Homeಮುಖಪುಟಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ - 1978

ಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ – 1978

ಆಕ್ಟ್-1978 ಚಿತ್ರತಂಡದ ಧೋರಣೆಗಳು ಮೇಲೆ ಚರ್ಚಿಸಿದ ಪಕ್ಷದ ಒಡಕುಮೂಡಿಸುವ ಸಿದ್ಧಾಂತಗಳನ್ನು ವಿರೋಧಿಸುವಂತಾದ್ದೆ ಎಂಬುದು ತಿಳಿದಿರುವ ಸಂಗತಿಯೇ. ಆ ಅಂಶವನ್ನು ನೆನಪಿನಲ್ಲಿ ಇಟ್ಟುಕೊಂಡೇ, ಸಿನೆಮಾದಲ್ಲಿ ಹೇಳಲಾಗದ ಅಥವಾ ಬಿಟ್ಟಿರುವ ಅಂಶಗಳು ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಕೆಲವೊಂದು ಅಂಶಗಳನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

- Advertisement -
- Advertisement -

‘ಐ ವುಡ್ ರ್ಯಾದರ್ ನಾಟ್ ಬಿ ಅಣ್ಣಾ’ (ನಾನು ಅಣ್ಣಾ ಆಗದಿರಲು ಇಚ್ಛಿಸುತ್ತೇನೆ) ಎಂಬ ಪ್ರಬಂಧದಲ್ಲಿ ಲೇಖಕಿ ಅರುಂಧತಿ ರಾಯ್ ಅವರು, 2011-12ರಲ್ಲಿ ಬಹಳ ಪ್ರಚಾರ ಪಡೆದಿದ್ದ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಗ್ಗೆ ಹಲವು ಅನ್‍ಕನ್ವೆನ್ಶನಲ್ ಪ್ರಶ್ನೆಗಳನ್ನು ಎತ್ತುತ್ತಾರೆ. ಭ್ರಷ್ಟಾಚಾರದ ಬಗ್ಗೆ ಕೇವಲ ಮೇಲುಮಟ್ಟದ ಸಂಗತಿಗಳ ಬಗ್ಗೆ, ಮಧ್ಯಮವರ್ಗದ ಚಿಂತನೆಯನ್ನಷ್ಟೆ ಪ್ರತಿಪಾದಿಸಿ, ಅದಕ್ಕೆ ಇದ್ದ ವಿವಿಧ ಮೊಗ್ಗುಲುಗಳ ಬಗ್ಗೆ ಮೌನವಹಿಸಿ ನಡೆದಿದ್ದ ಈ ಆಂದೋಲನ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗಿತ್ತು. ಅದು ಕೊನೆಗೆ ಯಾವುದಕ್ಕೆ ದಾರಿಮಾಡಿಕೊಟ್ಟಿತು ಎಂಬುದು ನಮ್ಮ ಕಣ್ಣಮುಂದೆಯೇ ಇದೆ! ಅಸಮಾನತೆಯ ಚರ್ಚೆಯನ್ನು ಎತ್ತಿಕೊಳ್ಳದೆ, ಕಾರ್ಪೊರೆಟ್ ಸಂಬಂಧಗಳನ್ನು ಅನುಲಕ್ಷಿಸಿ, ಕೆಲವೇ ಕೆಲವು ವ್ಯಕ್ತಿಗಳನ್ನು ಒಳಗೊಂಡ ಲೋಕಪಾಲ್ ಸಂಸ್ಥೆ ಇಡೀ ಸರ್ಕಾರಿ ಭ್ರಷ್ಟಾಚಾರವನ್ನು ನಿಗ್ರಹಿಸುತ್ತದೆ ಎಂಬ ಆಂದೋಲನದ ಔಚಿತ್ಯವನ್ನು ರಾಯ್ ಅವರು ಅಂದು ಪ್ರಶ್ನಿಸಿದ್ದರು. ಸರ್ವಾಧಿಕಾರಿ ಧೋರಣೆಯ ಸರ್ಕಾರವನ್ನು ಕೂರಿಸಲು ನಡೆದ ಮೌನ ದಂಗೆಯಾಗಿತ್ತೇ ಇದು ಎಂಬ ಪ್ರಶ್ನೆಗಳು ಕೂಡ ಎದ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ದಿನನಿತ್ಯದ ವ್ಯವಹಾರಗಳಲ್ಲಿ ಕಾಣುವ ‘ಆಪರೇಶನಲ್ ಭ್ರಷ್ಟಾಚಾರದ’ ಬಗ್ಗೆ ಜನರ ಕೋಪ-ಆತಂಕ-ನೈತಿಕ ಸಿಟ್ಟು ಇವುಗಳಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ತಲೆದೋರುತ್ತದೆ. ಖಂಡಿತಾ ಇದೆ. ಆದರೆ ಆ ಸಿಟ್ಟಿಗೆ ಇಡೀ ವ್ಯವಸ್ಥೆಯನ್ನು ಲಿಂಕ್ ಮಾಡುವ, ಆ ವ್ಯವಸ್ಥೆಯಲ್ಲಿ ಹೆಚ್ಚು ಪ್ರಭಾವ ಇರುವ ದೈತ್ಯ ಕಾರ್ಪೊರೆಟ್ ಸಂಸ್ಥೆಗಳು, ಬಿಲಿಯನೇರ್‌ಗಳು, ಇಲ್ಲಿನ ಧಾರ್ಮಿಕ-ಜಾತಿ ವ್ಯವಸ್ಥೆಯ ಪ್ರಭಾವದ ಬಗ್ಗೆ ತಿಳಿವು ಮೂಡದೆ ಹೋದರೆ, ಭ್ರಷ್ಟಾಚಾರ ನೆಪ ಹೇಳಿ ಶಾಸಕರ ಭವನದಲ್ಲಿ ಬಾಂಬ್ ಇಟ್ಟು, ಬಿಜೆಪಿ ಪಕ್ಷ ಸೇರಿದ ಪೊಲೀಸ್ ಪೇದೆಯೆ ತರವೋ, ದೊಡ್ಡ ಸಭೆಗಳಲ್ಲಿ ರಾಜಕಾರಣಿಗಳು-ಅಧಿಕಾರಿಗಳು ಕೊಚ್ಚಿ ಬೀಗುವ ಭಾಷಣ ಹೇಗೆ ಜನರನ್ನು ಇಂಪ್ರೆಸ್ ಮಾಡುವುದಕ್ಕಿಂತಲೂ ಮುಂದೆ ಹೋಗುವುದಿಲ್ಲವೋ ಅಂತಹ ಪರಿಣಾಮಕ್ಕೆ ಸೀಮಿತವಾಗಿಬಿಡುತ್ತದೆ. ಅಸಮಾನತೆಯ ಬಣ್ಣಗಳನ್ನು ತಿಳಿಯದೆ, ಇಂತಹ ತೀವ್ರ ಅಸಮಾನತೆಗೆ ಕಾರಣವಾದ ವ್ಯವಸ್ಥೆಯನ್ನು ತಿಳಿಯದೆ, ವ್ಯವಸ್ಥೆಯ ಭಾಗವಾಗಿ ಬೀಡುಬಿಟ್ಟಿರುವ ‘ಸ್ಟಕ್ಚರಲ್ ಕರಪ್ಶನ್’ ಬಗ್ಗೆ ನಡೆಸದ ಹೋರಾಟಗಳ ಪರಿಣಾಮ ಹೇಗೆ ವ್ಯತಿರಿಕ್ತವಾಗಬಲ್ಲದು ಎಂಬುದು ನಮ್ಮ ಕಣ್ಣಮುಂದಿವೆ.

ಭ್ರಷ್ಟಾಚಾರದ ಬಗ್ಗೆ ಮಧ್ಯಮವರ್ಗದ ಆಕ್ರೋಶವನ್ನು ವ್ಯಕ್ತಪಡಿಸುವ ‘ಆಕ್ಟ್-1978’ ಚಲನಚಿತ್ರ ಕಳೆದ ವಾರ ಬಿಡುಗಡೆಯಾಯಿತು. ಈ ಹಿಂದೆ ‘ಹರಿವು’, ಮತ್ತು ‘ನಾತಿಚರಾಮಿ’ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಮಂಸೋರೆ ಅವರ ಹೊಸ ಚಲನಚಿತ್ರ ಇದು. ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿಬಂದ ಪ್ರತಿಕ್ರಿಯೆಗಳ ಆಧಾರದಲ್ಲಿ ಜನರನ್ನು ಕಲಕಲು ಈ ಸಿನೆಮಾಗೆ ಸಾಧ್ಯವಾಗಿದೆ. ಬಹುಶಃ ಚಿತ್ರತಂಡದ ಉದ್ದೇಶವೂ ಅದೇ ಆಗಿತ್ತೇನೋ. ಢಾಳವಾಗಿ ಕಣ್ಣಿಗೆ ಬೀಳುವ ಭ್ರಷ್ಟಾಚಾರದ ವಿರುದ್ಧ, ಕಣ್ಣಿಗೆ ಗೋಚರಿಸುವ ಮಾತ್ರದ ಅಧಿಕಾರ ಕೇಂದ್ರಗಳ ತಿರಸ್ಕಾರದಿಂದ ಹುಟ್ಟಿರುವ ಜನಸಾಮಾನ್ಯರ ಆಕ್ರೋಶವನ್ನು ‘ಆಕ್ಟ್-1978’ ಹಿಡಿಯಲು ಪ್ರಯತ್ನಿಸಿದೆ.

