ಕಳೆದ ವರ್ಷ ಬಿಡುಗಡೆಯಾಗಿ ಅತ್ಯುತ್ತಮ ವಿಮರ್ಶೆಗೆ ಒಳಗಾಗಿದ್ದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಪ್ರಖ್ಯಾತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದರು. ಆಂತೋಣಿ ವರ್ಗೀಸ್ ಮತ್ತು ಚೆಂಬನ್ ವಿನೋದ್ ಜೋಸ್ ಮತ್ತಿತರರು ಅಭಿನಯಿಸಿರುವ ಚಿತ್ರವು ವಿಮರ್ಶಕರ ನಡುವೆಯೂ ಮೆಚ್ಚುಗೆ ಗಳಿಸಿತ್ತು.
ಭಾರತದ ಸುಮಾರು 27 ಭಾಷೆಗಳ ಚಿತ್ರಗಳ ಪೈಕಿ ಜಲ್ಲಿಕಟ್ಟು ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಹೇಳಿದೆ. ‘ದಿ ಡಿಸಿಪ್ಲಿನ್’, ‘ಶಕುಂತಲಾ ದೇವಿ’, ‘ಶಿಕಾರ’, ‘ಛಾಪಕ್’, ‘ಏಕೆ V/s ಏಕೆ’, ‘ಭೋಂಸ್ಲೆ’, ‘ಛಾಲಾಂಗ್’, ‘ಚೆಕ್ ಪೋಸ್ಟ್’ ಮುಂತಾದ ಸಿನಿಮಾಗಳ ಮಧ್ಯೆ ‘ಜಲ್ಲಿಕಟ್ಟು’ ಆಯ್ಕೆಯಾಗಿದೆ.
ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!
ಗುಡ್ಡಗಾಡು ಪ್ರದೇಶದ ಒಂದು ಹಳ್ಳಿಯ ಕಸಾಯಿಖಾನೆಯಿಂದ ತಪ್ಪಿಸಿಕೊಳ್ಳುವ ಒಂದು ಎಮ್ಮೆಯನ್ನು ಅ ಊರಿನ ಜನರು ಪತ್ತೆ ಹಚ್ಚುವುದರ ಸುತ್ತ ಈ ಚಿತ್ರದ ಕಥೆಯು ಹೆಣೆದುಕೊಂಡಿದೆ. ತಪ್ಪಿಸಿಕೊಂಡ ಎಮ್ಮೆಯನ್ನು ಹೇಗಾದರೂ ಹಿಡಿಯಲೇ ಬೇಕು ಎಂದು ಊರಿನ ಗಂಡಸರೆಲ್ಲಾ ಒಟ್ಟಾಗಿ ಮಾಡುವ ಸಾಹಸಗಳನ್ನು ತೋರಿಸುವುದರ ಮೂಲಕ ಮನುಷ್ಯನೊಳಗಿರುವ ಮೃಗೀಯ ಗುಣದ ಪರಿಚಯ ಮಾಡಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು.
ಹರೀಶ್ ಎಂಬುವವರ “ಮಾವೋಯಿಸ್ಟ್” ಎಂಬ ಸಣ್ಣ ಕಥೆಯನ್ನು ಆಧರಿಸಿದ ಈ ಚಿತ್ರ ಟೊರೆಂಟೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಲಿಜೋ ಜೋಸ್ ಪೆಲ್ಲಿಸ್ಸೆರಿ ಅತ್ಯುತ್ತಮ ನಿರ್ದೇಶಕ ಪ್ರಶ್ತಿಯನ್ನೂ ಗೆದ್ದಿದ್ದರು.
ಇದನ್ನೂ ಓದಿ: ಇಂಟರ್ನ್ಯಾಷನಲ್ ಎಮ್ಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ’ಡೆಲ್ಲಿ ಕ್ರೈಂ’ ವೆಬ್ ಸರಣಿ!
“ಮಾನವೀಯತೆ ಕುರಿತು ಈ ಸಿನಿಮಾವಿದೆ. ಕೆಲವೊಮ್ಮೆ ಮನುಷ್ಯ ಮೃಗಗಳಿಗಿಂತ ಕ್ರೂರನಾಗುತ್ತಾನೆ. ಈ ಚಿತ್ರದ ಉದ್ದೇಶ, ಕ್ಯಾಮರಾ ಕೆಲಸ, ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಹೀಗಾಗಿ ನಾವು ಈ ಸಿನಿಮಾ ಆಯ್ಕೆ ಮಾಡಿದ್ದೇವೆ’ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಚೇರ್‌ಮನ್ ರಾಹುಲ್ ರಾವೇಲ್ ತಿಳಿಸಿದ್ದಾರೆ.
ಫೆಬ್ರವರಿ 28ರಂದು ನಡೆಯಬೇಕಿದ್ದ 93ನೇ ಆಸ್ಕರ್ ಪ್ರಶಸ್ತಿ ಸಮಾರಂಭ, ಕೊರೊನಾದಿಂದಾಗಿ 2021 ಏಪ್ರಿಲ್ 25 ರಂದು ನಡೆಯಲಿದೆ.
ಇದನ್ನೂ ಓದಿ: ನಟ ಅಕ್ಷಯ್ ಕುಮಾರ್ ದಾಖಲಿಸಿದ್ದ ಮಾನಹಾನಿ ಕೇಸ್ ವಿರೋಧಿಸಿದ ಯೂಟ್ಯೂಬರ್!


