಷದ ಸೋಮಶೇಖರ್ ಅವರನ್ನು ವಿವಾಹವಾಗಿದ್ದರು. ನಂತರ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಅಕೆಯ ಗಂಡನ ಕುಟುಂಬದವರು ಗಂಡು ಮಗುವನ್ನು ಬಯಸಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಈ ಮಹಿಳೆಗೆ ಎರಡು ಹೆಣ್ಣು ಮಗು ಜನಿಸಿತ್ತು. ಆದರೆ ಅಕೆಯ ಗಂಡನಿಗೆ ಗಂಡು ಮಗುವಿನ ಮೇಲೆ ವ್ಯಾಮೋಹವಿತ್ತು. ಹಾಗಾಗಿ ಮೂರನೇ ಮಗುವೂ ಹೆಣ್ಣಾದರೆ ಎಂಬ ಕಾರಣಕ್ಕೆ ಅಕ್ರಮವಾಗಿ ಲಿಂಗಪತ್ತೆ ಮಾಡಿಸಿದ್ದರು. ಅದರಲ್ಲಿ ಮೂರನೆಯದೂ ಹೆಣ್ಣುಮಗು ಎಂದು ತಿಳಿದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು. ಇದರ ನಂತರ ಮಹಿಳೆಯ ಆರೋಗ್ಯ ದಿನೇ-ದಿನೇ ಹದಗೆಟ್ಟು ಕೊನೆಗೆ ಸಾವನ್ನಪ್ಪಿದಳು” ಎಂದು ತನಿಖಾಧಿಕಾರಿ ಹೇಳಿದರು.
ಇದನ್ನೂ ಓದಿ: ಶ್ವೇತಭವನ ಕಚೇರಿಯ ಮೊದಲ ಮಹಿಳೆ ನಾನಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್
ಘಟನೆಯ ನಂತರ, ಶ್ರೀಕನ್ಯಾ ಅವರ ತಂದೆ ಶ್ರೀನಿವಾಸ್ ಬಾಗೆಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆಯಲ್ಲಿ ಬಲಿಪಶುವಿನ ಸ್ವಂತ ತಾಯಿ ಮತ್ತು ಸಹೋದರ ಗರ್ಭಪಾತ ಮಾಡಿಸಿದ್ದರು ಎಂದು ತಿಳಿದುಬಂದಿದೆ.
ಕೇಂದ್ರ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೆಮಂತ್ ಕುಮಾರ್ ಸಿಂಗ್ ಮಾತನಾಡಿ, “ವಿವರವಾದ ತನಿಖೆಗೆ ಆದೇಶಿಸಲಾಗಿದ್ದು, ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಲಾಗುವುದು. ಪ್ರಸ್ತುತ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: ಹರಿಯಾಣ: ದಲಿತ ಮಹಿಳೆ, ಅಪ್ರಾಪ್ತೆ ಮೇಲೆ ಕಸ್ಟಡಿಯಲ್ಲಿಯೇ ಸಾಮೂಹಿಕ ಅತ್ಯಾಚಾರ ಆರೋಪ