ಆತ್ಮಹತ್ಯೆಗೆ ಶರಣಾಗಿರುವ ರೈತ ತಂದೆ. ವಿದ್ಯಾಭ್ಯಾಸವನ್ನು ಅರ್ಧದಲ್ಲೇ ತೊರೆದಿರುವ ಗೀತಾ (ಯಜ್ಞಾ ಶೆಟ್ಟಿ), ರಸ್ತೆ ಅಪಘಾತದಿದಂದ ಸಾವಿನ ಮಧ್ಯೆ ಇರುವ ಪತಿಯನ್ನು ಉಳಿಸಿಕೊಳ್ಳಲು ತಂದೆಗೆ ಬರಬೇಕಿರುವ ಪರಿಹಾರ ಹಣಕ್ಕಾಗಿ ಕಚೇರಿಗಳನ್ನು ಅಲೆದು, ಅಲ್ಲಿ ಭ್ರಷ್ಟಾಚಾರಕ್ಕೆ ಸೊಪ್ಪು ಹಾಕದೆ ಕೊನೆಗೆ ಪತಿಯನ್ನು ಕಳೆದುಕೊಳ್ಳುತ್ತಾಳೆ. ಗೀತಾ ಹತಾಶಳಾಗಿ ತನಗೆ ಪರದಾಡಿಸಿರುವ ಭ್ರಷ್ಟ ಸರ್ಕಾರಿ ನೌಕರರನ್ನು ಒತ್ತೆಯಾಳಾಗಿರಿಸಿಕೊಳ್ಳುವ ಸಮಯಕ್ಕೆ ತುಂಬು ಗರ್ಭಿಣಿ. ಗೀತಾಳ ಜೊತೆಯಾಗುವುದು, ಇಡೀ ಕುಟುಂಬದ ಆತ್ಮಹತ್ಯೆಗೆ ಪ್ರಯತ್ನಿಸಿ, ಎಲ್ಲರೂ ಮೃತಪಟ್ಟು ತಾನೊಬ್ಬ ಉಳಿದು, ಆ ಪ್ರಕರಣದಲ್ಲಿ ಜೈಲುಪಾಲಾಗಿ, ಈಗ ಪೆರೋಲ್ ಮೇಲೆ ಹೊರಬಂದಿರುವ ಮುದುಕ (ಬಿ ಸುರೇಶ್). ಇಂತಹ ಅಸಹಾಯಕ ಸ್ಥಿತಿಯಲ್ಲಿಯೂ ಸಿಡಿದೆದ್ದರೆ ಬದಲಾವಣೆ ಸಾಧ್ಯ ಎಂಬ ಆಶಯದೊಂದಿಗೆ ಜನಪ್ರಿಯ ಮಾದರಿಯಲ್ಲಿ ಕಥೆ ಹೇಳಲಾಗಿದೆ. ಹಾಸ್ಯ, ಅನುಕಂಪ ಮತ್ತು ರೋಚಕತೆಯನ್ನು ಬಂಡವಾಳವಾಗಿರಿಸಿಕೊಂಡು ಹೆಣೆದಿರುವ ಸಿನೆಮಾ ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಆಗಿರಬಹುದಾದ ಕಹಿ ಅನುಭವವನ್ನು ರಿಲೇಟ್ ಮಾಡಿಕೊಳ್ಳಲು ಸಹಕರಿಸಿದೆ ಎನ್ನಬಹುದಾದರೂ ಭ್ರಷ್ಟಾಚಾರದ ಸುತ್ತ ಸಂಬಂಧಿಸಿ ಹೇಳಬೇಕಿದ್ದ ದೊಡ್ಡ ವ್ಯವಸ್ಥೆಯ ಕಥಾನಕಗಳನ್ನು ಕಟ್ಟಿಕೊಡಲು ವಿಫಲವಾಗಿದೆ.

ಸಿನೆಮಾದಲ್ಲಿ ಇಲ್ಲದ್ದನ್ನು ಹುಡುಕುವುದು ಸರಿಯೇ ಎಂಬ ಪ್ರಶ್ನೆ ಎದ್ದಾಗ ಈ ಒಂದು ಉದಾಹರಣೆಯಿಂದ ಮುಂದುವರೆಯಬಹುದೇನೋ! ಪಿ ಶೇಷಾದ್ರಿ ನಿರ್ದೇಶನದ ‘ಭಾರತ್ ಸ್ಟೋರ್ಸ್’ ಸಿನೆಮಾ ಜಾಗತೀಕರಣ ಮತ್ತು ದೊಡ್ಡ ಬಂಡವಾಳಶಾಹಿಗಳಿಂದ ಹುಟ್ಟುವ ದೊಡ್ಡ ಎಫ್‍ಎಂಸಿಜಿ ಸ್ಟೋರ್‌ಗಳು ಹೇಗೆ ಸಣ್ಣ ಕಿರಾಣಿ ಅಂಗಡಿಗಳಿಗೆ, ಪ್ರಾದೇಶಿಕ ಮಾರುಕಟ್ಟೆಗಳಿಗೆ ಮಾರಕವಾಗಬಲ್ಲವು ಎಂಬ ಕಥಾಹಂದರ ಹೊಂದಿರುವಂತದ್ದು. ಇದೇ ಸಿನೆಮಾವನ್ನು ಕೊಂಡು ಬಿಜೆಪಿ ಪಕ್ಷ 2014ರಲ್ಲಿ ತನ್ನ ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿತು ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಈ ಸನ್ನಿವೇಶದಲ್ಲಿ ಸಿನೆಮಾದ ನಿರ್ದೇಶಕ ಅಥವಾ ನಿರ್ಮಾಪಕರ ಧೋರಣೆಗಳು ಆ ಪಕ್ಷಕ್ಕೆ ಹತ್ತಿರವಿದ್ದಿರಬಹುದು ಎಂಬ ಅಂಶ ಇರಬಹುದಾದರೂ, ಜನಸಾಮಾನ್ಯರ ಹಿತ ಆಲಕ್ಷಿಸಿ ದೈತ್ಯ ಬಂಡವಾಳಶಾಹಿಯನ್ನು ಉಬ್ಬಿಸುವ ಮತ್ತು ಪ್ರಾದೇಶಿಕ ವ್ಯವಹಾರಗಳನ್ನು ಕೊಲ್ಲುವ ‘ರಾಜಕೀಯ ಧೋರಣೆ’ ಯಾವುದೆಂದು ಹಿಡಿಯದ ಆ ಸಿನೆಮಾ ಅದಕ್ಕೆ ಅವಕಾಶ ಕೊಟ್ಟಿತ್ತು ಎಂಬುದೂ ನಿಜ. ದೊಡ್ಡ ದೊಡ್ಡ ಕಾರ್ಪೊರೆಟ್‍ಗಳನ್ನು ಉತ್ತೇಜಿಸುವ ತೀವ್ರ ಬಲಪಂಥೀಯ ಪಕ್ಷಕ್ಕೆ, ಅದರ ವಿರುದ್ಧದ ಉದ್ದೇಶ ಹೊಂದಿದೆ ಎಂದು ಮೇಲ್ನೋಟಕ್ಕೆ ತೋರಿಸಿಕೊಂಡ ಸಿನೆಮಾವೇ ಸಹಾಯ ಮಾಡುತ್ತಿತ್ತು. ಸಿನೆಮಾದಲ್ಲಿ ಹೇಳದ, ಸಿನೆಮಾದಲ್ಲಿ ನಿರ್ವಹಿಸಿದ ವಸ್ತುವನ್ನು ಪರಿಣಾಮಕಾರಿಯಾಗಿ ಚರ್ಚಿಸದ ಸಂಗತಿ ಅದಕ್ಕೆ ಸಹಕರಿಸಿತ್ತು.

ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಆಕ್ಟ್-1978 ಚಿತ್ರತಂಡದ ಧೋರಣೆಗಳು ಮೇಲೆ ಚರ್ಚಿಸಿದ ಪಕ್ಷದ ಒಡಕುಮೂಡಿಸುವ ಸಿದ್ಧಾಂತಗಳನ್ನು ವಿರೋಧಿಸುವಂತಾದ್ದೆ ಎಂಬುದು ತಿಳಿದಿರುವ ಸಂಗತಿಯೇ. ಆ ಅಂಶವನ್ನು ನೆನಪಿನಲ್ಲಿ ಇಟ್ಟುಕೊಂಡೇ, ಸಿನೆಮಾದಲ್ಲಿ ಹೇಳಲಾಗದ ಅಥವಾ ಬಿಟ್ಟಿರುವ ಅಂಶಗಳು ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಕೆಲವೊಂದು ಅಂಶಗಳನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಮೊದಲಿಗೆ, ಗೀತಾ ಅವರ ತಂದೆ ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಚಿತ್ರಿಸುವಾಗ, ಆ ಹಂತಕ್ಕೆ ನೂಕಿದ್ದು ಯಾರು ಎಂಬುದನ್ನು ಕಟ್ಟಿಕೊಡದೇ ಹೋಗುವುದು ಎರಡು ಕಾರಣಗಳಿಗಾಗಿ ಅಪಾಯ ಸೃಷ್ಟಿಸುತ್ತದೆ. ಒಂದು: ಮಧ್ಯಮ ವರ್ಗದ ಜನರ ಮಧ್ಯೆ ರೈತರು ಪರಿಹಾರ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅಸೂಕ್ಷ್ಮ ಮತ್ತು ಅಜಾಗರೂಕತೆಯ ನಂಬಿಕೆ ಈಗಾಗಲೇ ಮನೆಮಾಡಿದೆ. ಈ ಅಂಶವನ್ನು ವಿರೋಧಿಸುವ ಸಂಗತಿಯನ್ನು ಸಿನೆಮಾ ಅಡಕ ಮಾಡಿಕೊಳ್ಳಬೇಕಿತ್ತು. ಈ ಎರಡನೆಯ ಅಂಶದ ಮೂಲಕ ಪ್ರಶ್ನಿಸಬೇಕಿತ್ತು: ಕೃಷಿಯ ಕಾರ್ಪೊರೆಟೀಕರಣ, ಸಾಮಾನ್ಯವಾಗಿ ಎಂದೂ ಕೃಷಿಯ ಜೊತೆಗೆ ಸಂಬಂಧ ಹೊಂದಿರದ ಜಾತಿಯ-ವರ್ಗದ ಜನರು, ಉನ್ನತ ಅಧಿಕಾರ ವರ್ಗದಲ್ಲಿ ಕೂತು ಮಾಡುತ್ತಿರುವ ನೀತಿಗಳು ಬಂಡವಾಳದಾರರಿಗೆ ಮಾತ್ರ ಉಪಯೋಗ ಆಗಿ, ಕೃಷಿ ಮತ್ತು ಕೃಷಿ ಕಾರ್ಮಿಕರಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಜನಪ್ರಿಯ ಮಾದರಿಯಲ್ಲಿಯೂ ಹೇಳಲಾಗದೆ ಹೋಗಿರುವುದು ಇಲ್ಲಿ ಬಿಟ್ಟುಹೋಗಿರುವ ಅಂಶ. ಆತ್ಮಹತ್ಯೆಗೆ ಶರಣಾಗುವ ರೈತನ ಪರಿಸ್ಥಿತಿಗೆ ಕಾರಣವಾಗುವ ಭ್ರಷ್ಟಾಚಾರ ಖಂಡಿತಾ ಸರ್ಕಾರಿ ಕಚೇರಿಗಳಲ್ಲಿ ಪಡೆಯುವ ಗಿಂಬಳ ಮಾತ್ರ ಅಲ್ಲವೇ ಅಲ್ಲ. (ಪೀಪ್ಲಿ ಲೈವ್ ಎಂಬ ಹಿಂದಿ ಸಿನೆಮಾದಲ್ಲಿ, ಇದೇ ವಸ್ತುವನ್ನು ಇಟ್ಟುಕೊಂಡು ಒಂದು ಪೂರ್ಣಾವಧಿಯ ಜನಪ್ರಿಯ ಮಾದರಿಯ ಕಥೆಯನ್ನು ಹೆಣೆಯಲಾಗಿತ್ತು.)

ಎರಡನೆಯದಾಗಿ, ಚಿತ್ರದ ಒಂದು ಸಂದರ್ಭದಲ್ಲಿ ಸರ್ಕಾರಿ ನೌಕರರು, ತಾವು ಲಂಚ ಪಡೆಯಲು ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾರೆ. ಒಬ್ಬ ಮಗನೋ/ಮಗಳಿಗೋ ಮೆಡಿಕಲ್ ಓದಿಸಲು, ಮತ್ತೊಬ್ಬಾಕೆ ಮಗಳಿಗೆ ಮದುವೆ ಮಾಡಿಸಲು, ಇನ್ನೊಬ್ಬಾಕೆ ಸಹೋದರಿಯನ್ನು ಓದಿಸಿ ಬೆಳೆಸಲು, ಮತ್ತೊಬ್ಬ ಕೆಲಸ ಗಿಟ್ಟಿಸಿಕೊಂಡು ಖಾಯಂ ಮಾಡಿಸಿಕೊಳ್ಳಲು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಮುಖ್ಯವಾಗಿ ಪ್ರೇಕ್ಷಕನಿಗೆ ಮನದಟ್ಟಾಗಬೇಕಿದ್ದು, ಇಂತಹ ಅಸಮಾನ ವ್ಯವಸ್ಥೆ ಹುಟ್ಟಲು ಕಾರಣ ಏನು ಎಂಬುದು. ಇದಕ್ಕೆ ಬಂಡವಾಳಶಾಹಿಗಳನ್ನು ನಿಯಂತ್ರಿಸದೆ ಅದರ ಜೊತೆಗೆ ಬೆಸೆದುಕೊಂಡಿರುವ ಪ್ರಭುತ್ವ, ಧಾರ್ಮಿಕತೆ, ಜಾತೀಯತೆ (ಅದ್ದೂರಿ ಮದುವೆಗಳ ಸಂಪ್ರದಾಯ – ಪ್ಯಾಟ್ರಿಯಾರ್ಕಿ) ಇವೆಲ್ಲಾ ಕಾರಣವಲ್ಲವೇ? ಆದರೆ ಈ ನೌಕರರ ಹಳವಂಡಗಳಿಗೆಲ್ಲಾ ನಾನು ಸಪೋರ್ಟ್ ಮಾಡುವುದಾಗಿ ಒಪ್ಪಿಕೊಂಡಿದ್ದೆನೇ ಎಂಬ ರೀತಿಯಲ್ಲಿ ಗೀತಾ ನುಡಿಯುವುದರೊಂದಿಗೆ ಭ್ರಷ್ಟಾಚಾರ ಸರ್ಕಾರಿ ಕಚೇರಿಯ ನಾಲ್ಕು ಗೋಡೆಗಳ ನಡುವೆಯೇ ಬಂಧಿತವಾಗಿಬಿಡುತ್ತದೆ.

ಮೂರನೆಯದು : ಪೊಲೀಸರನ್ನು ಮತ್ತು ರಾಜಕಾರಣಿಗಳನ್ನು ಚಿತ್ರಿಸಿರುವ ರೀತಿ. ಸರ್ಕಾರಿ ನೌಕರ-ಅಧಿಕಾರಶಾಹಿಗಳ ಲಂಚದ ಪಿರಮಿಡ್‍ಅನ್ನು ಗಮನಿಸಿರುವ ಯಾರಾದರೂ, ಜನಪ್ರಿಯ ಮಾದರಿಯ ಸಿನೆಮಾದಲ್ಲಿಯೂ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ವಿರೋಧ ಪಕ್ಷದ ನಾಯಕನನ್ನು ಅಷ್ಟು ಸುಲಭವಾಗಿ ಆ ವ್ಯವಸ್ಥೆಯಿಂದ ಹೊರಗಿಡಲು ಸಾಧ್ಯವಿಲ್ಲ. ಈ ಮೂವರನ್ನೂ ಅಂತಹ ಭ್ರಷ್ಟ ವ್ಯವಸ್ಥೆಯ ಭಾಗವಲ್ಲ ಎಂಬಂತೆ ಚಿತ್ರಿಸಿರುವುದರ ಹಿಂದಿನ ಕಾರಣ ಸ್ಪಷ್ಟವಾಗುವುದೇ ಇಲ್ಲ. ಅದೇ ರೀತಿ ಬಹುತೇಕ ಪೊಲೀಸರು ಕೂಡ ಬಹಳ ಎಫಿಶಿಯೆಂಟ್ ಎಂಬಂತೆ, ಮಾನವೀಯ ಅಂತಃಕರಣ ಉಳ್ಳವರೆಂಬಂತೆ ಕಟ್ಟಿಕೊಟ್ಟಿರುವ ಚಿತ್ರಣ ಕೂಡ ಮೂಲ ಕಥೆಗೆ ಪುಷ್ಟಿ ನೀಡಿಲ್ಲ. ಒಂದು ಮಟ್ಟಿಗೆ ಪತ್ರಿಕಾ ವೃತ್ತಿಯ ಭ್ರಷ್ಟತೆಯನ್ನು ಹಿಡಿಯಲು ಸಿನೆಮಾಗೆ ಸಾಧ್ಯವಾಗಿದೆ. ಗೀತಾ ಸರ್ಕಾರಿ ನೌಕರರನ್ನು ವಜಾ ಮಾಡುವಂತೆ ಆಗ್ರಹ ಮಾಡಿದಾಗ, ಅಂತಹ ಸಂದರ್ಭದಲ್ಲಿ ರಾಜಕಾರಣಿಯೊಬ್ಬ ನಮ್ಮ ಜಾತಿಯವನು ಅಲ್ಲಿ ಇರುವುದರಿಂದ ಅದಕ್ಕೆ ಅವಕಾಶ ಕೊಡಬಾರದು ಎಂಬ ಮಾತುಗಳಲ್ಲಿ ಇರುವ ಅಮೂರ್ತತೆ, ಭ್ರಷ್ಟಾಚಾರ ಮತ್ತು ಜಾತಿಗೆ ಇರುವ ಸಂಬಂಧವನ್ನು ಉಪೇಕ್ಷಿಸುವಂತಿದೆ. ಭ್ರಷ್ಟಾಚಾರಕ್ಕೆ ಜಾತಿಯಿಲ್ಲ ಎಂಬುವ ಮಧ್ಯಮ ವರ್ಗದ ತಪ್ಪು ತಿಳಿವಳಿಕೆಯನ್ನು ಪ್ರಶ್ನೆ ಮಾಡುವುದು ಇಂದಿನ ಅಗತ್ಯ. ಇದಕ್ಕೆ ಭ್ರಷ್ಟಾಚಾರ ಮಾಡಿದ ಯಾವ ಯಾವ ಜಾತಿಯ ವ್ಯಕ್ತಿಗಳಿಗೆ ಎಷ್ಟು ಶಿಕ್ಷೆಯಾಗಿದೆ ಎಂಬ ಅಂಕಿಅಂಶಗಳನ್ನು ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾದೀತು. ಹಾಗೆಯೇ ಆ ನೌಕರರನ್ನು ವಜಾಗೊಳಿಸುವ ಬಗ್ಗೆ ನಡೆಯುವ ಚರ್ಚೆಯಲ್ಲಿ ಕೂತ ಮಾನವಹಕ್ಕುಗಳ ಅಧಿಕಾರಿಯನ್ನು ‘ಇಂಪ್ರಾಕ್ಟಿಕಲ್’ ಎಂಬಂತೆ ಕುಚೋದ್ಯದ ರೀತಿಯಲ್ಲಿ ಚಿತ್ರಿಸಿರುವುದು ಕೂಡ ಕಸಿವಿಸಿಯುಂಟುಮಾಡದೇ ಇರದು.

ಸಿನೆಮಾ ದ್ವಿತೀಯಾರ್ಧದಲ್ಲಿ ತಡವರಿಸುತ್ತದೆ ಎಂಬಂತಹ ಮಾತುಗಳನ್ನು ಹಲವರು ಉಲ್ಲೇಖಿಸಿದ್ದಾರೆ. ಚಲನಚಿತ್ರದ ಪೇಸ್‍ನ ದೃಷ್ಟಿಯಿಂದ ಅಂತಹ ಸಮಸ್ಯೆಯೇನಿಲ್ಲ ಅನ್ನಿಸಿದರೂ, ಹಲವು ವಿಷಯಗಳ ಪುನರಾವರ್ತನೆ ಅಂತಹ ಭಾವನೆಯನ್ನು ತರಿಸುತ್ತದೆ. ಎಲ್ಲಾ ನೌಕರರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಬಹುತೇಕ ಪುನರಾವರ್ತನೆಯಂತೆ ಕಾಣುತ್ತದೆ. ಸಿನೆಮಾದ ಆ ಸಮಯವನ್ನು, ಸರ್ಕಾರಿ ಕಚೇರಿಯ ಪರಿಸರವನ್ನು ಇನ್ನಷ್ಟು ಕರಾರುವಕ್ಕಾಗಿ, ನಿಖರವಾಗಿ ಕಟ್ಟಿಕೊಡಲು ಬಳಸಬಹುದಿತ್ತೇನೋ. ಹಲ್ಲು ನೋವಿನ, ಫೇಸ್ಬುಕ್‍ನಲ್ಲಿ ನಕಲಿ ಅಕೌಂಟ್‍ನಲ್ಲಿ ರಿಕ್ವೆಸ್ಟ್ ಕಳಿಸುವ ಸಂಭಾಷಣೆಗಳಿಗಿಂತಲೂ ಅದು ಮುಖ್ಯವಾಗಿತ್ತೇನೋ.

‘ತಬರನ ಕಥೆ’ ಸಿನೆಮಾ ವ್ಯಕ್ತಿಗತವಾಗಿಯೇ ಸರ್ಕಾರಿ ಭ್ರಷ್ಟಾಚಾರವನ್ನು ಕಾಣಿಸುವ ಕಥೆಯಾಗಿ ಉಳಿದಿತ್ತು. ಇಲ್ಲಿ ಇನ್ನಷ್ಟು ವಿಶಾಲವಾಗಿ ಅಂದರೆ ಒಂದು ಮಟ್ಟದ ಆಕ್ಟಿವಿಸ್ಟ್ ಮಟ್ಟಕ್ಕೆ ಕಥೆಯನ್ನು ವಿಸ್ತರಿಸಲು ಸಾಧ್ಯವಾಗಿದ್ದರೂ, ಹಲವು ಪಾಪ್ಯುಲರ್ ಶೈಲಿಯ ಸಿನೆಮಾಗಳಂತೆ, ನಾಯಕ/ನಾಯಕಿಯೇ ವಿಚಾರಣೆ ನಡೆಸಿ, ಶಿಕ್ಷೆ ಕೊಡುವ ಮಾದರಿ ಮುಂದುವರೆದಿದೆ. ತಮಿಳು ಸಿನೆಮಾ ಅನ್ನಿಯನ್ ಉದಾಹರಣೆಯಂತೆ ಭ್ರಷ್ಟಾಚಾರ ವಿರೋಧಿಸುವ ಹಲವು ಸಿನೆಮಾಗಳಲ್ಲಿ ‘ಸರ್ವಶಕ್ತ ನಾಯಕ’ ಭ್ರಷ್ಟಾಚಾರಿಗಳನ್ನು ಕೊಲ್ಲಬಲ್ಲನು, ಹಿಂಸೆಗೆ ಇಳಿಯಬಲ್ಲನು. ಅಂತಹ ಹುಚ್ಚಾಟಗಳಿಲ್ಲದೆ ಸುಧಾರಣೆಯ ಪಾಠಕ್ಕೆ ‘ಆಕ್ಟ್-1978’ ಸೀಮಿತಗೊಳಿಸಿಕೊಂಡಿರುವುದು ಸ್ವಾಗತಾರ್ಹ. ಅಲ್ಲದೆ ಇಲ್ಲಿ ಸಿಡಿದೆದ್ದಿರುವುದು ಅಸಹಾಯಕರು, ‘ಮ್ಯಾಸ್ಕ್ಯುಲೈನ್ ನಾಯಕ ನಟ’ರಲ್ಲ ಎಂಬುದು ಕೂಡ ಆಕ್ಟ್-1978ನ ಹೆಚ್ಚುಗಾರಿಕೆಯೇ. ಆದರೆ ಅಂತಹ ಸುಧಾರಣೆ ಕೇವಲ ಆ ಸರ್ಕಾರಿ ನೌಕರರಿಗೆ ಸೀಮಿತವಾಗಿಬಿಡುತ್ತದೆಯೇ ಹೊರತು, ವ್ಯವಸ್ಥೆಯ ಸುಧಾರಾಣೆಯಾಗಿ ಅಲ್ಲ.

ಸಿನೆಮಾ ಕೊಲ್ಯಾಬರೆಟಿವ್ ಕಲೆ. ಅದರ ಜೊತೆಗೆ ದೊಡ್ಡ ಬಂಡವಾಳ ಬೇಡುವ ಕಲೆ ಕೂಡ. ಬಜೆಟ್ ನಿರ್ಬಂಧಗಳಿಂದ ಹೇಳುವುದನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂಬುದೂ ನಿಜವೇ. ಅದರಲ್ಲಿಯೂ ಫೈಟ್‍ಗಳನ್ನು ಮಾಡಿ, ಅಬ್ಬರದ ಸಂಭಾಷಣೆಯಿಂದ ರಂಜಿಸಬಲ್ಲ ನಟರ ತಾರಾಗಣ ಇಲ್ಲದೆ ಇರುವಾಗ ಚಿತ್ರತಂಡಕ್ಕೆ ಅದು ಮತ್ತಷ್ಟು ಆರ್ಥಿಕ ಒತ್ತಡ ಹೇರುತ್ತದೆ. ಅಂತಹುದರಲ್ಲಿ ವೀಕ್ಷಕರಿಗೆ ಸಂವೇದನೆಯನ್ನಾದರೂ ಮೂಡಿಸುವ ಸಲುವಾಗಿ ಮಾಡಿರುವ ಈ ಪ್ರಯತ್ನಕ್ಕೆ ಶುಭವಾಗಲಿ ಮತ್ತು ಮುಂದಿನ ದಿನಗಳಲ್ಲಿ ಈ ತಂಡ ಇನ್ನಷ್ಟು ಸಂಕೀರ್ಣತೆಯನ್ನು ತನ್ನ ಚಿತ್ರಕಥೆಯೊಳಗೆ ಅಡಕ ಮಾಡಿಕೊಳ್ಳುವಂತಾಗಲಿ ಎಂಬ ನಂಬಿಕೆಯೊಂದಿಗೆ.


ಇದನ್ನೂ ಓದಿ: ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...